Ind Vs Aus – “ಮಗು ಜನಿಸುವ ಸಂದರ್ಭದಲ್ಲಿ ಹೆಂಡತಿಯೊಂದಿಗೆ ಇರಲು ಬಯಸುತ್ತೇನೆ” – ವಿರಾಟ್ ಕೊಹ್ಲಿ
ಲಾಕ್ ಡೌನ್ ನ ಪ್ರದೀರ್ಘ ಸಮಯದ ನಂತರ ಭಾರತ ತನ್ನ ಮೊದಲ ಅಂತರಾಷ್ಟ್ರೀಯ ಸರಣಿಯನ್ನು ಆಡಲು ವಿರಾಟ್ ಕೊಹ್ಲಿಯ ನೇತೃತ್ವದಲ್ಲಿ ಆಸ್ಟ್ರೇಲಿಯಾಗೆ ತೆರಳಿದೆ. ಭಾರತೀಯ ತಂಡವು ಐಪಿಎಲ್ ಮುಗಿಸಿಕೊಂಡು ದುಬೈಯಿಂದ ನೇರ ಆಸ್ಟ್ರೇಲಿಯಾ ತಲುಪಿದೆ. ಸದ್ಯ ಏಕದಿನ ಸರಣಿಯ ಮೊದಲ ಪಂದ್ಯ ಇಂದಿನಿಂದ ಪ್ರಾರಂಭವಾಗಿದೆ. ಇದಾದನಂತರ ಟಿ20 ಪಂದ್ಯಗಳು ಆಮೇಲೆ ಕೊನೆಯದಾಗಿ ಟೆಸ್ಟ್ ಸರಣಿ ಪ್ರಾರಂಭವಾಗಲಿದೆ.
ಆದರೆ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಅವರು ನಂತರದ ಮೂರು ಪಂದ್ಯಗಳಲ್ಲಿ ಭಾಗವಹಿಸುತ್ತಿಲ್ಲ. ವಿರಾಟ್ ಅವರು ಮೊದಲ ಟೆಸ್ಟ್ ಪಂದ್ಯ ಆಡಿದ ನಂತರ ಭಾರತಕ್ಕೆ ಮರಳಲಿದ್ದಾರೆ. ಹೀಗಾಗಿ ಭಾರತವು ಟೆಸ್ಟ್ ಸರಣಿ ವಿರಾಟ್ ಕೊಹ್ಲಿ ಅವರಿಲ್ಲದೆ ಆಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ವಿರಾಟ್ ಅವರು ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ ತಮ್ಮ ಮನದಿಂಗಿತವನ್ನು ಹೇಳಿದ್ದಾರೆ. ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಅವರ ಡೆಲೆವರಿ ಸಮೀಪಿಸುತ್ತಿರುವುದರಿಂದ ಅನುಷ್ಕಾಳ ಜೊತೆಗೆ ತಾವಿರುವುದು ತುಂಬಾ ಮುಖ್ಯವೆಂದು ತಿಳಿದು ಬಿಸಿಸಿಐಗೆ ರಜೆಗಾಗಿ ವಿನಂತಿಸಿದ್ದರು. ಬಿಸಿಸಿಐ ವಿರಾಟ್ ಅವರು ವಿನಂತಿಸಿದ ರಜೆಗೆ ಮಂಜೂರಿಯನ್ನು ನೀಡಿದ್ದಾರೆ. ಆಯ್ಕೆಸಮಿತಿಯ ಮೀಟಿಂಗ್ ನಡೆಯುವ ಮುನ್ನವೇ ನಾನು ನನ್ನ ನಿರ್ಣಯದ ಬಗ್ಗೆ ಬಿಸಿಸಿಐಗೆ ತಿಳಿಸಿದ್ದೆ. ಆ ಪ್ರಕಾರ ನನಗೆ ಈಗ ಬಿಸಿಸಿಐಯಿಂದ ಮಂಜೂರಿ ದೊರಕಿದೆ ಎಂದು ವಿರಾಟ್ ಅವರು ಉಚ್ಚರಿಸಿದ್ದಾರೆ.
ತಮಗಾಗುತ್ತಿರುವ ಮೊದಲ ಮಗುವಿನ ಜನ್ಮದ ಸಂದರ್ಭದಲ್ಲಿ ತಾವು ಪತ್ನಿಯ ಹತ್ತಿರ ಇರುವುದು ತುಂಬಾ ಅವಶ್ಯಕವಾಗಿದೆ ಎಂದು ಹೇಳುತ್ತಾರೆ.

ಈ ಕ್ಷಣಗಳು ನನ್ನ ಸಲುವಾಗಿ ತುಂಬಾ ವಿಶೇಷವಾಗಿವೆ. ನನ್ನ ಮನಸ್ಸಿಗೆ ಮುದ ನೀಡುವ ಆನಂದದ ಕ್ಷಣಗಳಾಗಿವೆ. ತಂದೆಯಾಗಿ ಮಗುವಿನ ಬರುವಿಕೆಯ ಸಂದರ್ಭದ ಆನಂದದ ಕ್ಷಣಗಳನ್ನು ಕಳೆದುಕೊಳ್ಳಲು ನನಗೆ ಇಷ್ಟವಿಲ್ಲ. ಆದ್ದರಿಂದ ನಾನು ಮೊದಲ ಟೆಸ್ಟ್ ಪಂದ್ಯವಾಡಿದ ನಂತರ ಭಾರತಕ್ಕೆ ಮರಳುವ ನಿರ್ಣಯವನ್ನು ತೆಗೆದುಕೊಂಡಿದ್ದೇನೆಂದು ವಿರಾಟ್ ಅವರು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ.