VIDEO : ಕೋಳಿಗೆ ಲೂಸ್ ಮೋಷನ್ ಅಂತೆ, ಅದಕ್ಕೇ ಆಸ್ಪತ್ರೆಗೆ ತಗೊಂಡು ಹೋಗ್ತಿದಾನಂತೆ! ವಿಡಿಯೊ ನೋಡಿ ನಕ್ಕು ನಕ್ಕು ಸುಸ್ತಾದ ನೆಟ್ಟಿಗರು!
ಇದನ್ನೇನು ತಮಾಷೆ ಅನ್ನಬೇಕೊ ವಿಪರ್ಯಾಸ ಅನ್ನಬೇಕೋ ಗೊತ್ತಿಲ್ಲ. ಜನ ಎಲ್ಲೂ ಅಡ್ಡಾಡಬಾರದು, ಅದರಿಂದ ಅವರಿಗೆ ಸೋಂಕು ತಗುಲಬಾರದು, ಅವರು ಆರೋಗ್ಯವಾಗಿರಬೇಕು ಅಂತ ಸರ್ಕಾರ ಲಾಕ್ ಡೌನ್ ಮಾಡಿದೆ. ಆದರೆ ಜನ ಏನಾದರೊಂದು ನೆಪ ಹುಡುಕಿಕೊಂಡು ಹೊರಗೆ ಅಡ್ಡಾಡುವುದನ್ನು ಬಿಡುತ್ತಿಲ್ಲ. ಈ ವಿಡಿಯೊದಲ್ಲಿನ ವ್ಯಕ್ತಿಯನ್ನು ನೋಡಿ, ಆತ ತನ್ನ ಕೋಳಿಯನ್ನು ಆಸ್ಪತ್ರೆಗೆ ತಗೆದುಕೊಂಡು ಹೋಗುತ್ತಿದ್ದಾನಂತೆ!
ಯಾಕಪ್ಪಾ ಎಲ್ಲಿಗೆ ಹೋಗ್ತಿದಿಯಾ ಅಂತ ಪೊಲೀಸರು ಕೇಳಿದರೆ, ಕೋಳಿಗೆ ಸಂಡಾಸ್ ಹತ್ತಿದೆ, ಹೊಳ್ಳಬಳ್ಳ ‘ಹೊರಗಡೆ’ ಹೊಂಟಿದೆ ಅದಕ್ಕೆ ದವಾಖಾನಿಗೆ ತಗೊಂಡು ಹೊಂಡಿನಿ ಅನ್ನುತ್ತಾನೆ. ಒಂದು ನಾಟಿ ಕೋಳಿಯನ್ನು ಬ್ಯಾಗ್ ನಲ್ಲಿ ಹಾಕಿಕೊಂಡೇ ಆತ ಹೊರಟಿದ್ದಾನೆ. ಪೊಲೀಸರಿಗೆ ಅಳಬೇಕೊ – ನಗಬೇಕೋ ಗೊತ್ತಾಗುತ್ತಿಲ್ಲ.
ವಾಸ್ತವದಲ್ಲಿ ಗದಗ ಜಿಲ್ಲೆಯಲ್ಲಿ ಕೊರೋನ ಸೋಂಕು ಹೆಚ್ಚಾದ ಕಾರಣ ಉಸ್ತುವಾರಿ ಸಚಿವ ಸಿ.ಸಿ ಪಾಟೀಲ್ ನೇತೃತ್ವದಲ್ಲಿ ಜಿಲ್ಲಾಡಳಿತ ಐದು ದಿನಗಳ ಸಂಪೂರ್ಣ ಲಾಕ್ ಡೌನ್ ಘೋಷಿಸಿದೆ. ಮೊನ್ನೆ 27 ರಿಂದ ಐದು ದಿನಗಳವರೆಗೆ ಗದಗ ಜಿಲ್ಲೆ ಸಂಪೂರ್ಣ ಬಂದ್ ಆಗಿದ್ದು, ತಳ್ಳುವ ಗಾಡಿಯಲ್ಲಿ ತರಕಾರಿ ಹಾಲು ಬಿಟ್ಟರೆ ಮತ್ತೇನೂ ಸಿಗುತ್ತಿಲ್ಲ.
