ಬಾಳೆ ಗಿಡದ ಬೇಡದಿರುವ ವಸ್ತುಗಳಿಂದ ವಿವಿಧ ಉತ್ಪನ್ನಗಳನ್ನು ತಯಾರಿಸಿ ಅದೇ ಹಳ್ಳಿಯ 450 ಜನರಿಗೆ ಕೆಲಸ ನೀಡಿದ ವ್ಯಕ್ತಿ!

ಕಸದಿಂದ ರಸ ಎಂಬ ಮಾತನ್ನು ಉತ್ತರ ಪ್ರದೇಶದ ಖುಷಿನಗರ ಜಿಲ್ಲೆಯ ಹರಿಹರಪುರ ಎಂಬ ಪುಟ್ಟ ಗ್ರಾಮದ ರವಿ ಪ್ರಸಾದ್ ಎಂಬ ವ್ಯಕ್ತಿಯು ಸಾಬೀತುಪಡಿಸಿದ್ದಾನೆ. ಇವರು ಬಾಳೆ ಗಿಡದ ನಾರಿನಿಂದ ವಿವಿಧ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುತ್ತಲೇ ಸದ್ಯ ನೂರಾರು ಜನರಿಗೆ ಕೆಲಸ ನೀಡಿದ್ದಾರೆ! ಇದೆಲ್ಲ ಹೇಗೆ ಸಾಧ್ಯವಾಯಿತು? ಅದನ್ನೂ ಇಷ್ಟು ದೊಡ್ಡ ಉದ್ಯಮವಾಗಿ ಬೆಳೆಸಬಹುದಾ? ಅದೆಲ್ಲದರ ವಿವರ ಇಲ್ಲಿದೆ…

ರವಿ ಪ್ರಸಾದ್ ಅವರು ವಾಸಿಸುತ್ತಿದ್ದ ಹಳ್ಳಿಯಲ್ಲಿ ಬರೋಬ್ಬರಿ 2700 ಹೆಕ್ಟೇರ್ ಜಮೀನಿನಲ್ಲಿ ಬಾಳೆಯನ್ನು ಬೆಳೆಯುತ್ತಿದ್ದರು, ಬಾಳೆ ಫಲ ನೀಡಿದ ತಕ್ಷಣ ಹಣ್ಣನ್ನು ತೆಗೆದುಕೊಂಡು ಪೇಟೆಗೆ ಹೋಗಿ ಮಾರಾಟ ಮಾಡಿ ನಂತರ ಆ ಬಾಳೆ ಗಿಡಗಳನ್ನು ಕತ್ತರಿಸಿ ಎಸೆಯುತ್ತಿದ್ದರು. ಅವೆಲ್ಲ ತಾಜ್ಯ ಹಾಗೇ ಕೊಳೆತು ಹೋಗುತ್ತಿತ್ತು.

ನಂತರ ರವಿ ಪ್ರಸಾದ್ ಮೊದ ಮೊದಲಿಗೆ ಹೀಗೆ ಕಿತ್ತು ಬಿಸಾಕಿದ ಈ ಬಾಳೆ ಗಿಡಗಳಿಂದ ನಾರನ್ನು ತೆಗೆದು ಅದರಿಂದ ಚಪ್ಪಲಿ, ಟೋಪಿ, ಬ್ಯಾಗ್, ಡೋರ್ ಮ್ಯಾಟ್ ನಂತಹ ಗ್ರಹೋಪಯೋಗಿ ವಸ್ತುಗಳ ತಯಾರಿಕೆ ಶುರು ಮಾಡಿದರು. ಈ ಕೆಲಸವನ್ನು ಅವರು ಮೊದಲಿಗೆ ತಾವೊಬ್ಬರೇ ಏಕಾಂಗಿಯಾಗಿ ಮಾಡತೊಡಗಿದರು.

