ಅಚ್ಚರಿಯಾದರೂ ಸತ್ಯ : ಮೆಕ್ಯಾನಿಕ್ ಕೆಲಸ ಬಿಟ್ಟು ರೈತರಾದ ಇವರು ಒಂದೇ ಮರದಲ್ಲಿ 22 ಬಗೆಯ ಮಾವಿನಹಣ್ಣು ಬೆಳೆಯುವರು!
ಮಹಾರಾಷ್ಟ್ರದ ಸಾಂಗ್ಲಿ ಇಲಾಖೆಯ ಕಾಕಾ ಸಾಹೇಬ್ ಸಾವಂತ್ ಅವರು ಸುಮಾರು ಹತ್ತು ವರ್ಷಗಳ ಕಾಲ ಪುಣೆಯ ದೊಡ್ಡ ದೊಡ್ಡ ಆಟೋಮೊಬೈಲ್ ಕಂಪನಿಗಳಲ್ಲಿ ಕೆಲಸವನ್ನು ಮಾಡಿದ್ದಾರೆ. ಆದರೆ ಇಂದು ಅವರು ಹೆಸರನ್ನು ಮಾಡಿರುವುದು ಒಬ್ಬ ಮೆಕಾನಿಕ್ ಆಗಿ ಅಲ್ಲ ಬದಲಾಗಿ ಒಬ್ಬ ಸಫಲ ಅಥವಾ ಯಶಸ್ವಿ ರೈತನಾಗಿ ಜನಪ್ರಿಯತೆಯನ್ನು ಪಡೆದುಕೊಂಡು ಬಹಳಷ್ಟು ಜನರಿಗೆ ಮಾದರಿಯಾಗಿದ್ದಾರೆ.
ಕಾಕಾ ಸಾಹೇಬ್ ಅವರ ಒಂದು ಸಸ್ಯಗಳ ನರ್ಸರಿ ಇದ್ದು, ಪ್ರಸ್ತುತ ಅವರು ವರ್ಷಕ್ಕೆ ಸುಮಾರು 50 ಲಕ್ಷ ರೂಪಾಯಿಗಳ ಆದಾಯವನ್ನು ಗಳಿಸುತ್ತಿದ್ದಾರೆ. ಕೃಷಿಯನ್ನು ಆರಿಸಿಕೊಂಡು ಅವರು ಕೃಷಿ ಕ್ಷೇತ್ರದಲ್ಲಿ ಒಂದು ಮಹತ್ತರವಾದ ಸಾಧನೆಯನ್ನು ಮಾಡುತ್ತಿದ್ದಾರೆ. 43 ವರ್ಷ ವಯಸ್ಸಿನ ಸಾವಂತ್ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡಾಗ ಅದನ್ನು ಕೇಳಿದಾಗ ಬಹಳ ವಿಶೇಷ ಹಾಗೂ ಅವರ ಶ್ರಮದ ಅರಿವು ನಮಗೆ ಆಗುತ್ತದೆ.
ಹತ್ತು ವರ್ಷಗಳ ಹಿಂದೆ ಅವರು ಅಲ್ಫೋನ್ಸೋ ಮಾವಿನ ಹಣ್ಣನ್ನು ಬೆಳೆಯಲು ಆರಂಭಿಸಿದಾಗ ಸುತ್ತಮುತ್ತಲ ರೈತರು ಇವರನ್ನು ನೋಡಿ ಹಾಸ್ಯ ಮಾಡಿದ್ದಾರಂತೆ. ಅಲ್ಫೋನ್ಸೋ ಮಾವು ಕೊಂಕಣ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದ್ದು, ಅಲ್ಲಿ ಮಾತ್ರವೇ ಅದು ಚೆನ್ನಾಗಿ ಫಸಲನ್ನು ನೀಡುತ್ತದೆ. ಈ ಪ್ರದೇಶ ಅದಕ್ಕೆ ಸೂಕ್ತವಾದುದಲ್ಲ ಎಂದು ಅಲ್ಲಿನ ಜನರು ನಂಬಿದ್ದರು.

