VIDEO : ಕೆ.ಆರ್.ಎಸ್ ನಲ್ಲಿರುವ ಆ ಸುರಂಗದ ಬಗ್ಗೆ ನಿಮಗೆಷ್ಟು ಗೊತ್ತು? ಆಸಕ್ತಿಕರ ಮಾಹಿತಿಗಾಗಿ ವಿಡಿಯೊ ನೋಡಿ

ಕೆ.ಆರ್.ಎಸ್ ಆಣೆಕಟ್ಟಿನ ಬಗ್ಗೆ ಹೆಚ್ಚು ಹೇಳುವ ಅಗತ್ಯ ಇಲ್ಲವನಿಸುತ್ತೆ. ಜೀವನದಿ ಕಾವೇರಿಗೆ ಕಟ್ಟಿರುವ ಜೀವನಾಡಿಯೇ ಈ ಆಣೆಕಟ್ಟು. ಜೀವನದಿ ಕಾವೇರಿ ಕನ್ನಡಿಗರಿಗೆ ಅದು ಹೇಗೆ ಅಕ್ಷರಶಃ ಜೀವನದಿ ಆಗಿದೆಯೋ ಅದೇ ರೀತಿ ಈ ಆಣೆಕಟ್ಟು ಕೂಡ ಜೀವನಾಡಿಯಂತೆ ಅನೇಕ ನೂರಾರು ಊರುಗಳ ಸಾವಿರಾರು ಕುಟುಂಬದ ಲಕ್ಷಾಂತರ ಜನರನ್ನು ಪೋಷಿಸುತ್ತಿದೆ.

ಬೆಂಗಾಡಾಗಿದ್ದ ಮಂಡ್ಯ ಜಿಲ್ಲೆಯ ಹಿಡುವಳಿ ಜಮೀನಿಗೆ ನೀರುಣಿಸುವುದು, ಮೈಸೂರು ಸಿಟಿಗೆ ಕುಡಿಯುವ ನೀರು ಪೊರೈಸುವುದು, ಜೊತೆಗೆ ಶಿವನಸಮುದ್ರ ವಿದ್ಯುತ್ ಉತ್ಪಾದನಾ ಘಟಕಕ್ಕೆ ನಿರಂತರವಾಗಿ ನೀರು ಹರಿಯುವಂತೆ ಮಾಡುವುದು ಅಂದಿನ ಮೈಸೂರು ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಉದ್ದೇಶವಾಗಿದ್ದವು. ಇದಕ್ಕಾಗಿ ಕಾವೇರಿ ನದಿಗೆ ಕನ್ನಂಬಾಡಿ ಗ್ರಾಮದ ಬಳಿ ಆಣೆಕಟ್ಟು ಕಟ್ಟಿಸಲು ನಿರ್ಧರಿಸಿದರು.

ಹೀಗೆ ಸಾಕಷ್ಟು ಸದುದ್ದೇಶದಿಂದ ಕೂಡಿದ ಯೋಜನೆ 1911 ರಲ್ಲಿ ಆರಂಭವಾಯಿತಾದರೂ, ನೀರಿನ ಹಂಚಿಕೆ ವಿಷಯದಲ್ಲಿ ಅಂದಿನ ಮದರಾಸು ಸರ್ಕಾರ ಹಾಗೂ ಮೈಸೂರು ಸರ್ಕಾರಗಳ ನಡುವೆ ವಿವಾದ ಉಂಟಾಯಿತು. ಹತ್ತಾರು ವರ್ಷ ತಿಕ್ಕಾಟ ಮುಂದುವರೆದು ಕೊನೆಗೆ 1924 ರಲ್ಲಿ ಕಾವೇರಿ ನದಿ ನೀರು ಹಂಚಿಕೆ ಒಪ್ಪಂದ ಆಗಿ ಯೋಜನೆ ಸುರುವಾಯಿತು.

