VIDEO : ಐದು ಕಿ.ಮೀ ಉದ್ದ, ಮೂರು ಕಿ.ಮೀ ಅಗಲದ ಭೂಭಾಗದಲ್ಲಿ ನಿರ್ಮಾಣವಾದ ಜಗತ್ತಿನ ಅತಿ ದೊಡ್ಡ ಹಿಂದೂ ದೇವಾಲಯ ಈಗೇನಾಗಿದೆ ವಿಡಿಯೊ ನೋಡಿ.
ನಮ್ಮ ಜಗತ್ತೇ ಒಂದು ವಿಸ್ಮಯಗಳ ಗೂಡು, ಕೋಟ್ಯಂತರ ವರ್ಷಗಳಷ್ಟು ಹಳೆಯದಾದ ಈ ಭೂಮಿಯ ಮೇಲೆ ಇತ್ತೀಚಿಗಷ್ಟೇ ಹುಟ್ಟಿದ ಮಾನವ ಈ ಭೂಮಿಯ ಮೇಲೆ ಎಂತೆಂಥ ವಿಸ್ಮಯಗಳನ್ನು ನಿರ್ಮಿಸಿದ್ದಾನೆಂದರೆ ಆ ಸೃಷ್ಟಿಕರ್ತನು ಕೂಡ ಈ ವಿಸ್ಮಯಗಳನ್ನು ನೋಡಲು ಧರೆಗೆ ಬಂದರೆ ಬೆರಗಾಗಿ ಹೋಗುತ್ತಾನೆ! ಅಂಥವುಗಳಲ್ಲಿ ಅದೇ ಭಗವಂತನಿಗೆ ಪೂಜೆ ಸಲ್ಲಿಸಲೆಂದದೇ ರಾಜ ಮಹಾರಾಜರು ನಿರ್ಮಿಸಿದ ದೇವಾಲಯಗಳು ಕೂಡ ಸೇರಿವೆ.
ಇಂಥ ಅದ್ಭುತ ದೇವಾಲಯಗಳಲ್ಲಿ ಜಗತ್ತಿನ ಅತೀ ದೊಡ್ಡ ದೇವಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದೇವಾಲಯ ಇಲ್ಲಿದೆ ನೋಡಿ…
ಜಗತ್ತಿನ ಅತ್ಯಂತ ದೊಡ್ಡ ದೇವಾಲಯವೆಂದರೆ ನಿಮಗೆ ನೆನಪಿಗೆ ಬರುವುದು ತಮಿಳುನಾಡಿನ ತಿರುಚನಾಪಲ್ಲಿಯಲ್ಲಿರುವ ರಂಗನಾಥಸ್ವಾಮಿ ದೇವಸ್ಥಾನ, ಆದರೆ ಜಗತ್ತಿನಲ್ಲಿ ಇದಕ್ಕಿಂತಲೂ ದೊಡ್ಡದಾದ ಅಂದರೆ ಒಟ್ಟು 162.6 ಹೆಕ್ಟೇರ್ ಪ್ರದೇಶದಲ್ಲಿ ಕಟ್ಟಲಾಗಿರುವ ಆಂಗಕೋರ್ ವಾಟ್ ಎಂಬ ದೇವಾಲಯ ಇದೆ.
ಅದು ಭಾರತದ ಮಿತ್ರ ಹಾಗೂ ಅತ್ಯಂತ ಸುಂದರ ದೇಶವಾದ ಕಾಂಬೋಡಿಯ ದೇಶದಲ್ಲಿದೆ. ಸುತ್ತಲೂ ಹಚ್ಚ ಹಸಿರಿನ ದಟ್ಟ ಕಾಡು, ಸಣ್ಣಗೆ ಹರಿಯುವ ನದಿ ಅದಷ್ಟೇ ಅಲ್ಲದೇ ನಾಲ್ಕು ದಿಕ್ಕಿನಲ್ಲೂ ದೊಡ್ಡ ದೊಡ್ಡ ಕಂದಕಗಳ ತುಂಬೆಲ್ಲ ನೀರು, ಇದರ ಮಧ್ಯದಲ್ಲಿ ಬೃಹದಾಕಾರದಲ್ಲಿ ನೆಲೆ ನಿಂತಿರುವ ದೊಡ್ಡ ದೊಡ್ಡ ಗೋಪುರಗಳ ಸಾಲು ಸಾಲಾಗಿ ಕಾಣುವ ಈ ಆಂಗಕೋರ್ ವಾಟ್ ದೇವಾಲಯವೆ ಜಗತ್ತಿನ ಅತ್ಯಂತ ದೊಡ್ಡ ದೇವಾಲಯ.

