VIDEO : ನಕಲಿ ಮೊಟ್ಟೆಗಳನ್ನು ಹೇಗೆ ಮಾಡ್ತಾರೆ? ಗುರುತಿಸುವುದು ಹೇಗೆ? ವಿಡಿಯೊ ನೋಡಿ

ಎಲ್ಲ ಕಡೆ – ಎಲ್ಲ ವಿಷಯದಲ್ಲೂ ನಕಲಿಯ ಹಾವಳಿ ಇದ್ದೇ ಇದೆ. ಮನುಷ್ಯರನ್ನೇ ಡುಪ್ಲಿಕೇಟ್ ಮಾಡಿ ಯಾಮಾರಿಸಿದ ಸಾಕಷ್ಟು ಉದಾಹರಣೆಗಳು ಇವೆ. ಬೇರೆ ವಿಷಯದಲ್ಲಿ ಮಾಡಲಿ, ಆದರೆ ತೀರ ತಿನ್ನುವ ಆಹಾರ ಪದಾರ್ಥಗಳನ್ನೂ ನಕಲಿ ಮಾಡುವವರು ಅದ್ಯಾವ ಸಾವು ಸಾಯುತ್ತಾರೋ ಗೊತ್ತಿಲ್ಲ. ಯಾಕಂದ್ರೆ ಅವರ ನಕಲಿ ಆಹಾರದಿಂದ ಸಾಕಷ್ಟು ಜನ ನರಳಿರುತ್ತಾರೆ, ಜೀವ ಕೂಡ ಕಳೆದುಕೊಂಡಿರುತ್ತಾರೆ.

ಹೀಗೆ ನಕಲಿ ಮಾಡುತ್ತಿರುವುದರಲ್ಲಿ ಕೋಳಿ ಮೊಟ್ಟೆ ಕೂಡ ಒಂದು! ಬೇರೆಲ್ಲ ಒತ್ತಟ್ಟಿಗಿರಲಿ ಒಂದು ಜೀವಿಯ ಮೊಟ್ಟೆಯನ್ನು ಕೂಡ ಡುಪ್ಲಿಕೇಟ್ ಮಾಡುತ್ತಾರೆಂದರೆ ಕುತಂತ್ರಜ್ಞಾನ ಅದೆಷ್ಟು ಮುಂದುವರೆದಿರಬಹುದು! ಜನ ಮಾನವೀಯೆತೆ ಮರೆತು ಅದೆಷ್ಟು ಭಂಡಗೆಟ್ಟು ನಿಂತಿರಬಹುದು ಯೋಚಿಸಿ.

ಅವರ ಇದೇ ಬುದ್ದಿವಂತಿಕೆಯನ್ನು ಒಳ್ಳೆಯದಕ್ಕೆ ಬಳಸಿದ್ದರೆ ಭಾರತ ಎಲ್ಲೋ ಇರುತ್ತಿತ್ತು, ಆದರೆ ಅವರು ತಮ್ಮ ಟ್ಯಾಲೆಂಟನ್ನು ಸ್ವಹಿತಕ್ಕಾಗಿ – ಇತರರಿಗೆ ಕೆಟ್ಟದ್ದು ಮಾಡುವುದಕ್ಕಾಗಿ ಬಳಸುತ್ತಿರುವುದು ಖೇದನೀಯ ಸಂಗತಿ. ತೀರ ಅಷ್ಟೇನೂ ಲಾಭದಾಯಕವಲ್ಲದಿದ್ದರೂ ದೊಡ್ಡ ಮಟ್ಟದಲ್ಲಿ ಪೊರೈಕೆ ಮಾಡಿದಾಗ ಸಾಕಷ್ಟು ಆದಾಯ ಗಳಿಸಬಹುದು. ಅಂಥ ದೊಡ್ಡ ಮಟ್ಟದ ಪೊರೈಕೆದಾರರೇ ಇಂಥ ಅಮಾನವೀಯ ಕೆಲಸ ಮಾಡುತ್ತಿರುವುದು.

ಮೊದಲೆಲ್ಲ, ಅಕ್ಕಿ, ಬೇಳೆ ಇತ್ಯಾದಿಗಳಲ್ಲಿ ಕಲ್ಲು ಬೆರೆಸಿ ಆ ಮೂಲಕ ಮೋಸ ಮಾಡುತ್ತಿದ್ದರು‌. ಹಾಗಿದ್ದರೆ ಎಟ್ಲಿಸ್ಟ್ ಮನೆಯಲ್ಲಿ ಅವನ್ನೆಲ್ಲ ಆರಿಸಿ ಎಸೆದು ತಿನ್ನಬಹುದು. ಆದರೆ ಇಡೀ ಅಕ್ಕಿ – ಬೇಳೆಯೇ ನಕಲಿಯಾದರೆ ಗತಿ ಏನು? ನಕಲಿ ಅಕ್ಕಿ ಅಂದರೆ ಪ್ಲಾಸ್ಟಿಕ್ ಅಕ್ಕಿ ಮಾರುಕಟ್ಟೆಗೆ ಬಂದಿವೆ ಅಂತ ಕೆಲವು ವರ್ಷಗಳ ಹಿಂದೆಯೇ ಸುದ್ದಿಯಾಗಿತ್ತು.