ರವಿಯವರು ಗೋರಖ್ ಪುರದ ದಿಗ್ವಿಜಯ್ ನಾಥ್ ಪಿಜಿ ಕಾಲೇಜಿನಲ್ಲಿ ಎಕನಾಮಿಕ್ಸ್ ಮುಖ್ಯ ವಿಷಯ ತೆಗೆದುಕೊಂಡು ಬಿಎ ಪಾಸು ಮಾಡಿದ ನಂತರ ನೌಕರಿ ಹುಡುಕಾಟಕ್ಕಾಗಿ ದೆಹಲಿಗೆ ಬಂದರು. ಆದರೆ ಬೇಗನೆ ಬಯಸಿದಂತಹ ನೌಕರಿ ಸಿಗಲಿಲ್ಲ, ಹೀಗೆ ನೌಕರಿ ಹುಡುಕಾಡುತ್ತಿರುವಾಗ ಒಂದು ಬಾರಿ ತಮ್ಮ ಸ್ನೇಹಿತರೊಂದಿಗೆ ರವಿಯವರು ದೆಹಲಿಯ ಪ್ರಗತಿ ಮೈದಾನದಲ್ಲಿ ನಡೆದಿದ್ದ ವಸ್ತು ಪ್ರದರ್ಶನ ನೋಡಲು ಹೋದರು.

ಅಲ್ಲಿ ತಮಿಳುನಾಡಿನ ಒಬ್ಬ ವ್ಯಾಪಾರಿ ಬಾಳೆ ನಾರಿನಿಂದ ತಯಾರಿಸಿದ ಬ್ಯಾಗುಗಳನ್ನು ಪ್ರದರ್ಶನದಲ್ಲಿ ಇಟ್ಟಿದ್ದರು. ಈ ಬ್ಯಾಗುಗಳು ರವಿ ಅವರಿಗೆ ಬಹಳಷ್ಟು ಇಷ್ಟವಾದವು, ಅಷ್ಟೇ ಅಲ್ಲದೇ ಅವರು ಈ ಬ್ಯಾಗುಗಳನ್ನು ನೋಡಿ ಬಹಳಷ್ಟು ಪ್ರೇರಿತಗೊಂಡರು. ತಮ್ಮ ಜಿಲ್ಲೆ ಹಾಗೂ ಹಳ್ಳಿಯಲ್ಲಿ ಇದೆ ಬಾಳೆ ಗಿಡಗಳ ಈ ನಾರಿನ ಬಗ್ಗೆ ಯಾವುದೇ ಐಡಿಯಾ ಇರಲಿಲ್ಲವಾದ್ದರಿಂದ ಇವರು ಈ ಬಿಸಿನೆಸ್ ಶುರು ಮಾಡುವ ಐಡಿಯಾ ಹಮ್ಮಿಕೊಂಡರು.

ಹಾಗೇನೇ ತಡಮಾಡದೆ ತಮ್ಮ ಬ್ಯಾಗ್ ನ್ನು ತುಂಬಿಕೊಂಡು ತಮಿಳುನಾಡಿನ ಆ ವ್ಯಾಪಾರಿಯ ಹತ್ತಿರ ಈ ವಸ್ತುಗಳ ತಯಾರಿಕೆಯನ್ನು ಕಲಿಯಲು ಬಂದೇ ಬಿಟ್ಟರು. ರವಿಯವರನ್ನು ಕಂಡ ಆ ವ್ಯಾಪಾರಿ ಬಹಳಷ್ಟು ಖುಷಿ ಪಟ್ಟರು. ಏಕೆಂದರೆ ಇಂದಿನ ಯುವಕರು ಕೇವಲ ನೌಕರಿಗಾಗಿ ಅಲೆಯುತ್ತಾರೆ, ಆದರೆ ರವಿಯವರು ನೌಕರಿ ಆಸೆ ಬಿಟ್ಟು ಸ್ವಂತ ಉದ್ದಿಮೆ ಮಾಡಿ ಮತ್ತಷ್ಟು ಜನರಿಗೆ ನೌಕರಿ ಕೊಡುವ ಆಸೆಯಲ್ಲಿದ್ದರು.

