ಸಿಗರೇಟ್ ಚಟ ಬಿಡಲಾಗದೇ ತಲೆಯನ್ನೇ ಲಾಕ್ ಮಾಡಿಕೊಂಡು ಹೆಂಡತಿ ಕೈಗೆ ಚಾವಿ ಕೊಟ್ಟ! ಊಟ ಮಾಡಲು-ನೀರು ಕುಡಿಯಲು-ಬ್ರಶ್ ಮಾಡಲಷ್ಟೇ ಲಾಕ್ ಓಪನ್!

ಕೆಲವೊಂದು ಹವ್ಯಾಸಗಳೇ ಹಾಗೆ ಒಮ್ಮೆ ಅವುಗಳಿಗೆ ಅಂಟಿಕೊಂಡರೆ ನಾವು ಬಿಡಲು ಪ್ರಯತ್ನಿಸಿದರೂ, ಯಾರು ಏನೇ ಹೇಳಿದರೂ, ಬುದ್ದಿ ಹೇಳಿದರೂ – ಬೈದರೂ, ಅಷ್ಟೇ ಏಕೆ ಒಂದೆರಡು ಏಟು ಹಾಕಿದರೂ ಕೂಡ ಬಿಡಲು ಮನಸಾಗುವುದಿಲ್ಲ. ಬಿಡಬೇಕು ಎಂದು ತೀರ್ಮಾನ ಮಾಡಿರುತ್ತೇವೆ ಆದರೆ ಅದು ಕೆಲವು ದಿನಗಳು ಮಾತ್ರ, ಸ್ವಲ್ಪ ದಿನಗಳು ಕಳೆದ ಮೇಲೆ ಮತ್ತದೇ ಆಟ ಶುರುವಾಗುತ್ತದೆ.

ಕುಡಿತ, ಜೂಜು ಆಡುವುದು, ಗುಟ್ಕಾ ತಿನ್ನುವುದು ಹಾಗೂ ಧೂಮ್ರಪಾನ ಮಾಡುವುದು ಇವೆಲ್ಲ ಬಿಟ್ಟೆನೆಂದರೂ ಬಿಡದ ಚಟಗಳು. ಇವುಗಳಿಂದ ಪಾರಾಗುವುದಕ್ಕಾಗಿ ಏನೆಲ್ಲಾ ಪ್ರಯತ್ನ ಮಾಡುತ್ತಾರೆ. ಅಂತಹ ಪ್ರಯತ್ನಗಳಲ್ಲಿ ಇಲ್ಲೊಬ್ಬ ಧೂಮ್ರಪಾನ ವ್ಯಸನಿ ಮಾಡಿರುವ ವಿಚಿತ್ರ ಐಡಿಯಾ ನೋಡಿದರೆ ನೀವೆಲ್ಲ ಬಿದ್ದು ಬಿದ್ದು ನಗುವುದಂತೂ ಗ್ಯಾರಂಟಿ. ಬನ್ನಿ ಹಾಗಾದ್ರೆ ನೋಡೋಣ ಆ ವ್ಯಕ್ತಿ ಮಾಡಿರುವ ಐಡಿಯಾ ಏನೆಂದು…

ವರದಿಗಳ ಪ್ರಕಾರ ಟರ್ಕಿ ದೇಶದ ಇಬ್ರಾಹಿಂ ಯುಸೆಲ್ ಎಂಬ ವ್ಯಕ್ತಿಯೇ ಇಂತಹ ವಿಚಿತ್ರ ಐಡಿಯಾ ಮಾಡಿದವನು. ಅವನು ಮಾಡಿರುವ ಆ ಐಡಿಯಾ ಏನೆಂದರೆ ತನ್ನ ಮುಖವನ್ನು ತಾನೇ ಒಂದು ಭದ್ರವಾದ ಪಂಜರದೊಳಗೆ ಬಂಧಿಸಿಕೊಂಡು ಅದರ ಚಾವಿಯನ್ನು ತನ್ನ ಪತ್ನಿಯ ಕೈಗೆ ನೀಡಿದ್ದಾನೆ!

ವರ್ಷಗಳಿಂದ ಧೂಮ್ರಪಾನದ ಚಟಕ್ಕೆ ಅಂಟಿಕೊಂಡಿದ್ದ ಇಬ್ರಾಹಿಂ ಅದನ್ನು ತ್ಯಜಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಿದನು, ಆದರೆ ಯಾವುದೂ ವರ್ಕೌಟ್ ಆಗಲೇ ಇಲ್ಲ. ಆದರೂ ಜಗ್ಗದ ಇಬ್ರಾಹಿಂ ಒಂದು ಬೈಕ್ ಹೆಲ್ಮೆಟ್ ನಿಂದ ಪ್ರೇರಿತರಾಗಿ ತಾವೇ ಖುದ್ದಾಗಿ ಹೋಗಿ 130 ಫೀಟ್ ಕಾಪರ್ ವೈರ್ ತಂದರು, ಅದರಿಂದ ಬೈಕ್ ಹೆಲ್ಮೆಟನ್ನೇ ಹೋಲುವ ರೀತಿಯಲ್ಲಿ ಒಂದು ಪಂಜರವನ್ನು ಹೆಣಿದರು.

