ಭಾರತ-ಶ್ರೀಲಂಕಾ ಸರಣಿಯ ಮೊದಲು ಕೆಲವು ಆಟಗಾರರ ನಿವೃತ್ತಿ ಹೊಂದುವ ಬೆದರಿಕೆ! : ಎಲ್ಲ ಸರಿಯಾಗುತ್ತೆ ಅನ್ನುತ್ತೆ ಮಂಡಳಿ

ಈ ವರ್ಷದ ಜುಲೈನಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ಏಕದಿನ ಮತ್ತು ಟಿ 20 ಪಂದ್ಯಗಳ ಸರಣಿಯನ್ನು ನಡೆಸಲಾಗುತ್ತದೆ. ಆದರೆ ಹೆಚ್ಚುತ್ತಿರುವ ಕರೋನಾ ವೈರಸ್ ಪ್ರಕರಣಗಳ ಕಾರಣದಿಂದ ಈ ಸರಣಿಯು ನಡೆಯಬಹುದೇ ಅಥವಾ ಇಲ್ಲವೇ ಎಂಬ ಪ್ರಶ್ನೆ ಇದೆ. ಈ ಮಧ್ಯೆ ಮಂಡಳಿಯೊಂದಿಗಿನ ಕ್ರಿಕೆಟಿಗರ ಉದ್ವಿಗ್ನತೆ ಸರಣಿಯ ಮುಂಚೆಯೇ ಹೆಚ್ಚಾಗುತ್ತಿದೆ. ಕೆಲವು ಆಟಗಾರರ ನಿವೃತ್ತಿ ಹೊಂದುವ ಬೆದರಿಕೆ ಕೂಡ ಹಾಕಿದ್ದಾರೆ.

ಮಂಡಳಿಯ ಹೊಸ ಅಂಕ ಆಧಾರಿತ ಶ್ರೇಣೀಕರಣ ವ್ಯವಸ್ಥೆಯು ಶ್ರೀಲಂಕಾದ ಕ್ರಿಕೆಟ್ ತಂಡದ ಆಟಗಾರರನ್ನು ನಿರಾಸೆಗೊಳಿಸಿದೆ. ತಮ್ಮ ದೇಶದ ಮಂಡಳಿಗೆ ಅಕಾಲಿಕವಾಗಿ ನಿವೃತ್ತಿ ಹೊಂದುವುದಾಗಿ ಬೆದರಿಕೆ ಹಾಕಿದ್ದಾರೆ. ಬೆದರಿಕೆಗೆ ಕಾರಣ ಶ್ರೀಲಂಕಾ ಕ್ರಿಕೇಟ್ ಮಂಡಳಿಯ ಮಾಡಿರುವ ಗ್ರೇಡಿಂಗ್ ಸಿಸ್ಟಂ ಜಾರಿಯಾದರೆ ಕ್ರಿಕೆಟಿಗರ ವಾರ್ಷಿಕ ಗಳಿಕೆಗೆ ಏಟು ಬೀಳಲಿದೆ.

ಈ ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕಗೊಳಿಸಬೇಕು ಮತ್ತು ಅವರಿಗೆ ದರ್ಜೆಯ ಆಧಾರದ ಮೇಲೆ ಹೇಗೆ ಅಂಕಗಳನ್ನು ನೀಡಲಾಗುವುದು ಎಂದು ತಿಳಿಸಬೇಕು ಎಂದು ಶ್ರೀಲಂಕಾದ ಕ್ರಿಕೆಟಿಗರು ಒತ್ತಾಯಿಸಿದ್ದಾರೆ. ಏಕೆಂದರೆ ಅದು ಅವರ ಗಳಿಕೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಹೊಸ ವ್ಯವಸ್ಥೆಯಡಿಯಲ್ಲಿ ಆಟಗಾರರನ್ನು ನಾಲ್ಕು ವಿಭಿನ್ನ ಗುಂಪುಗಳಾಗಿ ವಿಂಗಡಿಸಲಾಗಿದೆ.

