ಕ್ಲಬ್ ಹೌಸ್ ಗೆ ಪ್ರಬಲ ಸ್ಪರ್ಧೆ ನೀಡಲು ಫೇಸ್ ಬುಕ್ ಸಜ್ಜಾಯ್ತು: ಲೈವ್ ಆಡಿಯೋ ರೂಮ್ಸ್ ಗಳನ್ನು ಪರಿಚಯಿಸಿದ ಫೇಸ್ ಬುಕ್

ಸೋಶಿಯಲ್ ಮೀಡಿಯಾ ದಿಗ್ಗಜ ಫೇಸ್ ಬುಕ್ ತನ್ನ ಹೊಸ ಫೀಚರ್ ಗಳನ್ನು ಬಿಡುಗಡೆ ಮಾಡಿದೆ. ಫೇಸ್ ಬುಕ್ ತನ್ನ ಹೊಸ ಫೀಚರ್ ಗಳಲ್ಲಿ ಲೈವ್ ಆಡಿಯೋ ರೂಮ್ಸ್ ಮತ್ತು ಪಾಡ್ ಕಾಸ್ಟ್ (Live audio rooms and pod cast) ಗಳನ್ನು ಪರಿಚಯಿಸಿದೆ. ಈಗಾಗಲೇ ಲೈವ್ ಆಡಿಯೋಗಳ ಒಂದಷ್ಟು ಆ್ಯಪ್ ಗಳು ಇದ್ದು, ಈಗ ಅವುಗಳ ಸಾಲಿಗೆ ಫೇಸ್ ಬುಕ್ ಸಹಾ ಸೇರಿದೆ.

ವರದಿಗಳ ಪ್ರಕಾರ ಕ್ಲಬ್ ಹೌಸ್ ಜನಪ್ರಿಯತೆ ಪಡೆಯುತ್ತಿದ್ದ ಹಾಗೇ ಫೇಸ್ ಬುಕ್ ನ ಸಿಇಓ ಆಗಿರುವ ಮಾರ್ಕ್ ಜುಕರ್ ಬರ್ಗ್ ಅವರು ಲೈವ್ ಆಡಿಯೋ ಫೀಚರ್ ನ ಕುರಿತಾಗಿ ಕಾರ್ಯನಿರತರಾಗಿದ್ದರು ಎನ್ನಲಾಗಿದೆ. ಈಗ ಕ್ಲಬ್ ಹೌಸ್, ಟ್ವಿಟರ್ ನ ಸ್ಪೇಸಸ್ ಮತ್ತು ಸ್ಪಾಟಿಫೈ ಕಡೆಯಿಂದ ಬಂದಿರುವ ಗ್ರೀನ್ ರೂಂ ಲೈವ್ ಆಡಿಯೋ ಪ್ಲಾಟ್ ಫಾರ್ಮ್ ಗಳಾಗಿವೆ.

ಫೇಸ್ ಬುಕ್ ನ ಲೈವ್ ಆಡಿಯೋ ಮತ್ತು ಪಾಡ್ ಕಾಸ್ಟ್ ಸೌಲಭ್ಯಗಳನ್ನು ಪ್ರಸ್ತುತ ಅಮೆರಿಕಾದ ಫೇಸ್ ಬುಕ್ ಬಳಕೆದಾರರಿಗೆ ಮಾತ್ರವೇ ನೀಡಲಾಗಿದೆ. ಅಲ್ಲದೇ ಇದು ಐಓಎಸ್ ಬಳಕೆದಾರರಿಗೆ ಮಾತ್ರವೇ ಲಭ್ಯವಿದೆ. ಅಮೆರಿಕಾ ಹೊರತಾಗಿ ಬೇರೆಡೆ ಇರುವ ಫೇಸ್ ಬುಕ್ ಬಳಕೆದಾರರು ಈ ಸೌಲಭ್ಯಗಳನ್ನು ಪಡೆಯಲು ಒಂದಷ್ಟು ದಿನಗಳ ಕಾಲ ಕಾಯಲೇಬೇಕಾಗಿದೆ‌.