ಅದನ್ನು ಎಲ್ಲೆಂದರಲ್ಲಿ ತೆಗೆಯಲು ಬರದೇ ಇರಲಿ ಎಂದು ಅದಕ್ಕೊಂದು ಛಾವಿ ಹಾಕುವಂತೆ ಮಾಡಿದರು. ಆ ಛಾವಿಯ ಕೈ ಅವರ ಪತ್ನಿಯ ಕೈಗೆ ಇಟ್ಟರು. ಈ ಕಾರಣದಿಂದಾಗಿ ಅವರು ಮನೆಯಲ್ಲಿದ್ದಾಗ ಅದು ಕೂಡ ಅವಶ್ಯಕತೆ ಇರುವಂತ ಸಮಯದಲ್ಲಿ ಮಾತ್ರ ಬೀಗ ಓಪನ್ ಮಾಡಬಹುದು. ಕಂಡ ಕಂಡಲ್ಲಿ ತೆಗೆದರೆ ಸಿಗರೇಟ್ ಸೇದುವ ಆಸೆ ಮತ್ತೆ ಬರಬಹುದು ಎಂಬುದು ಇದರ ಹಿಂದಿನ ಉದ್ದೇಶವಾಗಿತ್ತು!

ಇಬ್ರಾಹಿಂ ತಮ್ಮ ಹದಿನಾರನೆ ವಯಸ್ಸಿನಲಿಯೇ ಪ್ರತಿ ದಿನ ಎರಡು ಪ್ಯಾಕೆಟ್ ಸಿಗರೇಟ್ ಸೇಡುತ್ತಿದ್ದರಂತೆ. ಒಂದು ದಿನ ಅವರ ತಂದೆ ಶ್ವಾಸ ಕೋಶದ ಕ್ಯಾನ್ಸರ್ ಬಂದು ತೀರಿಕೊಂಡರು. ಅವರು ಕೂಡ ಇವರಂತೆಯೇ ಧೂಮ್ರಪಾನ ಮಾಡುತ್ತಿದ್ದರು. ಇದು ಅವರ ಮನಸ್ಸಿನ ಮೇಲೆ ಬಹಳ ಪರಿಣಾಮ ಬೀರಿತು.

ತಮ್ಮ ಕುಟುಂಬ ಹಾಗೂ ತಮ್ಮ ಅರೋಗ್ಯದ ಹಿತದೃಷ್ಟಿಯಿಂದ ಇವರು ಹೇಗಾದರೂ ಮಾಡಿ ಈ ಚಟದಿಂದ ಪಾರಾಗಬೇಕೆಂದು ಪಣ ತೊಟ್ಟು ಇಂತಹ ಉಪಯ ಮಾಡಿದ್ದಾರೆ. ಕೇವಲ ಊಟ ಮಾಡುವಾಗ ಸ್ನಾನ ಮಾಡುವಾಗ ನೀರು ಕುಡಿಯುವಾಗ ಹಾಗೂ ಬೆಳಿಗ್ಗೆ ಹಲ್ಲುಜ್ಜುವಾಗ ಮಾತ್ರ ಆ ಪಂಜರದ ಬೀಗ ತೆಗೆಯುತ್ತಾರೆ.

ಅದರ ಬೀಗವನ್ನು ಅವರೇ ತಗೆಯಲು ಬರುವುದಿಲ್ಲ. ಅವರ ಪತ್ನಿ ಅಥವಾ ಮಕ್ಕಳ ಸಹಾಯ ಪಡೆದು ತೆಗೆಯಬೇಕು. ಕೆಲಸ ಮುಗಿದ ಕೂಡಲೇ ಮತ್ತೆ ಲಾಕ್ ಹಾಕಿಕೊಂಡೇ ಇರುತ್ತಾರೆ! ಈ ಕಥೆ ನೋಡಿದ್ರೆ ಮನಸ್ಸಿದ್ದಲ್ಲಿ ಮಾರ್ಗ ಎನ್ನುವ ಹಿರಿಯರ ಮಾತು ಥಟ್ ಅಂತ ನೆನಪಿಗೆ ಬರದೇ ಇರದು. ನಿಮ್ಮಲ್ಲೂ ಯಾರಾದರೂ ಹೀಗಿದ್ದರೆ ಇವತ್ತೇ ಪಂಜರ ಹೆಣೆದುಕೊಳ್ಳಿ!
-ಮಂಜುನಾಥ್