Best 50 ಒಗಟುಗಳು ಮತ್ತು ಉತ್ತರಗಳು
ಒಗಟು ಎಂದರೆ ಒಬ್ಬರು ಮತ್ತೊಬ್ಬರಿಗೆ ಒಡ್ಡಿದ ಸವಾಲು ಅಂತ. ಒಂದು ವಸ್ತುವನ್ನು ಮತ್ತೊಂದು ವಸ್ತುವಿನ ಮೂಲಕ ವಿಭಿನ್ನವಾಗಿ ವರ್ಣಿಸಿ ಆ ವಸ್ತುವನ್ನು ಕಂಡುಹಿಡಿಯುವಂತೆ ಹೇಳುವುದು ಇದರ ಕ್ರಮ. ಒಗಟು ಹೇಳುವವರು ಬಹಳ ಜಾಣ್ಮೆಯಿಂದ ಅದೃಶ್ಯ ವಸ್ತುವಿನ ಹೆಸರನ್ನು ಬಚ್ಚಿಟ್ಟಿರುತ್ತಾನೆ. ಅವರು ಹೇಳಿದ್ದನ್ನು ಅರ್ಥೈಸಿಕೊಂಡು ಅದಕ್ಕೆ ತಕ್ಕನಾದ ಅಥವಾ ಸರಿಯಾದ ಉತ್ತರ ಪತ್ತೆಮಾಡಬೇಕಾಗುತ್ತದೆ, ಇದು ಬುದ್ಧಿಶಕ್ತಿಯ ಪರೀಕ್ಷೆಗೊಂದು ಒಳ್ಳೆಯ ಒರೆಗಲ್ಲು. ಇಂದು ನಾವು ಅಂಥ 50 ಒಗಟುಗಳು ಮತ್ತು ಉತ್ತರಗಳು ನಿಮಗಾಗಿ ತಂದಿದ್ದೇವೆ.

50 ಒಗಟುಗಳು ಮತ್ತು ಉತ್ತರಗಳು
ಪರಿಚಯ
ಮಾನವಕುಲದ ಹುಟ್ಟಿನಲ್ಲೆ ಒಗಟು ಇತ್ತೆಂದು ಹೇಳಲಾಗುತ್ತದೆ. ಆದಿಮಾನವ ಪ್ರಕೃತಿಯ ವಸ್ತುಗಳಲ್ಲಿ ಗುರುತಿಸಿದ ಸಾದೃಶ್ಯವೆ ಒಗಟುಗಳ ನಿರ್ಮಾಣಕ್ಕೆ ತಳಹದಿ. ಹಾಸ್ಯ ಮತ್ತು ಮನೋರಂಜನೆಗಾಗಿ ಬಳಸಿಕೊಳ್ಳಲು ಮಾಡಿದ ಪ್ರಯತ್ನವೆ ಒಗಟಿನ ರೂಪ ತಳೆಯಿತು. ಹಾಗೆಯೇ ಒಗಟುಗಳ ಇತಿಹಾಸ ಜಾಗತಿಕವಾದುದು. ಪ್ರಪಂಚದ ಅತ್ಯಂತ ಪ್ರಾಚೀನ ಜನಾಂಗಗಳಲ್ಲೆಲ್ಲ ಅವು ಬಳಕೆಯಲ್ಲಿದ್ದುವು. ಭರತಖಂಡದಲ್ಲಿ ಮಾತ್ರವಲ್ಲದೆ ಗ್ರೀಕ್, ರೋಮನ್, ಈಜಿಪ್ಷಿಯನ್ ಜನಾಂಗಗಳಲ್ಲಿ ಕೂಡ ಒಗಟುಗಳ ಸಾಹಿತ್ಯ ವಿಪುಲವಾಗಿತ್ತು. ಭಾರತದಲ್ಲಿ ವೈದಿಕ ಗ್ರಂಥಗಳಲ್ಲಿ ಒಗಟುಗಳು ಸುಳಿಯುತ್ತವೆ. ಕುರಾನ್, ಬೈಬಲ್ಗಳಲ್ಲೂ ಅವು ಇವೆ.
