‘ಚೆಂಡು’ ತಿಳಿದು ಆಟ ಆಡುತ್ತಿದ್ದ ಮಕ್ಕಳು, ನಂತರ ‘ಅದು’ ಏನೆಂದು ತಿಳಿದ ನಂತರ ಎಲ್ಲರೂ ಶಾಕ್!
ಮಧ್ಯಪ್ರದೇಶದ ಮಂಡಲ ಜಿಲ್ಲೆಯಲ್ಲಿ ಕೋಟ್ಯಂತರ ವರ್ಷಗಳ ಹಿಂದೆ ಭೂಮಿಯ ಮೇಲೆ ಜೀವಿಸಿದ್ದವು ಎನ್ನಲಾಗುವ ಡೈನೋಸಾರ್ ಗಳ ಯಾವುದೋ ಒಂದು ಪ್ರಬೇಧದ ಪಳಿಯುಳಿಕೆಗಳು ದೊರೆತಿವೆ ಎಂದು ಅಲ್ಲಿನ ಪ್ರೊಫೆಸರ್ ಒಬ್ಬರು ಹೇಳಿದ್ದಾರೆ. ಆದರೆ ಈ ಪ್ರೊಫೆಸರ್ ಅವರು ಡೈನೋಸಾರ್ ಗಳ ಯಾವ ಪ್ರಬೇಧದ ಬಗ್ಗೆ ತಿಳಿಸಿದ್ದಾರೆಯೋ ಅಂತಹ ಪ್ರಭೇದಕ್ಕೆ ಸೇರಿದ ಡೈನೋಸಾರ್ ಗಳ ಯಾವುದೇ ರೀತಿಯ ಪಳಯುಳಿಕೆಗಳು ಇದುವರೆವಿಗೂ ನಮ್ಮ ದೇಶದಲ್ಲಿ ಪತ್ತೆಯಾಗಿಲ್ಲ ಎನ್ನಲಾಗಿದೆ. ಇನ್ನು ಈಗ ಸಿಕ್ಕಿದೆ ಎನ್ನಲಾಗುವ ಪಳಯುಳಿಕೆಯನ್ನು ಅಲ್ಲಿನ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ತಮ್ಮ ಬೆಳಗಿನ ವಾಕ್ ಮಾಡಲು ಹೋದಂತಹ ಸಮಯದಲ್ಲಿ ಅದನ್ನು ಮೊದಲು ನೋಡಿದ್ದಾಗಿ ಕೂಡಾ ಹೇಳಲಾಗಿದೆ.
ಮಂಡಲದಲ್ಲಿ ಸರ್ಕಾರಿ ಶಾಲೆಯ ಶಿಕ್ಷಕನಾಗಿರುವ ಪ್ರಶಾಂತ್ ಶ್ರೀವಾಸ್ತವ ಎನ್ನುವ ಶಿಕ್ಷಕರೊಬ್ಬರು ಕೆಲವು ದಿನಗಳ ಹಿಂದೆ ಮೋಹನ್ ಟೋಲಾ ಎನ್ನುವ ಪ್ರದೇಶದಲ್ಲಿ ಸುತ್ತಾಡಲು ಹೋಗಿದ್ದರಂತೆ. ಆ ಸಂದರ್ಭದಲ್ಲಿ ಅಲ್ಲಿ ಕೆಲವು ಮಕ್ಕಳು ಒಂದು ಬಾಲ್ ನಂತೆ ಗುಂಡಾಗಿರುವ ಕಲ್ಲಿನಲ್ಲಿ ಆಟವನ್ನು ಆಡುತ್ತಿರುವುದನ್ನು ಗಮನಿಸಿದ್ದಾರೆ. ಅವರು ಆ ಮಕ್ಕಳ ಬಳಿ ಹೋಗಿ ಆ ಕಲ್ಲಿನ ಚೆಂಡನ್ನು ತನಗೆ ನೀಡುವಂತೆ ಕೇಳಿದ್ದಾರೆ. ಆದರೆ ಆ ಮಕ್ಕಳು ಅದನ್ನು ಕೊಡಲು ಒಪ್ಪಿಲ್ಲ. ಆದರೆ ಅಂತಹುದೇ ಬೇರೆ ಕಲ್ಲುಗಳು ಇರುವ ಜಾಗವನ್ನು ತೋರಿಸುತ್ತೇವೆ ಎಂದು ಆ ಮಕ್ಕಳು ಪ್ರಶಾಂತ್ ಅವರನ್ನು ಹೂಳು ತೆಗೆಯುವ ಕಾರ್ಯ ನಡೆಯುತ್ತಿದ್ದ ಕೆರೆಯೊಂದರ ಬಳಿ ಕರೆದುಕೊಂಡು ಹೋಗಿ ತೋರಿಸಿದ್ದಾರೆ.