ಹೀಗಾಗಿ ಅವರಿಗೆ ಖುಷಿ ನೀಡಿತು, ಕೊಯಮತ್ತೂರಿಗೆ ರವಿಯವರನ್ನು ಕರೆದುಕೊಂಡು ಹೋಗಿ ಅಲ್ಲಿ ಇವರಿಗೆ ಬಾಳೆಯ ನಾರಿನಿಂದ ಮಾಡಬಹುದಾದ ವಸ್ತುಗಳ ತಯಾರಿಕೆ ಹೇಳಿಕೊಟ್ಟರು. ಕೊಯಮತ್ತೂರಿನಿಂದ ಸುಮಾರು 160 ಕಿಲೋಮೀಟರ್ ದೂರದಲ್ಲಿರುವ ಒಂದು ಹಳ್ಳಿಯಲ್ಲಿ ಈ ಬಾಳೆ ಫೈಬರ್ ನಿಂದ ವಸ್ತುಗಳನ್ನು ತಯಾರಿಸುವ ಕೇಂದ್ರವಿದೆ.

ಅಲ್ಲಿ ಯುವಕ ಯುವತಿಯರಿಗೆ ಬಾಳೆ ನಾರಿನಿಂದ ವಸ್ತುಗಳನ್ನು ತಯಾರಿಸುವ ತರಬೇತಿ ನೀಡಲಾಗುತ್ತದೆ, ರವಿಯವರಿಗೆ ತಮಿಳು ಭಾಷೆ ಬರದೇ ಇದ್ದ ಕಾರಣ ಮೊದ ಮೊದಲಿಗೆ ಕಲಿಯುವುದು ಕಷ್ಟವಾಗುತ್ತಿತ್ತು. ಕೇವಲ ಅವರು ಮಾಡುವುದನ್ನು ನೋಡುತ್ತಲೇ ಎಲ್ಲ ವಸ್ತುಗಳನ್ನು ತಯಾರಿಸುವ ಕಲೆ ಕಲಿತರು, ಒಂದು ತಿಂಗಳ ಕಾಲ ಅದೇ ಗ್ರಾಮದಲ್ಲಿದ್ದುಕೊಂಡೆ ಎಲ್ಲವನ್ನೂ ಕಲಿತುಕೊಂಡ ಅವರು ನೇರವಾಗಿ ತಮ್ಮ ಗ್ರಾಮಕ್ಕೆ ಬಂದು ಈ ವ್ಯಾಪಾರ ಶುರು ಮಾಡಿಯೇ ಬಿಟ್ಟರು.

ಉತ್ಪಾದನೆ ಶುರು ಮಾಡಲು ಮೊದಲು ಇವರ ಬಳಿ ಹಣವಿರಲಿಲ್ಲ, ಹೀಗಾಗಿ ಖುಷಿ ನಗರದಲ್ಲಿದ್ದ ಜಿಲ್ಲಾ ಉದ್ಯೋಗ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ Prime minister employement generation scheme ನಡಿಯಲ್ಲಿ ಲೋನ್ ಬಗ್ಗೆ ತಿಳಿದುಕೊಂಡರು, ಅವರಿಗೆ ಅದೇ ಯೋಜನೆಯಡಿಯಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ದಲ್ಲಿ 5 ಲಕ್ಷ ಸಾಲ ದೊರೆಯಿತು.

ಆ ಹಣದ ಸಹಾಯದಿಂದ ಅವರು ಅವಶ್ಯಕತೆ ಇರುವ ಮಷೀನ್ ಗಳನ್ನು ಖರೀದಿಸಿದರು ಹಾಗೂ ಆ ಊರಿನ ರೈತರ ಬಳಿ ತೆರಳಿ ಫಲ ನೀಡಿದ ಬಾಳೆ ಗಿಡಗಳನ್ನು ಕಿತ್ತು ಬಿಸಾಕುವ ಬದಲಿಗೆ ನನಗೆ ಕೊಡಿ ಎಂದು ಕೇಳಿ ಪಡೆಯುತ್ತಾರೆ. ಆ ಗಿಡಗಳನ್ನು ಯಂತ್ರದ ಸಹಾಯದಿಂದ ಕತ್ತರಿಸಿ ಬಿಸಿಲಿಗೆ ಒಣಗಲು ಹಾಕಿ ಒಣಗಿಸಿದಾಗ ಸ್ವಲ್ಪ ದಿನಗಳ ನಂತರ ಅದು ಒಣಗಿ ಒಳ್ಳೆಯ ಫೈಬರ್ ಸಿಗುತ್ತಿತ್ತು. ಇದರೊಂದಿಗೆ ಉಳಿಯುವ ವೇಸ್ಟ್ ನ್ನು ಕಾಂಪೋಸ್ಟ್ ರೂಪದಲ್ಲಿ ಹೊಲಗಳಿಗೆ ನೀಡಲಾಗುತ್ತಿದೆ.