ದಿನಸಿ ಅಂಗಡಿ – ಬಾರ್ ನಿಂದ ಹಿಡಿದು ಎಲ್ಲವನ್ನೂ ಕಂಪ್ಲೀಟ್ ಬಂದ್ ಮಾಡಿಸಲಾಗಿದೆ. ಹೀಗಿರುವಾಗ ಈತ ಗದಗ ನಗರದಲ್ಲಿ ಬ್ಯಾಗಲ್ಲಿ ಕೋಳಿ ಇಟ್ಟುಕೊಂಡು ಆಸ್ಪತ್ರೆ ಹೋಗುತ್ತಿದ್ದಾನೆ. ಅದಕ್ಕೆ ಲೂಸ್ ಮೋಷನ್ ಆಗಿದ್ದು, ಬೆಳಿಗ್ಗೆಯಿಂದ ಎರಡು ಸಲ ಸಂಡಾಸ್ ಮಾಡಿಕೊಂಡಿದೆಯಂತೆ! ಹೀಗಾಗಿ ಚಿಕಿತ್ಸೆ ಕೊಡಿಸಲು ಒಯ್ಯುತ್ತಿದ್ದಾನಂತೆ!
ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ವೈರಲ್ ಆಗುತ್ತಿದೆ. ಕೊರೋನ ಎರಡನೇ ಅಲೆಯಿಂದ ದೇಶ ತಲ್ಲಣಗೊಂಡಿದೆ, ಎಲ್ಲ ಕಡೆ ಆತಂಕದ ವಾತಾವರಣ ನಿರ್ಮಾಣವಾಗಿದೆ. ಹೀಗಿರುವಾಗ ಕೂಡ ಅನೇಕರು ಬೇಜವಾಬ್ದಾರಿಯಿಂದ ವರ್ತಿಸುವುದನ್ನು ಬಿಟ್ಟಿಲ್ಲ. ಕೊರೋನ ಬಂದು ಒಂದು ವರ್ಷವಾದರೂ ನಮ್ಮ ಜನಕ್ಕೆ ಇನ್ನೂ ಪೊಲೀಸರೇ ಬುದ್ದಿ ಹೇಳಬೇಕಾಗಿದೆ.
ಪರಸ್ಥಿತಿ ಹೇಗಿದೆ ಅಂತ ಅರ್ಥ ಮಾಡಿಕೊಂಡು ಹಾಗೆ ನಡೆಯಬೇಕು, ಮೊದಲ ಲಾಕ್ ಡೌನ್ ನಿಂದಲೇ ಜನ ಜಾಗರೂಕಗಿದ್ದಿದ್ದರೆ ಕೊರೋನ ವೈರಸ್ ತೀರ ಈ ಪರಿ ಬೆಳೆಯುತ್ತಿರಲಿಲ್ಲ. ಲಕ್ಷಗಟ್ಟಲೇ ಸಾವುಗಳು ಸಂಭವಿಸುತ್ತಿರಲಿಲ್ಲ, ಹಾಗೆಯೇ ಸರಕಾರದಿಂದ ಹಿಡಿದು ಬಡವರವರೆಗೆ ಎಲ್ಲರಿಗೂ ಈ ಪರಿ ಆರ್ಥಿಕ ಏಟು ಸಹ ಬೀಳುತ್ತಿರಲಿಲ್ಲ.
ಸುಮ್ಮನೇ ಗಮನಿಸಿ ನೋಡಿ, ಪೊಲೀಸರು ಎದುರಿಗೆ ಕಂಡ ಕೂಡಲೇ ಮಾಸ್ಕ್ ಮೇಲೇರಿಸಿಕೊಳ್ಳುತ್ತಾರೆ! ಯಾಕೆ, ಪೊಲೀಸರೇನು ತಮಗೆ ಕೊರೋನ ಬರಬಾರದು ಅಂತ ನಮಗೆಲ್ಲ ಮಾಸ್ಕ್ ಹಾಕಿಕೊಳ್ಳಲು ಒತ್ತಾಯಿಸುತ್ತಾರಾ? ಅವರು ತಮ್ಮ ಸ್ವಾರ್ಥಕ್ಕಾಗಿ ಮನೆ – ಮಕ್ಕಳಿಂದ ದೂರ ಇದ್ದು ಡ್ಯೂಟಿ ಮಾಡುತ್ತಿದ್ದಾರಾ?