ಒಗಟುಗಳು
ಒಗಟು 1 – ಊರೆಲ್ಲ ತಿರುಗುತ್ತದೆ ಮನೆ ಮೂಲೆಯಲ್ಲಿ ಬಿದ್ದಿರುತ್ತದೆ
ಉತ್ತರ – ಚಪ್ಪಲಿ, ಶೂ
ಒಗಟು 2 – ಅಂಗಣ್ಣ, ಮಂಗಣ್ಣ, ಅಂಗಿ ಬಿಚ್ಕೊಂಡು ನುಂಗಣ್ಣ!
ಉತ್ತರ – ಬಾಳೆಹಣ್ಣು
ಒಗಟು 3 – ಅಂಕ ಡೊಂಕ ’ಅ’, ಅದರ ತಮ್ಮ ’ಸಾ’, ಕರಿಯದೊಂದು ’ಮೆ’, ನಾಲ್ಕು ಚೌಕ ’ಬೆ’
ಉತ್ತರ – ಅಡಿಕೆ, ಸಾಸಿವೆ, ಮೆಣಸು, ಬೆಲ್ಲ
ಒಗಟು 4 – ಅಮ್ಮನ ಸೀರೆ ಮಡಿಚೊಕಾಗಲ್ಲ, ಅಪ್ಪನ ದುಡ್ಡು ಎಣಿಸೋಕಾಗಲ್ಲ!
ಉತ್ತರ – ಆಕಾಶ, ನಕ್ಷತ್ರ
ಒಗಟು 5 – ಅಟ್ಟದ ಮೇಲೆ ಪುಟ್ಟ ಲಕ್ಷ್ಮಿ!
ಉತ್ತರ – ಹಣೆ, ಕುಂಕುಮ
ಒಗಟು 6 – ಚಿಕ್ಕ ಮನೆ ತುಂಬಾ ಚಕ್ಕೆ ತುಂಬಿದೆ!
ಉತ್ತರ – ಬಾಯಿ, ಹಲ್ಲು
ಒಗಟು 7 – ಬಾವೀಲಿ ಬೆಳ್ಳಿ ಬಟ್ಟಲು ಬಿದ್ದಿದೆ!
ಉತ್ತರ – ಚಂದ್ರ
ಒಗಟು 8 – ಹಸುರು ಗಿಡದ ಮೇಲೆ ಮೊಸರು ಚೆಲ್ಲಿದೆ!
ಉತ್ತರ – ಮಲ್ಲಿಗೆ ಹೂ
ಒಗಟು 9 – ಅಂಕು ಡೊಂಕಾದ ಬಾವಿ, ಬಗ್ಗಿ ನೋಡಿದರೆ ಗುಬ್ಬಿ ಕುಡಿಯುವಷ್ಟು ನೀರಿಲ್ಲ!
ಉತ್ತರ – ಕಿವಿ
ಒಗಟು 10 – ಚಿನ್ನದ ಹಕ್ಕಿ ಬಾಲದಿಂದ ನೀರು ಕುಡಿಯುತ್ತದೆ ?
ಉತ್ತರ – ಹಣತೆ
ಒಗಟು 11 – ಕೈ ಇದ್ದೋನಿಗೆ ಕಾಲು ಇರಲ್ಲ , ಕಾಲು ಇದ್ದೋನಿಗೆ ಕೈ ಇರಲ್ಲ ?
ಉತ್ತರ – ಅಂಗಿ/ಪ್ಯಾಂಟ್
ಒಗಟು 12 – ಬಿಳಿ ಕುದುರೆಗೆ ಹಸಿರು ಬಾಲ , ಕೆಂಪು ಕುದುರೆಗೂ ಹಸಿರು ಬಾಲ ಏನಿದು ?
ಉತ್ತರ – ಮೂಲಂಗಿ/ಕ್ಯಾರೆಟ್
ಒಗಟು 13 – ಅಣ್ಣ ತಮ್ಮ ಇಬ್ಬರು ಮುರಿಯದ ಹಾಗೆ 3 ರೊಟ್ಟಿ ತಿನ್ನುತ್ತಾರೆ!
ಉತ್ತರ – ಒಬ್ಬ ಅಣ್ಣ + ತಮ್ಮ ಇಬ್ಬರು = ಮೂರು
ಒಗಟು 14 – ಕಲ್ಲಿನ ಮೇಲೆ ಕುಣಿಯುತ್ತೆ ಬೇಲಿಯ ಮೇಲೆ ಮಲಗುತ್ತೆ!
