ಚೀನಾದ ಗೋಡೆ ಬಗ್ಗೆ ಮಾತನಾಡುವ ನಿಮಗೆ ನಮ್ಮ ದೇಶದಲ್ಲೇ ಇರುವ ‘ದಿ ಗ್ರೇಟ್ ವಾಲ್ ಆಫ್ ಇಂಡಿಯಾ’ ಬಗ್ಗೆ ಗೊತ್ತಿದೆಯಾ?

ನಮ್ಮ ಭಾರತದಲ್ಲಿ ಇಂತಹ ಅನೇಕ ಪುರಾತನ ಕಾಲದಲ್ಲಿ ಭವ್ಯ ಮತ್ತು ದಿವ್ಯ ಕಟ್ಟಡಗಳು ಎಷ್ಟೋ ಇವೆ. ಸಾವಿರಾರು ವರ್ಷಗಳ ಹಿಂದೆ ತಯಾರಿಸಿದ ವಾಸ್ತುಶಿಲ್ಪಗಳು ಇಂದಿಗೂ ಒಳ್ಳೆಯ ಸ್ಥಿತಿಯಲ್ಲಿ ನೋಡಲು ಸಿಗುತ್ತವೆ.

ಇತ್ತೀಚೆಗೆ ರಾಜಸ್ಥಾನ ಟೂರಿಸಂ ಡಿಪಾರ್ಟ್ಮೆಂಟ್ ನಿಂದ ಪ್ರಸಾರವಾಗುವ ಜಾಹೀರಾತಿನಲ್ಲಿ ಒಂದು ದೊಡ್ಡ ಗೋಡೆ ತೋರಿಸಲಾಗುತ್ತಿದೆ. ಈ ಗೋಡೆಯು ಚೀನಾದ ಗೋಡೆಯನ್ನು ಮೀರಿಸುವ ಹಾಗೆಯೇ ಇದೆ. ಈ ಗೋಡೆ ರಾಜಸ್ಥಾನದ ಮೇವಾಡ್ ಪ್ರಾಂತದಲ್ಲಿಯ ಕುಂಬಲಗಡ ಕೋಟೆಯ ಸುತ್ತಲೂ ಇದೆ.

ಈ ಬೃಹತ್ ಗೋಡೆ ಇಂದಿಗೂ 300 ಪ್ರಾಚೀನ ಮಂದಿರಗಳ ಸಂರಕ್ಷಣೆಯನ್ನು ಮಾಡುತ್ತದೆ. ಈ ಗೋಡೆಯನ್ನು ರಾಣಾ ಕುಂಭ ಹೆಸರಿನ ರಾಜನು 15 ನೆಯ ಶತಮಾನದಲ್ಲಿ ಕಟ್ಟಿಸಿದನು. ಪ್ರಸ್ತುತ ಕೋಟೆ ರಾಜಸ್ಥಾನದ ಉದಯಪುರ ಪಟ್ಟಣದಿಂದ 70 ಕಿಲೋಮೀಟರ್ ಅಂತರದಲ್ಲಿದೆ.

ಸಮುದ್ರ ಮಟ್ಟದಿಂದ 1087 ಮೀಟರ್ ಎತ್ತರದ ಮೇಲಿರುವ ಈ ಕೋಟೆ 30 ಕಿಲೋ ಮೀಟರ್ ಗಳವರೆಗೆ ಪಸರಿಸಿದೆ. ಈ ಕೋಟೆಯ ನಿರ್ಮಾಣ 1443 ರಲ್ಲಿ ಪ್ರಾರಂಭವಾಯಿತು. ಈ ಕೋಟೆ ನಿರ್ಮಾಣವಾಗಲು ಹದಿನೈದು ವರ್ಷಗಳ ಕಾಲಾವಧಿ ಬೇಕಾಯಿತು. ಅಂದರೆ 1458 ರಲ್ಲಿ ಈ ಕೋಟೆ ಸಂಪೂರ್ಣವಾಗಿ ತಯಾರಾಯಿತು.