ಕೆ.ಆರ್.ಎಸ್ ಜಲಾಶಯ ಕಟ್ಟುವಾಗ ಗಟ್ಟಿಯಾದ ಕಪ್ಪು ಗ್ರಾನೈಟ್ ಕಲ್ಲುಗಳನ್ನು ಬಳಸಲಾಗಿದೆ. ನಡುವೆ ಮುರುಡು ಕಲ್ಲು ಮತ್ತು ಸುರಕಿ ಗಾರೆಯನ್ನು ಬಳಸಲಾಗಿದೆ. ಕಾಮಗಾರಿ ಪೂರ್ತಿಗೊಳಿಸಲು ಯಾರಿಗೂ ಗುತ್ತಿಗೆ ಕೊಡದೇ ಆಗಿನ ಸರ್ಕಾರದ ಕಾಮಗಾರಿ ಇಲಾಖೆಯೇ ನಿರ್ಮಾಣ ಕಾರ್ಯದಲ್ಲಿ ತೊಡಗಿತ್ತು.

ಜಲಾಶಯದ ಬೇರೆ ಬೇರೆ ಮಟ್ಟಿದಲ್ಲಿ ನೂರಾರು ತೂಬುಗಳನ್ನು ಮಾಡಲಾಗಿದ್ದು, ಇವು ಸಾಕಷ್ಟು ವಿಶೇಷತೆ ಪಡೆದಿವೆ. ಒಟ್ಟು 171 ತೂಬುಗಳನ್ನು ಅಳವಡಿಸಲಾಗಿದ್ದು, ನೆಲಮಟ್ಟದಿಂದ 114 ಅಡಿ ಎತ್ತರದಲ್ಲಿರುವ ತೂಬುಗಳಿಗೆ ಸ್ವಯಂ ಚಾಲಿತ ಬಾಗಿಲುಗಳನ್ನು ಜೋಡಿಸಲಾಗಿದೆ. ಇವು ಸರ್ ಎಂ.ವಿಶ್ವೇಶ್ವರಯ್ಯನವರ ಸಂಶೊಧನೆಯಾಗಿದ್ದು, ಈ ತಂತ್ರಜ್ಞಾನದ ಹಕ್ಕು ಸ್ವಾಮ್ಯವನ್ನು ಕೂಡ ಪಡೆದಿದ್ದರು.

ತೂಬುಗಳಿಗೆ ಅಳವಡಿಸಿದ್ದ ಸ್ವಯಂ ಚಾಲಿತ ಬಾಗಿಲುಗಳು ಜಲಾಶಯದ ನೀರು ಅಲ್ಲಿಗೆ ತಲುಪಿತೆಂದರೆ ತಾವಾಗಿಯೇ ಓಪನ್ ಆಗಿ ನೀರು ಹೊರ ಹೋಗುವಂತಿದೆ. ಇನ್ನು ಪ್ರವಾಹದ ನೀರು ಹೊರಹರಿಯಲು, ಕೆಸರು ಹೊರಹಾಕಲು ಹೀಗೆ ಹಲವು ಉದ್ದೇಶಗಳಿಗೆ ಹಲವು ತೂಬು ಮಾಡಲಾಗಿದೆ.

ಈ ತೂಬುಗಳ ಬಾಗಿಲುಗಳಲ್ಲಿ 31 ಬಾಗಿಲುಗಳನ್ನು ಇಂಗ್ಲೆಂಡಿನ ಕಂಪನಿಯೊಂದು ತಯಾರಿಸಿದ್ದು ಉಳಿದ ಎಲ್ಲ ಬಾಗಿಲುಗಳನ್ನು ನಮ್ಮ ಭದ್ರಾವತಿಯ ಕಬ್ಬಿಣದ ಕಾರ್ಖಾನೆಯಲ್ಲಿಯೇ ತಯಾರಿಸಲಾಗಿದೆ. ಮೈಸೂರು ಸರ್ಕಾರದ ಕಾಮಗಾರಿ ಇಲಾಖೆಯೇ ಇಂಜನೀಯರ್ ಗಳನ್ನು ನೇಮಿಸಿಕೊಂಡು ಮಾಡಿಸುತ್ತಿದ್ದ ಕೆಲಸ ಅದ್ಭುತವಾಗಿ ಸಾಗಿತ್ತು.