ಉತ್ತರ – ತೊಳೆದ ಬಟ್ಟೆ
ಒಗಟು 14 – ಕರಿ ಸೀರಿ ಉಟ್ಟಾಳ, ಕಾಲುಂಗುರ ತೊಟ್ಟಾಳ, ಮೇಲೆ ಹೋಗತಾಳ, ಕೆಳಗೆ ಬರತಾಳ!
ಉತ್ತರ – ಒನಕೆ

ಒಗಟು 15 – ಸಾಗರ ಪುತ್ರ ಸಾರಿಗೆ ಮಿತ್ರ
ಉತ್ತರ – ಉಪ್ಪು
ಒಗಟು 16 – ಮಡಿಸಿದರೆ ಮೊಗ್ಗು, ಬಿಡಿಸಿದರೆ ಹೂವು, ಪರಿಮಳವಿಲ್ಲ!
ಉತ್ತರ – ಕೊಡೆ
ಒಗಟು 17 – ಚಿನ್ನ ಬಿಸಾಡುತ್ತಾರೆ, ಬೆಳ್ಳಿ ತಿಂತಾರೆ!
ಉತ್ತರ – ಬಾಳೆ ಹಣ್ಣು
ಒಗಟು 18 – ಅಕ್ಷರಗಳಿದ್ದರೂ ಪುಸ್ತಕವಲ್ಲ, ಸಿಂಹವಿದ್ದರೂ ಅರಣ್ಯವಲ್ಲ, ದುಂಡಗಿದ್ದರೂ ಚಕ್ರವಲ್ಲ, ನಾನ್ಯಾರು?
ಉತ್ತರ – ನಾಣ್ಯ
ಒಗಟು 19 – ಹೋದ ನೆಂಟ ಬಂದ ನೆಂಟ, ಬಂದ ದಾರಿ ಗೊತ್ತಿಲ್ಲ!
ಉತ್ತರ – ನೆರಳು
ಒಗಟು 20 – ಹೋಗುವುದು ಬರುವುದು ಎರಡು, ಹೋದ ಮೇಲೆ ಬರಲಾರದ್ದವು ಎರಡು!
ಉತ್ತರ – ಸಿರಿತನ – ಬಡತನ, ಮಾನ – ಪ್ರಾಣ
ಒಗಟು 21 – ಎರಡು ಮನೆಗೆ ಒಂದೇ ಗೋಡೆ
ಉತ್ತರ – ಮೂಗು
ಒಗಟು 22 – ಬಿಳಿ ಲಂಗದ ಹುಡುಗಿ, ಎಳೆದರೆ ಬರ್ತಾಳೆ, ಬಿಟ್ಟರೆ ಓಡ್ತಾಳೆ!
ಉತ್ತರ – ಸಿಗರೇಟ್ – ಹೊಗೆ
ಒಗಟು 23 – ಹಿಡಿ ಹಿಡಿದರೆ ಹಿಡಿತುಂಬಾ, ಬಿಟ್ಟರೆ ಮನೆ ತುಂಬಾ!
ಉತ್ತರ – ದೀಪ
ಒಗಟು 24 – ಗರಿಕೆ ಆಸೆಯ ದೇವರು, ವರ್ಷಕ್ಕೊಮ್ಮೆ ಬರ್ತಾನೆ!
ಉತ್ತರ – ಗಣಪತಿ
ಒಗಟು 25 – ಕಪ್ಪೆ ಮುಟ್ಟದ ನೀರು!
ಉತ್ತರ – ಎಳೆನೀರು
ಒಗಟು 26 – ಕಲ್ಲನ್ನು ತುಳಿಯುತ್ತೆ, ಮುಳ್ಳನ್ನು ಮುರಿಯುತ್ತೆ, ನೀರು ಕಂಡ್ರೆ ನಿಲ್ಲುತ್ತೆ!
ಉತ್ತರ – ಚಪ್ಪಲಿ
ಒಗಟು 27 – ನಾಲ್ಕು ಕಾಲುಗಳುಂಟು ಪ್ರಾಣಿಯಲ್ಲ, ಬೆನ್ನು – ತೋಳು ಉಂಟು ಮನುಷ್ಯನಲ್ಲ!