ಈ ದೇವಾಲಯು ಹಿಂದೂ ಧರ್ಮದ ಸಾಮ್ರಾಜ್ಯವಾಗಿದ್ದ ಖೇಮರ್ ಎಂಬ ರಾಜವಂಶದ ಎರಡನೇ ಸೂರ್ಯವರ್ಮನ್ ಎಂಬ ರಾಜ ಕಂಡ ಕನಸು. ಹಾಗೂ ಇದನ್ನು ನನಸು ಮಾಡುವಲ್ಲಿಯೂ 90 ಪ್ರತಿಶತ ಯಶಸ್ಸು ಕಂಡಿದ್ದು ಇದೆ ಎರಡನೇ ಸೂರ್ಯ ವರ್ಮನ್. ಆದರೆ ದೇವಾಲಯ ಪೂರ್ತ ಸಿದ್ದವಾದಾಗ ಅವರಿರಿಲಿಲ್ಲ.
ತಾನು ಕಂಡ ದೇವಾಲಯದ ಕನಸನ್ನು ತನ್ನ ಮಿತ್ರ ಹಾಗೂ ಯುದ್ಧ ನೀತಿ, ಆಡಳಿತ, ವೇದ ಶಾಸ್ತ್ರ ಎಲ್ಲದರಲ್ಲೂ ತಮಗೆ ಬೆನ್ನೆಲುಬಾಗಿದ್ದ ದಿವಾಕರ ಭಟ್ಟರ ಹತ್ತಿರ ಹೇಳಿಕೊಳ್ಳುತ್ತಾರೆ ಸೂರ್ಯವರ್ಮನ್. ಇದನ್ನು ಕೇಳಿದ್ದೆ ತಡ ಆ ದಿವಾಕರ ಭಟ್ಟರು ಒಂದು ಯೋಜನೆಯನ್ನು ರೂಪಿಸಿಯೇ ಬಿಟ್ಟರು.
ಈ ದೇವಾಲಯಕ್ಕೆ ಆಂಗಕೋರ್ ವಾಟ್ ಎಂದು ಹೆಸರಿಟ್ಟವರು ಕೂಡ ಇದೆ ದಿವಾಕರ ಭಟ್ಟರೆ ಆಗಿದ್ದಾರೆ, ಆಂಗಕೋರ್ ವಾಟ್ ಎನ್ನುವುದು ಒಂದು ಸಂಸ್ಕೃತ ಪದ ಅದರರ್ಥ ದೇವಾಲಯಗಳ ನಗರಿ ಎಂದಾಗಿದೆ. ದಿವಾಕರ ಭಟ್ಟರು ರೂಪಿಸಿದ ಯೋಜನೆ ಹೇಗಿತ್ತು ಎಂದರೆ ಇಂತಹ ದೇವಾಲಯವನ್ನು ಇಡೀ ವಿಶ್ವದಲ್ಲೇ ಹಿಂದೆ ಯಾರು ನಿರ್ಮಿಸಿರಬಾರದು ಹಾಗೂ ಮುಂದೆ ಯಾರು ನಿರ್ಮಿಸಬಾರದು ಅಷ್ಟು ಬೃಹತ್ ಪ್ರಮಾಣದ ದೇವಾಲಯ ಕಟ್ಟಲು ಯೋಜನೆ ರೂಪಿಸಿದ್ದರು.
