ಅಂದು ಕೆಂಪು ಬತ್ತಿಯ ಸರ್ಕಾರಿ ಕಾರಿನಲ್ಲಿ ಓಡಾಡುತ್ತಿದ್ದ ಮಹಿಳೆ ಇಂದು ಮೇಕೆ ಮೇಯಿಸುತ್ತಾ ಗುಡಿಸಲಿನಲ್ಲಿ ವಾಸವಿದ್ದಾರೆ! ಕಾರಣ…?

ಸಮಯ ಬಹಳ ಬಲಶಾಲಿ ಎಂದು ಹೇಳುವುದುಂಟು. ಯಾರು ಸಮಯವನ್ನು ಅರಿತುಕೊಂಡು ಅದಕ್ಕನುಗುಣವಾಗಿ ನಡೆಯುತ್ತಾರೋ ಅವರು ಎಲ್ಲವನ್ನೂ ಅರಿತುಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾರೆ ಎನ್ನಲಾಗುತ್ತದೆ. ನಾವಿಂದು ಹೇಳಲು ಹೊರಟಿರುವ ಮಹಿಳೆ ಒಂದು ಕಾಲದಲ್ಲಿ ತನ್ನ ಜಿಲ್ಲೆಯ ಮಾಲೀಕರಂತೆ ಇದ್ದರು. ಅಲ್ಲದೇ ಕೆಂಪು ಬತ್ತಿಯ ಸರ್ಕಾರಿ ಕಾರಿನಲ್ಲಿ ಓಡಾಡುವ ಅವಕಾಶ ಆಕೆಯದಾಗಿತ್ತು.

ಆದರೆ ಕಾಲಚಕ್ರ ಹೇಗೆ ತಿರುಗಿತು ಎಂದರೆ, ಅಂದು ಅಧಿಕಾರದಲ್ಲಿದ್ದ ಆಕೆ ಇಂದು ತನ್ನ ಜೀವನ ನಿರ್ವಹಣೆಗಾಗಿ ಕುರಿ ಮೇಕೆಗಳನ್ನು ಮೇಯಿಸುವುದು ವೃತ್ತಿಯಾಗಿದೆ. ಆದಿವಾಸಿ ಪ್ರಾಂತ್ಯದಲ್ಲಿ ವಾಸಿಸುವ ಈ ಮಹಿಳೆಯ ಹೆಸರು ಜೂಲಿ. ಈಕೆ ಮಧ್ಯಪ್ರದೇಶದ ಶಿವಪುರ ಜಿಲ್ಲೆಯ ಆದಿವಾಸಿ ಪ್ರಾಂತ್ಯದ ಮೂಲದವರು.

ಒಂದು ಕಾಲದಲ್ಲಿ ಜೂಲಿ ಇಡೀ ಶಿವಪುರ ಜಿಲ್ಲೆಯ ಅಧ್ಯಕ್ಷರಾಗಿದ್ದರು. ಆಕೆ ಜೀವನದಲ್ಲಿ ಎಷ್ಟು ಬೇಗ ಎತ್ತರಕ್ಕೆ ಏರಿದರೋ, ತನ್ನ ನೀತಿ, ನಿಷ್ಠೆಯ ಕಾರಣದಿಂದಾಗಿ ಅಷ್ಟೇ ವೇಗವಾಗಿ ಮತ್ತೆ ದೀನ ಸ್ಥಿತಿಗೆ ತಲುಪಿದರು. ಜೂಲಿ ಮೊದಲು ಒಬ್ಬ ಕೂಲಿ ಕಾರ್ಮಿಕರಾಗಿದ್ದವರು. ಕೋಲಾಸರ್ನ ಮಾಜಿ ಶಾಸಕ ರಾಮ್ ಸಿಂಗ್ ಯಾದವ್ ಅವರು ಜೂಲಿಯನ್ನು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಸಲಹೆ ನೀಡಿದರು.

