ಮಹಿಳೆಯರಿಗಾಗಿ; “ಒಂದು ವೇಳೆ ನಿಮ್ಮ ಮೇಲೆ ಇಂಥ ಪ್ರಸಂಗ ಬಂದರೆ ಏನು ಮಾಡುವಿರಿ..?”

ಸುಮಾರು ಹದಿನೆಂಟು ಇಪ್ಪತ್ತರ ಪ್ರಾಯ ಇರಬಹುದು. ಆಕರ್ಷಕ ಮೈಮಾಟದ ನಾಲ್ಕು ಜನರಲ್ಲಿ ಎದ್ದು ಕಾಣುವ ಚೆಲುವೆ. ಪಟ್ಟಣಕ್ಕೆ ತುಸು ದೂರದ ಊರಿನವಳಾಗಿದ್ದಳು. ಕೆಲಸಕ್ಕೆ ಅಂತ ಆಕೆ ತಂದ ಸ್ಕೂಟರ್ ಮಳೆಯಿಂದಾಗಿ ಅಥವಾ ಯಾವುದೋ ಕಾರಣದಿಂದ ಕೈಕೊಟ್ಟಿತ್ತು. ಹೀಗಾಗಿ ಆಟೋಗಾಗಿ ಗಾಬರಿಯಿಂದ ಕಾಯುತ್ತಿದ್ದಳು. ಸಂಜೆಯು ನಿಧಾನವಾಗಿ ಕಪ್ಪು ಬಣ್ಣವನ್ನು ಹೊದ್ದುಕೊಳ್ಳಲು ಶುರು ಮಾಡಿತ್ತು. ಬರುವ ಆಟೋಗಳಿಗೆಲ್ಲ ಕೈ ಮಾಡಿ ಸಾಕಾಗಿತ್ತು. ಮಧ್ಯದಲ್ಲಿ ಮಳೆಯು ಆಗೊಮ್ಮೆ ಈಗೊಮ್ಮೆ ತನ್ನ ಅಸ್ತಿತ್ವವನ್ನು ತೋರಿಸುತ್ತಿತ್ತು. ಬಳಿಯಲ್ಲಿ ಕೊಡೆಯೂ ಇರಲಿಲ್ಲ. ಬಂದು ಹೋದ ಮಳೆಯು ಆಕೆಯನ್ನು ಒದ್ದೆಯಾಗಿಸುವ ಕೆಲಸ ಸರಿಯಾಗಿ ಮಾಡಿ ಹೋಗಿತ್ತು. ತೊಯ್ದ ಆಕೆಯ ಶ್ವೇತ ವರ್ಣದ ಬಟ್ಟೆಗಳು ಮೈಗಂಟಿ ಕುಳಿತಿದ್ದವು. ಹಣೆಬರಹ ಚೆನ್ನಾಗಿತ್ತೋ ಅಥವಾ ಹೇಗಿತ್ತೋ ಗೊತ್ತಿಲ್ಲ, ಅಷ್ಟರಲ್ಲಿ ಒಬ್ಬ ಆಟೋದವನು ಬಂದನು. ಎಲ್ಲಿಗೆ ಮೇಡಂ ಎಂದು ಕೇಳಲು, ಸುಮನಳು ಊರ ಹೆಸರು ಹೇಳಿದಾಗ ಮುಖ ಕಿವುಚಿದ, ಓ ಅಷ್ಟು ದೂರ ನಾನು ಬರಲ್ಲಪ್ಪ, ಅದರಲ್ಲಿ ಮಳೆ ಬೇರೆ, ಕತ್ತಲಾಗ್ತಾನು ಬಂತು ಮತ್ತೆ ನಾನು ವಾಪಸ್ ಬೇರೆ ಬರಬೇಕು ಎಂದು ಹೆಚ್ಚಿನ ಹಣಕ್ಕಾಗಿ ಒಂದೊಂದೇ ರಾಗ ತೆಗೆದು ಆಲಾಪಿಸುತ್ತಿರುವಾಗ ಇದನ್ನರಿತ ಸುಮನಳು ಮಧ್ಯದಲ್ಲಿಯೇ ತಡೆದು, ‘ನೋಡು ನನ್ನ ಸ್ಕೂಟರ್ ಕೆಟ್ಟೋಗಿದೆ, ನಾನು ಒಬ್ಬಳೇ ಇದ್ದೀನಿ ದಯವಿಟ್ಟು ನನಗೆ ಸಹಾಯ ಮಾಡು ಹಣ ಸ್ವಲ್ಪ ಜಾಸ್ತಿನೇ ಕೊಡ್ತೇನೆ’, ಎಂದು ಅಂಗಲಾಚಿದಾಗ ಏನೋ ವಿಚಾರ ತಲೆಯಲ್ಲಿ ಬಂದು, ಆಯ್ತು ನಾನು ಒಂದು ಕಾಲ್ ಮಾಡ್ತೇನೆ ಆಮೇಲೆ ಹೋಗೋಣ ಅಂತ ಹೇಳಿ ಮೊಬೈಲ್ ಕೈಗೆತ್ತಿದ. ಬಾಡಿಗೆಯನ್ನು ನಿಗದಿ ಮಾಡಿ ಒಂದು ಕಾಲ್ ಮಾಡಿ ನಡೆದೇಬಿಟ್ಟ.

