ಮೈಸೂರಿನಲ್ಲಿ ಚಿಕ್ಕಣ್ಣ ಮಾಡುತ್ತಿರುವ ಕೆಲಸ ನೋಡಿದ್ರೆ ನೀವೆಲ್ಲ ಭೇಷ್ ಎನ್ನದೆ ಇರಲಾರಿರಿ..!
ಮೊನ್ನೆ ತಮ್ಮ ಫಾರ್ಮ್ ಹೌಸ್ ನಲ್ಲಿ ತಾವೇ ಗಾರೆ ಕೆಲಸ ಮಾಡಿ ನಟನೆಗೂ ಸೈ ಮೈ ಬಗ್ಗಿಸಿ ದುಡಿಯೋದಕ್ಕೂ ಸೈ ಎಂದು ತೋರಿಸಿದ್ದ ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯ ನಟ ಚಿಕ್ಕಣ್ಣ ಅವರು, ಈ ತಮ್ಮ ನಿಸ್ವಾರ್ಥ ಸೇವೆಯಿಂದ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಬನ್ನಿ ಅದೇನೆಂದು ನೋಡೋಣ…
ಮೂಲತಃ ಮೈಸೂರಿನವರೇ ಆದ ಚಿಕ್ಕಣ್ಣ ಅವರು ತೆರೆ ಮೇಲೆ ಬಂದರೆ ಸಾಕು ನಗುವೋ ನಗು, ಅಂತಹ ಹಾಸ್ಯ ಕಲಾವಿದನ ಮನಸ್ಸಲ್ಲಿ ಪರೋಪಕಾರದ ಇನ್ನೊಂದು ಮುಗ್ದ ಮನಸ್ಸಿದೆ ಎಂಬುದು ಬಹುಶ ಎಲ್ಲರಿಗೂ ತಿಳಿದಿರಲಿಕ್ಕಿಲ್ಲ. ಅದು ಈಗ ಮೈಸೂರಿನಲ್ಲಿ ನಮಗೆಲ್ಲ ಅವರ ಕೆಲಸದ ಮೂಲಕ ಕಾಣಿಸುತ್ತಿದೆ.
ಕರೋನ ಎಂಬ ಹೆಮ್ಮಾರಿಯ ಎರಡನೇ ಅಲೆಯಿಂದ ಸಂಪೂರ್ಣ ತತ್ತರಿಸಿ ಹೋಗುತ್ತಿರುವ ಬಡ ಜನರು ಹಾಗೂ ಕೂಲಿ ಕಾರ್ಮಿಕರ ಬದುಕು ನೋಡಿದರೆ ಅಯ್ಯೋ ಎನಿಸುತ್ತಿದೆ ಇಂಥ ಕಡು ಬಡ ಕೂಲಿಕಾರರಿಗೆ ಸೋಂಕು ತಗುಲಿದರೆ ಇನ್ನೆಷ್ಟು ಪರಿಸ್ಥಿತಿ ಗಂಭೀರವಾಗಬಹುದು ಎಂದು ಊಹಿಸಲು ಮನಸ್ಸು ನೋವಾಗುತ್ತದೆ.

ಇಂಥ ಹಲವಾರು ರೋಗಿಗಳು ಹಾಗೂ ಅವರ ಸಂಬಂಧಿಕರು ಮೈಸೂರಿನ ನಂಜಬಹುದ್ದೂರ್ ಧರ್ಮ ಛತ್ರದಲ್ಲಿ ಉಳಿದುಕೊಂಡಿದ್ದಾರೆ ಈ ಜನರಿಗಾಗಿ ಮಿಡಿದ ನಟ ಚಿಕ್ಕಣ್ಣ ಮಾಡುತ್ತಿರುವ ಕೆಲಸವೆಂದರೆ… ಇವರಿಗೆಲ್ಲ ಹೊಟ್ಟೆ ತುಂಬ ಊಟ ಕೊಡುತ್ತಿದ್ದಾರೆ. ಹಸಿದವರಿಗೆ ಅನ್ನ ಹಾಕುವುದು ಮಹಾಪುಣ್ಯದ ಕೆಲಸ.
ದುಡಿಮೆ ಇಲ್ಲದೆ, ಕೈಯಲ್ಲಿ ಬಿಡಿಗಾಸು ಇಲ್ಲದೆ ಒಂದೊತ್ತಿನ ಊಟಕ್ಕೂ ಪರದಾಡುತ್ತಿರುವ ಈ ಜನರಿಗಾಗಿ ನಟ ಚಿಕ್ಕಣ್ಣ ತನ್ನ ಕೆಲವು ಸಮಾನ ಮನಸ್ಕ ಸ್ನೇಹಿತರನ್ನು ಒಟ್ಟುಗುಡಿಸಿಕೊಂಡು ಮಧ್ಯಾಹ್ನದ ವೇಳೆ ಬರೋಬ್ಬರಿ 500 ರಿಂದ 1000 ಜನರಿಗೆ ಊಟ ನೀಡುತ್ತಿದ್ದಾರೆ. ಹಸಿದವರ ಹೊಟ್ಟೆ ತುಂಬಿಸುತ್ತಿರುವ ಚಿಕ್ಕಣ್ಣರವರು ಅಕಸ್ಮಾತ್ ಇನ್ನೂ ಹೆಚ್ಚಿನ ಅವಶ್ಯಕತೆ ಬಿದ್ದರೂ ನಾನು ಊಟವನ್ನು ನೀಡಬಲ್ಲೆವು ಎಂದು ಹೇಳುತ್ತಾರೆ.
ಮುಂದುವರೆದು ಇನ್ನೂ ಹೆಚ್ಚಿನ ಸೇವೆ ಮಾಡಲು ಬಯಸುತ್ತಿರುವ ಚಿಕ್ಕಣ್ಣ ಅವರು ಕರೋನ ರೋಗಿಗಳು ಮನೆಯಲ್ಲೇ ಐಸೋಲೇಷನ್ ಆದಂತವರಿಗೆ ಸಹ ಮನೆ ಮನೆಗೆ ತೆರಳಿ ಊಟವನ್ನು ನೀಡಿ ಅವರಿಗೆ ಧೈರ್ಯ ಹೇಳುತ್ತಿರುವರು ಎಂಬುದು ಇನ್ನೊಂದು ವಿಶೇಷ.

ಈ ಎಲ್ಲಾ ವ್ಯವಸ್ಥೆಗಳಿಗೂ ಅನುಕೂಲವಾಗುವಂತೆ ಊಟವನ್ನು ತಮ್ಮದೇ ಫಾರ್ಮ್ ಹೌಸ್ ನಲ್ಲಿ ಒಂದು ಕಿಚನ್ ಸೆಟ್ ಮಾಡಿಕೊಂಡು ಅಲ್ಲಿಂದಲೇ ನೇರವಾಗಿ ಅವಶ್ಯಕತೆ ಇರುವವರಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ. ಇವರ ಈ ಸೇವೆ ಸಾಕಷ್ಟು ಜನರಿಗೆ ಪ್ರೇರಣೆಯಾಗಲಿ ಎಂಬುದೇ ನಮ್ಮ ಈ ಲೇಖನದ ಉದ್ದೇಶ.
-ಮಂಜುನಾಥ್