VIDEO : ಕಡಿಮೆ ಅವಧಿಯಲ್ಲಿ ಅಧಿಕ ಆದಾಯ ನೀಡುವ ಜಮುನಾಪಾರಿ ಮೇಕೆ ಸಾಕಾಣಿಕೆ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್ : ಮಾಹಿತಿ ಹಾಗೂ ವಿಡಿಯೊ

ಮೇಕೆ ಅಥವಾ ಕುರಿ ಸಾಕಾಣಿಕೆ ಮಾಡಬೇಕು ಎನ್ನುವುದು ಬಹುತೇಕ ಸಣ್ಣ ರೈತರ ಅಥವಾ ಯುವಕರ ಆಸೆಯಾಗಿರುತ್ತದೆ. ಆದರೆ ಬಂಡವಾಳ ಹಾಗೂ ಇನ್ನಿತರ ಕಾರಣ ಅವರಿಗೆ ಅಡ್ಡಿ ಬಂದಿರುತ್ತವೆ. ಇನ್ನೂ ಕೆಲವರು ಮಾಡುತ್ತಾರಾದರೂ ಹೆಚ್ಚು ಮಾಹಿತಿ ಪಡೆಯದೇ ಆ ಕೆಲಸಕ್ಕೆ ಕೈ ಹಾಕಿ ಕೈ ಸುಟ್ಟುಕೊಳ್ಳುತ್ತಾರೆ. ಹೀಗಾಗಿ ಮೇಕೆ ಸಾಕಣೆ ಬಗ್ಗೆ ಮೊದಲು ಸಾಕಷ್ಟು ತಿಳಿದುಕೊಳ್ಳುವುದು ಒಳ್ಳೆಯದು.

ಇಲ್ಲಿ ನಿಮಗಾಗಿ ಸ್ವಲ್ಪ ಮಾಹಿತಿ ಹಾಗೂ ಎರಡು ವಿಡಿಯೊ ಇವೆ. ಇದರಿಂದ ನಿಮಗೆ ಪ್ರಯೋಜನವಾಗಬಹುದು. ವಿಡಿಯೊ ನೋಡುವ ಮೊದಲು ಮಾಹಿತಿ ಕೂಡ ಓದಿ, ಅಂದರೆ ಸುಲಭವಾಗಿ ಎಲ್ಲ ಅರ್ಥವಾಗುವುದು. ಭಾರತದಲ್ಲಿ ಅನೇಕ ಮೇಕೆ ತಳಿಗಳಿವೆ, ಆದರೆ ನಾವು ಮಾಮೂಲಾಗಿ ಎಲ್ಲ ಕಡೆ ನಾಟಿ ಮೇಕೆಗಳನ್ನು ನೋಡುತ್ತೇವೆ.

ಇವುಗಳ ಸಾಕಣೆ ಒಳ್ಳೆಯದೇನೋ ಹೌದು, ಆದರೆ ಅವುಗಳ ಸಾಕಣಿ ಕುರಿಗಾಹಿಗಳಿಗೆ ಮಾತ್ರ ಒಗ್ಗುವ ಕೆಲಸ. ಏಕೆಂದರೆ ಅವುಗಳನ್ನು ಕಟ್ಟಿ ಹಾಕಿ ಮೇವು ನೀರು ಕೊಡುವುದು ಸೂಕ್ತವಲ್ಲ, ಅವಕ್ಕೆ ಎಷ್ಟೊತ್ತಿದ್ದರೂ ಬಯಲು, ಗುಡ್ಡ, ಹಳ್ಳ ಇತ್ಯಾದಿ ತಿರುಗಾಡಿ ಮೆಯ್ದು ಬಂದರೇನೇ ಸಮಾದಾನ. ಅಂದರೆ ಅವುಗಳ ಆರೋಗ್ಯ ಕೂಡ ಚೆನ್ನಾಗಿರುತ್ತದೆ.