ಪ್ಲಾಸ್ಟಿಕ್ ಅಂದರೆ ತೀರ ನಾವೆಲ್ಲ ಬಳಸುವುದಲ್ಲ, ಅದೊಂದು ವಿಶಿಷ್ಟ ಪ್ಲಾಸ್ಟಿಕ್ ಬಳಸಿ ಮಾಡಿರುತ್ತಾರೆ ಅನ್ನಲಾಗುತ್ತಿತ್ತು. ಸಕ್ಕರೆ ಕೂಡ ಹೀಗೆ ನಕಲಿಯಾದ ಸುದ್ದಿ ಇತ್ತು. ಚಹಾಕ್ಕೆ ಹಾಕಿದಾಗ ಕೆಲವು ತುಂಡು ಮೇಲೆ ತೇಲುತ್ತಿದ್ದವು. ನಂತರ ದೊಡ್ಡ ಪ್ರಮಾಣದಲ್ಲಿ ನಕಲಿ ತತ್ತಿ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದೆ.

ನಕಲಿ ಮತ್ತು ನೈಜ ಮೊಟ್ಟೆಗಳ ನಡುವಿನ ವ್ಯತ್ಯಾಸವೇನು ಎಂದು ತಿಳಿಯುವುದು ನಿಮಗೆ ಮುಖ್ಯವಾಗಿದೆ. ನೈಜ ಮತ್ತು ನಕಲಿ ಮೊಟ್ಟೆಗಳ ನಡುವಿನ ವ್ಯತ್ಯಾಸವನ್ನು ನೀವು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ಈ ಮಾಹಿತಿ ಗೊತ್ತಿದ್ದರೆ ನೀವು ನಕಲಿ ಮೊಟ್ಟೆಗಳನ್ನು ಮಾರಾಟ ಮಾಡುವ ಬಗ್ಗೆ ಅಂಗಡಿಯವರ ವಿರುದ್ದ ದೂರು ನೀಡಬಹುದು ಮತ್ತು ನಕಲಿ ಮೊಟ್ಟೆಗಳಿಂದ ದೇಹಕ್ಕೆ ಆಗುವ ಹಾನಿಯನ್ನು ಸಹ ತಪ್ಪಿಸಬಹುದು.

ನೀವು ಸಹ ನಕಲಿ ಮತ್ತು ನೈಜ ಮೊಟ್ಟೆಗಳನ್ನು ಗುರುತಿಸಬಹುದು. ಅಂತಹ ಐದು ವ್ಯತ್ಯಾಸಗಳನ್ನು ಮುಂದೆ ಓದಿ, ಅದರ ಮೂಲಕ ನೀವು ನೈಜ ಮತ್ತು ನಕಲಿ ಮೊಟ್ಟೆಗಳನ್ನು ಸಹ ಗುರುತಿಸಬಹುದು. ಆದರೂ ಕೂಡ ಮೋಸಗಾರರ ತಂತ್ರಜ್ಞಾನ ಎಷ್ಟು ಮುಂದುವರೆದಿದೆ ಎಂದರೆ, ಅವರು ರಂಗೋಲಿ ಕೇಳಗೆ ತೂರುತ್ತಿದ್ದಾರೆ, ಎಷ್ಟೊ ಸಲ ಗೊತ್ತೇ ಆಗಲ್ಲ.

ಸಿಪ್ಪೆ :
ನಕಲಿ ಮೊಟ್ಟೆಗಳ ಚಿಪ್ಪುಗಳನ್ನು ನೀವು ಬೆಂಕಿಯ ಸಂಪರ್ಕಕ್ಕೆ ತಂದರೆ, ಅದು ವೇಗವಾಗಿ ಬೆಂಕಿಯನ್ನು ಹಿಡಿಯುತ್ತದೆ. ಏಕೆಂದರೆ ಇದು ಪ್ಲಾಸ್ಟಿಕ್‌ ನಂತಹದರಿಂದ ಮಾಡಲ್ಪಟ್ಟಿದೆ. ಮತ್ತೊಂದೆಡೆ ನೀವು ನಿಜವಾದ ಮೊಟ್ಟೆಯ ಚಿಪ್ಪನ್ನು ಬೆಂಕಿಯ ಸಂಪರ್ಕಕ್ಕೆ ತಂದರೆ, ಅದು ಬೆಂಕಿಯನ್ನು ಹಿಡಿಯುವುದಿಲ್ಲ. ಅದನ್ನು ಬೆಂಕಿಯಲ್ಲಿ ಹಾಕಿದಾಗ, ಅದು ಸ್ವಲ್ಪ ಸಮಯದ ನಂತರ ಕಪ್ಪು ಬಣ್ಣಕ್ಕೆ ತಿರುಗುತ್ತದೆ, ಅಥವಾ ಅದನ್ನು ಸುಟ್ಟಾಗ ಪ್ಲಾಸ್ಟಿಕ್‌ನಂತೆ ವಾಸನೆ ಬರುವುದಿಲ್ಲ.