ಉತ್ತರ – ಕುರ್ಚಿ
ಒಗಟು 28 – ಆರು ಗೆರೆ ಉಂಟು – ಹೀರೆಕಾಯಿ ಅಲ್ಲ, ಹುಳಿ ಉಂಟು – ಹುಣಸೆ ಅಲ್ಲ, ಹಳದಿ ಉಂಟು – ನಿಂಬೆ ಹಣ್ಣಲ್ಲ!
ಉತ್ತರ – ನೆಲ್ಲಿಕಾಯಿ
ಒಗಟು 29 – ಅವ್ವ ನೋಡಿದ್ರೆ ಕುಳ್ಳಿ, ಮಗಳ ನೋಡಿದ್ರೆ ಮಾರುದ್ದ ಅವ್ಳೆ!
ಉತ್ತರ – ಸೂಜಿ ದಾರ
ಒಗಟು 30 – ಅಕ್ಕನ ಕೈಗೆ ಇಕ್ಕೊರುಂಟು, ಅಳಿಸೋರಿಲ್ಲ!
ಉತ್ತರ – ಹಚ್ಚೆ

ಒಗಟು 31 – ಅಂಗಡಿಯಲ್ಲಿ ಮಾರುವುದಿಲ್ಲ, ತಕ್ಕಡಿಯಲ್ಲಿ ತೂಗುವುದಿಲ್ಲ, ಅದಿಲ್ಲದಿದ್ದರೆ ನಮ್ಮ ಮನೆಯಲ್ಲಿ ಹಬ್ಬ ಆಗುವುದೇ ಇಲ್ಲ!
ಉತ್ತರ – ಸಗಣಿ
ಒಗಟು 32 – ನೆತ್ತಿಯಲ್ಲಿ ಉಣ್ಣುವುದು, ಸುತ್ತಲೂ ಸುರಿಸುವುದು, ಎತ್ತಿದರೆ ಎರಡು ಹೋಳಾಗುವುದು!
ಉತ್ತರ – ರಾಗಿಕಲ್ಲು
ಒಗಟು 33 – ಆಡಿ ಓಡಾಡೋ ಗಾಡಿಗೆ ಆರಡಿ ನೆಲವಷ್ಟೇ ಸ್ವಂತ!
ಉತ್ತರ – ದೇಹ, ಸ್ಮಶಾನ
ಒಗಟು 34 – ತಲೆ ಮೇಲೆ ಹರಳು, ಬಾಯಲ್ಲಿ ಬೆರಳು!
ಉತ್ತರ – ಉಂಗುರ
ಒಗಟು 35 – ಚಿಕ್ಕವನು ಒಬ್ಬನಿಗೆ ಬಡಿಸುವಷ್ಟರಲ್ಲಿ ದೊಡ್ಡವನು ಹನ್ನೆರಡು ಮಂದಿಗೆ ಬಡಿಸಿರ್ತಾನೆ!
ಉತ್ತರ – ಗಡಿಯಾರ
ಒಗಟು 36 – ಮಣ್ಣಿನಲ್ಲಿ ಹುಟ್ಟಿ, ಮಣ್ಣಿನಲ್ಲಿ ಬೆಳೆದು, ಮಣ್ಣಿನಲ್ಲಿಯೇ ಸಾಯುವುದು!
ಉತ್ತರ – ಮಡಿಕೆ
ಒಗಟು 37 – ಕಪ್ಪುಂಟು ಕಸ್ತೂರಿಯಲ್ಲ, ಬಿಳುಪುಂಟು ಸುಣ್ಣವಲ್ಲ, ನೀರುಂಟು ಬಾವಿಯಲ್ಲ, ರೆಕ್ಕೆಯುಂಟು ಪಕ್ಷಿಯಲ್ಲ!
ಉತ್ತರ – ಕಣ್ಣು
ಒಗಟು 38 – ಕಾಲಿಲ್ಲದೆ ನಡೆಯುವುದು, ಬಾಯಿಲ್ಲದೆ ನುಡಿಯುವುದು, ಇದರ ಹೊಟ್ಟೆ ಹಲವಕ್ಕೆ ಮನೆಯಾಗಿರುವುದು!