ಈ ಕೋಟೆಯನ್ನು ಸಾಮ್ರಾಟ ಅಶೋಕನ ಪುತ್ರ ಸಂಪ್ರತಿ ಕಟ್ಟಿಸಿದನು. ಈ ಕೋಟೆಗೆ ಅಜಯಗಢ ಎಂದೂ ಸಹ ಕರೆಯಲಾಗುತ್ತದೆ. ಕಾರಣ ಈ ಕೋಟೆಯ ಮೇಲೆ ವಿಜಯ ಸಾಧಿಸುವುದು ತುಂಬಾ ಕಠಿಣ ಕೆಲಸವಾಗಿತ್ತು. ರಾಣಾ ಕುಂಭನು ಈ ಕೋಟೆಯ ಸುತ್ತಲೂ ಸಂರಕ್ಷಣೆಯ ಸಲುವಾಗಿ ಒಂದು ಬೃಹತ್ ಗೋಡೆಯನ್ನು ನಿರ್ಮಿಸಿದನು. ಈ ಗೋಡೆ ಚೀನಾ ಗೋಡೆಯ ನಂತರ ಎರಡನೆಯ ಅತಿ ದೊಡ್ಡ ಗೋಡೆಯಾಗಿದೆ. ಇದೇ ಕೋಟೆಯಲ್ಲಿ ಮಹಾರಾಣಾ ಪ್ರತಾಪ್ ಅವರು ಜನಿಸಿದ್ದರು. ಈ ಕೋಟೆ ಮೇವಾಡದ ತುರ್ತು ಪರಿಸ್ಥಿತಿಯಲ್ಲಿಯ ರಾಜಧಾನಿಯಾಗಿತ್ತು.

ಮೇವಾಡದ ಮೇಲೆ ಯಾವಾಗ ಪರಕೀಯರ ಆಕ್ರಮಣ ವಾಗುತ್ತಿತ್ತು ಆಗ ಮಹಾರಾಣಾ ಕುಂಭನಿಂದ ಹಿಡಿದು ಮಹಾರಾಣಾ ರಾಜಸಿಂಹನವರೆಗೆ ಎಲ್ಲ ರಾಜ ಪರಿವಾರದವರು ಇದೇ ಕೋಟೆಯಲ್ಲಿ ಆಶ್ರಯ ಪಡೆಯುತ್ತಿದ್ದರು.

ಆದ್ದರಿಂದ ಈ ಕುಂಬಲಗಡದ ಕೋಟೆಯ ಗೋಡೆಗೆ ‘ದಿ ಗ್ರೇಟ್ ವಾಲ್ ಆಫ್ ಇಂಡಿಯಾ’ ಎಂದು ಕರೆಯಲಾಗುತ್ತದೆ.

ಈ ಗೋಡೆಯು 36 ಕಿಲೋಮೀಟರ್ ಉದ್ದವಾಗಿ ಕೋಟೆಯ ಸುತ್ತಲೂ ಕಟ್ಟಲಾಗಿದೆ. ಈ ಗೋಡೆಯು ಸಮುದ್ರಮಟ್ಟದಿಂದ 1100 ಮೀಟರ್ 3600 ಫೀಟ್ ಎತ್ತರದ ಮೇಲಿದೆ. ಈ ಗೋಡೆಯು ಅನೇಕ ಪರ್ವತ ಶಿಖರಗಳ ಮೇಲಿಂದ ಮತ್ತು ಕಂದಕಗಳಿಂದ ಹೋಗುತ್ತದೆ.

ಈ ಕೋಟೆಯ ಗೋಡೆಯು ಈಗಲೂ ಸಹಿತ ಉತ್ತಮ ವಾಸ್ತುಶಾಸ್ತ್ರದ ನಮೂನೆ ಆಗಿದೆ. ಇಲ್ಲಿಯವರೆಗೆ ಸುಮಾರು 600 ರಿಂದ 700 ವರ್ಷಗಳಾದರೂ ಸುಸ್ಥಿತಿಯಲ್ಲಿ ಹಾಗೂ ಬಲಾಢ್ಯವಾಗಿ ನಿಂತಿದೆ.