ಇಷ್ಟೊಂದು ಬೃಹತ್ ದೇವಾಲಯದ ನಿರ್ಮಾಣ ಮಾಡುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ, ಬದಲಾಗಿ ಇದಕ್ಕೆ ಸಾಕಷ್ಟು ಕಾರ್ಮಿಕರು, ಹಣಕಾಸು ಹಾಗೂ ಕಚ್ಚಾ ವಸ್ತುಗಳ ಅವಶ್ಯಕತೆ ಇತ್ತು. ಇಷ್ಟೆಲ್ಲ ತಯಾರಿ ತನ್ನ ರಾಜ್ಯದಲ್ಲಿ ಇರಲಿಲ್ಲ, ಹೀಗಾಗಿ ರಾಜ ಚಿಂತಿತನಾಗುತ್ತಾನೆ.

ಆದರೆ ಇದಕ್ಕೂ ಒಂದು ಪರಿಹಾರ ಸೂಚಿಸಿದ ದಿವಾಕರ ಭಟ್ಟರು ತಮ್ಮ ಸುತ್ತ ಮುತ್ತಲಿನ ರಾಜ್ಯಗಳ ಮೇಲೆ ಆಕ್ರಮಣ ಮಾಡಿ ಅವರ ಸಂಪತ್ತು ಹಾಗೂ ಅಲ್ಲಿನ ಜನರನ್ನು ಒತ್ತೆಯಾಳುಗಳಾಗಿ ತಂದು ಅವರಿಂದಲೇ ಈ ದೇವಾಲಯ ನಿರ್ಮಾಣ ಕಾರ್ಯ ಮಾಡಲು ಸೂಚಿಸುತ್ತಾನೆ!
ಇದರಿಂದ ಸಂತಸಗೊಂಡ ರಾಜ ಸೂರ್ಯವರ್ಮನ್ ಅವರು ತಮ್ಮ ಅಕ್ಕ ಪಕ್ಕದ ರಾಜ್ಯಗಳ ಮೇಲೆ ಆಕ್ರಮಣ ಮಾಡಿ ತಮ್ಮ ಶೌರ್ಯ ಪರಾಕ್ರಮ ಮೆರೆದು ಗೆದ್ದು ಆ ರಾಜ್ಯಗಳಲ್ಲಿನ ಧನ ಕನಕಗಳನ್ನು ವಶಪಡಿಸಿಕೊಂಡಿದ್ದಲ್ಲದೆ, ಅಲ್ಲಿನ ಒಂದು ಲಕ್ಷಕ್ಕೂ ಅಧಿಕ ಜನರನ್ನು ಒತ್ತೆಯಾಳುಗಳನ್ನಾಗಿ ತಂದರು.
ಅಲ್ಲಿಂದ ಶುರುವಾಯಿತು ಈ ಬೃಹತ್ ದೇವಾಲಯದ ನಿರ್ಮಾಣ ಕಾರ್ಯ. ಒಟ್ಟು 402 ಎಕರೆ ಪ್ರದೇಶದಲ್ಲಿ ನಿರ್ಮಿಸಿದ 5 ಕಿಲೋಮೀಟರ್ ಉದ್ದ ಹಾಗೂ 3 ಕಿಲೋಮೀಟರ್ ಅಗಲದ ಪ್ರಾಂಗಣ ಹೊಂದಿರುವ ದೇವಾಲಯ, ಇದರ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲು ಬರೋಬ್ಬರಿ 37 ವರ್ಷಗಳ ಕಾಲ ತಗೆದುಕೊಂಡಿತು.
97 ಸಾವಿರ ಖೇಮರ್ ರಾಜ್ಯದ ಪ್ರಜೆಗಳು ಹಾಗೂ ಒಂದು ಲಕ್ಷಕ್ಕಿಂತಲೂ ಅಧಿಕ ಒತ್ತೆಯಾಳುಗಳ ಸತತ ಪರಿಶ್ರಮ ಹಾಗೂ 6 ದಶಲಕ್ಷ ಟನ್ ಕಚ್ಚಾ ವಸ್ತುಗಳು ಈ ದೇವಾಲಯ ನಿರ್ಮಾಣಕ್ಕೆ ಬೇಕಾಯಿತು. ಈ ದೇವಾಲಯದ ವಾಸ್ತು ಶೈಲಿಯು ಕೂಡ ಹಿಂದೂಗಳ ಪಾಲಿನ ಅತ್ಯಂತ ಪವಿತ್ರ ಹಾಗೂ ದೇವಾನುದೇವತೆಗಳ ವಾಸಸ್ಥಾನವಾಗಿರುವ ಮೇರು ಪರ್ವತ ಗಳ ರೀತಿಯಲ್ಲೇ ಇರುವುದು ವಿಶೇಷ.