ಉತ್ತರ – ನದಿ
ಒಗಟು 39 – ಕುಡಿಕೆಯಲ್ಲಿ ಮೆಣಸು!
ಉತ್ತರ – ಪರಂಗಿ ಹಣ್ಣು
ಒಗಟು 40 – ಮೇಲೆ ಹಸಿರು, ಒಳಗೆ ಕೆಂಪು, ತಿಂದರೆ ತಂಪು!
ಉತ್ತರ – ಕಲ್ಲಂಗಡಿ
ಒಗಟು 41 – ಕಲ್ಲರಳಿ ಹೂವಾಗಿ, ಎಲ್ಲರಿಗೂ ಬೇಕಾಗಿ, ಮಲ್ಲಿಕಾರ್ಜುನನ ಶಿಖರಕ್ಕೆ ಬೆಳಕಾಗಿ ಬಲ್ಲವರು ಹೇಳಿ ಸರ್ವಜ್ಞ!
ಉತ್ತರ – ಸುಣ್ಣ
ಒಗಟು 42 – ಸಾಯೋವರೆಗೂ ಹೂವಿಲ್ಲ, ಹಣ್ಣು ಮಾತ್ರ ಬಿಡುತ್ತದೆ!
ಉತ್ತರ – ಹತ್ತಿಹಣ್ಣು
ಒಗಟು 43 – ರಕ್ತವಿಲ್ಲದ ಮಾಂಸ, ಕರುಳಿಲ್ಲದ ಹೊಟ್ಟೆ!
ಉತ್ತರ – ಸೀಗಡಿ
ಒಗಟು 44 – ಕರಿ ಮಂಚದ ಮೇಲೆ ಹಾಕುವ ಹಾಸಿಗೆ, ತೆಗೆಯುವ ಹಾಸಿಗೆ!
ಉತ್ತರ – ಕಾವಲಿ, ದೋಸೆ
ಒಗಟು 45 – ತೂತಿಲ್ಲದ ಒಡವೆ
ಉತ್ತರ – ಕುಂಕುಮ

ಒಗಟು 46 – ಬೆನ್ನಿನಿಂದ ತಿನ್ನುವುದು, ಬಾಯಿಂದ ಉಗುಳುವುದು, ಎದುರಾದವರನ್ನು ಕೊಲ್ಲುವುದು, ಹಾಗಾದರೆ ನಾನು ಯಾರು?
ಉತ್ತರ – ಬಂದೂಕು
ಒಗಟು 47 – ನೀರುಂಟ್ಟು ಬಾವಿಯಲ್ಲ, ಜುಟ್ಟುಂಟು ಪೂಜಾರಿಯಲ್ಲ, ಮೂರು ಕಣ್ಣುಂಟು ಶಿವನಲ್ಲ!
ಉತ್ತರ – ತೆಂಗಿನಕಾಯಿ
ಒಗಟು 48 – ಅಕ್ಕಣ್ಣನಿಗೆ ಆರು ಕಣ್ಣು, ಮುಕ್ಕಣ್ಣಂಗೆ ಮೂರು ಕಣ್ಣು, ಲಿಂಗಪ್ಪನಿಗೆ ಒಂದೇ ಕಣ್ಣು!
ಉತ್ತರ – ಕೊಳಲು, ತೆಂಗಿನಕಾಯಿ, ಸೂಜಿ
ಒಗಟು 49 – ನೋಡಿದರೆ ಕಲ್ಲು ನೀರು ಹಾಕಿದರೆ ಮಣ್ಣು!
ಉತ್ತರ – ಸುಣ್ಣ
ಒಗಟು 50 – ಮನೆ ಮೇಲೆ ಮಲ್ಲಿಗೆ ಹೂವು!
ಉತ್ತರ – ಮಂಜು
ಫ್ರೆಂಡ್ಸ್ ನಾವು ಸಂಗ್ರಹಿಸಿದ 50 ಒಗಟುಗಳು ಮತ್ತು ಉತ್ತರಗಳು ಬಗ್ಗೆ ತಪ್ಪದೆ ನಿಮ್ಮ ಅಭಿಪ್ರಾಯ ತಿಳಿಸಿ
ಇದನ್ನೂ ಓದಿ: ಅಂತರ್ಜಾಲ ಉಪಯೋಗ ಮತ್ತು ದುರುಪಯೋಗ