ಮುಂದಿನ 28 ವರ್ಷಗಳಲ್ಲಿ ಭಾರತದ ಬಡತನ ನಿರ್ಮೂಲನೆ: ಭವಿಷ್ಯವಾಣಿ ನುಡಿದ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ!

ಭಾರತದ ಉದ್ಯಮಿ ಗೌತಮ್ ಅದಾನಿ ಬಹಳ ದಿನಗಳಿಂದಲೂ ಎಲ್ಲೆಡೆ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದಾರೆ. ಇದಕ್ಕೆ ಪ್ರಮುಖ ಕಾರಣವಾದರೂ ಏನು ಎನ್ನುವುದಾದರೆ, ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಗೌತಮ್ ಅದಾನಿ ಮತ್ತು ಮುಖೇಶ್ ಅಂಬಾನಿ ನಡುವಿನ ಒಂದು ಸಮರ ಬಹಳ ಚುರುಕಾಗಿ ಮುಂದುವರೆದಿದೆ.

ಮುಖೇಶ್ ಅಂಬಾನಿ ಈಗಾಗಲೇ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿರುವರ ಉದ್ಯಮಿ. ಅಲ್ಲದೇ ಈ ಹಿಂದೆ ಏಷ್ಯಾದ ನಂಬರ್ ಒನ್ ಶ್ರೀಮಂತ ಎನ್ನುವ ಸ್ಥಾನದಲ್ಲಿ ದೀರ್ಘ ಕಾಲದವರೆಗೆ ಇದ್ದ ಉದ್ಯಮಿ ಸಹಾ ಹೌದು. ಆದರೆ ನಡುವೆ ಒಮ್ಮೆ‌‌ ಚೀನಾದ ಉದ್ಯಮಿ ಒಬ್ಬರು ಈ ಸ್ಥಾನಕ್ಕೆ ಬಂದಿದ್ದರಾದರೂ ಹೆಚ್ಚು ದಿನ ಉಳಿಯುವುದು ಸಾಧ್ಯವಾಗಲಿಲ್ಲ.

ಮತ್ತೊಮ್ಮೆ ಮುಖೇಶ್ ಅಂಬಾನಿ ಮೊದಲ ಸ್ಥಾನವನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆದರೆ ಇತ್ತೀಚಿನ ಬೆಳವಣಿಗೆಗಳಲ್ಲಿ ಇದು ಬದಲಾಗಿದ್ದು ವಾಸ್ತವ. ಭಾರತದವರೇ ಆದ ಪ್ರಮುಖ ಉದ್ಯಮಿ ಗೌತಮ್ ಅದಾನಿ ಮುಖೇಶ್ ಅಂಬಾನಿಗೆ ತೀವ್ರ ಸ್ಪರ್ಧೆಯನ್ನು ಒಡ್ಡಿದ್ದಾರೆ. ಗಳಿಕೆಯ ವಿಚಾರದಲ್ಲಿ ಅಂಬಾನಿ ಯನ್ನು ಹಿಂದಿಕ್ಕಿ ಮುಂದೆ ಜಿಗಿದಿದ್ದಾರೆ. ಪ್ರಸ್ತುತ, ಗೌತಮ್ ಅದಾನಿ ಅವರು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯೆನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ. ಇತ್ತೀಚಿಗೆ ನಡೆದಂತಹ ಒಂದು ಕಾರ್ಯಕ್ರಮದಲ್ಲಿ ಗೌತಮ್ ಅದಾನಿ ಅವರು ಮುಂದಿನ 28 ವರ್ಷಗಳಲ್ಲಿ ನಮ್ಮ ದೇಶದಲ್ಲಿ ಬಡತನದ ಕುರುಹು ಸಹಾ ಕಾಣುವುದಿಲ್ಲ ಎನ್ನುವ ವಿಶ್ವಾಸವೊಂದನ್ನು ವ್ಯಕ್ತಪಡಿಸಿದ್ದಾರೆ.