ಈ ಗುಂಪುಗಳಲ್ಲಿ, ಅವರ ಫಿಟ್‌ ನೆಸ್ ಮಟ್ಟ, ಶಿಸ್ತು, ನಾಯಕತ್ವದ ಸಾಮರ್ಥ್ಯ, ತಂಡಕ್ಕೆ ಅವರು ಒಟ್ಟು ಕೊಡುಗೆ ಮತ್ತು ಕಳೆದ ಎರಡು ವರ್ಷಗಳಲ್ಲಿ ಅಂತರರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್‌ನಲ್ಲಿ ಅವರ ಸಾಧನೆ ಆಧರಿಸಿ ಅಂಕಗಳನ್ನು ನೀಡಲಾಗುವುದು. ಇದಕ್ಕಾಗಿ ಆಟಗಾರರು ಈ ಅಂಕಗಳನ್ನು ಹೇಗೆ ಹಂಚಲಾಗುತ್ತದೆ ಎಂಬುದನ್ನು ಮಂಡಳಿಯು ಬಹಿರಂಗಪಡಿಸಬೇಕೆಂದು ಬಯಸುತ್ತಾರೆ.

ಇದರಿಂದಾಗಿ ಅವರು ಇಡೀ ಪ್ರಕ್ರಿಯೆಯನ್ನು ಹೆಚ್ಚು ನಿಕಟವಾಗಿ ಅರ್ಥಮಾಡಿಕೊಳ್ಳಬಹುದು ಮತ್ತು ಅದರ ನ್ಯೂನತೆಗಳನ್ನು ಸುಧಾರಿಸಬಹುದು. ಆದರೆ ಮಂಡಳಿ ವಿವರ ನೀಡಿಲ್ಲ. ಹೀಗಾಗಿ ಆಟಗಾರರು ನಿವೃತ್ತಿಯಾಗುವುದಾಗಿ ಬೆದರಿಕೆ ಹಾಕಿದ್ದಾರೆ. ಬೆದರಿಕೆ ಹಾಕಿದ ಈ ಆಟಗಾರರ ಹೆಸರುಗಳು ಇನ್ನೂ ಬಹಿರಂಗಗೊಂಡಿಲ್ಲ.

ಪ್ರತಿ ಆಟಗಾರ ವೈಯಕ್ತಿಕವಾಗಿ ಅಂಕಗಳನ್ನು ಹಂಚುವ ಪ್ರಕ್ರಿಯೆಯ ಭಾಗವಾಗಬೇಕೆಂಬುದು ಕೂಡ ಬೇಡಿಕೆಯಾಗಿದೆ. ಇದು ಪಾರದರ್ಶಕತೆ, ಒಗ್ಗಟ್ಟು ಮತ್ತು ಸಾಮರಸ್ಯವನ್ನು ತರುತ್ತದೆ. ಈ ಸಂದರ್ಭದಲ್ಲಿ ಎಲ್ಲಾ ಆಟಗಾರರು ಒಂದಾಗುತ್ತಾರೆ ಎಂದು ಶ್ರೀಲಂಕಾ ಕ್ರಿಕೇಟ್ ಆಟಗಾರರ ಪ್ರತಿನಿಧಿ ಹೇಳಿದ್ದಾರೆ.

ಆದರೆ ಶ್ರೀಲಂಕಾ ಕ್ರಿಕೆಟ್ ನಿರ್ವಹಣಾ ಸಮಿತಿಯ ಸದಸ್ಯ ಆಶ್ಲೇ ಡಿಸಿಲ್ವಾ, ಆಟಗಾರರ ಬೇಡಿಕೆಗೆ ಅನುಗುಣವಾಗಿ ಒಪ್ಪಂದಕ್ಕೆ ತಿದ್ದುಪಡಿ ಮಾಡಲಾಗಿದೆ ಎಂದು ಹೇಳಿದ್ದಾರೆ. ಒಪ್ಪಂದವನ್ನು ಅಂತಿಮಗೊಳಿಸಿದ ನಂತರ ನಾವು ಈಗ ಹಿರಿಯ ಆಟಗಾರರೊಂದಿಗೆ ಹಂಚಿಕೊಳ್ಳುವ ಪ್ರಕ್ರಿಯೆಯಲ್ಲಿದ್ದೇವೆ.

ಈ ಒಪ್ಪಂದಕ್ಕೆ ಸಹಿ ಮಾಡುವುದಿಲ್ಲ ಎಂದು ಇಲ್ಲಿಯವರೆಗೆ ಯಾವುದೇ ಆಟಗಾರ ಹೇಳಿಲ್ಲ ಎಂದಿದ್ದಾರೆ. ಇರುವ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಮಂಡಳಿ ಭರವಸೆಯಿಂದಿದೆ. ಒಟ್ಟಾರೆಯಾಗಿ ಶ್ರೀಲಂಕಾ ಕ್ರಿಕೇಟ್ ತಂಡದಲ್ಲಿ ಎಲ್ಲವೂ ಸರಿ ಇಲ್ಲ.
-Team Infotrend