ಆದರೆ ಇಂದಿನ ಯುವಕರು ಅಥವಾ ರೈತರು ಕಟ್ಟಿ ಸಾಕಣಿ ಮಾಡುವ ಕಡೆ ಹೆಚ್ಚು ಒಲವು ಹೊಂದಿರುತ್ತಾರೆ. ಅಂಥವರು ಈ ನಾಟಿ ಮೇಕೆ ಬದಲು ಜಮುನಾಪಾರಿಯಂಥ ಮೇಕೆ ಸಾಕಣೆಗೆ ಮನಸ್ಸು ಮಾಡಬೇಕು. ಜಮನಾಪಾರಿ, ಜಮುನಾಪುರಿ, ಜಮುನಾಪಾರಿ ಇತ್ಯಾದಿ ಹೆಸರುಗಳಿಂದ ಕರೆಯಲ್ಪಡುವ ಇವುಗಳ ಸಾಕಣಿ ಸ್ವಲ್ಪ ದುಬಾರಿಯಾದರೂ ಅಧಿಕ ಆದಾಯ ತಂದುಕೊಡುತ್ತವೆ. ಅವುಗಳ ಬಗ್ಗೆ ಸ್ವಲ್ಪ ವಿವರ ಇಲ್ಲಿದೆ…

ಜಮುನಪಾರಿ ತಳಿ ಆಡುಗಳನ್ನು ಸಾಕುವ ಮೂಲಕ ಭಾರಿ ಲಾಭ ಗಳಿಸಬಹುದು :
ಹಲವಾರು ತಳಿ ಆಡುಗಳನ್ನು ದೇಶದಲ್ಲಿ ಸಾಕಲಾಗುತ್ತದೆ. ಇವುಗಳಲ್ಲಿ ಜಮುನಪಾರಿ ತಳಿಯ ಮೇಕೆ ಕೂಡ ಸೇರಿದೆ. ಇತ್ತೀಚಿನ ದಿನಗಳಲ್ಲಿ ಜನರು ಹಸುಗಳು ಮತ್ತು ಎಮ್ಮೆಗಳನ್ನು ಸಾಕಲು ಹೆಚ್ಚಿನ ಖರ್ಚು ಆಗುವುದರಿಂದ ಮೇಕೆ ಸಾಕಾಣಿಕೆಗೆ ಹೆಚ್ಚಿನ ಗಮನ ನೀಡುತ್ತಿದ್ದಾರೆ. ಜಾಮುನಪಾರಿ ತಳಿಯ ಮೇಕೆ ಜಾನುವಾರು ಸಾಕುವವರಿಗೆ ಸಾಕಷ್ಟು ಲಾಭವನ್ನು ನೀಡುತ್ತದೆ.

ಜಮುನಪಾರಿ ಮೇಕೆ ವಿಶೇಷತೆಗಳು :
ಈ ತಳಿಯ ಆಡುಗಳು ಇತರ ತಳಿಗಳಿಗಿಂತ ದಪ್ಪ ಮತ್ತು ಎತ್ತರವಾಗಿವೆ. ಇದು ಮಾಂಸಕ್ಕಾಗಿ ಮಾತ್ರವಲ್ಲ ಹೆಚ್ಚು ಹಾಲು ನೀಡುವಲ್ಲಿ ಪ್ರಸಿದ್ಧವಾಗಿದೆ. ಈ ತಳಿಯ ಮೂಲ ಸ್ಥಾನ ಮೇಕೆ ಉತ್ತರ ಪ್ರದೇಶದ ಎಟಾವಾ, ಗಂಗಾ, ಯಮುನಾ ಮತ್ತು ಚಂಬಲ್ ನದಿಗಳಿಂದ ಆವೃತವಾಗಿದೆ. ಈ ತಳಿಯ ಆಡುಗಳು 2 ವರ್ಷಗಳಲ್ಲಿ ಮಾಂ’ಸವನ್ನು ನೀಡಲು ಸಿದ್ಧವಾಗುತ್ತವೆ.

ಅತ್ಯಧಿಕ ತೂಕವನ್ನು ಹೊಂದಿರುವುದರಿಂದ ಅವುಗಳಿಗೆ ಹೆಚ್ಚಿನ ಬೆಲೆ ಸಿಗುತ್ತದೆ. ವಿಶೇಷವೆಂದರೆ ಈ ಆಡುಗಳ ಹಾಲು ಮತ್ತು ಮಾಂ’ಸ ಎರಡೂ ತುಂಬಾ ಒಳ್ಳೆಯದು, ಅಷ್ಟೇ ಡಿಮ್ಯಾಂಡ್ ಕೂಡ ಇದೆ. ಅವುಗಳ ಮರಿಗಳನ್ನು ಸಹ ಉತ್ತಮ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಈ ತಳಿಯ ವಯಸ್ಕ ಗಂಡಿನ ಸರಾಸರಿ ತೂಕ 100 ರಿಂದ 120 ಕೆಜಿ, ಹಾಗೆಯೇ ಹೆಣ್ಣಿನ ತೂಕ 80 ರಿಂದ 100 ಕೆಜಿ!

