ವಯಸ್ಸಾದ ಮಾವಿನ ಮರಗಳಿಗೆ ಹೊಸ ತಂತ್ರ ಬಳಸಿ ನವಚೈತನ್ಯ ನೀಡಿದ ಕೃಷಿಕ : ಅಚ್ಚರಿ ಮೂಡಿಸುವಷ್ಟು ಅಧಿಕ ಹಣ್ಣಿನ ಫಸಲು!
ಯಾವುದಾದರೂ ಒಂದು ಹಳೆಯ ಮಾವಿನ ಮರದಲ್ಲಿ ಹಣ್ಣು ಬಿಡುವುದು ನಿಂತುಹೋದರೆ ಸಾಮಾನ್ಯವಾಗಿ ಜನರು ಆ ಮರಕ್ಕೆ ವಯಸ್ಸಾಗಿ ಹೋಯಿತು, ಅದು ಇನ್ನೂ ಫಲವನ್ನು ನೀಡುವುದಿಲ್ಲ ಎಂದು ನಿರ್ಧರಿಸುತ್ತಾರೆ. ಅಲ್ಲದೆ ಫಲವನ್ನು ನೀಡದ ಆ ಮರವನ್ನು ಕತ್ತರಿಸಿ ಹಾಕಿ ಅದರ ಜಾಗದಲ್ಲಿ ಹೊಸ ಸಸಿಯನ್ನು ನೆಟ್ಟು ಬೆಳೆಸುವ ಪ್ರಯತ್ನ ಮಾಡುತ್ತಾರೆ. ಆದರೆ ಅಂಥ ಮರಗಳಿಗೂ ಮರಳಿ ಚೈತನ್ಯ ನೀಡಬಹುದು.
ಇಂದು ನಾವು ಹೇಳಲು ಹೊರಟಿರುವುದು ಹೀಗೆ ವಯಸ್ಸಾಯ್ತು ಫಲ ನೀಡುವುದಿಲ್ಲ ಎನ್ನುವಂತಹ ಮರಗಳಿಂದ ಮತ್ತೆ ಫಲವನ್ನು ಪಡೆಯುವ ಹಾಗೂ ಆ ಮರಗಳನ್ನು ಉಳಿಸುವ ಪ್ರಯತ್ನವನ್ನು ಮಾಡುತ್ತಿರುವ ಒಬ್ಬ ಆಧುನಿಕ ರೈತನ ಕುರಿತಾಗಿ. ಹೌದು ಗುಜರಾತಿನ ವಲ್ಸಡ್ ನಿವಾಸಿಯಾಗಿರುವ, ಒಂದು ಮಾವಿನ ತೋಪಿನ ಮಾಲೀಕ ಸಹ ಆಗಿರುವ ರಾಜೇಶ್ ಶಾಹ್ ಅವರು ತಮ್ಮ ಗರ್ಡ್ಲಿಂಗ್ ತಂತ್ರದ ಮೂಲಕ ಹೇಗೆ ಮಾವಿನ ಮರಗಳನ್ನು ರಕ್ಷಿಸುತ್ತಿದ್ದಾರೆ. ಅದೇನೆಂದು ತಿಳಿಯೋಣ ಬನ್ನಿ…
ಮರದ ಕಾಂಡ ಅಥವಾ ಅವುಗಳ ಕೊಂಬೆಗಳ ಮೇಲಿಂದ ತೊಗಟೆಯನ್ನು ತೆಗೆಯುವ ವಿಧಾನವನ್ನು ಗರ್ಡ್ಲಿಂಗ್ ಎಂದು ಕರೆಯಲಾಗುತ್ತದೆ. ಈ ವಿಧಾನವನ್ನು ಅಳವಡಿಸಿಕೊಳ್ಳುವುದರಿಂದ ಹಳೆಯ ಮರಗಳನ್ನು ಸಹ ಮತ್ತೆ ಫಲದಾಯಕ ಮರಗಳನ್ನಾಗಿ ಮಾಡಬಹುದು. ಅಲ್ಲದೇ ಈ ವಿಧಾನದಿಂದ ಬರುವ ಹಣ್ಣುಗಳು ದೊಡ್ಡವು, ರಸಭರಿತವು ಹಾಗೂ ಬಹಳ ರುಚಿಯಾಗಿರುತ್ತದೆ ಎನ್ನಲಾಗಿದೆ.

