ಆ ಚಾಲಕ ಬಸ್ ಓಡಿಸುತ್ತಿದ್ದಾಗ ಒಂದು ಫೋನ್ ಬರುತ್ತದೆ : ಅದು ಆತನ ಜೀವಮಾನದ ಅತ್ಯಂತ ಸಂತೋಷಕರ ಸಮಾಚಾರ ನೀಡುವ ಕರೆಯಾಗಿತ್ತು!

ಅವರು ದೆಹಲಿ ಸಾರಿಗೆ ಸಂಸ್ಥೆಯ (Delhi Transport Corporation) ಬಸ್ ಡ್ರೈವರ್, ಹರಿಯಾಣದ ನಿವಾಸಿಯಾಗಿರುವ ಅವರ ಕುಟುಂಬದ ಜೀವನಾಧಾರವೇ ಅವರ ಚಾಲಕ ವೃತ್ತಿಯಾಗಿತ್ತು. ಅದರಿಂದಲೇ ಅವರು ಮಕ್ಕಳಿಗೆ ಬೇಕಾಗಿದ್ದನ್ನು ಓದಿಸಿದರು, ಅವರ ಯಾವ ಬೇಕು ಬೇಡುಗಳಿಗೂ ಇಲ್ಲ ಅನ್ನಲಿಲ್ಲ, ಪರಿಣಾಮವೇ ಆ ಸಂತೋಷದ ಸುದ್ದಿ ಹೊತ್ತ ಫೋನ್ ಕಾಲ್ ಬಂದಿದ್ದು.

ಇವರ ಮಗಳು ಪ್ರೀತಿ ಬಾಲ್ಯದಿಂದಲೂ ಓದಿನಲ್ಲಿ ಜಾಣೆಯಾಗಿದ್ದಳು, ಪ್ರೌಢ ಶಾಲೆಯಲ್ಲಿ 77% ಹಾಗೂ ಪಿಯುಸಿ ಯಲ್ಲಿ 87% ಅಂಕ ಗಳಿಸಿದ್ದ ಪ್ರೀತಿಯ ಮೇಲೆ ಮನೆಯವರೆಲ್ಲರಿಗೂ ಏನೋ ಭರವಸೆ ಇತ್ತು. ಹೀಗಾಗಿ ಅವರಿಗೆ ಹೆಚ್ಚಿನ ವಿದ್ಯಾಭಾಸ ಮಾಡಲು ಅನುವು ಮಾಡಿಕೊಟ್ಟರು. ದೆಹಲಿಯ ಲಕ್ಷ್ಮೀ ಬಾಯಿ ಕಾಲೇಜಿನಿಂದ ಪ್ರೀತಿ ಹಿಂದಿಯಲ್ಲಿ ಪದವಿ ಮುಗಿಸಿದರು.

ಅವಳು ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುವುದಾದರೆ ಆಕೆಗೆ ತನ್ನ ಸುತ್ತಮುತ್ತಲಜನ ವಾತಾವರಣ ಕಂಡು ಭಯವಾಗುತ್ತಿತ್ತಂತೆ. ಹರಿಯಾಣದ ಹಳ್ಳಿಯಲ್ಲಿ ಬೆಳೆದಿದ್ದ ಆಕೆಗೆ ತನ್ನನ್ನು ಹೆಚ್ಚು ಓದಿಸಲಿಕ್ಕಿಲ್ಲ ಎಂಬ ಆತಂಕ ಕಾಡಿತ್ತು. ಏಕೆಂದರೆ ಆಕೆಯ ಸುತ್ತಮುತ್ತ ಇದ್ದ ಯಾವ ಹುಡುಗಿಯರಿಗೂ ಅವರ ಪಾಲಕರು ಹೆಚ್ಚಿನ ಶಿಕ್ಷಣ ಕೊಡಿಸಿರಲಿಲ್ಲ.

ಇವರ ಸ್ನೇಹಿತೆಯರೆಲ್ಲರಿಗೂ ಬೇಗ ಮದುವೆ ಮಾಡಿ ಬಿಡುತ್ತಿದ್ದರು. ಅದೇ ಭಯ ಪ್ರೀತಿಗೂ ಕಾಡಿತ್ತು. ಆದರೆ ಹಾಗಾಗಲಿಲ್ಲ. ಪಾಲಕರ ಪ್ರೋತ್ಸಾಹ ಹಾಗೂ ಸ್ನೇಹಿತರ ಕಾರಣದಿಂದ ಪ್ರೀತಿ ಅಸಾಧ್ಯವಾದುದನ್ನು ಸಾಧಿಸಿಯೇ ಬಿಟ್ಟರು. ಜವಾಹರಲಾಲ್ ನೆಹರು ಯೂನಿವರ್ಸಿಟಿಗೆ ಸೇರಿದ ಪ್ರೀತಿ, ಅಲ್ಲಿ ಪಿಹೆಚ್ಡಿ ಮಾಡತೊಡಗಿದರು.

