VIDEO : 8 ತಿಂಗಳ ನಂತರ ಕೊಲ್ಲಾಪುರ ಶ್ರೀ ಮಹಾಲಕ್ಷ್ಮಿ ದೇವಸ್ಥಾನವನ್ನು ತೆರೆದು ಮಹಾಮಾರಿ ವಿರುದ್ಧ ಸೆಣೆಸಿದ ಕೊರೋನ ವಾರಿಯರ್ಸ್ ಗೆ ಮಾತ್ರ ದರ್ಶನ ಕಲ್ಪಿಸಿದ ವಿಡಿಯೊ

ಕೊರೋನ ಹೊಡೆತಕ್ಕೆ ಬರೀ ಸಾರ್ವಜನಿಕರ ಅಂಗಡಿ ಮುಂಗಟ್ಟು ಮಾತ್ರವಲ್ಲ, ದೇವಸ್ಥಾನಗಳೂ, ಮಸೀದಿ, ಚರ್ಚ್ ಗಳೂ ಕೂಡ ಬಂದ್ ಆಗಿದ್ದವು. ದೇಶಾದ್ಯಂತ ಬಹುತೇಕ ಎಲ್ಲ ದೇವಸ್ಥಾನಗಳನ್ನು ಈ ಸಂಕಷ್ಟದ ಸಮಯದಲ್ಲಿ ಕಂಪ್ಲೀಟ್ ಮುಚ್ಚಲಾಗಿತ್ತು. ಒಂದನೇ ಅಲೆಯಲ್ಲಿ ಮುಂಜಾಗೃತೆಗಾಗಿ ಬಂದ್ ಮಾಡಿದರೆ, ಎರಡನೇ ಅಲೆಯಲ್ಲಿ ಅನಿವಾರ್ಯವಾಗಿ ಎಲ್ಲವೂ ಬಂದ್ ಆದವು. ಈಗ ಹಲವು ತಿಂಗಳ ನಂತರ ಕೊಲ್ಲಾಪುರದ ಶ್ರೀ ಮಹಾಲಕ್ಷ್ಮಿ ದೇವಸ್ಥಾನವನ್ನು ವಿಶೇಷ ಭಕ್ತರಿಗಾಗಿ ತೆರೆಯಲಾಯಿತು. ಆ ವಿಡಿಯೊ ಇಲ್ಲಿದೆ.

ಕರೋನಾ  ಮಹಾಮಾರಿಯ ವಿರುದ್ಧ  ಸೆಣೆಸಿದ ನಗರಸಭೆ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸರು, ಸೈನಿಕರು, ಹಾಗೂ  ಇತರ ಇಲಾಖೆಯ ಸಿಬ್ಬಂದಿ ಮತ್ತು  ಸ್ವಯಂ ಸೇವಕರಿಗೆ ಮಾತ್ರ ಭರ್ತಿ ಎಂಟು ತಿಂಗಳ ನಂತರ ಕೊಲ್ಹಾಪುರ ಶ್ರೀ ಮಹಾಲಕ್ಷ್ಮೀ ದೇವಾಲಯದ ಮೊದಲ ದರ್ಶನ ಮಾಡುವ ಯೋಗ ಲಭಿಸಿತು. ಆ ವಿಹಂಗಮ ನೋಟ ಇಲ್ಲಿದೆ.

ಈ ಭವ್ಯ ದೇವಾಲಯವು ತಾಯಿ ಮಹಾಲಕ್ಷ್ಮಿ ದೇವತೆಗೆ ಮುಡುಪಾಗಿದೆ. ನಮ್ಮ ದೇಶದಲ್ಲಿ ಸಂಪತ್ತು ಮತ್ತು ಐಶ್ವರ್ಯದ ಸಂಕೇತವಾಗಿ ಮಹಾಲಕ್ಷ್ಮಿಯನ್ನು ಆರಾಧಿಸಲಾಗುತ್ತದೆ. ಕೊಲ್ಲಾಪುರದ ಈ ತಾಯಿಯ ಸನ್ನಿದಿ ಪ್ರಾಚೀನ, ಪುರಾತನ ದೇವಾಲಯವಾಗಿದ್ದು ಕೊಲ್ಹಾಪುರ ನಗರದ ಹೃದಯ ಭಾಗದಲ್ಲಿಯೇ ಇದೆ. ಅಚ್ಚರಿಯೆಂದರೆ, ಈ ದೇವಸ್ಥಾನದ ಬಗ್ಗೆ ಪುರಾಣದಲ್ಲೂ ಸಹ ಉಲ್ಲೇಖಿಸಲಾಗಿದೆ.