ಇನ್ನು ಈ ದೇವಾಲಯಕ್ಕೆ ಮುಖ್ಯ ಗೋಪುರದೊಂದಿಗೆ ನಾಲ್ಕು ಉಪಗೋಪುರಗಳನ್ನು ನಿರ್ಮಿಸಲಾಗಿದೆ. ಮುಖ್ಯ ದೇವಾಲಯದ ಸುತ್ತ 1024 ಮೀಟರ್ ಉದ್ದ 802 ಮೀಟರ್ ಅಗಲ ಹಾಗೂ 4.5 ಮೀಟರ್ ಎತ್ತರದ ಗೋಡೆ ನಿರ್ಮಿಸಲಾಗಿದೆ. ಇನ್ನು ಈ ಗೋಡೆಯಿಂದ 30 ಮೀಟರ್ ನಷ್ಟು ವಿಶಾಲವಾದ ಖಾಲಿ ಜಾಗೆ ಇದ್ದು ಅದರ ನಂತರ ಬರೋಬ್ಬರಿ 190 ಅಡಿ ಆಳದ ನೀರಿನ ಕಂದಕ ನಿರ್ಮಿಸಲಾಗಿದೆ.
ನೀರಿನ ಕಂದಕದ ಉದ್ದೇಶ ತಿಳಿದಿಲ್ಲವಾದರೂ ಒಂದು ಅಂದಾಜಿನ ಪ್ರಕಾರ ಶತ್ರುಗಳಿಂದ ದೇವಾಲಯ ರಕ್ಷಣೆ ಇದರ ಮುಖ್ಯ ಉದ್ದೇಶ ಎಂದೆನಿಸುತ್ತದೆ. ಇನ್ನು ಸುತ್ತಲೂ ಇಷ್ಟೊಂದು ನೀರಿನ ಸೆಲೆ ಹೊಂದಿರುವ ಈ ದೇವಾಲಯಕ್ಕೆ ಅತ್ಯಂತ ಗಟ್ಟಿಯಾದ ಅಡಿಪಾಯ ಹಾಕುವುದು ಕೂಡ ಬಹಳ ಮುಖ್ಯ ಎಂದೂ ಅರಿತಿದ್ದ ಅವರು ಅತ್ಯಂತ ಆಳವಾದ ತಳಪಾಯ ಹಾಕಿದ್ದಾರೆ.
ದೇವಾಲಯಕ್ಕೆ ಮೂರು ಲೇಯರ್ ನ ಬುನಾದಿ ನಿರ್ಮಿಸಿದ ಅವರು ಮೊದಲು ಮರಳು ತುಂಬಿ ಅದರ ಮೇಲೆ ಜಲ್ಲಿ ಕಲ್ಲುಗಳನ್ನು ಹಾಕಿ ಕೊನೆಗೆ ಮಣ್ಣು ಹಾಕಿ ಗಟ್ಟಿಗೊಳಿಸಿದ್ದಾರೆ. ಇದರ ನಿರ್ಮಾಣದಲ್ಲಿ ಒಂದು ವಿಶೇಷ ರೀತಿಯ ಕಂದು ಬಣ್ಣದ ಮರಳು ಕಲ್ಲುಗಳನ್ನು ಬಳಸಲಾಗಿದೆ ಆದರೆ ಅವುಗಳನ್ನು ಎಲ್ಲಿಂದ ತಂದರು ಎಂಬ ಖಚಿತ ಮಾಹಿತಿ ಇಲ್ಲ.