ಈ ತಂತ್ರದಿಂದಾಗಿ 61 ವರ್ಷ ವಯಸ್ಸಿನ ರಾಜೇಶ್ ಅವರು ತಮ್ಮ ತೋಟದಲ್ಲಿರುವ 125 ವರ್ಷಗಳಷ್ಟು ಹಳೆಯ ಮಾವಿನ ಮರಗಳಲ್ಲಿಯೂ ಸಹ ತಾಜಾ ಹಾಗೂ ರಸಭರಿತವಾದ ಮಾವಿನ ಹಣ್ಣುಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ವಲ್ಸಾಡ್ ನಿಂದ 45 ಕಿ.ಮೀ ದೂರದಲ್ಲಿರುವ ಉಮಾರ್ಗಂ ತಾಲ್ಲೂಕಿನ ಫನ್ಸಾ ಎಂಬ ಹಳ್ಳಿಯಲ್ಲಿ, ಅವರ ಈ ಮರಗಳು ಪ್ರಮುಖ ಆಕರ್ಷಣೆ ಎನಿಸಿದೆ.
ಅಲ್ಫೋನ್ಸೋ ಮಾವಿನ ಮರಗಳು ತನ್ನ ಮೂರನೇ ವರ್ಷದಿಂದ ಹಣ್ಣುಗಳನ್ನು ನೀಡಲು ಪ್ರಾರಂಭಿಸುತ್ತವೆ. 35 ವರ್ಷ ಹಳೆಯ ಅಲ್ಫೋನ್ಸೋ ಮಾವಿನ ಮರಗಳು ಎರಡು ವರ್ಷಗಳಿಗೊಮ್ಮೆ ಹಣ್ಣನ್ನು ನೀಡುತ್ತವೆ. ಅನಂತರ ಅದು ಕಡಿಮೆಯಾಗಬಹುದು, ಅಂತಹ ಸಂದರ್ಭದಲ್ಲಿ ಈ ಮರಗಳಿಗೆ ಗರ್ಡ್ಲಿಂಗ್ ಮಾಡಬಹುದು ಎನ್ನುತ್ತಾರೆ ರಾಜೇಶ್ ಅವರು.
ರಾಜೇಶ್ ಅವರ ಮಾವಿನತೋಪು ಸುಮಾರು 65 ಎಕರೆಗಳಷ್ಟು ವ್ಯಾಪ್ತಿಯಲ್ಲಿ ಹರಡಿದೆ. ರಾಜೇಶ್ ಅವರ ತಾತ ಮಗನ್ ಲಾಲ್ ಅವರು ಈ ಮಾವಿನ ತೋಪಿನಲ್ಲಿ ನೂರಾರು ಮಾವಿನ ಮರಗಳನ್ನು ನೆಟ್ಟು ಬೆಳೆಸಿದ್ದಾರೆ. ಈ ಮಾವಿನ ತೋಪಿನಲ್ಲಿ ಇರುವ ಮರಗಳಲ್ಲಿ ಸುಮಾರು 100 ಮರಗಳು 125 ವರ್ಷಗಳ ವಯಸ್ಸಿನವಾದರೆ, ಸುಮಾರು 500 ಮರಗಳಿಗೆ 80 ವರ್ಷ ವಯಸ್ಸಾಗಿದೆ.

ರಾಜೇಶ್ ಅವರು ಮೂಲತಃ ರಾಜಸ್ಥಾನದವರಾಗಿದ್ದು, ಅವರ ಪೂರ್ವಜರು ಗುಜರಾತಿನ ವಲ್ಸಾಡ್ ಗೆ 180 ವರ್ಷಗಳ ಹಿಂದೆ ಬಂದು ನೆಲೆಸಿದ್ದಾರೆ. ರಾಜೇಶ್ ಅವರಿಗೆ ರಾಜಸ್ಥಾನದ ಬಿಲಿಯಾ ಹಳ್ಳಿಯಲ್ಲಿ ಸುಮಾರು 150 ವರ್ಷ ಹಳೆಯದಾದ ವಂಶಪಾರಂಪರ್ಯವಾಗಿ ಬಂದಿರುವ ಬಹಳ ದೊಡ್ಡ ಮನೆ ಕೂಡಾ ಇದೆ.
