ಚಾರ್ಮಾಡಿ ಘಾಟ್ ರಕ್ಷಿಸುತ್ತಿರುವ ಆ ಶಕ್ತಿ ಯಾವುದು?

ಭರತ ಭೂಮಿ ಎಂದರೆ ವೈವಿಧ್ಯಮಯ ವಿಶೇಷತೆಗಳಿಂದ ಕೂಡಿದ ಬೀಡು. ಅದರಲ್ಲೂ ಕರ್ನಾಟಕ ರಾಜ್ಯವೆಂದರೆ ಅತೀ ಹೆಚ್ಚು ವಿಶೇಷತೆಗಳ ತವರು. ಇಂತಹ ವಿಶೇಷತೆಗಳಲ್ಲಿ ಅರಣ್ಯ ಪ್ರದೇಶಗಳು ಹಾಗೂ ಘಾಟ್ ಗಳದು ಸಿಂಹ ಪಾಲು ಇದೆ. ಇಂತಹ ಘಾಟ್ ಗಳಲ್ಲಿ ಚಾರ್ಮಾಡಿ ಘಾಟ್ ಕೂಡ ಒಂದು. ಕರ್ನಾಟಕದಲ್ಲಿ ಘಾಟ್ ಸೆಕ್ಸನ್ ಎಂದು ಕೇಳಿದರೆ ಮೊದಲು ಕಿವಿಗೆ ಬೀಳುವುದೇ ಚಾರ್ಮಾಡಿ ಘಾಟ್.

ಸುಂದರ ಹಾಗೂ ವಿಶೇಷತೆಗಳಿಂದ ಕೂಡಿದ ರುದ್ರ ರಮಣೀಯ ಎನ್ನಬಹುದಾದಂತ ಈ ಘಾಟ್, ಪಶ್ಚಿಮ ಘಟ್ಟದ ಶ್ರೇಣಿಯಲ್ಲಿರುವ ಕರ್ನಾಟಕದ ಮೂರು ಮುಖ್ಯ ಜಿಲ್ಲೆಗಳಾದ ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಕರಾವಳಿ ಪ್ರದೇಶಗಳನ್ನು ಸೇರಿಸುವ ಕಣ್ಮನ ಸೆಳೆಯುವ ಕೊಂಡಿಯಾಗಿದೆ.

ಪಶ್ಚಿಮ ಘಟ್ಟಗಳನ್ನು ಬರೋಬ್ಬರಿ 30 ಕಿಲೋಮೀಟರ್ ದೂರದವರೆಗೂ ಸೀಳಿಕೊಂಡು ಹೋಗಿರುವ ಈ ಘಾಟ್ ಕೇವಲ ತನ್ನ ಸೌಂದರ್ಯಕ್ಕಷ್ಟೇ ಅಲ್ಲದೇ, ಹಲವು ವಿಶೇಷತೆಗಳಿಗೆ ಪ್ರಸಿದ್ಧಿಯಾಗಿದೆ. ಅಂತಹ ವಿಶೇಷತೆಗಳಲ್ಲಿ ಆ ಘಾಟ್ ನ ಮಧ್ಯದಲ್ಲಿರುವ ಆ ಒಂದು ದೇವಿಯ ಗುಡಿಯೂ ಸಹ ಸೇರಿದೆ. ಈ ದೇವಿಯ ರಹಸ್ಯ ಅಥವಾ ಪವಾಡದ ಬಗ್ಗೆ ಅಲ್ಲಿನ ಜನರಲ್ಲಿ ಅಪಾರ ನಂಬಿಕೆಯಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಒಂದು ಗ್ರಾಮವಾದ ಅಲೆಕಾಲು ಹರಟಿ ಎಂಬುದರ ಪ್ರವೇಶದ ಹತ್ತಿರವೇ ಇರುವ ಈ ದೇವಿಯ ಹೆಸರು, ಗುಳಿಗೆಮ್ಮ ದೇವಿ. ಯಾವುದೇ ಕಟ್ಟಡಗಳಿಲ್ಲದ ಬಯಲು ಪ್ರದೇಶದಲ್ಲಿಯೇ ಇರುವ ಈ ದೇವಿಗೆ ಮೂರ್ತಿಯು ಕೂಡ ಇಲ್ಲ. ಒಂದು ಕಲ್ಲಿನಾಕಾರಕ್ಕೇ ಪೂಜೆ ಸಲ್ಲಿಸಲಾಗುತ್ತದೆ.

ಈ ದೇವಿಯ ಈ ಸ್ಥಳ ಅದೆಷ್ಟು ಪವಾಡಗಳಿಂದ ಕೂಡಿದೆ ಎಂದರೆ, ಈ ಮಾರ್ಗವಾಗಿ ಸಾಗುವ ಪ್ರತಿಯೊಂದು ವಾಹನವೂ ಇಲ್ಲಿ ನಿಲ್ಲಿಸಿ ಪೂಜೆ ಸಲ್ಲಿಸಿಯೇ ಹೋರಡುತ್ತಾರೆ. ಬ್ರಿಟಿಷರ ಕಾಲದಲ್ಲಿಯೇ ನಿರ್ಮಿಸಲಾದ ಈ ರಸ್ತೆ ಅಂದಿನಿಂದ ಇಂದಿನವರೆಗೂ ಕೊಂಚವು ಅಲುಗಾಡಿರಲಿಲ್ಲ, ಒಂದು ಬಂಡೆ ಸಹ ಅಲ್ಲಿ ಬಂದು ಬಿದ್ದಿರಲಿಲ್ಲ.