ಆದರೆ ಸಾವಂತ್ ಅದನ್ನು ಸುಳ್ಳೆಂದು ಸಾಬೀತು ಮಾಡಿದ್ದಾರೆ. ಇನ್ನು ಸಾವಂತ್ ಅವರಿಗೆ ಇಬ್ಬರು ಸಹೋದರರು ಇದ್ದು, ಅವರು ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದಾರೆ. ಇವರ ಕುಟುಂಬಕ್ಕೆ ಸಂಬಂಧಿಸಿದ ಆಸ್ತಿ ಎನ್ನುವಂತೆ ಮಹಾರಾಷ್ಟ್ರದ ಜಾಟ್ ಜಿಲ್ಲೆಯ ಗ್ರಾಮವೊಂದರಲ್ಲಿ ಸುಮಾರು 20 ಎಕರೆ ಜಮೀನು ಇದೆ. ಆದರೆ ಆ ಪ್ರದೇಶವು ಹೆಚ್ಚು ಮಳೆಯನ್ನು ಕಾಣದಂತಹ ಒಣಭೂಮಿಯ ಪ್ರದೇಶ ಆಗಿದೆ.
ಕಾಕಾ ಸಾಹೇಬರು ಐಟಿಐ ಡಿಪ್ಲೋಮಾ ಪಡೆದಿದ್ದು, ಆಟೋಮೊಬೈಲ್ ಕಂಪನಿಯಲ್ಲಿ ಕೆಲಸ ಮಾಡುವಾಗ ಒಂದಷ್ಟು ವರ್ಷಗಳ ನಂತರ ಅವರನ್ನು ವರ್ಗಾವಣೆ ಮಾಡಲಾಯಿತು. ಆಗ ಅವರು ಆ ಕೆಲಸ ಬಿಟ್ಟು ಗ್ರಾಮಕ್ಕೆ ಮರಳುವ ಆಲೋಚನೆ ಮಾಡಿದರು. ಅವರ ಆ ಆಲೋಚನೆ ನಿರ್ಧಾರವಾಗಿ ಬದಲಾಯಿತು. ಅವರು ತಮ್ಮ ಗ್ರಾಮಕ್ಕೆ ವಾಪಸಾದರು.
ಕೃಷಿಯನ್ನು ವೃತ್ತಿಯನ್ನಾಗಿ ಸ್ವೀಕರಿಸುವ ನಿರ್ಧಾರ ಮಾಡಿದ ಅವರು, ತಾನು ಅಂದು ಮಾಡಿದ ನಿರ್ಧಾರ ಸರಿಯಾಗಿಯೇ ಇತ್ತು ಎಂದು ಹೇಳುತ್ತಾರೆ. ಅಲ್ಲದೇ ತನ್ನ ಆ ನಿರ್ಧಾರದ ಬಗ್ಗೆ ತಾನೆಂದು ಪಶ್ಚಾತ್ತಾಪ ಪಡುವುದಿಲ್ಲ ಎನ್ನುವುದು ಅವರ ಮಾತಾಗಿದೆ. ಸಾವಂತ್ ಅವರ ಅಂತರಾಲ ಹಳ್ಳಿ ಜಾಟ್ ಪಟ್ಟಣದಿಂದ 15 ಕಿಲೋಮೀಟರ್ ದೂರದಲ್ಲಿದೆ. ಸುಮಾರು 280 ಕುಟುಂಬಗಳು ಈ ಗ್ರಾಮದಲ್ಲಿ ನೆಲೆಸಿವೆ.

ಇಲ್ಲಿ ಪ್ರಾಕೃತಿಕವಾಗಿ ರೈತರು ಕಪ್ಪು ಮಣ್ಣಿನಲ್ಲಿ ವ್ಯವಸಾಯವನ್ನು ಮಾಡುತ್ತಾರೆ. ವಾರ್ಷಿಕ ಕೇವಲ 570 ಮಿಲಿಮೀಟರ್ ಮಳೆಯನ್ನು ಪಡೆಯುವಂತಹ ಪ್ರದೇಶ ಇದಾಗಿದೆ. ಸಾವಂತ್ ಅವರು 2010ರಲ್ಲಿ ಮಾವಿನ ತೋಪನ್ನು ಬೆಳೆಸಲು ತೊಡಗಿದರು. ಐದು ವರ್ಷಗಳ ನಂತರ ಅವರು ನರ್ಸರಿಯೊಂದನ್ನು ಪ್ರಾರಂಭಿಸುವ ಆಲೋಚನೆ ಮಾಡಿ, ಅದಕ್ಕೆ ಚಾಲನೆಯನ್ನು ನೀಡಿದರು.
ತಮ್ಮ ನರ್ಸರಿ ಗಾಗಿ ಅವರು ನೀರನ್ನು ಕೃಷ್ಣಾ ನದಿಯ ನೀರಾವರಿ ಯೋಜನೆಯ ಮೂಲಕ ಸುಮಾರು ನಾಲ್ಕು ಕಿಲೋಮೀಟರ್ ದೂರದಿಂದ ಪೈಪ್ ಲೈನ್ ಗಳನ್ನು ಹಾಕಿಸಿ ನೀರನ್ನು ತರುತ್ತಾರೆ. ಸಾವಂತ್ ಅವರು ಸರ್ಕಾರದಿಂದ ಸಬ್ಸಿಡಿಯನ್ನು ಪಡೆದು ಸಣ್ಣ ಕೊಳವೊಂದರ ನಿರ್ಮಾಣವನ್ನು ಮಾಡಿಸಿದ್ದಾರೆ. ಸಾವಂತ್ ಅವರ ಕುಟುಂಬದ 20 ಎಕರೆ ಜಮೀನಿನಲ್ಲಿ ಒಂದಷ್ಟು ಜಾಗವನ್ನು ನರ್ಸರಿ ಗಾಗಿ ಬಳಸಿಕೊಂಡಿದ್ದಾರೆ.
10 ಎಕರೆ ಜಮೀನಿನಲ್ಲಿ ಕೇಸರಿ ಮಾವಿನಹಣ್ಣಿನ ಮರಗಳನ್ನು ಬೆಳೆಸಿದ್ದಾರೆ. ಉಳಿದ ಹತ್ತು ಎಕರೆಯಲ್ಲಿ ಸಪೋಟ, ದಾಳಿಂಬೆ ಸೀತಾಫಲ, ಸೀಬೆಹಣ್ಣು, ಹುಣಸೆ ಮರಗಳನ್ನು ಬೆಳೆಸಿದ್ದಾರೆಮ ವರ್ಷವೊಂದಕ್ಕೆ ಸುಮಾರು 2 ಟನ್ ಮಾವಿನ ಹಣ್ಣಿನ ಇಳುವರಿಯನ್ನು ಪಡೆಯುತ್ತಾರೆ. ಇವರ ಮಾವಿನ ಫಸಲು ಇತರೇ ರೈತರಿಗೆ ಮಾದರಿಯಾಗಿದೆ.

ಸಾವಂತ್ ಅವರ ತೋಟದಲ್ಲಿ ಕೆಲಸ ಮಾಡಲು ನ್ಯಾಷನಲ್ ಹಾರ್ಟಿಕಲ್ಚರ್ ಗೋಲ್ಡ್ ಟ್ರೈನಿಂಗ್ ಪಡೆದವರನ್ನು ನೇಮಕ ಮಾಡಿಕೊಂಡಿದ್ದಾರೆ. ಇವರ ಮಾವಿನ ತೋಟದಲ್ಲಿ ಕೆಲವು ಮರಗಳಿಗೆ ಗ್ರಾಫ್ಟ್ ಮಾಡಲಾಗಿದೆ. ಅದರ ಮೂಲಕ ಒಂದೇ ಮರದಲ್ಲಿ 22 ರೀತಿಯ ಮಾವಿನ ಹಣ್ಣುಗಳನ್ನು ಬೆಳೆಯಲಾಗುತ್ತಿದೆ. ಎಲ್ಲ ಮಾವುಗಳ ಮೇಲೆ ಅವುಗಳ ಹೆಸರಿನಲ್ಲೇ ಲೇಬಲ್ಲನು ಅಂಟಿಸಲಾಗಿದೆ.
ಇವರ ಮಾವಿನ ತೋಟದಲ್ಲಿ ನೂರು ವಿಭಿನ್ನ ರೀತಿಯ ಮಾವಿನ ಹಣ್ಣುಗಳನ್ನು ಬೆಳೆಯಲಾಗುತ್ತಿದೆ. ಸಾವಂತ್ ಅವರು ತಮ್ಮ ಸುತ್ತಮುತ್ತಲ ಪ್ರದೇಶಗಳಲ್ಲಿ ಒಬ್ಬ ಮಾದರಿ ರೈತ ಎನಿಸಿಕೊಂಡಿದ್ದು, ಬಹಳಷ್ಟು ಮಂದಿ ಅವರ ಬಳಿ ಬಂದು ಬೆಳೆ, ಇಳುವರಿ ಕುರಿತಾಗಿ ಚರ್ಚೆ ವಿಮರ್ಶೆಗಳನ್ನು ಮಾಡುವ ಜೊತೆಗೆ ಅವರಿಂದ ಮಾರ್ಗದರ್ಶನವನ್ನು ಕೂಡ ಪಡೆದುಕೊಳ್ಳುತ್ತಿದ್ದಾರೆ.