ರಾಣಾ ಕುಂಭರ ಕಾಲದಲ್ಲಿ ಮೇವಾಡ ರಾಜ್ಯವು ರಣಥಂಬೋರ್ ನಿಂದ ಹಿಡಿದು ಗ್ವಾಲಿಯರ್ ವರೆಗೆ ಹರಡಿತ್ತು. ಇದರಲ್ಲಿ ಮಧ್ಯಪ್ರದೇಶದ ಕೆಲವು ಭಾಗಗಳು ಶಾಮೀಲಾಗಿದ್ದವು. ರಾಣಾ ಕುಂಭರ ರಾಜ್ಯದಲ್ಲಿ 84 ಕೋಟೆಗಳಲ್ಲಿ 32 ಕೋಟೆಗಳನ್ನು ಸ್ವತಃ ರಾಣಾ ಕುಂಭರೇ ಡಿಸೈನ್ ಮಾಡಿದ್ದರು. ಈ 32 ಕೋಟೆಗಳಲ್ಲಿ ಈ ಕುಂಬಲಗಡದ ಕೋಟೆ ಎಲ್ಲಕ್ಕೂ ದೊಡ್ಡದಾದ ಕೋಟೆಯಾಗಿತ್ತು.

ಈ ಕೋಟೆಯ ನಿರ್ಮಾಣ ತುಂಬಾ ಕ್ಲಿಷ್ಟಕರವಾಗಿದೆ. ಈ ಕೋಟೆಯಲ್ಲಿ ತುರ್ತು ಪರಿಸ್ಥಿತಿಯಲ್ಲಿ ಆಶ್ರಯ ಪಡೆಯುವ ಸಲುವಾಗಿ ಅನೇಕ ಸೌಲಭ್ಯಗಳನ್ನು ಮಾಡಲಾಗಿತ್ತು. ಈ ಕೋಟೆಯ ಮೇಲಿನ ಆಕ್ರಮಣವನ್ನು ತಡೆ ಹಿಡಿಯುವ ಸಲುವಾಗಿ ಇಂಥ ಬಲಾಢ್ಯ ಗೋಡೆಯನ್ನು ನಿರ್ಮಿಸಲಾಗಿತ್ತು. ಈ ಅಭೇಧ್ಯ ಗೋಡೆ ಗಿರಿ-ಶಿಖರ ಗಳಿಂದ ಹಿಡಿದು ಕಂದಕಗಳಲ್ಲಿ ಕೆಲವು ಕಡೆ ಚಿಕ್ಕ ಹಾಗೂ ಇನ್ನು ಕೆಲವು ಕಡೆ ತುಂಬಾ ಅಗಲವಾದ ಗೋಡೆ ನಿರ್ಮಾಣ ಮಾಡಿದ್ದಾರೆ. ಕೆಲವೊಂದು ಕಡೆ ಈ ಗೋಡೆ 15 ಫೀಟ್ ಗಳ ವರೆಗೆ ದಪ್ಪವಾಗಿದೆ.

ಈ ಗೋಡೆಯ ಕಟ್ಟಡ ತುಂಬಾ ಸುಂದರವಾಗಿದೆ. ಇದಕ್ಕಾಗಿ ಸಾವಿರಾರು ದೊಡ್ಡ ದೊಡ್ಡ ಕಲ್ಲುಗಳನ್ನು ಇಟ್ಟಿಗೆ ಸ್ವರೂಪದಲ್ಲಿ ಉಪಯೋಗಿಸಿದ್ದಾರೆ. ಅದರ ಜೊತೆಗೆ ಗೋಡೆಯ ಮೇಲ್ಭಾಗವನ್ನು ತುಂಬಾ ಸುಶೋಭಿಸಲಾಗಿದೆ.