ಮಾಜಿ ಶಾಸಕರ ಸಲಹೆಯಂತೆ ಪಂಚಾಯಿತಿ ಚುನಾವಣೆಗೆ ನಿಲ್ಲಲು ಆಕೆ ಸಿದ್ಧಳಾದಳು. ಮಾಜಿ ಶಾಸಕರ ನೆರವಿನಿಂದ ಹಾಗೂ ತನ್ನ ವಿಶಿಷ್ಟವಾದ ಗುರುತಿನಿಂದ ಚುನಾವಣೆಯಲ್ಲಿ ವಿಜಯವನ್ನು ಸಾಧಿಸಿ ಆಕೆ ಪಂಚಾಯಿತಿ ಸದಸ್ಯರಾದರು. ಜಿಲ್ಲಾ ಪಂಚಾಯಿತಿಯ ಸದಸ್ಯರಾಗಿ ಆಕೆ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡರು.

ಜನ ಜೂಲಿ ಅವರ ಬಗ್ಗೆ ಮಾತನಾಡಲು ಪ್ರಾರಂಭಿಸಿದರು. ಒಬ್ಬ ಸಾಮಾನ್ಯ ಕೂಲಿ ಕಾರ್ಮಿಕಳಾಗಿದ್ದ ಜೂಲಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಆದದ್ದು ಒಂದು ಸ್ಫೂರ್ತಿ ಎಂದು ಜನ ಮಾತನಾಡಿಕೊಳ್ಳುತ್ತಿದ್ದರು. ಆಕೆಯ ಬಗ್ಗೆ ಅಪಾರವಾದ ಮೆಚ್ಚುಗೆ ವ್ಯಕ್ತವಾಯಿತು. ಅಲ್ಲದೇ ಜನರು ಆಕೆಗೆ ಜಿಲ್ಲಾ ಪಂಚಾಯಿತಿಯ ಅಧ್ಯಕ್ಷರ ಸ್ಥಾನಕ್ಕೆ ಸ್ಪರ್ಧಿಸುವಂತೆ ಸಲಹೆ ನೀಡಿದರು.

ಮಾಜಿ ಶಾಸಕ ಹಾಗೂ ಜನರ ಬೆಂಬಲದೊಂದಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಜೂಲಿ ಅದರಲ್ಲಿಯೂ ಯಶಸ್ಸನ್ನು ಪಡೆದುಕೊಂಡರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಜೂಲಿ ಅವರ ಕುರಿತಾಗಿ ಇಡೀ ರಾಜ್ಯದಲ್ಲಿ ಸುದ್ದಿಯಾಯಿತು. ಆಕೆಯ ಸಾಧನೆಗೆ ಇನ್ನಷ್ಟು ಮೆಚ್ಚುಗೆಗಳು ಹರಿದುಬಂದವು.

ಆಕೆಯ ಓಡಾಡಕ್ಕೆ ಕೆಂಪು ಬತ್ತಿಯ ಕಾರನ್ನು ನೀಡಲಾಯಿತು. ಜನ ಆಕೆಯನ್ನು ಮೇಡಂ ಎಂದು ಕರೆಯಲು ಪ್ರಾರಂಭಿಸಿದರು. ಜೂಲಿ ಕೂಡಾ ರಾಜಕಾರಣದಲ್ಲಿ ಸಕ್ರಿಯರಾದರು. ಆಕೆ ಬಹಳ ನಿಷ್ಠೆಯಿಂದ ಜನರ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರು. ಜೂಲಿ ಸದಾ ಬಡವರು ಹಾಗೂ ಕೂಲಿ ಕಾರ್ಮಿಕರ ಕಡೆಗೆ ಹೆಚ್ಚಿನ ಗಮನವನ್ನು ನೀಡಿ ಅವರ ಅಭಿವೃದ್ಧಿಗೆ ಶ್ರಮಿಸಿದರು.

