ಹೊಸ ನಿಯಮಗಳನ್ನು ಒಪ್ಪಿದ ವಾಟ್ಸಪ್, ಫೇಸ್ಬುಕ್, ಗೂಗಲ್ ಗೆ ಬ್ಯಾನ್ ಭೀತಿ ಇಲ್ಲ! ಟ್ವಿಟರ್ ನಡೆ ಇನ್ನೂ ನಿಗೂಢ!

ಹೊಸ ಸುದ್ದಿ ಪ್ರಕಾರ, ಭಾರತ ಸರ್ಕಾರದ ಹೊಸ ನಿಯಮಗಳನ್ನು ಯಾವುದೇ ಶರತ್ತಿಲ್ಲದೇ ವಾಟ್ಸಪ್, ಫೇಸ್ಬುಕ್, ಗೂಗಲ್ ಒಪ್ಪಿಕೊಂಡಿವೆ. ಆದರೆ ಟ್ವಿಟರ್ ಇನ್ನೂವರೆಗೂ ಸರ್ಕಾರಕ್ಕೆ ತನ್ನ ನಿರ್ಧಾರ ತಿಳಿಸಿಲ್ಲ. ಭಾರತ ಸರಕಾರ ಸ್ವಲ್ಪ ಕೂಡ ತನ್ನ ಹಿಡಿತ ಸಡಿಲಿಸಲು ತಯಾರಿಲ್ಲ, ಅದಕ್ಕಾಗಿ ಇಷ್ಟು ದಿನ ಕಾಯ್ದ ಉಳಿದ ಸಾಮಾಜಿಕ ಮಾಧ್ಯಮಗಳು ಈಗ ತೆಪ್ಪಗೆ ನಿಯಮ ಒಪ್ಪಿಕೊಂಡಿವೆ. ಆದರೆ ಟ್ವಿಟರ್ ಮಾತ್ರ ಹಟ ಹಿಡಿದು ಕೂತಿದೆ. ಇತ್ತ ಸರ್ಕಾರ ಕೂಡ ಬರಬರುತ್ತಾ ಮತ್ತಷ್ಟು ಕಠಿಣವಾಗತೊಡಗಿದೆ.

ಟ್ವಿಟರ್ ಗೆ ನಿಯಮ ಒಪ್ಪಬೇಕು ಅಥವಾ ಭಾರತದಿಂದ ಹೊರಹೋಗಬೇಕು ಇವೆರಡೇ ಆಯ್ಕೆ ಉಳಿದಿವೆ. ಭಾರತದಲ್ಲಿ ಉಳಿಯುವುದಾದರೆ ಭಾರತದ ಕಾನೂನಿನ ಪ್ರಕಾರ ಬದುಕಬೇಕು, ಯಾವುದೇ ಸಾಮಾಜಿಕ ಮಾಧ್ಯಮ ವೇದಿಕೆ ದೇಶದ ಕಾನೂನನ್ನು ಅನುಸರಿಸದಿದ್ದರೆ ಭಾರತೀಯ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳುವುದು ಖಚಿತ ಎಂದು ಸರ್ಕಾರಿ ಮೂಲಗಳು ಸ್ಪಷ್ಟಪಡಿಸಿವೆ.

ಭಾರತೀಯ ಕಾನೂನು ಮತ್ತು ನಿಯಮಗಳನ್ನು ಪಾಲಿಸುವ ಬಗ್ಗೆ ಸರ್ಕಾರ ಮತ್ತು ಟ್ವಿಟರ್ ನಡುವೆ ಮತ್ತಷ್ಟು ಮನಸ್ತಾಪ ಬೆಳೆಯುತ್ತಿದೆ. ತಂತ್ರಜ್ಞಾನ ಸಚಿವಾಲಯದ ಮೂಲಗಳ ಪ್ರಕಾರ, ಇಲ್ಲಿಯವರೆಗೆ ಎಲ್ಲಾ ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಗಳು ನಿಯಮಗಳ ಪ್ರಕಾರ ಅಧಿಕಾರಿಗಳನ್ನು ನೇಮಿಸಿವೆ, ಆದರೆ ಟ್ವಿಟರ್ ಇನ್ನೂ ನಿಯಮಗಳ ಪಾಲನರ ಮಾಡಿಲ್ಲ, ಆ ಬಗ್ಗೆ ಸ್ಪಷ್ಟನೆ ಕೂಡ ನೀಡಿಲ್ಲ.

ಮೂಲಗಳ ಪ್ರಕಾರ, ಬಹುತೇಕ ಎಲ್ಲ ಪ್ರಮುಖ ಸಾಮಾಜಿಕ ಮಾಧ್ಯಮಗಳು ತಮ್ಮ ಮುಖ್ಯ Chief Compliance Officer, ನೋಡಲ್ ಸಂಪರ್ಕ ವ್ಯಕ್ತಿ ಮತ್ತು ಕುಂದುಕೊರತೆ ಅಧಿಕಾರಿಗಳ ವಿವರಗಳನ್ನು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದೊಂದಿಗೆ ಮಾಹಿತಿ ತಂತ್ರಜ್ಞಾನದ ಮಧ್ಯಂತರ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ನೀತಿ ಸಂಹಿತೆಯ ನಿಯಮಗಳ ಪ್ರಕಾರ ಹಂಚಿಕೊಂಡಿವೆ.