ಇನ್ನು ಈ ಜಲಾಶಯ ಕಟ್ಟಿದ್ದರಿಂದ ಸುಮಾರು 14 ಸಾವಿರ ಎಕರೆ ಖುಷ್ಕಿ ಜಮೀನು, ಒಂಬತ್ತೂವರೆ ಸಾವಿರ ಎಕರೆ ತರೀ ಭೂಮಿ, ಮತ್ತು ಎಂಟೂವರೆ ಸಾವಿರ ಎಕರೆ ಸರ್ಕಾರಿ ಭೂಮಿ ಮುಳುಗಡೆಯಾಯಿತು. ಜೊತೆಗೆ 25 ಊರುಗಳು ಕೂಡ ನೀರಲ್ಲಿ ಮುಳುಗಿದವು. ಹೀಗಾಗಿ ಆ ಎಲ್ಲ ಗ್ರಾಮಸ್ಥರಿಗೆ ಮೈಸೂರು ಸರ್ಕಾರ ಉಚಿತವಾಗಿ ನಿವೇಶನ ಒದಗಿಸಿತಲ್ಲದೇ ರಸ್ತೆ, ಬಾವಿ, ಮಂದಿರ, ಶಾಲೆ ಮುಂತಾದವುಗಳನ್ನು ಕಟ್ಟಿಸಿಕೊಟ್ಟಿತು.

ಹೀಗೆ ನಿರ್ಮಾಣವಾದ ಕೆ.ಆರ್.ಎಸ್ ಕಟ್ಟಲು ಹಲವಾರು ಜನ ಶ್ರಮಿಸಿದ್ದಾರೆ. ಆದರೆ ಯಾರಿಗೆ ಕೇಳಿದರೂ ಮೊದಲು ಹೇಳುವ ಹೆಸರು ಸರ್ ಎಂ.ವಿಶ್ವೇಶ್ವರಯ್ಯನವರದು. ಆದರೆ ಅವರಿಗಿಂತ ಮೊದಲು ಹಾಗೂ ಅವರ ಜೊತೆಗೆ ಮತ್ತು ಅವರ ನಂತರ ಕೂಡ ಸಾಕಷ್ಟು ಜನ ಕೆ.ಆರ್.ಎಸ್ ನಿರ್ಮಿಸಲು ಶ್ರಮಿಸಿದ್ದಾರೆ. ಅದರಲ್ಲಿ ನಿಸ್ಸಂಶಯವಾಗಿ ವಿಶ್ವೇಶ್ವರಯ್ಯನವರ ಪಾತರ ಮಹತ್ವದ್ದಾದರೂ, ಉಳಿದವರ ಹೆಸರನ್ನು ಕೂಡ ನೆನೆಸಿಕೊಳ್ಳಬೇಕು.

ಅವರಲ್ಲಿ ಪ್ರಮುಖರೆಂದರೆ… ದಿವಾನರಾದ ಟಿ. ಆನಂದರಾವ್, ವಿಶ್ವೇಶ್ವರಯ್ಯನವರು, ಸರ್.ಎಂ. ಕಾಂತರಾಜ ಅರಸ್, ಸರ್.ಎ.ಆರ್. ಬ್ಯಾನರ್ಜಿ, ಸರ್. ಮಿರ್ಜಾ ಇಸ್ಮಾಯಿಲ್ ಹಾಗೆಯೇ ಮುಖ್ಯ ಎಂಜಿನಿಯರ್ ಗಳಾದ ಕರ್ಪೂರಿ ಶ್ರೀನಿವಾಸರಾವ್, ರಾವ್ ಬಹದ್ದೂರ್ ಬಿ. ಸುಬ್ಬರಾವ್, ಎಸ್. ಕಡಾಂಬಿ, ಕೆ. ಕೃಷ್ಣ ಐಯಂಗಾರ್, ಜಾನ್ಬೋರ್, ಕೆ.ಆರ್. ಶೇಷಾಚಾರ್, ಎಸ್. ಶ್ರೀನಿವಾಸ ಅಯ್ಯರ್ ಮುಂತಾದವರು.

ಈ ಕೆ.ಆರ್.ಎಸ್ ಡ್ಯಾಂ ಸುರಂಗದ ಬಗ್ಗೆ ಮೀಡಿಯಾ ಮಾಸ್ಟರ್ ಯೂಟ್ಯೂಬ್ ಚಾನೆಲ್ ನವರು ಮಾಡಿರುವ ಸಮಗ್ರ ಮಾಹಿತಿಯುಳ್ಳ ವಿಡಿಯೊ ಮೇಲೆ ಇದೆ, ಅಲ್ಲಿ ಮಾಹಿತಿಯು ಅಚ್ಚುಕಟ್ಟಾಗಿದ್ದು ಆಸಕ್ತರು ನೋಡಿ, ನಿಮ್ಮ ಅನಿಸಿಕೆ ಹಂಚಿಕೊಳ್ಳಿ…
-Team Infotrend