ರಾಜೇಶ್ ಹಾಗೂ ಅವರ ಪತ್ನಿ ಗುಜರಾತ್ ನಲ್ಲಿ ಇದ್ದರೆ, ಅವರ ಮಗ ಹಾಗೂ ಮಗಳು ಮುಂಬೈ ಮಹಾನಗರದಲ್ಲಿ ಚಾರ್ಟೆಡ್ ಅಕೌಂಟೆಂಟ್ ಗಳಾಗಿ ವೃತ್ತಿಯನ್ನು ಮಾಡುತ್ತಿದ್ದಾರೆ. ರಾಜೇಶ್ ಶಾ ಅವರು ಹತ್ತನೇ ತರಗತಿಯ ನಂತರ ತಮ್ಮ ಶಿಕ್ಷಣವನ್ನು ಮುಂದುವರಿಸಲಿಲ್ಲ. ಇಂಗ್ಲಿಷ್ ಮಾಧ್ಯಮದಲ್ಲಿ ಓದುವುದು ಅವರಿಗೆ ಇಷ್ಟವಿರಲಿಲ್ಲ. ಬಾಲ್ಯದಿಂದಲೇ ಮಾವಿನ ಮರಗಳ ಕಡೆಗೆ ಗಮನವನ್ನು ಹರಿಸಿದರು.
15ನೇ ವಯಸ್ಸಿನಲ್ಲಿ ಕೃಷಿಯ ಚಟುವಟಿಕೆಗಳಲ್ಲಿ ತೊಡಗಿಕೊಂಡರು. ಮರದಿಂದ ಹಣ್ಣುಗಳನ್ನು ಕಿತ್ತ ನಂತರ ಅವುಗಳ ಪಾಲನೆ ಪೋಷಣೆಯ ಕಡೆಗೆ ಗಮನವನ್ನು ನೀಡಿದರು. ಜಮೀನಿನಲ್ಲಿ ಗೊಬ್ಬರದ ಸಲುವಾಗಿ ಒಣಗಿರುವ ಹಸುವಿನ ಸಗಣಿಯನ್ನು ಹಾಕುತ್ತಾರೆ. ರಾಜೇಶ್ ಅವರಿಗೆ ಅಲ್ಫೋನ್ಸೋ ಮಾವಿನ ಹಣ್ಣುಗಳು ಬಹಳ ಇಷ್ಟವಾಗಿರುವುದರಿಂದ 1973 ರಲ್ಲಿ ಅವುಗಳ 300 ಸಸಿಗಳನ್ನು ನೆಡಲಾಯಿತು.

ಅದರ ನಂತರ ಅವರು 2006 ರಲ್ಲಿ 900 ಸಸಿಗಳನ್ನು ಮತ್ತು 2009 ರಲ್ಲಿ 1700 ಸಸಿಗಳನ್ನು ನೆಟ್ಟರು. ಇದಲ್ಲದೇ ಅವರು ಪೈರಿ ಮತ್ತು ಮಾಲ್ಗೋವಾ ಮಾವುಗಳ ಸಸಿಗಳನ್ನೂ ನೆಟ್ಟು ಬೆಳೆಸಿದ್ದಾರೆ. 2020ರಲ್ಲಿ ರಾಜೇಶ್ ಅವರು ತಮ್ಮ ತೋಟದಿಂದ 2,30,000 ಕೆಜಿಗಳಷ್ಟು ಕೊಯ್ಲನ್ನು ಮಾಡಿದ್ದಾರೆ.
ಆದರೆ ಕಳೆದ ಬಾರಿ ಮಾನ್ಸೂನ್ ನಿಂದ ಹೆಚ್ಚು ಮಳೆಯಾಗಿರುವುದರಿಂದ ಈ ವರ್ಷ ಮಾವಿನ ಕೊಯ್ಲು ಕಡಿಮೆಯಾಗಿರುತ್ತದೆ ಎಂದು ಹೇಳಿದ್ದಾರೆ. ಗರ್ಡ್ಲಿಂಗ್ ಬಗ್ಗೆ ಅವರು ಹೇಳುತ್ತಾ, ತಾನು ಗುರ್ಜರ ಜಾನಪದ ಕಥೆಯಿಂದ ಈ ತಂತ್ರವನ್ನು ಬಳಸಲು ಪ್ರೇರೇಪಿತ ನಾಗಿದ್ದೇನೆ ಎಂದು ಹೇಳಿದ್ದಾರೆ. ಆ ಜಾನಪದ ಕಥೆಯಲ್ಲಿ ಹಳೆಯ ಮರಗಳಲ್ಲಿ ರಂಧ್ರವನ್ನು ಮಾಡುವ ಮೂಲಕ ಅವುಗಳನ್ನು ಮತ್ತೆ ಫಲಪ್ರದವನ್ನಾಗಿ ಮಾಡುವ ವಿಧಾನ ತಿಳಿಸಲಾಗಿತ್ತು.