ಅಂದ ಹಾಗೆ ಮೊದಲು ಹೇಳಿದ ಆ ಚಾಲಕರಿಗೆ ಬಂದ ಫೋನ್ ಕಾಲ್ ನಲ್ಲಿ ಹೇಳಿದ ವಿಷಯ ಏನೆಂದರೆ “ಪಪ್ಪಾ ನಾನು ಐಎಎಸ್ ಆಫೀಸರ್ ಆಗ್ಬಿಟ್ಟೆ” ಅಂತ!!! ಇಂಥ ಸುದ್ದಿ ಕೇಳಿದಾಗ ಯಾವ ತಂದೆಗೆ ಖುಷಿಯಾಗಲ್ಲ ಹೇಳಿ? ಹೂಡಾರವರು ಎಂದೂ ಕಾಣದ ಕನಸು ನನಸಾಗಿತ್ತು. ಬೇರೆ ಮಾತೇ ಹೊರಡಲಿಲ್ಲ, ಶಭಾಷ್ ಬೇಟಾ ಎಂದಷ್ಟೆ ಹೇಳಿದರು.

ವಾಸ್ತವದಲ್ಲಿ ಪ್ರೀತಿಗೂ ಕೂಡ ತಾನು ಐಎಎಸ್ ಅಧಿಕಾರಿ ಆಗ್ತಿನಿ ಅಂತ ಕನ್ಫರ್ಮ್ ಇರಲಿಲ್ಲ. ಇಂಟ್ರಮೀಡಿಯೇಟ್ ವರೆಗೂ ಪ್ರೀತಿಗೂ ಐಎಎಸ್ ಮಾಡುವ ಕುರಿತು ಆಲೋಚನೆ ಸಹ ಇರಲಿಲ್ಲ. ಪದವಿ ಪಡೆಯುವಾಗ ಅಲ್ಪ ಸ್ವಲ್ಪ ಆ ಬಗ್ಗೆ ಆಸೆ ಮೂಡಿತು. ನಂತರ ಜೆ.ಎನ್.ಯು ಸೇರಿದ ಮೇಲೆ ಅವರ ಆಸೆಗೆ ಗರಿ ಮೂಡಿದವು.

ರಾಷ್ಟ್ರಮಟ್ಟದಲ್ಲಿ ಜೆ.ಎನ್.ಯು ಗೆ ಅಂಥ ಒಳ್ಳೆ ಹೆಸರೇನಿಲ್ಲ, ಅದಕ್ಕೆ ಕಾರಣ ಅಲ್ಲಿ ಸೇರಿಕೊಂಡ ಕೆಲವು ಹುಳಗಳು ಮಾಡಿದ ಕುತಂತ್ರದಿಂದಾಗಿ ಅದಕ್ಕೆ ಕೆಟ್ಟ ಹೆಸರು ಬಂದಿದ್ದು ಸುಳ್ಳಲ್ಲ, ಆದರೆ ಪ್ರೀತಿಯವರ ಪ್ರಕಾರ ಜೆ.ಎನ್.ಯು ಐಎಎಸ್ ಮಾಡುವವರಿಗೆ ಹೇಳಿ ಮಾಡಿಸಿದ ಕ್ಯಾಂಪಸ್ ಅಂತೆ.

ಜೆ.ಎನ್.ಯು ವಿದ್ಯಾರ್ಥಿಗಳ ಜೀವನಾಡಿಯಂತಿದೆ, ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲದವರು ಇಲ್ಲಿ ಶಿಕ್ಷಣ ಮತ್ತು ಬರವಣಿಗೆ ಮಾಡಲು ಇದು ಒಳ್ಳೆಯ ಸ್ಥಳ, ಬಹಳ ಅದ್ಭುತವಾದ ವಾತಾವರಣ ಇದೆ, ಇಲ್ಲಿ ಅದ್ಯಯನ ಮಾಡುವಾಗ ಒಂದು ವಿಶಿಷ್ಟ ಪಾಸಿಟಿವ್ ಎನರ್ಜಿ ಬರುತ್ತದೆ ಎನ್ನುತ್ತಾರೆ ಪ್ರೀತಿ, ಅಲ್ಲಿಂದಲೇ ಅವರು ಐಎಎಸ್ ಮೆಟ್ಟಿಲು ಏರಿದ್ದು.

ಪ್ರೀತಿ ಹೂಡಾ ತಮ್ಮ UPSC ಪರೀಕ್ಷೆಯಲ್ಲಿ 288 ನೆ ರ್ಯಾಂಕ್ ಗಳಿಸಿದರು. ಈ ವಿಷಯ ಗೊತ್ತಾದಾಗಲೇ ಅವರು ತಮ್ಮ ತಂದೆಗೆ ಕರೆ ಮಾಡಿದ್ದು. ಆಗ ಬಸ್ ಓಡಿಸುತ್ತಿದ್ದ ಅವರು “ಶಭಾಷ್ ಬೇಟಾ…” ಎಂದಿದ್ದರು. ಪ್ರೀತಿ ಹೂಡಾರವರ ಓದು-ಅದ್ಯಯನ ಇತರ ಹುಡುಗಿಯರಿಗೆ ಮಾದರಿಯಾಗಲಿ.
-Team Infotrend