450 ಜನ ಮಹಿಳೆಯರಿಗೆ ಉದ್ಯೋಗ ನೀಡಿದ ರವಿ ಪ್ರಸಾದ್..!
2018 ರಲ್ಲಿ ಉತ್ತರ ಪ್ರದೇಶ ರಾಜ್ಯ ಸರ್ಕಾರ ತಂದಂತಹ ಯೋಜನೆಯಾದ ಒನ್ ಡಿಸ್ಟ್ರಿಕ್ಟ್ ಒನ್ ಪ್ರೋಗ್ರಾಮ್ ಎಂಬ ಯೋಜನೆಯಲ್ಲಿ ತಮ್ಮ ಕೆಲಸವನ್ನು ಹೊರ ಜಗತ್ತಿನ ಮುಂದೆ ರವಿಯವರು ಇಟ್ಟರು. ಇದು ಅಲ್ಲಿನ ಸರ್ಕಾರಕ್ಕೆ ಇಷ್ಟವಾದ ಕಾರಣ ಇದನ್ನು ಒಂದು ಯೋಜನೆಯಾಗಿ ತೆಗೆದುಕೊಂಡು ಅಲ್ಲಿನ 450 ಮಹಿಳೆಯರಿಗೆ ಸರ್ಕಾಕಾರದ ವತಿಯಿಂದ ರವಿಯವರ ಹತ್ತಿರ ತರಬೇತಿ ಕೊಡಿಸಿದರು.

ತದನಂತರ ಆ ಮಹಿಳೆಯರಿಗೆ ಸಣ್ಣ ಕೈ ಯಂತ್ರಗಳನ್ನು ಸಹ ಕೊಡಿಸಿ 450 ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸಿದರು. ಆ ಮಹಿಳೆಯರು ರವಿಯವರ ಜೊತೆಗೆ ಸೇರಿಕೊಂಡು 50 ಕ್ಕೂ ಹೆಚ್ಚು ವಸ್ತು ಪ್ರದರ್ಶನಗಳಲ್ಲಿ ಭಾಗಿಯಾಗಿದ್ದಾರೆ. ಈ ಖುಷಿ ನಗರ ಜಿಲ್ಲೆಯ 450 ಜನರಷ್ಟೇ ಅಲ್ಲದೇ ಅಕ್ಕಪಕ್ಕದ ಜಿಲ್ಲೆಯ ಇನ್ನೂ ಅನೇಕ ಮಹಿಳೆ ಹಾಗೂ ಯುವಕರಿಗೆ ಈ ತರಬೇತಿ ನೀಡಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಿದ್ದಾರೆ.

ಇದೆಲ್ಲದರ ಶ್ರೇಯ ರವಿಯವರಿಗೆ ಸಲ್ಲುತ್ತದೆ, ಕೆಲಸಕ್ಕಾಗಿ ಅಲೆಯುವುದು ಅಥವಾ ಕೆಲಸ ಸಿಗುತ್ತಿಲ್ಲ ಎಂದು ಫೇಸ್ಬುಕ್ ನಲ್ಲಿ ಸರ್ಕಾರಕ್ಕೆ ಬಯ್ಯುತ್ತಾ ಕೂರದೇ ಇಂಥ ವಿಭಿನ್ನ ಐಡಿಯಾ ಮಾಡಬೇಕು, ಇಂಥ ಸಾಕಷ್ಟು ಉದ್ಯಮಗಳಿವೆ, ಅವುಗಳನ್ನು ಹುಡುಕಿ ಸುರು ಮಾಡಬೇಕಷ್ಟೇ. ಇದಕ್ಕೆಲ್ಲ ರವಿ ಪ್ರಸಾದ್ ಗಿರುವಂಥ ಆಸಕ್ತಿ – ಶ್ರದ್ಧೆ ಬೇಕು.