VIDEO : ಕೋವಿಡ್ ಸೋಂಕಿತರಿಗೆ ತಾವೇ ಆಹಾರ ತಯಾರಿಸುತ್ತಿರುವ ಕೊಪ್ಪಳ ಗವಿಮಠದ ಸ್ವಾಮಿಜೀ ವಿಡಿಯೊ

ಇದು ಕೊಪ್ಪಳ ಅಥವಾ ಉತ್ತರ ಕರ್ನಾಟಕ ಭಾಗದವರಿಗೆ ಹೊಸದೇನಲ್ಲ, ಸ್ವಾಮಿಜೀ ಯಾವತ್ತೂ ಪೀಠಕ್ಕಂಟಿಕೊಂಡು ಕೂತವರಲ್ಲ, ಸದಾಕಾಲ ಚಟುವಟಿಕೆಯಿಂದಿರುವ ಅವರು ಹೇಳಿ ಮಾಡಿಸುವುದಕ್ಕಿಂತ ಮಾಡಿ ತೋರಿಸುತ್ತಾರೆ. ಈ ಕೋರೋನ ಬಂದಾದ ಮೇಲೆ ಅವರು ಮಾಡಿರುವ ಕೆಲಸಗಳನ್ನು ಹೇಳಲೆಂದೇ ಒಂದು ಸಪರೇಟ್ ಲೇಖನ ಬರೆಯಬೇಕು. ಕೊರೋನ ಬರುವ ಮೊದಲಾದರೂ ಅವರೂ ಹೀಗೇ, ಮಠದ ಸ್ವಚ್ಚತಾ ಕಾರ್ಯದಿಂದ ಹಿಡಿದು ವಿದ್ಯಾಸಂಸ್ಥೆಗಳ ಮಕ್ಕಳಿಗೆ ಪಾಠ ಮಾಡುವವರೆಗೆ ಏನಾದರೊಂದು ಮಾಡುತ್ತಲೇ ಇರುತ್ತಾರೆ‌.

ಬಹುಶಃ ಶಿರಸಿ ಜಾತ್ರೆ ಬಿಟ್ಟರೆ ಕೊಪ್ಪಳದ ಗವಿ ಮಠದ ಜಾತ್ರೆ ಎರಡನೇ ಅತಿದೊಡ್ಡ ಜಾತ್ರೆ. ದೊಡ್ಡ ಮಠ, ಸಾಕಷ್ಟು ವಿದ್ಯಾಸಂಸ್ಥೆ, ದಿನನಿತ್ಯ ಸಾವಿರಾರು ಜನರಿಗೆ ಅನ್ನದಾಸೋಹ… ಹೀಗೆ ಇದ್ದರೂ ಸ್ವಾಮಿಗಳು ಒಂದು ದಿನವೂ ಅಧಿಕಾರಯುತವಾಗಿ ನಡೆದುಕೊಂಡವರಲ್ಲ. ಯಾವಾಗಲೂ ಜನರ ಜೊತೆ ಬೆರೆಯುತ್ತಾ, ಅದರಲ್ಲೂ ಬಡವರ – ಮಕ್ಕಳ ಜೊತೆ ಬೆರೆಯುತ್ತಾ ತಾವು ಲವಲವಿಕೆಯಿಂದ ಇರುವುದಲ್ಲದೇ ಇಡೀ ಭಕ್ತವೃಂದಕ್ಕೆ ಲವಲವಿಕೆ ಹಂಚುತ್ತಿದ್ದವರು.

2002 ರ ಡಿಸೆಂಬರ್ 13 ರಂದು ಶ್ರೀ ಮಠದ 18 ನೇ ಪೀಠಾಧಿಪತಿಗಳಾದ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಮೂಲತಃ ಕಲಬುರಗಿ ಜಿಲ್ಲೆಯ ಹಾಗರಗುಂಡಿ ಗ್ರಾಮದವರು. ಮಠದ ವಿದ್ಯಾಸಂಸ್ಥೆಯಲ್ಲಿ ಓದಲು ಬಂದಿದ್ದ ಪರ್ವತಯ್ಯ ಎಂಬ ಹುಡುಗನೇ ಮುಂದೆ ಮಠದ 18 ನೇ ಪೀಠಾಧಿಪತಿಯಾದರು.

ಅವರು ಪೀಠಾಧಿಪತಿಯಾದ ಮೇಲೆ ಮಠದ ದಿಕ್ಕೇ ಬದಲಾಯಿತು, ಸಾಂಪ್ರಾದಾಯಿಕ ಜಾತ್ರೆಗಳು ಹೋಗಿ ಅರ್ಥಗರ್ಭಿತ ಆಚರಣೆಗಳಾಗತೊಡಗಿದವು, ಬಾಲ್ಯವಿವಾಹ ತಡೆಯಿಂದ ಹಿಡಿದು ರಕ್ತದಾನ ಶಿಬಿರದವರೆಗೆ ಸಾಕಷ್ಟು ಕ್ರಾಂತಿಕಾರಿ ಕೆಲಸಗಳು ಮಠದಿಂದ ಆಗತೊಡಗಿದವು.