ಆರಂಭದಲ್ಲಿ ಫೇಸ್ ಬುಕ್ ಲೈವ್ ಆಡಿಯೋ ರೂಮ್ ಸೌಲಭ್ಯ ವನ್ನು ಪಬ್ಲಿಕ್ ಫಿಗರ್ ಗಳು ಹಾಗೂ ಆಯ್ಕೆ ಮಾಡಿದ ಗುಂಪುಗಳಿಗೆ ಮಾತ್ರವೇ ನೀಡುತ್ತಿದ್ದು ಈ ವಿಚಾರವಾಗಿ ಫೇಸ್ ಬುಕ್ ಒಂದು ಬ್ಲಾಗ್ ನಲ್ಲಿ ಎಲ್ಲಾ ಮಾಹಿತಿಯನ್ನು ನೀಡಿದೆ. ಫೇಸ್ ಬುಕ್ ಇದಲ್ಲದೇ ಮುಂದೆ ಈ ಸೌಲಭ್ಯ ವನ್ನು ಇತರೆ ಫೇಸ್ ಬುಕ್ ಬಳಕೆದಾರರಿಗೆ ಸಹ ನೀಡಲಾಗುವುದು ಎನ್ನುವ ವಿಚಾರವನ್ನು ತಿಳಿಸಿದೆ.

ಕ್ಲಬ್ ಹೌಸ್ ಹಾಗೂ ಟ್ವಿಟರ್ ಸ್ಪೇಸ್ ನಲ್ಲಿ ಲೈವ್ ಆಡಿಯೋ ಸೆಷನ್ ನನ್ನು ಯಾರು ಬೇಕಾದರೂ ಹೋಸ್ಟ್ ಮಾಡುವ ಅವಕಾಶವನ್ನು ನೀಡಲಾಗಿದೆ. ಆದರೆ ಫೇಸ್ ಬುಕ್ ನಲ್ಲಿ ಇದರ ಕೊರತೆ ಇದೆ. ಈಗ ಕೇವಲ ಪಬ್ಲಿಕ್ ಫಿಗರ್ ಗಳಿಗೆ ಮಾತ್ರ ಈ ಸೌಲಭ್ಯ ಇರುವುದರಿಂದ ಸಾಮಾನ್ಯರು ಅವರೊಡನೆ ಚರ್ಚೆಗಳಲ್ಲಿ ಭಾಗವಹಿಸುವ ಅವಕಾಶವನ್ನು ಪಡೆದಿದ್ದಾರೆ.

ಫೇಸ್ ಬುಕ್ ನ ಲೈವ್ ಆಡಿಯೋ ರೂಮ್ಸ್ ನಲ್ಲಿ ಒಮ್ಮೆಗೆ 50 ಜನರು ಮಾತನಾಡಲು ಅವಕಾಶ ನೀಡಲಾಗಿದೆ. ಆದರೆ ಕೇಳುವವರ ಸಂಖ್ಯೆಗೆ ಮಿತಿಯನ್ನು ಹೇರಲಾಗಿಲ್ಲ. ಎಷ್ಟು ಜನ ಬೇಕಾದರೂ ಕೇಳಬಹುದು. ಸ್ಪೆಸಿಫಿಕ್ ಫೇಸ್ ಬುಕ್ ಗ್ರೂಪ್ ಗಳು ಲೈವ್ ಆಡಿಯೋಗಳನ್ನು ಹೋಸ್ಟ್ ಮಾಡಲಾಗುವುದು.

ಇದರ ಪೂರ್ತಿ ನಿಯಂತ್ರಣವು ಅಡ್ಮಿನ್ ನ ಕೈನಲ್ಲಿ ಇರುತ್ತದೆ. ಅಲ್ಲದೇ ಲೈವ್ ಆಡಿಯೋ ನಲ್ಲಿ ಯಾರಿಗೆ ಹೋಸ್ಟ್ ಮಾಡಲು ಅನುಮತಿ ನೀಡುವರು ಎಂಬುದನ್ನು ಅಡ್ಮಿನ್ ನಿರ್ಧರಿಸುತ್ತಾರೆ. ಈ ಸೌಲಭ್ಯ ಎಲ್ಲರಿಗೂ ಯಾವಾಗ ಲಭ್ಯವಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.