ಆದರೂ ಸಹ ಅಲ್ಲಿಂದ ಅಂದಾಜು 25 ಕಿಲೋಮೀಟರ್ ದೂರದಲ್ಲಿ ಕೆಲವು ಕಲ್ಲಿನ ಕ್ವಾರಿಗಳು ಇಂದಿಗೂ ಕಾಣಸಿಗುತ್ತವೆ, ಅಲ್ಲಿಂದಲೇ ತಂದಿರಬಹುದು ಎಂಬ ಅಂದಾಜಿದೆ. ಅವುಗಳನ್ನು ಅದು ಹೇಗೆ ಕತ್ತರಿಸಿ ಅಲ್ಲಿಂದ ಇಲ್ಲಿಗೆ ತಂದರೋ ಭಗವಂತನೇ ಬಲ್ಲ. ಹಾಗೂ ಒರಟು ಕಲ್ಲುಗಳನ್ನು ನುಣುಪುಗೊಳಿಸಲು ದೊಡ್ಡ ಕಲ್ಲುಗಳನ್ನು ಸಣ್ಣ ಕಲ್ಲುಗಳಿಗೆ ಉಜ್ಜಿ ನುಣುಪು ಮಾಡಿದ್ದರಂತೆ!

ಇಷ್ಟೆಲ್ಲ ಕಷ್ಟ ಪಟ್ಟು 37 ವರ್ಷಗಳವರೆಗೆ ಕೆಲಸ ಮಾಡಿದ ಈ ಕಾರ್ಮಿಕರಿಗೂ ಗೌರವ ಸೂಚಿಸಿದ ಈ ರಾಜಮನೆತನ, ಕಟ್ಟಡ ಕಾರ್ಯ ನಿರ್ಮಾಣ ಮಾಡಿದ ರೀತಿಯನ್ನು ಆ ದೇವಾಲಯದ ಗೋಡೆಗಳ ಮೇಲೆ ಕೆತ್ತಿಸಿದ್ದಾರೆ. ಇನ್ನು ಈ ಖೇಮರ್ ವಂಶಸ್ಥರು ಮೊದಲು ಶಿವನ ಆರಾಧಕರಾಗಿದ್ದರು ನಂತರ ವಿಷ್ಣುವಿನ ಭಕ್ತರಾಗಿ ಬದಲಾದರು ಇದರಿಂದಾಗಿ ಈ ದೇವಾಲಯ ವಿಷ್ಣುವಿನ ದೇವಾಲಯವಾಯಿತು.
ಆದರೆ ಈ ದೇವಾಲಯದ ನಿರ್ಮಾಣ ಕಾರ್ಯ ಇನ್ನೇನೂ ಮುಗಿಯಿತು ಎನ್ನುವಷ್ಟರಲ್ಲಿ ಆ ದೇವಾಲಯ ಕಟ್ಟಿಸುವ ಕನಸು ಕಂಡು ನನಸು ಮಾಡಿಕೊಳ್ಳಲು ಹೊರಟಿದ್ದ ಎರಡನೇ ಸೂರ್ಯವರ್ಮನ್ ಇಹಲೋಕ ತ್ಯಜಿಸಿದ್ದರು. ಕೊನೆಗೆ ಇದನ್ನು ಏಳನೇ ಜಯವರ್ಮನ್ ಪೂರ್ಣಗೊಳಿಸಿದರು.
13 ನೇ ಶತಮಾನದವರೆಗೂ ಭಾರತೀಯ ಹಿಂದೂ ಅರಸರು ಅಂದರೆ ರಾಜ ರಾಜ ಚೋಳ, ಶ್ರೀ ವಿಜಯ ಸಾಮ್ರಾಜ್ಯ ಹಾಗೂ ಖೇಮರ್ ವಂಶ ಈ ಮೂರು ಒಂದಾಗೆ ಇದ್ದವು. ಆದರೆ ನಂತರದ ದಿನಗಳಲ್ಲಿ ಅಂದರೆ ರಾಜೇಂದ್ರ ಚೋಳನ ಕಾಲದಲ್ಲಿ ಬೌದ್ಧ ಧರ್ಮ ಸ್ವೀಕಾರ ಮಾಡಿದ್ದ ಶ್ರೀ ವಿಜಯ ಸಾಮ್ರಾಜ್ಯದವರು ಖೇಮರ್ ಸಾಮ್ರಾಜ್ಯದ ಮೇಲೆ ದಾಳಿ ಮಾಡಲು ಮುಂದಾದರು.