ಪ್ರತೀಕಾತ್ಮಕ ಫೋಟೋ

ಮೋಡ ಕವಿದ ವಾತಾವರಣ ಮತ್ತು ಮಳೆಯಿಂದಾಗಿ ಸಾಯಂಕಾಲಕ್ಕೆ ನಿಧಾನವಾಗಿ ರಾತ್ರಿಯ ಸ್ವರೂಪ ಬರಲು ಶುರುವಾಗಿತ್ತು. ಆಟೋದಲ್ಲಿ ಕುಳಿತ ಸುಂದರ ತರುಣಿ ತೊಟ್ಟುಕೊಂಡ ಬಿಳಿಯ ಮೈಗಂಟಿದ ಬಟ್ಟೆಗಳು ಆಟೋ ಚಾಲಕನನ್ನು ನೋಡಲು ಪ್ರೇರೇಪಿಸುತ್ತಿದ್ದವು. ಮಧ್ಯ ಮಧ್ಯ ಆಟೋ ಚಾಲಕ ಯಾವ ಯಾವದೋ ಕಾರಣದಿಂದ ಸುಮನಳನ್ನು ಹಾಗೂ ಆಕೆಯ ಒದ್ದೆಯಾದ ದೇಹವನ್ನು ದಿಟ್ಟಿಸಿ ನೋಡಲು ತವಕಿಸುವಂತಿತ್ತು ಆತನ ದೃಷ್ಟಿ. ಮಳೆಯಲ್ಲಿ ನೆನೆದ ಕಾರಣ ಸುಮನಳ ಶರೀರದ ಭಾಗಗಳು ಸುಪುಷ್ಟವಾಗಿ ಎದ್ದು ಕಾಣುತ್ತಿದ್ದವು. ಎಲ್ಲವೂ ಸುಮನಳಿಗೆ ಅರ್ಥವಾಗುತ್ತಿತ್ತು. ಆದರೇನು ಮಾಡುವದು ಸ್ಕೂಟರ್ ಕೈ ಕೊಟ್ಟಾಗಿತ್ತು. ಮನೆಗೆ ಹೋಗಲು ಲೇಟು, ಮಧ್ಯದಲ್ಲಿ ಮಳೆ ಹೀಗಾಗಿ ದೇವರ ಮೇಲೆ ಭಾರ ಹಾಕಿ ತನ್ನೂರು ಯಾವಾಗ ಬರುತ್ತೆ ಎಂದು ವಿಚಾರ ಮಾಡುತ್ತಿರುವಾಗಲೇ ಆಟೋ ಒಮ್ಮೆಲೇ ನಿಂತಿತು. ‘ಮೇಡಂ, ಈತ ನನ್ನ ಫ್ರೆಂಡ್, ಮರಳಿ ಬರುವಾಗ ನನ್ನ ಜೊತೆ ಇರಲಿ ಅಂತ ಈತನಿಗೆನೇ ನಾನು ಫೋನ್ ಮಾಡಿದ್ದು, ನನ್ನ ಜೊತೆಯಲ್ಲೇ ಮುಂದೆ ಕುಳಿತುಕೊಳ್ಳುತ್ತಾನೆ ನಿಮಗೇನು ತೊಂದರೆಯಾಗಲ್ಲ’ ಎಂದು ಹೇಳಿ ಸುಮನಳ ಉತ್ತರಕ್ಕೆ ಕಾಯದೆ ಏನನ್ನೂ ಕೇಳದೆ ತನ್ನ ಮಗ್ಗುಲಲ್ಲಿ ಕೂಡಿಸಿಕೊಂಡೇ ಬಿಟ್ಟ.