ಸಾವಂತ್ ಅವರ ನರ್ಸರಿಯಿಂದ ಸಸಿಗಳನ್ನು ದೂರ ದೂರದ ಪ್ರದೇಶಗಳಿಂದ ಜನ ಬಂದು ಖರೀದಿ ಮಾಡುತ್ತಾರೆ. ಅವರ ನರ್ಸರಿಯಲ್ಲಿ ಕೆಲಸ ಮಾಡುವವರು ಗ್ರಾಫ್ಟಿಂಗ್ ತರಬೇತಿ ಪಡೆದಿದ್ದು ದಿನವೊಂದಕ್ಕೆ ಸುಮಾರು 800ರಿಂದ ಸಾವಿರ ಸಸಿಗಳನ್ನು ಸಿದ್ಧಪಡಿಸುತ್ತಾರೆ. ಗ್ರಾಫ್ಟಿಂಗ್ ಮಾಡುವುದಕ್ಕೆ ಸಸಿ ಯೊಂದಕ್ಕೆ 3 ರೂ. ಶುಲ್ಕವನ್ನು ವಿಧಿಸಲಾಗುತ್ತದೆ.

ಇನ್ನು ಮಾವಿನ ಸಸಿಗಳಿಗೆ 40 ರಿಂದ 70 ರೂ ಗೆ ಮಾರಾಟ ಮಾಡುತ್ತಾರೆ. ಇದರಿಂದ ವಾರ್ಷಿಕ ಸುಮಾರು ಎರಡು ಲಕ್ಷ ರೂ.ಗಳ ಆದಾಯವನ್ನು ಅವರು ಗಳಿಸುತ್ತಾರೆ. ಇದರ ಜೊತೆಗೆ ಸೀಬೆ, ದ್ರಾಕ್ಷಿ, ಸಪೋಟ, ನಿಂಬೆ, ಹುಣಸೆ ಸಸಿಗಳ ಮಾರಾಟವನ್ನು ಮಾಡಲಾಗುತ್ತದೆ.
ಸಾವಂತ್ ಅವರ ಗ್ರಾಮದ ಸುತ್ತ ಮುತ್ತಲಲ್ಲಿ ದ್ರಾಕ್ಷಿ ಮತ್ತು ದಾಳಿಂಬೆಯನ್ನು ಹೆಚ್ಚಾಗಿ ಬೆಳೆಯುತ್ತಿದ್ದ ರೈತರು ಕೂಡಾ ಸಾವಂತ್ ಅವರಿಂದ ಪ್ರೇರಣೆ ಪಡೆದು ಇಂದು ಮಾವಿನ ಮರಗಳನ್ನು ಬೆಳೆಸುವ ಕಡೆಗೆ ತಮ್ಮ ಗಮನವನ್ನು ಹರಿಸಿದ್ದಾರೆ. ಸಾವಂತ್ ಕೂಡ ಆಸಕ್ತ ರೂತರಿಗೆ ಸೂಕ್ತ ತರಬೇತಿ – ಮಾರ್ಗದರ್ಶನ ಮಾಡುತ್ತಾರೆ.
ಸಾವಂತ್ ಅವರು ಮಾಡುತ್ತಿರುವ ಕೃಷಿ ಸೇವೆ ಹಾಗೂ ಈಗಾಗಲೇ ಕೃಷಿಯಲ್ಲಿ ಅವರ ಸಾಧನೆಯನ್ನು ಗುರುತಿಸಿರುವ ಮಹಾರಾಷ್ಟ್ರ ಸರ್ಕಾರವು ಕಾಕಾ ಸಾಹೇಬ್ ಸಾವಂತ್ ಅವರಿಗೆ ಉದ್ಯಾನ್ ಪಂಡಿತ್ ಎನ್ನುವ ಪ್ರಶಸ್ತಿ ನೀಡಿ ಗೌರವಿಸಿದೆ.