ಹೊಳೆಯುವುದಿಲ್ಲ :
ನಿಜವಾದ ಮೊಟ್ಟೆಯ ಮೊದಲ ಗುರುತಿಸುವಿಕೆ ಎಂದರೆ, ಮೊಟ್ಟೆ ಹೊಳೆಯುವುದಿಲ್ಲ, ಮೊದಲ ನೋಟದಲ್ಲೇ ಅದು ನಿಮಗೆ ಡಿಫ್ರಂಟಾಗಿ ಕಾಣಿಸುತ್ತದೆ. ಆದರೆ ನಕಲಿ ಮೊಟ್ಟೆಯ ಸಿಪ್ಪೆ ಹೊಳೆಯುತ್ತದೆ. ನಕಲಿ ಮೊಟ್ಟೆಗಳ ಬಣ್ಣವು ನಿಜವಾದ ಮೊಟ್ಟೆಗಳಿಗಿಂತ ಹೆಚ್ಚು ನಿಮ್ಮನ್ನು ಆಕರ್ಷಿಸುತ್ತದೆ.

ನಯವಾದ ಮೇಲ್ಮೈ :
ನೀವು ಅಸಲಿ ಮೊಟ್ಟೆಯ ಚಿಪ್ಪನ್ನು ಸ್ಪರ್ಶಿಸಿದಾಗ ಮೇಲ್ಮೈ ಮೃದುವಾಗಿರುತ್ತದೆ. ಇವಕ್ಕೆ ಹೋಲಿಸಿದರೆ ನಕಲಿ ಮೊಟ್ಟೆಯ ಮೇಲ್ಮೈ ಒರಟಾಗಿರುತ್ತದೆ. ಸ್ಪರ್ಶಿಸಿದಾಗ ಇದು ಸ್ಪಷ್ಟವಾಗಿ ಗೊತ್ತಾಗುತ್ತದೆ.

ಶಬ್ಧ :
ನೈಜ ಮತ್ತು ನಕಲಿ ಮೊಟ್ಟೆಗಳನ್ನು ಗುರುತಿಸಲು ಈ ಎರಡರ ಶಬ್ದವೂ ಕೂಡ ಮುಖ್ಯವಾಗಿದೆ. ನಿಮ್ಮ ಕೈಯಲ್ಲಿ ನಿಜವಾದ ಮೊಟ್ಟೆಯನ್ನು ಅಲುಗಾಡಿಸಿದಾಗ ಅದು ಯಾವುದೇ ಶಬ್ದವನ್ನು ಮಾಡುವುದಿಲ್ಲ. ಆದರೆ ನೀವು ನಕಲಿ ಮೊಟ್ಟೆಯನ್ನು ಅಲ್ಲಾಡಿಸಿದರೆ ಮೊಟ್ಟೆಯೊಳಗೆ ಅಲ್ಲಾಡುವ ಶಬ್ದವನ್ನು ನೀವು ಕೇಳುತ್ತೀರಿ.

ಹಳದಿ ಭಾಗ :
ನೀವು ನಿಜವಾದ ಮೊಟ್ಟೆಯನ್ನು ಸೀಳಿದಾಗ ಮೊಟ್ಟೆಯೊಳಗಿನ ಹಳದಿ ಲೋಳೆಯನ್ನು ನೀವು ಪ್ರತ್ಯೇಕವಾಗಿ ನೋಡುತ್ತೀರಿ. ಆದರೆ ನೀವು ನಕಲಿ ಮೊಟ್ಟೆಯನ್ನು ಓಪನ್ ಮಾಡಿದರೆ ಹಳದಿ ಲೋಳೆ ಮತ್ತು ಬಿಳಿ ದ್ರವ ಮಿಕ್ಸಾಗಿರುತ್ತದೆ. ಹೀಗೆನೀವು ನೈಜ ಮತ್ತು ನಕಲಿ ಮೊಟ್ಟೆಗಳನ್ನು ಗುರುತಿಸಬಹುದು.

ಆದರೂ ಕೂಡ ತುಂಬಾ ಸಲ ನಕಲಿ ಮೊಟ್ಟೆಯನ್ನು ಗುರುತಿಸುವುದು ಸುಲಭದ ಕೆಲಸವಲ್ಲ, ನಕಲಿ ಮೊಟ್ಟೆ ತಯಾರಕರು ಕೂಡ ಈ ಮೈನಸ್ ಪಾಯಿಂಟ್ ಗಳನ್ನು ಪ್ಲಸ್ ಮಾಡಿಕೊಂಡು ತಯಾರಿಕೆಯಲ್ಲಿ ಸುಧಾರಣೆ ಮಾಡಿಕೊಂಡು ಮೋಸ ಮಾಡುತ್ತಾರೆ. ಈ ಬಗೆಗೆ ವಿವರಿಸುವ ವಿಡಿಯೊ ಮೇಲಿದೆ, ನೋಡಿ…
-Team Infotrend