ಶಿಕ್ಷಕ ಪ್ರಶಾಂತ್ ಅವರಿಗೆ ಅಲ್ಲಿ ಮಕ್ಕಳ ಬಳಿ ಇದ್ದಂತಹವೇ ಏಳು ಕಲ್ಲುಗಳು ಸಿಕ್ಕಿವೆ. ಇವರು ತನಗೆ ಮೊದಲ ಬಾರಿ ಆ ಕಲ್ಲನ್ನು ನೋಡಿದಾಗಲೇ ಅದೊಂದು ಪಳೆಯುಳಿಕೆ ಎಂದು ಅರ್ಥವಾಗಿತ್ತು ಎಂದಿದ್ದಾರೆ. ಹರಿಸಿಂಗ್ ಗೌರ್ ವಿಶ್ವವಿದ್ಯಾಲಯದ ಭೂ ವಿಜ್ಞಾನ ವಿಭಾಗದ ಪ್ರೊಫೆಸರ್ ಪಿ.ಕೆ.ಕಥಲ್ ಅವರ ಪ್ರಶಾಂತ್ ಶ್ರೀ ವಾಸ್ತವ ಅವರು ಸಂಗ್ರಹಿಸಿದ್ದ ಈ ಕಲ್ಲಿನ ಮಾದರಿ ಬಾಲ್ ಗಳ ಬಗ್ಗೆ ಅಧ್ಯಯನ ನಡೆಸಿದ್ದು ಇವು ಖಚಿತವಾಗಿ ಪಳೆಯುಳಿಕೆಗಳು ಎಂದು ಅವರು ಹೇಳಿದ್ದಾರೆ. ಕಥಲ್ ಅವರು ಇದು ಯಾವ ಕಾಲದ ಪಳಯುಳಿಕೆ ಎಂಬುದನ್ನು ಕೂಡಾ ಅಂದಾಜಿಸಿದ್ದು, ಅದರ ಕಾಲಮಾನದ ಬಗ್ಗೆ ಅಚ್ಚರಿ ಮಾಹಿತಿಯನ್ನು ನೀಡಿದ್ದಾರೆ.

ಕಥಲ್ ಅವರ ಪ್ರಕಾರ ಇದು ಸುಮಾರು 6.5 ಕೋಟಿ ವರ್ಷಗಳಷ್ಟು ಹಳೆಯದಾದ ಜೀವಿಗಳ ಪಳಯುಳಿಕೆ ಎನ್ನಲಾಗಿದೆ. ಇದು ಭಾರತದಲ್ಲಿ ಇನ್ನೂ ಕೂಡಾ ಪತ್ತೆಯಾಗದಂತಹ ಡೈನೋಸಾರ್ ಗಳ ಪ್ರಭೇದಕ್ಕೆ ಸೇರಿದ ಪಳೆಯುಳಿಕೆಗಳು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಈ ಡೈನೋಸಾರ್ ಪಳಯುಳಿಕೆ ಎನ್ನಲಾಗಿರುವ ಕಲ್ಲಿನ ರೀತಿಯ ಬಾಲ್ ಗಳನ್ನು ಮೊದಲು ಪತ್ತೆ ಹಚ್ಚಿದ ಶಿಕ್ಷಕ ಪ್ರಶಾಂತ್ ಶ್ರೀವಾಸ್ತವ ಅವರು ಕೂಡಾ ಕೆಲವು ವಿಷಯಗಳನ್ನು ಮಾದ್ಯಮಗಳ ಜೊತೆಗೆ ಹಂಚಿಕೊಂಡಿದ್ದಾರೆ. ಪ್ರಶಾಂತ್ ಅವರು ಮಾತನಾಡುತ್ತಾ ನನ್ನ ಕನಸು ನನಸಾಗುವ ದಿನಗಳು ಹತ್ತಿರವಾಗುತ್ತದೆ, ನಾನು ಶಾಲೆಯಲ್ಲಿ ವಿಜ್ಞಾನ ವಿಷಯವನ್ನು ಬೋಧನೆ ಮಾಡುತ್ತೇನೆ.
ನನಗೆ ಮೊದಲಿನಿಂದಲೂ ಕೂಡಾ ಪಳೆಯುಳಿಕೆಗಳ ಬಗ್ಗೆ ಬಹಳ ಆಸಕ್ತಿಯಿತ್ತು. ಅದಕ್ಕೆ ತಕ್ಕಂತೆ ಈ ಪಳಿಯುಳಿಕೆಗಳು ಸಿಕ್ಕಿದ್ದು ಇವು ಸಿಕ್ಕ ಕೂಡಲೇ ಅವುಗಳನ್ನು ಸುರಕ್ಷಿತವಾಗಿ ಮ್ಯೂಸಿಯಂನಲ್ಲಿ ಇರಿಸಲಾಯಿತು. ಅನಂತರ ಮಂಡಲ್ ನ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಅವರಿಗೆ ವಿಷಯವನ್ನು ತಿಳಿಸಿದೆವು. ಅನಂತರ ಶಿಕ್ಷಣ ತಜ್ಞರಿಗೂ ಕೂಡಾ ಈ ವಿಚಾರವನ್ನು ತಿಳಿಸಿದೆವು. ಇದೆಲ್ಲಾ ಆದ ನಂತರ ಅಕ್ಟೋಬರ್ 30 ರಂದು ಪ್ರೊಫೆಸರ್ ಕಥಲ್ ಅವರು ಇಲ್ಲಿಗೆ ಬಂದರು. ಅವರು ತಾವು ನಡೆಸಿರುವ ಸಂಶೋಧನೆಗಳ ಆಧಾರದಲ್ಲಿ ಇವು ಪಳಿಯುಳಿಕೆಗಳೇ ಎಂಬುದನ್ನು ದೃಢ ಪಡಿಸಿದರು ಎಂದು ಹೇಳಿದ್ದಾರೆ.