ಈ ಕೋಟೆಯ ಸಂರಕ್ಷಣೆಯನ್ನು ಅರಾವಳಿ ಪರ್ವತ ಶ್ರೇಣಿಯಲ್ಲಿ 13 ಶಿಖರಗಳು ಮಾಡುತ್ತವೆ. ಈ ಕೋಟೆಯ ಗೋಡೆಗೆ 6 ಮಹಾದ್ವಾರಗಳಿವೆ. ಇವುಗಳಿಗೆ ಅರೆತ್ ಪೋಲ್, ಹನುಮಾನ್ ಪೋಲ್, ರಾಮ್ ಪೋಲ್, ವಿಜಯ್ ಪೋಲ್, ನಿಂಬು ಪೋಲ್ ಮತ್ತು ಭೈರವ ಪೋಲ್ ಹೀಗೆ ಹೆಸರುಗಳಿವೆ.

ಈ ಕೋಟೆಯಲ್ಲಿ 360 ಮಂದಿರಗಳಿವೆ. ಅವುಗಳಲ್ಲಿ 60 ಕ್ಕಿಂತ ಹೆಚ್ಚು ಹಿಂದೂ ಮಂದಿರಗಳಿದ್ದು ಉಳಿದವುಗಳು ಜೈನ ಮಂದಿರಗಳಾಗಿವೆ.

ರಾಣಾ ಕುಂಭರ ಕಾಲದಲ್ಲಿ ಈ ಗೋಡೆ ಮೇಲೆ ದೊಡ್ಡ ದೊಡ್ಡ ದೀಪಗಳನ್ನು ಹಚ್ಚುತ್ತಿದ್ದರೆಂದು ಹೇಳಲಾಗುತ್ತದೆ. ಆ ದೀಪಗಳಲ್ಲಿ 50 ಕಿಲೋ ತುಪ್ಪವನ್ನು ಮತ್ತು 100 ಕಿಲೋ ಹತ್ತಿಯನ್ನು ಉಪಯೋಗಿಸಲಾಗುತ್ತಿತ್ತು. ತೋಟಗಳಲ್ಲಿ ರಾತ್ರಿಯ ಸಮಯದಲ್ಲಿ ಕೆಲಸ ಮಾಡುವ ರೈತರಿಗಾಗಿ ಈ ದೀಪಗಳನ್ನು ಹಚ್ಚುತ್ತಿದ್ದರಂತೆ.

ಈ ಕೋಟೆಯ ಮೇಲ್ಭಾಗದಲ್ಲಿ ಒಂದು ಅರಮನೆ ಇದೆ. ಅರಮನೆ ಹೆಸರು ಬಾದಲ್. ಇದೇ ಸ್ಥಳದಲ್ಲಿ ಮಹಾನ್ ರಾಜಪೂತ ಅರಸ ಮಹಾರಾಣಾ ಪ್ರತಾಪ್ ಅವರ ಜನ್ಮವಾಗಿತ್ತು ಎಂದು ಹೇಳುತ್ತಾರೆ.

ಈ ಕೋಟೆಯ ನಿರ್ಮಾಣದ ಕಾರ್ಯ ನಿಶ್ಚಿತವಾಗಿಯೂ ಮೌರ್ಯ ಕಾಲದಲ್ಲಿ ಅಂದರೆ ಎರಡನೇ ಶತಕದಲ್ಲಿ ಪ್ರಾರಂಭವಾಗಿತ್ತು ಎಂದೂ ಹೇಳಲಾಗುತ್ತದೆ. ಇಂಥ ಒಂದು ಭವ್ಯ ಮತ್ತು ದಿವ್ಯವಾದ ಗೋಡೆ ಭಾರತದಲ್ಲಿ ಇದ್ದರೂ ಸಹ ಅನೇಕರಿಗೆ ಇದು ಇಲ್ಲಿಯವರೆಗೆ ಗೊತ್ತಿಲ್ಲ.