ಕಡಿಮೆ ವೆಚ್ಚದ ಮೆಂಟೆನೆನ್ಸ್ :
ಜಾನುವಾರು ಸಾಕಾಣಿಕೆದಾರರು ಮತ್ತು ರೈತರು ಈ ಆಡುಗಳನ್ನು ಬಹಳ ಕಡಿಮೆ ವೆಚ್ಚದಲ್ಲಿ ಸಾಕಬಹುದು. ಈ ಆಡುಗಳನ್ನು ಆಹಾರದ ವೆಚ್ಚವೂ ಕೂಡ ತುಂಬಾ ಕಡಿಮೆ, ಏಕೆಂದರೆ ಅವು ಕಾಡುಗಳಲ್ಲಿ ಅಡ್ಡಾಡಿ ಮೇವು ತಿನ್ನುವ ಸಾಮರ್ಥ್ಯ ಕೂಡ ಹೊಂದಿವೆ. ಆಗ ನೀವು ಅವುಗಳಿಗೆ ಕಡಿಮೆ ಧಾನ್ಯವನ್ನು ನೀಡಬಹುದು. ಇನ್ನು ರೈತನು ಈ ತಳಿಯನ್ನು ಯಾವುದೇ ಪರಿಸ್ಥಿತಿಗಳಲ್ಲಿ ಸುಲಭವಾಗಿ ಬೆಳೆಸಬಹುದು, ಯಾವುದೇ ಹವಾಮಾನಕ್ಕೆ ಕೂಡ ಇವು ಒಗ್ಗಿಕೊಳ್ಳುತ್ತವೆ.

ಹಾಲು ಉತ್ಪಾದನೆಗೆ ಪ್ರಸಿದ್ಧ :
ಜಮುನಪಾರಿ ಮೇಕೆ ಉತ್ತಮ ಹಾಲನ್ನು ನೀಡಬಲ್ಲದು, ಇದನ್ನು ಜಾನುವಾರು ಸಾಕಣೆದಾರರು ಸುಲಭವಾಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು. ಇದರ ಹಾಲನ್ನು ಔಷಧಕ್ಕೂ ಬಳಸಲಾಗುತ್ತದೆ. ಹೀಗಾಗಿ ಅವುಗಳ ಹಾಲಿಗೆ ಬೆಲೆ ಉತ್ತಮವಾಗಿರುತ್ತದೆ. ಆ ಹಾಲಿನಲ್ಲಿ ಪೌಷ್ಟಿಕಾಂಸದ ಪ್ರಮಾಣ ಉತ್ತಮವಾಗಿರುವುದರಿಂದ ಜನ ಹುಡುಕಾಡಿ ಇದರ ಹಾಲು ಖರಿದಿಸುತ್ತಾರೆ.

ಇದಲ್ಲದೆ, ಇವುಗಳ ಸಂತಾನೋತ್ಪತ್ತಿ ಸಾಮರ್ಥ್ಯ ಕೂಡ ಒಳ್ಳೆಯದು. ಇದು ತನ್ನ ಜೀವಿತಾವಧಿಯಲ್ಲಿ 13 ರಿಂದ 15 ಮರಿಗಳಿಗೆ ಜನ್ಮ ನೀಡಬಹುದು. ಇನ್ನು ಯಾರಾಧರೂ ಇದನ್ನು ಸಾಕಲು ಬಯಸಿದರೆ ಒಂದನ್ನು 10 ರಿಂದ 15 – 20 ಸಾವಿರ ರೂಪಾಯಿ ವೆಚ್ಚದಲ್ಲಿ ಖರೀದಿಸಬಹುದು. ಉಳಿದ ಮಾಹಿತಿ ಮೇಲಿನ ವಿಡಿಯೊದಲ್ಲಿ ಇದೆ, ನೋಡಿ…