ಒಬ್ಬರ ಬದಲಾಗಿ ಇಬ್ಬರು. ಗೆಳೆಯ ಬರುವಾಗ ಮಧ್ಯವನ್ನು ಕುಡಿದೇ ಬಂದಿದ್ದಾನೆಂದು ಆತ ಬಂದು ಕುಳಿತಾಗಲೇ ಸುಮನಳಿಗೆ ಗೊತ್ತಾಯಿತು. ಇಬ್ಬರ ಕಣ್ಣಲ್ಲಿಯೂ ಹಸಿವಿನ ಬಾಧೆ. ಈಕೆಯನ್ನು ನೋಡುತ್ತಾ ತಮ್ಮ ತಮ್ಮಲ್ಲೆ ಏನೋ ಗುಸು ಗುಸು ಮಾತುಗಳು ಬೇರೆ. ಈಗ ನಾಲ್ಕು ಕಣ್ಣುಗಳನ್ನು ಎದುರಿಸುವ ಕಷ್ಟ ಸುಮನಳದು. ಮನಸ್ಸಿನಲ್ಲಿ ಈಗ ನಿಜವಾಗಿ ಕಳವಳ, ತೊಳಲಾಟ ಶುರುವಾಯಿತು. ನಾನೇಕೆ ಬಂದೆ? ಬರದಿದ್ದರೆ ಅಲ್ಲಿಯೇ ಎಲ್ಲಿರುತ್ತಿದ್ದೆ? ಇಲ್ಲ ಯಾರನ್ನಾದರೂ ಕರೆಸಿಕೊಳ್ಳಬೇಕಿತ್ತಾ? ಅಥವಾ ಬೇರೆ ಹಿರಿಯ ಆಟೋದವರಿಗೇನಾದರೂ ಕಾಯಬೇಕಿತ್ತಾ? ಇಲ್ಲ ಪೊಲೀಸರ ಸಹಾಯದಿಂದ ಆಟೋ ಮಾಡಬೇಕಿತ್ತಾ? ಹೀಗಾಗುತ್ತೇ ಅಂತ ಯಾರಿಗೆ ಗೊತ್ತು? ಸುಮನಳ ತಲೆಯಲ್ಲಿ ಹತ್ತು ಹಲವು ಪ್ರಶ್ನೆಗಳೆದ್ದು ತಲೆಯನ್ನೇ ಕೊರೆಯಲು ಹತ್ತಿದವು. ಆದರೂ ಅಂತರಂಗದ ತುಮುಲವನ್ನು ಹೊರ ಹಾಕದೇ ಅವರ ಕಡೆಗೆ ಗಮನ ಕೊಟ್ಟು ಕೊಡಲಾರದ ಹಾಗೆ ನಟಿಸುತ್ತಾ ತನಗೆ ತಾನೇ ಧೈರ್ಯ ಹೇಳಿ ಮುಂದೇನಾಗುತ್ತೋ ನೋಡಿಯೇ ಬಿಡುವ ಎಂಬ ಹುಂಬತನದ ಮೊಂಡು ಧೈರ್ಯದ ಮೇಲೆ ವಿಶ್ವಾಸವಿಟ್ಟು ಕುಳಿತಿದ್ದಳು.

ಈಗ ಆಟೋದ ವೇಗ ಹೆಚ್ಚು ಕಡಿಮೆಯಾಗುತ್ತ ಸಾಗುತ್ತಲಿತ್ತು. ರಸ್ತೆ ಪೂರ್ತಿ ನಿರ್ಜನವಾಗಿತ್ತು. ಇಬ್ಬರ ಕೆಟ್ಟ ದೃಷ್ಟಿ, ಕುಹಕ ಮಾತುಗಳು, ಮಧ್ಯದಲ್ಲಿ ಏನೋ ಸ್ಕೆಚ್ ಹಾಕುವ ತರ ಗುಸು ಗುಸು ಮಾತು ನಡೆದೇ ಇತ್ತು. ಮುಖ್ಯ ರಸ್ತೆಯಿಂದ ಊರು ಸ್ವಲ್ಪ ದೂರಾಗುತ್ತಿತ್ತು. ಆದರೆ ಮುಂದಿನ ಕವಲೊಡೆದ ದಾರಿಯಲ್ಲಿ ಅಡ್ಡಲಾಗಿ ಹೋದರೆ ಮನೆ ಮತ್ತು ಊರು ತುಂಬಾ ಸಮೀಪವಾಗುತ್ತದೆ ಎಂಬುದು ಸುಮನಳಿಗೆ ಗೊತ್ತು. ಆ ರಸ್ತೆ ಸ್ಮಶಾನದಿಂದ ಹಾಯ್ದು ಹೋಗುತ್ತಿತ್ತು. ಸುಮನಳು ಆಟೋದವನಿಗೆ ಸ್ಮಶಾನದಿಂದ ಹೋಗುವ ರಸ್ತೆಯಿಂದ ಆಟೋ ತೆಗೆದುಕೊಂಡು ಹೋಗಲು ಹೇಳಿದಾಗ ಇಬ್ಬರ ಮನಸ್ಸಿನಲ್ಲಿ ಏನೋ ಮಂಡಿಗೆ ಹಾಕಿದಂತಾಯಿತು. ಈಗ ಸಂಪೂರ್ಣವಾಗಿ ಕತ್ತಲಾವರಿಸಿತ್ತು. ಸುತ್ತಮುತ್ತಲ ಪರಿಸರ ಪರಿಪೂರ್ಣ ನಿರ್ಜನ ಪ್ರದೇಶವಾಗಿತ್ತು. ಸ್ವಲ್ಪ ಮುಂದೆ ಹೋದಾದ ನಂತರ ಸ್ಮಶಾನಕ್ಕೆ ಸಮೀಪಿಸುತ್ತಿದ್ದಂತೆಯೇ ಸುಮನಳು ಒಮ್ಮೆಲೇ ಕರ್ಕಶವಾಗಿ ಚಾಲಕನಿಗೆ ನಿಲ್ಲಲು ಆದೇಶಿಸಿದಳು. ಚಾಲಕ ಗಾಬರಿಯಾಗಿ ‘ಓ ಮೇಡಂ, ಯಾಕೆ ನಿಲ್ಲಿಸಲು ಹೇಳಿದ್ದು? ಇಲ್ಲಿ ಸ್ಮಶಾನವಿದೆ ನಿಮ್ಮೂರು ಇನ್ನು ಮುಂದೆ ಇದೆ ಅಲ್ವಾ’? ಎಂದಾಗ …. ‘ನಾನು ಇಲ್ಲಿಯೇ ಇಳಿಯಬೇಕು, ನನ್ನ ಮನೆ ಅಗೋ ಅಲ್ಲಿ ಇದೆ’, ಎಂದು ಒಂದು ‘ಸಮಾಧಿ’ಯ ಕಡೆಗೆ ಬೆರಳು ಮಾಡಿ ತೋರಿಸುತ್ತ…’ನಡೆ ನನ್ನ ಮನೆಗೆ ಚಹಾ ಕುಡಿಯಲು’…. ಎಂದು ಒಮ್ಮೆಲೇ ಜೋರಾಗಿ ನಗಲು ಶುರು ಮಾಡಿದಳು. ಇಲ್ಲಿಯವರೆಗೆ ತಮ್ಮ ತಮ್ಮಲ್ಲೇ ಏನೋ ಪ್ಲಾನ್ ಮಾಡುತ್ತ ಮತ್ತು ಹೇಗೆ ಬೇಕೋ ಹಾಗೆ ಮಾತನಾಡುತ್ತಿದ್ದವರ ಬಾಯಿಗೆ ಪಾರ್ಶ್ವವಾಯು ಹೊಡೆದ ಹಾಗೆ ಮಾತುಗಳು ಹೊರಬೀಳಲಾರಂಭಿಸಿದವು. ಕುಡಿದವನ ನಶೆ ಯಾವಾಗ ಇಳಿದಿತ್ತು ಗೊತ್ತೇ ಆಗಿರಲಿಲ್ಲ. ಆಟೋದಿಂದಿಳಿದ ಸುಮನಳು ‘ನಿಲ್ಲಿ, ನಿಮಗೆ ಹಣ ಕೊಡುತ್ತೇನೆ’ ಎಂದು ಪರ್ಸಿಗೆ ಕೈ ಹಾಕುವಷ್ಟರಲ್ಲಿಯೇ ಇಬ್ಬರೂ ನೋಡನೋಡುವಷ್ಟರಲ್ಲಿ ಹಣ ತೆಗೆದುಕೊಳ್ಳದೆ ಕ್ಷಣಾರ್ಧದಲ್ಲಿ ಪಲಾಯನಗೈದಿದ್ದರು. ಆ ಅವಸ್ಥೆಯಲ್ಲಿ ಹಣ ಬಿಡಿ ಜೀವ ಉಳಿದರೆ ಸಾಕಾಗಿತ್ತು ಅನ್ನೋ ಹಾಗೆ ಅವರ ದಯನೀಯ ಪರಿಸ್ಥಿತಿಯಾಗಿತ್ತು.

ಸುಮನಳು ಮಾತ್ರ ಕಡಿದಾದ ದಾರಿಯಿಂದ ನಡೆದುಕೊಂಡು ಎರಡು ನಿಮಿಷ ಸ್ವಲ್ಪ ಮುಂದೆ ಸಾಗಿ ಬಲಕ್ಕೆ ಹೊರಳಿದರೆ ಸಾಕು, ಅಲ್ಲಿಯೇ ಊರು ಅಲ್ಲಿಯೇ ಮನೆ.