ಜೂನ್ 2013 ರಲ್ಲಿ ಈ ಕೋಟೆಗೆ ಯುನೆಸ್ಕೊದವರು ವರ್ಲ್ಡ್ ಹೆರಿಟೇಜ್ ನಲ್ಲಿ ಶಾಮೀಲು ಮಾಡಿದರು. ಈ ಕೋಟೆಯ ಜೊತೆಗೆ ರಾಜಸ್ಥಾನದ ಇನ್ನೂ ಐದು ಕೋಟೆಗಳನ್ನು ವರ್ಲ್ಡ್ ಹೆರಿಟೇಜ್ ನಲ್ಲಿ ಶಾಮೀಲು ಮಾಡಿದರು.

19 ನೇ ಶತಕದವರೆಗೆ ಈ ಕೋಟೆಯ ಮೇಲೆ ರಾಜವಂಶಸ್ಥರೇ ವಾಸ್ತವ್ಯ ಮಾಡುತ್ತಿದ್ದರು. ಆದರೆ ಈಗ ಈ ಕೋಟೆಯನ್ನು ಸರ್ವಸಾಮಾನ್ಯರಿಗೂ ನೋಡಲು ಬಿಡಲಾಗುತ್ತಿದೆ.

ಚಿತ್ತೋಡಗಡ ನಂತರ ಈ ಕೋಟೆ ಮೇವಾಡದಲ್ಲಿ ಎಲ್ಲಕ್ಕೂ ದೊಡ್ಡದು ಹಾಗೂ ಮಹತ್ವದ ಕೋಟೆ ಎಂದು ತಿಳಿಯಲಾಗುತ್ತದೆ.

ಈ ಕೋಟೆಯ ಮೇಲಿಂದ ಸುತ್ತಮುತ್ತಲಿನ ಊರುಗಳ ಸುಂದರವಾದ ನಯನಮನೋಹರ ದೃಶ್ಯ ಕಾಣಲು ಸಿಗುತ್ತದೆ. ಅರಾವಳಿ ಪರ್ವತಶ್ರೇಣಿಗಳಿಂದ ಹೋದ ಉದ್ದವಾದ ಗೋಡೆಯ ದೃಶ್ಯವು ತುಂಬಾ ನಯನ ಮನೋಹರವಾಗಿ ಕಾಣುತ್ತದೆ. ಅದರ ಜೊತೆಗೆ ದೂರದ ಮರುಭೂಮಿಯು ಸಹಿತ ಇಲ್ಲಿಂದ ನೋಡಬಹುದು.

ಈ ಕೋಟೆಯ ಮೇಲೆ ಸುತ್ತಾಡುವಾಗ ಪ್ರವಾಸಿಗರಿಗೆ ನಿರ್ಜನ ಪ್ರದೇಶದಲ್ಲಿ ಹೋಗದಂತೆ ಸೂಚಿಸಲಾಗುತ್ತದೆ. ಕಾರಣ ಈಗಲೂ ಸಹ ಶತ್ರುಗಳ ಸಲುವಾಗಿ ತಯಾರಿಸಿದ ಪ್ರಾಚೀನ ಕಾಲದಲ್ಲಿಯ ಭದ್ರತಾ ವ್ಯವಸ್ಥೆ ಇರಬಹುದೆಂದು ಅಂದಾಜಿಸಲಾಗಿದೆ.

ಹೆಚ್ಚಾಗಿ ಈ ಪ್ರದೇಶದ ಮತ್ತು ಗೋಡೆಯ ಬಗ್ಗೆ ಗೊತ್ತಿರದ ಈ ಸ್ಥಳ ಈಗ ಜಾಹೀರಾತಿನ ಮುಖಾಂತರ ಎಲ್ಲರಿಗೂ ಗೊತ್ತಾಗುತ್ತಿದೆ. ಹೀಗಾಗಿ ಭಾರತದ ಈ ಗೋಡೆ ಸದ್ಯಕ್ಕೆ ತುಂಬಾ ಪ್ರಸಿದ್ಧಿ ಪಡೆಯುತ್ತಿದೆ.