ಮುಂಬರುವ 28 ವರ್ಷಗಳಲ್ಲಿ ಭಾರತದ ಜಿಡಿಪಿ 25 ಟ್ರಿಲಿಯನ್ ಡಾಲರ್‌ಗಳಷ್ಟು ಹೆಚ್ಚಾಗಲಿದೆ ಎಂದು ಅದಾನಿ ಸಮೂಹದ ಅಧ್ಯಕ್ಷರು ಹೇಳುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಪ್ರಸ್ತುತ, $ 3 ಟ್ರಿಲಿಯನ್‌ಗೆ ಸಮೀಪವಿರುವ ದೇಶದ GDP 2050 ರ ವೇಳೆಗೆ $ 30 ಟ್ರಿಲಿಯನ್‌ಗೆ ಅಂದರೆ ಹತ್ತು ಪಟ್ಟು ಹೆಚ್ಚಾಗುತ್ತದೆ ಎಂದು ಅವರು ಹೇಳಿದ್ದಾರೆ. ಅಂತರಾಷ್ಟ್ರೀಯ ವೃತ್ತಿಪರ ಸೇವಾ ಪೂರೈಕೆದಾರ ಕಂಪನಿ ಪಿಡಬ್ಲ್ಯೂಸಿಯ ‘ದಿ ವರ್ಲ್ಡ್ ಇನ್ 2050’ ವರದಿಯಲ್ಲೂ ಸಹಾ ಇದೇ ವಿಷಯವನ್ನು ಹೇಳಲಾಗಿದೆ. 2050 ರಲ್ಲಿ ಭಾರತದ ಆರ್ಥಿಕತೆಯು ಗಮನಾರ್ಹವಾಗಿ ಬೆಳೆಯಲಿದೆ ಎಂದು ಅದಾನಿ ಅವರು ಹೇಳಿದ್ದು, ಈ ಅವಧಿಯಲ್ಲಿ, ಷೇರು ಮಾರುಕಟ್ಟೆಯ ಬಂಡವಾಳೀಕರಣವು $ 40 ಟ್ರಿಲಿಯನ್ ಗಳಷ್ಟು ಹೆಚ್ಚಾಗುತ್ತದೆ ಎನ್ನಲಾಗಿದೆ.

2022-23ನೇ ಸಾಲಿನಲ್ಲಿ ದೇಶದಲ್ಲಿ 100 ಶತಕೋಟಿ ಡಾಲರ್ ವಿದೇಶಿ ಹೂಡಿಕೆಯಾಗಲಿದೆ ಎಂದು ಅದಾನಿ ಹೇಳಿದ್ದಾರೆ. ಈ ಮೂಲಕ ದೇಶವು ಅತಿ ಹೆಚ್ಚು ಎಫ್‌ಡಿಐ ಪಡೆಯುವ ಮೂರನೇ ರಾಷ್ಟ್ರವಾಗಲಿದೆ. ಅವರ ಪ್ರಕಾರ, ಭಾರತವು ಜನಸಂಖ್ಯಾ ಲಾಭಾಂಶ, ಮಧ್ಯಮ ವರ್ಗದ ಬೆಳವಣಿಗೆ ಮತ್ತು ಡಿಜಿಟಲ್ ಆರ್ಥಿಕತೆಯ ಉತ್ಕರ್ಷದ ಕ್ಷೇತ್ರದಲ್ಲಿಯೂ ಉತ್ತಮ ಸ್ಥಾನದಲ್ಲಿರುತ್ತದೆ ಎನ್ನಲಾಗಿದೆ. ಹಾಗೊಂದು ಧನಾತ್ಮಕ ಬದಲಾವಣೆ ಸಂಭವಿಸಿದ್ದೇ ಆದಲ್ಲಿ ಇದು ಖಂಡಿತ ಭಾರತೀಯರ ಜೀವನ ಮಟ್ಟವನ್ನು ಸುಧಾರಿಸುತ್ತದೆ ಎಂದು ಹೇಳಬಹುದು.