ಕಳೆದ ವರ್ಷ ಸುರಿದ ಭಾರಿ ಮಳೆಗೆ ಈ ರಸ್ತೆಯನ್ನು ದುರಸ್ಥಿಗೊಳಿಸುವುದೇ ಸಾಧ್ಯವಿಲ್ಲ ಎನ್ನುವ ಮಟ್ಟಿಗೆ ಕುಸಿದು ಹೋಗಿತ್ತು. ಅಷ್ಟೇ ಅಲ್ಲದೇ ಅಕ್ಕ ಪಕ್ಕದ ಗುಡ್ಡಗಳು ಸಹ ರಸ್ತೆಯ ಮೇಲೇಯೆ ಕುಸಿದಿದ್ದವು. ಆದರೂ ಸಹ ಆ ರಸ್ತೆಯಲ್ಲಿ ಒಂದೇ ಒಂದು ಸಾವು ನೋವಾಗಿರಲಿಲ್ಲ ಇದಕ್ಕೆಲ್ಲ ಕಾರಣ ಈ ಗುಳಿಗೆಮ್ಮ ದೇವಿಯ ರಕ್ಷಣೆಯೇ ಎಂದು ಬಲವಾಗಿ ನಂಬುತ್ತಾರೆ ಇಲ್ಲಿನ ಜನ.

ಅದು ಸತ್ಯವೂ ಎಂದೆನಿಸುತ್ತದೆ, ಏಕೆಂದರೆ ಇಷ್ಟೆಲ್ಲ ಗುಡ್ಡ ಕುಸಿದಿದ್ದರೂ ಆ ರಸ್ತೆಯಲ್ಲಿ ಯಾವುದೇ ದುರಂತ ನಡೆದಿರಲಿಲ್ಲ ಎಂಬುದು ಒಂದೆಡೆಯಾದರೆ ಆ ಹಳ್ಳಿಯಲ್ಲಿಯೂ ಸಾಕಷ್ಟು ಪ್ರಮಾಣದಲ್ಲಿ ನೀರು ನುಗ್ಗಿ ಭೂ ಕುಸಿತ ಗುಡ್ಡ ಕುಸಿತ ಸಂಭವಿಸಿತ್ತು ಆದರೂ ಸಹ ಒಂದೇ ಒಂದು ಸಾವು ನೋವಾಗಿರಲಿಲ್ಲ ಎಂಬುದು ಈ ದೇವಿಯ ಶಕ್ತಿಗೆ ಹಿಡಿದ ಕನ್ನಡಿಯಾಗಿದೆ.

ಅಷ್ಟೇ ಅಲ್ಲದೇ ಈ ದೇವಿಯ ಸ್ಥಳದಿಂದ ಸ್ವಲ್ಪ ದೂರದಲ್ಲಿಯೇ ಸಾಕಷ್ಟು ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿದ್ದರು ಈ ದೇವಿಯ ಗದ್ದುಗೆ ಒಂದಿಂಚು ಕೂಡ ಅಲುಗಾಡಿರಲಿಲ್ಲ. ಆ ಗ್ರಾಮಸ್ಥರು ತಮ್ಮ ಗ್ರಾಮದಿಂದ ಯಾವುದೇ ಪ್ರದೇಶಕ್ಕೆ ತೆರಳುತ್ತಿದ್ದರೂ ಆ ದೇವಿಗೆ ಪೂಜೆ ಸಲ್ಲಿಸದೆ ಹೊರಡೋದೇ ಇಲ್ಲವಂತೆ.

ಇನ್ನೂ ವಿಶೇಷ ಎಂದರೆ ಇಷ್ಟೆಲ್ಲ ಪವಾಡಗಳಿರುವ ಈ ದೇವಿಗೆ ಪೂಜೆ ಸಲ್ಲಿಸೋಕೆ ಇಂಥದ್ದೆ ವಸ್ತು ಬೇಕು ಎಂಬ ನಿಯಮಗಳಿಲ್ಲ, ಹಾಗೂ ಅರ್ಚಕರು ಸಹ ಇಲ್ಲ, ಭಕ್ತಿ ಭಾವದಿಂದ ನಾವೇನೇ ಕೇಳಿಕೊಂಡರು ಈಡೇರಿಸುತ್ತಾಳೆ ಈ ದೇವಿ. ಎಲ್ಲರನ್ನೂ ಕಾಯುವ ಆ ದೇವಿಯ ಕೃಪೆಯಿಂದ ಈ ವರ್ಷವಾದರೂ ಅತಿವೃಷ್ಟಿ ಅನಾವೃಷ್ಟಿ ಸಂಭವಿಸದೆ ಸಮ ಪ್ರಮಾಣದಲ್ಲಿ ಮಳೆ ಬೆಳೆಯಾಗಿ ಕರುನಾಡು ಸಮೃದ್ಧವಾಗಲಿ ಎಂದು ಆಶಿಷೋಣ.
-ಮಂಜುನಾಥ್