ಜೂಲಿ ಬಹಳ ನಿಯತ್ತಿನಿಂದ ಕೆಲಸ ಮಾಡುವುದು ಆಕೆಯ ಸುತ್ತಮುತ್ತಲಿನ ರಾಜಕಾರಣಿಗಳಿಗೆ ಹಿಡಿಸಲಿಲ್ಲ.‌ ಒಬ್ಬೊಬ್ಬರಾಗಿ ಆಕೆಯ ಕೈಬಿಡಲು ಪ್ರಾರಂಭಿಸಿದರು. ಬಹಳಷ್ಟು ಜನರಿಗೆ ಆಕೆ ಬಡವರಿಗಾಗಿ ಹಾಗೂ ಕಾರ್ಮಿಕರಿಗಾಗಿ ಕೆಲಸಮಾಡುವುದು ಇಷ್ಟವಾಗಲಿಲ್ಲ. ಜೂಲಿಗೆ ಈ ವಿಷಯ ಅರ್ಥವಾಗಲು ಪ್ರಾರಂಭಿಸಿತು.

ದಿನಕಳೆದಂತೆ ಅವರು ಮಾಡುವ ಕಾರ್ಯಗಳಿಗೆ ಯಾರಿಂದಲೂ ಬೆಂಬಲ ದೊರೆಯಲಿಲ್ಲ. ಹಾಗೂ-ಹೀಗೂ ಐದು ವರ್ಷಗಳು ಕಳೆದುಹೋದವು. ನಂತರ ಜೂಲಿ ಚುನಾವಣೆಗೆ ಸ್ಪರ್ಧಿಸಲು ಯಾರೂ ಸಹಾ ಬೆಂಬಲವನ್ನು ನೀಡಲಿಲ್ಲ. ಜೂಲಿ ಈ ಬಾರಿ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದರು.

ತನ್ನ ಅಧಿಕಾರ ಅವಧಿಯಲ್ಲಿ ತನಗಾಗಿ ಆಕೆ ಏನೂ ಮಾಡಿಕೊಂಡಿರಲಿಲ್ಲ. ಈಗ ಕುಟುಂಬದ ಜವಾಬ್ದಾರಿಗಳು ಆಕೆಯ ಮೇಲೆ ಬಂದು ಬಿದ್ದವು. ಆರ್ಥಿಕ ಸಂಕಷ್ಟಗಳು ಹೆಚ್ಚ ತೊಡಗಿದವು. ಆಗ ಜೀವನ ನಿರ್ವಹಣೆಗೆ ಬೇರೆ ಮಾರ್ಗ ಕಾಣದೆ ಮೇಕೆಗಳನ್ನು ಸಾಕಲು ಆರಂಭಿಸಿದರು. ಆಕೆಯ ಸ್ಥಿತಿ ಈಗ ಹೇಗಿದೆಯೆಂದರೆ ಸರ್ಕಾರಿ ಜಮೀನಿನಲ್ಲಿ ಒಂದು ಗುಡಿಸಲು ನಿರ್ಮಾಣ ಮಾಡಿಕೊಂಡು ಅದರಲ್ಲಿ ವಾಸವಿದ್ದಾರೆ.

ಇಂದಿರಾ ಆವಾಸ್ ಯೋಜನೆಯಲ್ಲಿ ದೊರಕಿದ್ದ ನಿವೇಶನವೂ ಅಧಿಕಾರಿಗಳ ಭ್ರ ಷ್ಟಾ ಚಾ ರ ದಿಂದ ಕೈ ತಪ್ಪಿಹೋಯಿತು. ಹಿಂದೊಮ್ಮೆ ಜಿಲ್ಲಾ ಪಂಚಾಯಿತಿಯ ಅಧ್ಯಕ್ಷರಾಗಿದ್ದ ಆಕೆ ಈಗ ದಿನವೊಂದಕ್ಕೆ ಐವತ್ತು ರೂಪಾಯಿ ಗಳಿಸುತ್ತಾರೆ. ಬಡತನದಲ್ಲಿ ಜೀವನವನ್ನು ಕಳೆಯುತ್ತಿದ್ದಾರೆ. ಆಕೆಯ ಸಿದ್ದಾಂತವೇ ಆಕೆಗೆ ಮುಳುವಾಗಿದ್ದು ದುರಂತ.
-Team Infotrend