ಅವರ ಚಿಂತನೆ ಹೇಗೆ ಸಮಾಜಮುಖಿಯಾಗಿರುತ್ತಿದ್ದವು ಎಂಬುದಕ್ಕೆ ಚಿಕ್ಕ ಉದಾಹರಣೆಯೆಂದರೆ, ಮಠದ ಮುಂದೆ ಒಂದು 108 ಅಡಿಯ ಗೋಪುರ ನಿರ್ಮಿಸುವ ನಿರ್ಧಾರವಾಗಿತ್ತು, ಆದರೆ ಒಮ್ಮೆ ಗದಗಿನಿಂದ ಬರುವಾಗ ಕೊಪ್ಪಳ ಹತ್ತಿರದ ಹಿರೆಹಳ್ಳ ಸಂಪೂರ್ಣ ವಿನಾಶದ ಅಂಚು ತಲುಪಿರುವುದನ್ನು ನೋಡಿದರು.

ಆಗ ಗೋಪುರದ ಬದಲು ಹಿರೆಹಳ್ಳ ಪುನಶ್ಚೇತನಗೊಳಿಸಲು ನಿರ್ಧರಿಸಿದರು. ಮುಂದೆ ಒಂದೇ ವರ್ಷದಲ್ಲಿ ಕೋಟ್ಯಾಂತರ ರೂ ಖರ್ಚು ಮಾಡಿ 26 ಕಿ.ಮೀ ವರೆಗೆ ಹಿರೆಹಳ್ಳವನ್ನು ಜೀರ್ಣೋದ್ಧಾರ ಮಾಡಲಾಯಿತು. ಇದರಿಂದ ಸುಮಾರು 30 ಕ್ಕೂ ಹೆಚ್ಚು ಹಳ್ಳಿಗಳ ನೀರಿನ ಸಮಸ್ಯೆ ನಿವಾರಣೆಯಾಯಿತು. ಅಂತರ್ಜಲ ಮಟ್ಟ ಗಣನೀಯವಾಗಿ ಹೆಚ್ಚಾಯಿತು.

ಈ ಕೊರೋನ ಸಮಯದಲ್ಲೂ ಅಷ್ಟೇ, ಮಠದಿಂದ ಸಾಧ್ಯವಾದಷ್ಟು ಸೋಂಕಿತರಿಗೆ ನೆರವು ನೀಡಲಾಗುತ್ತಿದೆ. ಈಗಾಗಲೇ ಗವಿಮಠ 100 ಬೆಡ್ ಗಳ ಕೋವಿಡ್ ಆಸ್ಪತ್ರೆ ಮತ್ತು 200 ಬೆಡ್ ಗಳ ಕೋವಿಡ್ ಕೇರ್ ಸೆಂಟರ್ ಸ್ಥಾಪನೆ ಮಾಡಲಾಗಿದೆ. ಇದೀಗ ಗವಿಮಠದ ದಾಸೋಹ ಮಂಟಪದಲ್ಲಿ ಅಡುಗೆ ತಯಾರಿಸಿ ಪ್ಯಾಕ್ ಮಾಡಿ ಕೊರೋನ ಸೋಂಕಿತರಿಗೆ ಹಾಗೂ ಅವರ ಸಂಬಂಧಿಕರಿಗೆ ವಿತರಿಸಲಾಗುತ್ತಿದೆ.

ಬೆಳಿಗ್ಗೆ ನಾಷ್ಟಾ, ಮದ್ಯಾನ ಊಟ, ರಾತ್ರಿ ಊಟ ಕೊಡಲಾಗುತ್ತಿದೆ, ಪ್ರತಿದಿನ ಆಹಾರದ ಮೆನು ಬದಲಾಯಿಸಲಾಗುವುದಲ್ಲದೇ ಕಷಾಯ, ಹಣ್ಣು ಕೂಡ ಸೋಂಕಿತರಿಗೆ ವಿತರಿಸಲಾಗುತ್ತಿದೆ. ಸ್ವತಃ ಸ್ವಾಮಿಜಿಗಳೇ ಮುಂದೆ ನಿಂತು ಇವೆಲ್ಲ ಕೆಲಸ ಮಾಡಿಸುತ್ತಾರಲ್ಲದೇ ತಾವೂ ಕೈಗೂಡಿ ಭಕ್ತರಲ್ಲಿ ಉತ್ಸಾಹ ತುಂಬುತ್ತಾರೆ.

ಕೊರೋನ ಸೋಂಕಿತರ ವಾರ್ಡಿಗೆ ಹೋಗಿ, ಪ್ರತಿದಿನ ಪ್ರವಚನದ ಮೂಲಕ ಆತ್ಮಸ್ಥೈರ್ಯ ತುಂಬುವುದರಿಂದ ಹಿಡಿದು, ಅಡುಗೆ ಮಾಡುವಾಗ ಚಪಾತಿ ಲಟ್ಟಿಸಲೂ ತಾವೇ ಮುಂದಾಗುತ್ತಾರೆ. ಅಂಥದೊಂದು ಚಿಕ್ಕ ವಿಡಿಯೊ ಮೇಲಿದೆ. ಇಲ್ಲಿ ವಿಡಿಯೊಕ್ಕಿಂತ ಸ್ವಾಮೀಜಿಗಳ ಬಗ್ಗೆ ಹೇಳುವುದು ಮುಖ್ಯವಾಗಿತ್ತು.
-Team Infotrend