ನಾನು ಅದೇ ವಿಧಾನವನ್ನು 1996 ರಿಂದ ಬಳಸುತ್ತಾ ಬರುತ್ತಿದ್ದೇನೆ, ಹಾಗೆ ನಿರಂತರವಾಗಿ ನಡೆದ ಪ್ರಯತ್ನದ ಫಲವಾಗಿ ಅದರಲ್ಲಿ ಹೆಚ್ಚು ಅನುಭವ ಪಡೆದಿದ್ದು, ತಾನು 75 ಮರಗಳಿಗೆ ಗರ್ಡ್ಲಿಂಗ್ ಮಾಡಿರುವುದಾಗಿ ಅವರು ಹೇಳಿದ್ದಾರೆ. ಒಂದು ಶುದ್ಧವಾದ ಚಾಕುವಿನಿಂದ ಮರದ ನಾಲ್ಕು ಭಾಗಗಳಲ್ಲಿ ಒಂದು ಇಂಚಿನಷ್ಟು ತೊಗಟೆಯನ್ನು ಕತ್ತರಿಸಿ, ಅನಂತರ ಇನ್ಫೆಕ್ಷನ್ ಆಗದಿರಲಿ ಎಂದು ಮಣ್ಣು ಮತ್ತು ಕೀಟನಾಶಕದಿಂದ ತಯಾರಿಸಿದ ಪೇಸ್ಟ್ ಅನ್ನು ಅಲ್ಲಿ ತುಂಬಲಾಗುತ್ತದೆ.

ಇದರಿಂದ ಮರದ ಒಳಗೆ ಮತ್ತೊಮ್ಮೆ ಸರಿಯಾದ ಶುಗರ್ ಲೆವೆಲ್ ಸಂಚಾರ ಆರಂಭವಾಗುತ್ತದೆ. ಅಲ್ಲದೇ ಸಮಯಕ್ಕನುಗುಣವಾಗಿ ಕತ್ತರಿಸಿದ ಭಾಗಗಳ ಮೇಲೆ ಹೊಸ ಪದರಗಳು ಮೂಡುತ್ತವೆ ಎನ್ನುವ ರಾಜೇಶ್ ಅವರು, ತಾನು ದೀಪಾವಳಿಯ ಸಂದರ್ಭದಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ ಮರದ ಕೊಂಬೆಗಳಿಗೆ ಗರ್ಡ್ಲಿಂಗ್ ಮಾಡುವೆ ಎನ್ನುತ್ತಾರೆ.
ಈ ತಂತ್ರವು ಒಂದು ವೈಜ್ಞಾನಿಕ ತಂತ್ರವಾಗಿದೆ ಎಂದು ಗುಜರಾತಿನ ಮಾಜಿ ಕೃಷಿ ನಿರ್ದೇಶಕ ಶಂಕರ್ ಗೋವಿತ್ ಅವರು ಹೇಳಿದ್ದಾರೆ. ರಾಜೇಶ್ ಅವರ ಗರ್ಡ್ಲಿಂಗ್ ತಂತ್ರದ ಬಳಕೆ ಹಾಗೂ ಮಾವಿನ ಕೊಯ್ಲಿನಲ್ಲಿ ಅವರು ಮಾಡುತ್ತಿರುವ ಸಾಧನೆಯನ್ನು ಗುರುತಿಸಿ 2006ರಲ್ಲಿ ಗುಜರಾತಿನ ಸರ್ಕಾರವು ಅವರಿಗೆ ಕೃಷಿ ಋಷಿ ಎನ್ನುವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಅಲ್ಲದೇ 2009 ರಲ್ಲಿ ಕೇಂದ್ರ ಕೃಷಿ ಇಲಾಖೆಯು ಸರ್ದಾರ್ ಪಟೇಲ್ ಕೃಷಿ ಅನುಸಂಧಾನ ಪುರಸ್ಕಾರವನ್ನು ನೀಡಿ ರಾಜೇಶ್ ಅವರನ್ನು ಗೌರವಿಸಿದೆ. ನಮ್ಮ ರೈತರು ಕೂಡ ತೋಟಗಾರಿಆ ಇಲಾಖೆಯಿಂದ ಹೆಚ್ಚಿನ ಮಾಹಿತಿ ಪಡೆದು ಈ ವಿಧಾನದಿಂದ ಹಳೆಯ ಮಾವಿನ ತೋಪುಗಳಿಗೆ ಹರೆಯ ನೀಡುವ ಪ್ರಯತ್ನ ಮಾಡಬೇಕು.
-Team Infotrend