ಸಾಮಾನ್ಯ ಜ್ಞಾನ ಇರುವ ಎಲ್ಲರೂ ಪೊಲೀಸರ ಹಾಗೂ ಆರೋಗ್ಯ ಕಾರ್ಯಕರ್ತರ ಸಂಕಷ್ಟ ಅರಿತು ಜಾಗರೂಕತೆ ಬೆಳೆಸಿಕೊಳ್ಳಬೇಕು. ಒಂದು ಕಡೆ ಆರೋಗ್ಯ ಇಲಾಖೆಯ ಸಿಬ್ಬಂದಿ ಪಿಪಿಇ ಕಿಟ್ ನಲ್ಲಿ ಬೇಯುತ್ತಿದ್ದರೆ, ಮತ್ತೊಂದು ಕಡೆ ಪೊಲೀಸರು ನಡುರಸ್ತೆಯಲ್ಲಿ ನಿಂತು ಲಾಕ್ ಡೌನ್ ನಿಯಮ ಜಾರಿಗೆ ತರುತ್ತಿದ್ದಾರೆ. ಆದರೆ ಜನ ಮಾತ್ರ ಇದ್ಯಾವುದರ ಅರಿವಿಲ್ಲದೇ ನಡೆದುಕೊಳ್ಳುತ್ತಿದ್ದಾರೆ.
ಈ ವ್ಯಕ್ತಿ ಹೇಳುವುದನ್ನೇ ನೋಡಿ : ಇದುವರೆಗೆ ಪ್ರಪಂಚದಲ್ಲಿ ಎಲ್ಲಾದರೂ ಕೋಳಿಗೆ ಸಂಡಾಸ್ ಹತ್ತಿ ಅದಕ್ಕೆ ಚಿಕಿತ್ಸೆ ಕೊಡಿಸಿದ್ದನ್ನು ನೋಡಿದ್ದೀರಾ?! ಮೊನ್ನೆ ಕೂಡ ಯಾರೊ ಒಬ್ಬ ಕೋತಂಬ್ರಿ ತರೋಕೆ ಹೋಗ್ತಿದಿನಿ ಅನ್ನೊ ವಿಡಿಯೊ ವೈರಲ್ ಆಗಿತ್ತು (ಕಳೆದ ವರ್ಷದ ಕೊತ್ಮಿರಿ ವಿಡಿಯೊ ಅಲ್ಲ). ಈಗ ಈ ವ್ಯಕ್ತಿ ಕೋಳಿಗೆ ಟ್ರೀಟ್ಮೆಂಟ್ ಕೊಡಿಸಬೇಕಂತೆ.
ಅದೇನು ಬೇಕು ಅಂತಲೇ ಮಾಡುತ್ತಾರೊ ಅಥವಾ ಪೊಲೀಸರನ್ನು ಪೆದ್ದರು ಅಂದುಕೊಂಡಿದ್ದಾರೋ ಗೊತ್ತಿಲ್ಲ. ಈ ವಿಡಿಯೊ ಈಗ ಎಲ್ಲ ಕಡೆ ವೈರಲ್ ಆಗುತ್ತಿದ್ದು, ಜನ ನಕ್ಕು ನಕ್ಕು ಸುಸ್ತಾಗುತ್ತಿದ್ದಾರೆ. ಪೊಲೀಸರೂ ಕೂಡ ಈತನ ಮಾತಿಗೆ ನಕ್ಕು ವಾಪಸ್ ಕಳಿಸಿದ್ದಾರೆ. ಆ ವಿಡಿಯೊ ಮೇಲಿದೆ ನೋಡಿ…
-Team Infotrend