ಲವ್ ಬರ್ಡ್ ಗೂಡು ಕಟ್ಟಲು ಕಡ್ಡಿ ಸಂಗ್ರಹಿಸಲು ತೋರಿದ ಜಾಣ್ಮೆ ಕಂಡು ಬೆರಗಾದ ನೆಟ್ಟಿಗರು: ಹಕ್ಕಿಯ ಬುದ್ಧಿವಂತಿಕೆ ಅಬ್ಬಾ ಅದ್ಭುತ ಖಂಡಿತ!!

ನಮ್ಮ ಪ್ರಕೃತಿ ಎಂಬುದು ವೈವಿಧ್ಯಮಯ ಗಳ ತಾಣ. ಇಲ್ಲಿ ಇರುವಂತಹ ಅದೆಷ್ಟೋ ವಿಸ್ಮಯಗಳು ನಮ್ಮ ಕಣ್ಮುಂದೆ ಬಂದಾಗ ಅವು ನಮ್ಮನ್ನು ಬೆರಗುಗೊಳ್ಳುವಂತೆ ಮಾಡುತ್ತವೆ. ಪ್ರಕೃತಿ ದೇವಿಯ ಮಡಿಲಿನಲ್ಲಿ ಭಿನ್ನ, ವಿಭಿನ್ನ ಎನಿಸುವಂತಹ ಅದೆಷ್ಟೋ ಜೀವಿಗಳು ಇದ್ದು, ಇಲ್ಲಿ ಪ್ರತಿಯೊಂದು ಜೀವಿಗೂ ತನ್ನದೇ ಆದಂತಹ ವಿಶೇಷ ಗುಣಗಳು ಹಾಗೂ ಕೌಶಲ್ಯಗಳೂ ಇವೆ. ಕೆಲವೊಮ್ಮೆ ಪ್ರಾಣಿ-ಪಕ್ಷಿಗಳಲ್ಲಿ ಕಾಣುವ ಇಂತಹ ವಿಶಿಷ್ಟ ಗುಣ ಹಾಗೂ ಕೌಶಲ್ಯವನ್ನು ನೋಡಿದಾಗ ಒಂದು ಕ್ಷಣ ಅದು ನಮ್ಮಲ್ಲಿ ದಿಗ್ಭ್ರಮೆಯನ್ನು ಮೂಡಿಸುತ್ತದೆ. ಹೇಗೆ ಪ್ರಕೃತಿಯೇ ಅವುಗಳಿಗೆ ಇಂತಹ ಒಂದು ಅದ್ಭುತವಾದ ಪಾಠವನ್ನು ಕಲಿಸಿದೆ ಎನ್ನುವ ವಿಚಾರ ನಮ್ಮನ್ನು ಆಶ್ಚರ್ಯದಲ್ಲಿ ಮುಳುಗುವಂತೆ ಮಾಡುತ್ತದೆ.

ಸೋಷಿಯಲ್ ಮೀಡಿಯಾಗಳ ಕಾರಣದಿಂದ ಪ್ರಾಣಿ-ಪಕ್ಷಿಗಳಲ್ಲಿನ ಇಂತಹ ವಿಶೇಷವಾದ ಗುಣಗಳು ಹಾಗೂ ಅವುಗಳ ಬುದ್ಧಿವಂತಿಕೆಯನ್ನು ಪ್ರದರ್ಶಿಸುವಂತಹ ಅನೇಕ ಫೋಟೋಗಳು ಹಾಗೂ ವಿಡಿಯೋಗಳು ಆಗಾಗ ನಮ್ಮ ಮುಂದೆ ಬರುತ್ತಲೇ ಇರುತ್ತವೆ. ಇಂತಹ ಫೋಟೋಗಳು ಹಾಗೂ ವಿಡಿಯೋಗಳು ಜನಮೆಚ್ಚುಗೆಯನ್ನು ಪಡೆದುಕೊಂಡು ಬಹಳ ಬೇಗ ವೈರಲ್ ಆಗಿ ಬಿಡುತ್ತವೆ. ಈ ವಿಡಿಯೋಗಳನ್ನು ನೋಡಿದಾಗ ಮನಸ್ಸಿಗೆ ಒಂದು ಖುಷಿ ಸಿಗುವುದು ಮಾತ್ರವೇ ಅಲ್ಲದೆ, ಮನಸ್ಸನ್ನು ಚೇತೋಹಾರಿ ಮಾಡುತ್ತಲೇ ಅವು ನಮಗೆ ಒಂದು ಒಳ್ಳೆಯ ಸಂದೇಶವನ್ನು ಸಹಾ ನೀಡುತ್ತವೆ ಎಂದರೆ ತಪ್ಪಾಗಲಾರದು.

ಟ್ವಿಟರ್ ನಲ್ಲಿ ವನ್ಯ ಜೀವಿಗಳ ವೈವಿಧ್ಯಮಯವಾದ ವಿಡಿಯೋ ಗಳನ್ನು ಶೇರ್ ಮಾಡಿಕೊಳ್ಳುವ ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಪ್ರಸ್ತುತ ಒಂದು ವಿಡಿಯೋವನ್ನು ಹಂಚಿಕೊಂಡಿದ್ದು, ಈ ವಿಡಿಯೋ ಸಾಕಷ್ಟು ಜನರ ಗಮನವನ್ನು ಸೆಳೆದಿದೆ. ಸಹಸ್ರಾರು ಸಂಖ್ಯೆಯಲ್ಲಿ ಜನರು ವಿಡಿಯೋಗೆ ಲೈಕ್ ಗಳನ್ನು ನೀಡುತ್ತಾ, ಹಕ್ಕಿಯ ಬುದ್ಧಿವಂತಿಕೆಯನ್ನು ಮೆಚ್ಚಿ ಕಾಮೆಂಟ್ ಗಳನ್ನು ಮಾಡಿದ್ದಾರೆ. ವೀಡಿಯೋದಲ್ಲಿ ಲವ್-ಬರ್ಡ್ ಎಂದು ಕರೆಯಲ್ಪಡುವ ಸಣ್ಣ ಹಕ್ಕಿಯು ಗೂಡನ್ನು ನಿರ್ಮಿಸಲು ಹೇಗೆ ತನ್ನ ಕೌಶಲ್ಯ ಹಾಗೂ ಬುದ್ಧಿವಂತಿಕೆಯನ್ನು ತೋರಿಸುತ್ತದೆ ಎನ್ನುವುದನ್ನು ನಾವು ನೋಡಬಹುದಾಗಿದೆ.