ನಮ್ಮ 108 ಶಕ್ತಿಪೀಠಗಳಲ್ಲಿ ಕೊಲ್ಲಾಪುರ ಮಹಾಲಕ್ಷ್ಮಿಯ ಈ ಪೀಠ ಕೂಡ ಒಂದಾಗಿದೆ. ಪ್ರತಿ ವರ್ಷ ತಾಯಿಯ ಆಶೀರ್ವಾದ ಪಡೆಯಲು ಲಕ್ಷಾಂತರ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಅಂಬಾ ಬಾಯಿ ಎಂದು ಕೂಡ ಸ್ಥಳಿಯರಿಂದ ಕರೆಯಲ್ಪಡುವ ಈ ಮಹಾಲಕ್ಷ್ಮಿ ದೇವಸ್ಥಾನದಿಂದಾಗಿ ಕೊಲ್ಹಾಪುರವು ಭಾರತದಲ್ಲಿನ ಕೆಲವೇ ಅತ್ಯುನ್ನತ ಆಧ್ಯಾತ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ.

ಇದು 7 ನೇ ಶತಮಾನದ ದೇವಾಲಯವಾಗಿದ್ದು ಚಾಳುಕ್ಯ ವಂಶದ ಕರಣದೇವ್ ಎಂಬ ರಾಜ ನಿರ್ಮಿಸಿದ್ದಾನೆ. ನಂತರ ಎಂಟನೇ ಶತಮಾನದಲ್ಲಿ ಯಾದವರು ಈ ದೇವಾಲಯವನ್ನು ಮತ್ತಷ್ಟು ಸುಂದರವಾಘಿಸಿದರು. ಅಚ್ಚರಿಯ ಸಂಗತಿಯೆಂದರೆ, ಪ್ರತಿದಿನ ಸೂರ್ಯನ ಕಿರಣಗಳು ದೇವಿಯ ಮೂರ್ತಿಯ ಮೇಲೆ ಬಿದ್ದು ಹೊಳೆಯುವ ಹಾಗೆ ದೇವಾಲಯದ ನಿರ್ಮಾಣ ಮಾಡಲಾಗಿದೆ!

ಹಬ್ಬ ಹರಿದಿನಗಳಲ್ಲಿ, ಅದರಲ್ಲೂ ನವರಾತ್ರಿಯಂಥ ಸಮಯದಲ್ಲಿ ಇಲ್ಲಿ ಭಕ್ತರ ದಂಡೇ ಸೇರುತ್ತದೆ. ಸ್ಥಳೀಯ ಭಕ್ತರಲ್ಲದೇ ದೇಶದ ವಿವಿಧ ಭಾಗಗಳಿಂದ ಭಕ್ತಸಾಗರ ಕೊಲ್ಲಾಪುರದ ಕಡೆ ಹರಿದುಬರುತ್ತದೆ. ತಾಯಿ ಅಂಬಾ ದೇವಿಯ ದರ್ಶನ ಪಡೆಯಲು ಜನ ಕಾತುರರಾಗಿರುತ್ತಾರೆ. ಆಗ ದೇವಸ್ಥಾನವು ಅಲಂಕೃತಗೊಂಡು ಸಂಭ್ರಮದ ವಾತಾವರಣ ಇರುತ್ತದೆ.

ಪ್ರಸ್ತುತ ಕೋರೋನ ಮಹಾಮಾರಿಯ ಹೊಡೆತದಿಂದ, ಅದರಲ್ಲೂ ಎರಡನೇ ಅಲೆಯ ಏಟಿನಿಂದ ನಮ್ಮ ದೇಶ ಬೇಗ ಚೇತರಿಸಿಕೊಳ್ಳುವಂತಾಗಲಿ, ತಾಯಿ ಮಹಾಲಕ್ಷ್ಮಿ ನಮ್ಮೆಲ್ಲರಿಗೆ ಒಳ್ಳೆಯ ಆರೋಗ್ಯ ಐಶ್ವರ್ಯ ನೀಡುವಂತಾಗಲಿ. ತಾಯಿ ಕೊರೋನ ವಾರಿಯರ್ಸ್ ಗೆ ನೀಡಿದ ದರ್ಶನದ ವಿಡಿಯೊ ಮೇಲಿದೆ, ನೋಡಿ…