ಇದರಿಂದ ಅವರ ಸ್ನೇಹವನ್ನೇ ಕಡೆದುಕೊಂಡ ರಾಜೇಂದ್ರ ಚೋಳನು ಖೇಮರ್ ಸಾಮ್ರಾಜ್ಯದ ಬೆನ್ನಿಗೆ ನಿಂತು ಕಾಪಾಡಿದ್ದ ಎಂಬುದು ಈ ದೇವಾಲಯ ನಿರ್ಮಾಣಕ್ಕಿಂತಲೂ ಹಿಂದಿನ ಇತಿಹಾಸ. ಇನ್ನೂ ಇಷ್ಟೆಲ್ಲ ಕಷ್ಟ ಪಟ್ಟು ನಿರ್ಮಿಸಿದ ಈ ದೇವಾಲಯ ಮುಂದೆ ಶತ್ರುಗಳ ದಾಳಿಯಿಂದ ನಲುಗಿ ಅಲ್ಪ ಸ್ವಲ್ಪ ಹಾನಿಯಾಗಿದೆ.
ನಂತರ ಈ ದೇವಾಲಯ ಬರೋಬ್ಬರಿ 700 ವರ್ಷಗಳವರೆಗೂ ಕಣ್ಮರೆಯಾಗಿ ಹೋಗಿತ್ತು. ಇದು ಮತ್ತೊಮ್ಮೆ ಹೊರ ಜಗತ್ತಿಗೆ ಕಂಡಿದ್ದು 19 ನೇ ಶತಮಾನದಲ್ಲಿ, ಹಾಗೂ ಇತ್ತೀಚೆಗಷ್ಟೇ ಅಂದರೆ 1992 ರಲ್ಲಿ ಇದನ್ನು ಯುನೆಸ್ಕೋ ಪಾರಂಪರಿಕ ಸ್ಥಳಗಳ ಪಟ್ಟಿಯಲ್ಲಿ ಸೇರಿಸಲಾಯಿತು,
ಇಲ್ಲಿ ಖೇಮರ್ ಶೈಲಿಯ 1200 ಕ್ಕೂ ಅಧಿಕ ವಿಗ್ರಹಳಿವೆ ಅವುಗಳೊಂದಿಗೆ ಕೆಲವು ಬೌದ್ಧ ಧರ್ಮದ ವಿಗ್ರಹಗಳು ಕೂಡ ಸಿಕ್ಕಿದ್ದರಿಂದ ಇದು ಬೌದ್ಧರ ಪಾಲಿನ ಅತ್ಯಂತ ಪವಿತ್ರ ದೇವಾಲಯ ಎನಿಸಿಕೊಂಡಿದೆ. ಈಗದು ಹಿಂದೂ ದೇವಾಲಯವಾಗಿ ಉಳಿಯದೇ ಭೌದ್ಧರ ಧಾರ್ಮಿಕ ಕೇಂದ್ರವಾಗಿದೆ. ಇದು ತನ್ನ ವಿಶಾಲ ಪ್ರದೇಶದಿಂದ ದೊಡ್ಡ ದೇವಾಲಯವಾಗಿದ್ದರೂ ಕೂಡ ಇಲ್ಲಿ ಪೂಜೆ ನಡೆಯದ ಆ ಸ್ಥಾನಕ್ಕೆ ಅರ್ಹವಾಗಿಲ್ಲ.
ಅಲ್ಲಿಗೆ ಈಗಲೂ ನಮ್ಮ ದೇಶದ ತಮಿಳುನಾಡಿನ ರಂಗನಾಥಸ್ವಾಮಿ ದೇವಾಲಯವೆ ಜಗತ್ತಿನ ಅತೀ ದೊಡ್ಡ ದೇವಾಲಯವಾಗಿ ಉಳಿದುಕೊಂಡಿದೆ. ಅಂಗಕೂರ್ ವಾಟ್ ಜಗತ್ತಿನ ಅತಿ ದೊಡ್ ದಾರ್ಮಿಕ ಕೇಂದ್ರ ಮಾತ್ರವಾಗಿದೆ. ಆ ಬಗೆಗಿನ ಒಂದು ಚಿಕ್ಕ ವಿಡಿಯೊ ಮೇಲಿದೆ ನೋಡಿ…
-ಮಂಜುನಾಥ್