ಮದುವೆಯಾಗಿ ಮೂರೇ ದಿನಕ್ಕೆ ಕೆಲಸಕ್ಕೆ ಹಾಜರಾದ ವೈದ್ಯೆ! ಇದರ ಹಿಂದಿದೆ ಮನಕಲುಕುವ ಕಾರಣ

ಕೊರೋನ ಮಹಾಮಾರಿ ಯಾರನ್ನೂ ನೆಮ್ಮದಿಯಾಗಿ ಇರಲು ಬಿಡುತ್ತಿಲ್ಲ. ಹಸುಗೂಸಿನಿಂದ ಹಿಡಿದು ವೃದ್ದರವರೆಗೆ ಎಲ್ಲರೂ ಇದರಿಂದ ತೊಂದರೆ ಅನುಭವಿಸಿದವರೇ. ಸೋಂಕು ತಗುಲದವರಿಗೂ ಕೂಡ ಇದು ಸಾಕಷ್ಟು ನಷ್ಟ ಉಂಟುಮಾಡಿದೆ. ಅಂಗಡಿ ಮುಗ್ಗಟ್ಟು ಬಂದ್ ಮಾಡಿದ ಅನೇಕ ಬಡವರು – ಮಧ್ಯಮವರ್ಗದವರು ದಿನನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ. ರೋಗಿಗಳು ಉಸಿರು ತಗೆದುಕೊಳ್ಳಲು ಪಡುತ್ತಿರುವ ಪಾಡು ನೋಡಿದರಂತೂ ಆ ಸ್ಥಿತಿ ನಮ್ಮ ಶತ್ರುಗೂ ಬರಬಾರದು.

ಇದೆಲ್ಲ ರೋಗಿ ಹಾಗೂ ಇತರ ಜನಸಾಮಾನ್ಯರ ವಿಷಯವಾಯಿತು. ಇನ್ನು ಇದರ ವಿರುದ್ದ ಜೀವ ಪಣಕ್ಕಿಟ್ಟು ಹೋರಾಡುತ್ತಿರುವ ಆರೋಗ್ಯ ಕಾರ್ಯಕರ್ತರ ಸಮಸ್ಯೆಗಳಂತೂ ಯಾವ ಸೈನಿಕರಿಗೂ ಕಡಿಮೆಯಿಲ್ಲ. ಅದರಲ್ಲೂ ಫ್ರೆಂಟ್ ಲೈನ್ ನಲ್ಲಿರುವ ಡಾಕ್ಟರ್, ನರ್ಸ್, ಆ್ಯಂಬುಲೆನ್ಸ್ ಸಿಬ್ಬಂದಿ ಇವರ ಕೆಲಸ ತೀರ ಕ್ಲಿಷ್ಟಕರವಾಗಿ ಪರಿಣಮಿಸಿದೆ. ಸದಾಕಾಲ ಪಿಪಿಇ ಕಿಟ್ ನಲ್ಲಿ ಬೇಯುವ ಇವರ ಸಂಕಟ ಅಷ್ಟಿಷ್ಟಲ್ಲ.

ಸ್ವಲ್ಪವೂ ವಿಶ್ರಾಂತಿಯಿಲ್ಲದೇ ದುಡಿಯುತ್ತಿರುವ ವೈದ್ಯರ ಬಗ್ಗೆ ನಿಮಗೆ ಗೊತ್ತೇ ಇದೆ. ಇಲ್ಲೊಬ್ಬರು ಮಹಿಳಾ ವೈದ್ಯೆ ಮದುವೆಯಾಗಿ ಕೇವಲ ಮೂರೇ ದಿನಕ್ಕೆ ಮರಳಿ ಸೇವೆಗೆ ನಿಂತಿದ್ದಾರೆ! ಇವರ ಈ ತ್ಯಾಗವನ್ನು ಯಾವ ಪದಗಳಲ್ಲಿ ವರ್ಣಿಸುತ್ತೀರಿ?

ಈ ಘಟನೆ ನಡೆದಿರುವುದು ಗುಜರಾತಿನ ಅಹ್ಮದಾಬಾದ್ ನಲ್ಲಿ. ಮದುವೆಯಾಗಿ ಗಂಡನೊಂದಿಗೆ ನಾಲ್ಕಾರು ದಿನ ಕೂಡ ಕಳೆಯುವಷ್ಟು ವಿಶ್ರಾಂತಿ ಆಕೆಗೆ ಸಿಗಲಿಲ್ಲ. ಹಸೆಮಣಿ ಏರಿದ ಮೂರೇ ದಿನಕ್ಕೆ ಡಾಕ್ಟರ್ ಆರತಿ ಮತ್ತೆ ಡ್ಯೂಟಿಗೆ ಹಾಜರಾಗಿದ್ದಾರೆ. ಇದಕ್ಕೆ ಕಾರಣ…

ಹೀಗೆ ಮದುವೆ ರಜೆಯಲ್ಲಿದ್ದ ವೈದ್ಯರಿಗೆ ಆಸ್ಪತ್ರೆಯಿಂದ ತಕ್ಷಣ ಸೇವೆಗೆ ಹಾಜರಾಗಲು ಏಕಾಏಕಿ ಕರೆ ಹೋಗಿದೆ. ಕಾರಣವೇನೆಂದರೆ, ಡಾಕ್ಟರ್ ಆರತಿಯವರೊಂದಿಗೆ ಕೆಲಸ ಮಾಡುತ್ತಿದ್ದ ಅದೇ ಆಸ್ಪತ್ರೆಯ ಇತರೆ ಆರು ವೈದ್ಯರಿಗೆ ಕೊರೋನ ಸೋಂಕು ತಗುಲಿದೆ! ಹೀಗಾಗಿ ರೋಗಿಗಳಿಗೆ ಸಮಸ್ಯೆಯಾಗಿರುವುದರಿಂದ ಡಾಕ್ಟರ್ ಆರತಿಗೆ ಕರೆ ಹೋಗಿತ್ತು.

ಇದರಿಂದ ಸ್ವಲ್ಪವೂ ಬೇಜಾರಾಗದ, ವಿಚಲಿತರಾಗದ ಆರತಿ ತಕ್ಷಣ ಆಸ್ಪತ್ರೆ ತಲುಪಿದ್ದಾರೆ. ಗಂಡನೊಂದಿಗೆ ಜೀವನಪೂರ್ತಿ ಇರುತ್ತೇನೆ, ಅದರೆ ಆ ರೋಗಿಗಳ ಪ್ರಾಣ ಒಮ್ಮೆ ಹೋದರೆ ಮರಳಿ ಬರುವುದಿಲ್ಲ ಎಂದಿರುವ ಆರತಿ ಮತ್ತೆ ಪಿಪಿಇ ಕಿಟ್ ಒಳಗೆ ತೂರಿಕೊಂಡು ಸೇವೆ ಆರಂಭಿಸಿದ್ದಾರೆ. ಅವರಿಗೆ ನಿಮ್ಮ ಹಾರೈಕೆ – ಆಶೀರ್ವಾದ ಇರಲಿ.
-Team Infotrend