ಸಾಮಾನ್ಯವಾಗಿ ಹಕ್ಕಿಗಳು ಗೂಡನ್ನು ಕಟ್ಟುವಾಗ ಒಂದೊಂದೇ ಕಡ್ಡಿಗಳನ್ನು ಹೆಕ್ಕಿ ಹೆಕ್ಕಿ ತಂದು ಗೂಡನ್ನು ಕಟ್ಟುತ್ತವೆ. ಆದರೆ ಈ ವಿಡಿಯೋದಲ್ಲಿ ಗಮನಿಸಿದಾಗ ಲವ್ ಬರ್ಡ್ ಗೂಡನ್ನು ಕಟ್ಟಲು ಅಗತ್ಯವಿರುವಂತಹ ಕಡ್ಡಿ ಗಳಿಗಾಗಿ ಒಂದು ಮರದ ಮೇಲೆ ಕುಳಿತುಕೊಂಡು ಅದು ಎಲೆಗಳ ಮಧ್ಯದಲ್ಲಿರುವ ನಾಳದಂತಹ ತೆಳುವಾದ ಕಡ್ಡಿಯನ್ನು ಎಲೆಯಿಂದ ಬೇರ್ಪಡಿಸುವುದಕ್ಕೆ, ತನ್ನ ಕೊಕ್ಕಿನಿಂದ ಎಲೆಯ ಎರಡು ಕಡೆಯ ಭಾಗವನ್ನು ಸೀಳುತ್ತದೆ. ಅನಂತರ ಮಧ್ಯದ ಕಡ್ಡಿಯನ್ನು ರೆಕ್ಕೆಗಳಲ್ಲಿ ಚುಚ್ಚಿ ಕೊಳ್ಳುತ್ತದೆ. ಗೂಡುಕಟ್ಟಲು ಅಗತ್ಯವಿರುವಂತಹ ಕಡ್ಡಿಗಳಷ್ಟನ್ನು ಪುಕ್ಕಗಳ ನಡುವೆ ಚುಚ್ಚಿಕೊಂಡ ನಂತರ ಅದು ಗೂಡುಕಟ್ಟಲು ಹಾರಿಹೋಗುತ್ತದೆ. ಇಲ್ಲಿ ಆ ಪುಟ್ಟ ಪಕ್ಷಿಯ ಜಾಣತನ ನೋಡಿದರೆ ಎಲ್ಲರಿಗೂ ಕೂಡ ಬಹಳ ಮೆಚ್ಚುಗೆಯಾಗುತ್ತದೆ.

ವಿಡಿಯೋ ನೋಡಿ

ವಿಡಿಯೋ ಶೇರ್ ಮಾಡಿಕೊಂಡಿರುವ ಸುಶಾಂತ್ ನಂದ ಅವರು ಸಹ ವಿಡಿಯೋ ಜೊತೆಗೆ ಒಂದೆರಡು ಸಾಲುಗಳನ್ನು ಬರೆದುಕೊಂಡು, ಹಕ್ಕಿಯ ಜಾಣ್ಮೆಯ ಕುರಿತಾಗಿ ತಮ್ಮ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಇದೊಂದು ಅದ್ಭುತ ಹಾಗೂ ಆ ಪಕ್ಷಿಯ ದಕ್ಷತೆಯ ಕುರುಹು ಎಂದು ಹೇಳಿದ್ದಾರೆ. ಈ ವಿಡಿಯೋವನ್ನು ಈಗಾಗಲೇ 86 ಸಾವಿರಕ್ಕಿಂತ ಅಧಿಕ ಜನರು ವೀಕ್ಷಣೆಯನ್ನು ಮಾಡಿದ್ದಾರೆ. ಎರಡು ಸಾವಿರಕ್ಕಿಂತ ಅಧಿಕ ಜನರು ರೀಟ್ವೀಟ್ ಮೂಲಕ ಶೇರ್ ಮಾಡಿಕೊಂಡಿದ್ದಾರೆ. 9 ಸಾವಿರಕ್ಕೂ ಅಧಿಕ ಮಂದಿ ಮೆಚ್ಚುಗೆಯನ್ನು ನೀಡಿದ್ದಾರೆ. ವಿಡಿಯೋ ನೋಡಿದ ಮಂದಿ ಪ್ರಕೃತಿಯು ನಿಜಕ್ಕೂ ಅದ್ಭುತ ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವರು ನಾವು ಇಂತಹ ವಿಡಿಯೋವನ್ನು ಮೊದಲು ನೋಡಿರಲಿಲ್ಲ, ಬಹಳ ಸುಂದರವಾಗಿದೆ ಎಂದಿದ್ದಾರೆ.‌ ಅನೇಕ ಜನರು ಹಕ್ಕಿಯ ಕೌಶಲ್ಯ ಹಾಗೂ ಬುದ್ಧಿವಂತಿಕೆಗೆ ಮೆಚ್ಚುಗೆಯನ್ನು ನೀಡಿದ್ದಾರೆ.