ಮೂಲಗಳ ಪ್ರಕಾರ, ಪ್ರಮುಖ ಸಾಮಾಜಿಕ ಮಾಧ್ಯಮ ಪ್ಲಾಟ್‌ ಫಾರ್ಮ್‌ ಗಳಾದ ಕೂ, ಶೇರ್‌ ಚಾಟ್, ಟೆಲಿಗ್ರಾಮ್, ಲಿಂಕ್ಡ್‌ ಇನ್, ಗೂಗಲ್, ಫೇಸ್‌ಬುಕ್, ವಾಟ್ಸಾಪ್ ಇತ್ಯಾದಿಗಳು ಸಹ ಹೊಸ ನಿಯಮಗಳ ಅಗತ್ಯಕ್ಕೆ ಅನುಗುಣವಾಗಿ ವಿವರಗಳನ್ನು ಸಚಿವಾಲಯದೊಂದಿಗೆ ಹಂಚಿಕೊಂಡಿವೆ.

ಆದರೆ ಸರ್ಕಾರದ ಮೂಲಗಳ ಪ್ರಕಾರ, ಟ್ವಿಟರ್ ಇನ್ನೂ ನಿಯಮಗಳನ್ನು ಅನುಸರಿಸುತ್ತಿಲ್ಲ. ನಿನ್ನೆ ಸರ್ಕಾರದಿಂದ ಬಲವಾದ ಪ್ರತಿಕ್ರಿಯೆಯ ನಂತರ, ಟ್ವಿಟರ್ ನಿನ್ನೆ ತಡರಾತ್ರಿ ಸಂದೇಶ ಕಳುಹಿಸಿದ್ದು, ಭಾರತದ ಕಾನೂನು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ವಕೀಲರೊಬ್ಬರು ನೋಡಲ್ ಸಂಪರ್ಕ ವ್ಯಕ್ತಿ ಮತ್ತು ಕುಂದುಕೊರತೆ ಅಧಿಕಾರಿಯಾಗಿ ವಿವರಗಳನ್ನು ಹಂಚಿಕೊಂಡಿದ್ದಾರೆ.

ಆದರೆ ನಿಯಮಗಳ ಪ್ರಕಾರ, ಪ್ರಮುಖ ಸಾಮಾಜಿಕ ಮಾಧ್ಯಮ ಕಂಪನಿಗಳ ಈ ನಿಯೋಜಿತ ಅಧಿಕಾರಿಗಳು ಕಂಪನಿಯ ಉದ್ಯೋಗಿಗಳಾಗಿರಬೇಕು ಮತ್ತು ಭಾರತದಲ್ಲಿ ವಾಸಿಸುತ್ತಿರಬೇಕು. ಟ್ವಿಟರ್ ಇನ್ನೂ Chief Compliance ಅಧಿಕಾರಿಯ ವಿವರಗಳನ್ನು ಸಚಿವಾಲಯಕ್ಕೆ ಕಳುಹಿಸಿಲ್ಲ. ಇದು ಸರ್ಕಾರ ಮತ್ತು ಟ್ವಿಟರ್ ನಡುವಿನ ಘರ್ಷಣೆ ಹೆಚ್ಚಾಗಲು ಕಾರಣವಾಗಿದೆ.

ಹೊಸ ಕಾನೂನು ಪ್ರಕಾರ, ರಕ್ಷಣಾ ಸಚಿವಾಲಯ, ವಿದೇಶಾಂಗ ವ್ಯವಹಾರ, ಗೃಹ, ಮಾಹಿತಿ ಮತ್ತು ಪ್ರಸಾರ, ಕಾನೂನು, ಮಾಹಿತಿ ತಂತ್ರಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವರನ್ನೊಳಗೊಂಡ ಮೇಲುಸ್ತುವಾರಿ ಸಮಿತಿ ಇರಲಿದೆ. ಯಾವುದಾದರೂ ಸೋಶಿಯಲ್ ಮೀಡಿಯಾ ಕಂಪನಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದಲ್ಲಿ ಈ ಸಮಿತಿಯು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಲಿದೆ

ಭಾರತ ಸರ್ಕಾರ ಜಂಟಿ ಕಾರ್ಯದರ್ಶಿ ಅಥವಾ ಮೇಲ್ಪಟ್ಟ ದರ್ಜೆಯವರನ್ನು ಈ ಸಮೀತಿಗೆ ನೇಮಕ ಮಾಡುತ್ತದೆ. ಯಾವುದೇ ಸೋಷಿಯಲ್ ಮೀಡಿಯಾ ಕಾನೂನು ಮೀರುತ್ತಿರುವುದು ಕಂಡುಬಂದಲ್ಲಿ ಅಂಥದ್ದನ್ನು ತಡೆಹಿಡಿಯುವಂತೆ ಮೇಲ್ಮನವಿ ಸಮಿತಿಗೆ ಕೇಳಬಹುದು. ಜಂಟಿ ಕಾರ್ಯದರ್ಶಿ ಅಥವಾ ಮೇಲ್ಪಟ್ಟ ದರ್ಜೆಯ ಅಧಿಕಾರಿಗೆ ಮಾಹಿತಿಯನ್ನು ತಡೆಹಿಡಿಯುವ ಅಧಿಕಾರ ಇರುತ್ತದೆ.

ಸುರಕ್ಷತೆಗಳಿಲ್ಲದೆ ನಾಗರಿಕರ ಡೇಟಾವನ್ನು ಅವರು ಹೇಗೆ ಬಳಸುತ್ತಾರೆ ಎಂಬುದರ ಕುರಿತು ಕೂಡ ಸರ್ಕಾರದ ನಿಯಂತ್ರಣ ಹೆಚ್ಚಲಿದೆ. ಎಲ್ಲರೂ ಮರುಮಾತಾಡದೇ ಒಪ್ಪಿಕೊಂಡಿರುವ ನಿಯಮಗಳನ್ನು ಟ್ವಿಟರ್ ಮಾತ್ರ ಒಪ್ಪುತ್ತಿಲ್ಲ, ಕಾರಣ ಏನೋ ನಿಗೂಢ!
-Team Infotrend