ಕನ್ನಡಕ್ಕೆ ಬಂದ ಕಣ್ಣೇ ಅದಿರಿಂದಿ ಚೆಲುವೆ! ಇಷ್ಟು ದಿನ ಹಾಡಾಯ್ತು, ಇನ್ನು ನಟನೆ ಮೂಲಕ ಮನಗೆಲ್ಲಲಿದ್ದಾಳೆ ಮಂಗ್ಲಿ!

ಕಣ್ಣೇ ಅದಿರಿಂದಿ… ಎಂಬ ಹಾಡು ಕೇಳಿದರೆ ಕೇವಲ ತೆಲುಗು ಅಷ್ಟೇ ಅಲ್ಲ ಕನ್ನಡಿಗರೂ ಕೂಡ ರೋಮಾಂಚನಗೊಳ್ಳುತ್ತಾರೆ. ಈ ಒಂದೇ ಒಂದು ಹಾಡಿನ ಮೂಲಕ ಎರಡು ರಾಜ್ಯದಲ್ಲಷ್ಟೇ ಅಲ್ಲದೇ ಅರ್ಧ ದೇಶದ ತುಂಬ ಈ ಗಾಯಕಿ ರಾತ್ರೋ ರಾತ್ರಿ ಫೇಮಸ್ ಆಗಿಬಿಟ್ಟರು. ಇಂದಿಗೂ ಕೂಡ ರಾಬರ್ಟ್ ಚಿತ್ರದ ಆ ಒಂದು ಹಾಡು ಹಾಗೂ ಆ ಹಾಡನ್ನು ಹಾಡಿದ ಗಾಯಕಿ ಮಂಗ್ಲಿಯ ಹವಾ ಜೋರಾಗಿಯೇ ಇದೆ.

ಎಷ್ಟರ ಮಟ್ಟಿಗೆ ಇವರ ಹವಾ ಇದೆ ಎಂದರೆ, ಕರ್ನಾಟಕದಲ್ಲಿ ನಡೆದ ಬೈ ಎಲೆಕ್ಷನ್ ಪ್ರಚಾರಕ್ಕೂ ಕೂಡ ಮಂಗ್ಲಿಯನ್ನು ಕರೆತರಲಾಗಿತ್ತು, ಅದಷ್ಟೇ ಅಲ್ಲದೇ ಇವರ ಬಾವಚಿತ್ರವನ್ನು ಬಸ್ಸುಗಳ ಹಿಂದೆ ಟೆಂಪೋ ಹಿಂದೆ ಹಾಗೂ ಹುಡುಗರು ಮೊಬೈಲ್ ವಾಲ್ ಪೇಪರ್ ಆಗಿಯೂ ಸಹ ಬಳಸುತ್ತಿದ್ದಾರೆ. ಆದರೆ ನಿಮಗೆಲ್ಲ ಅನಿಸುತ್ತಿರಬೇಕು ಈಗೇಕೆ ಮಂಗ್ಲಿಯ ಜಪ ಮಾಡುತ್ತಿದ್ದಾರೆ ಎಂದು, ಅದಕ್ಕೊಂದು ಬಲವಾದ ಕಾರಣ ಇದೆ, ಬನ್ನಿ ಅದೇನೆಂದು ನೋಡೋಣ…

ಇದೀಗ ಈ ಮಂಗ್ಲಿಯನ್ನು ಮತ್ತೆ ಕನ್ನಡಕ್ಕೆ ಒಬ್ಬ ಸ್ಟಾರ್ ನಟನ ಚಿತ್ರಕ್ಕೆ ಕರೆತರಲಾಗುತ್ತಿದೆ. ಅದು ಅಂತಿಂಥ ನಟನಲ್ಲ, ಹ್ಯಾಟ್ರಿಕ್ ಹೀರೊ ಶಿವಣ್ಣನ ಮುಂದಿನ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಮಾಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಗಾಯಕಿಯಾಗಿರುವ ಮಂಗ್ಲಿ ಚಿತ್ರದಲ್ಲಿ ನಟಿಸುತ್ತಾರ?

ಈ ಪ್ರಶ್ನೆ ನಿಮ್ಮೆಲ್ಲರನ್ನೂ ಕಾಡ್ತಾ ಇರಬಹುದು, ಆದರೆ ಮಂಗ್ಲಿಯವರಿಗೆ ನಟನೆ ಏನೂ ಹೊಸದಲ್ಲ, ಈಗಾಗಲೇ ಸಾಕಷ್ಟು ರಿಯಾಲಿಟಿ ಷೋಗಳಲ್ಲಿ ಭಾಗವಹಿಸಿದ್ದಾರೆ, ಅದಷ್ಟೇ ಅಲ್ಲದೇ ಲಂಬಾಣಿ ಭಾಷೆಯ ಒಂದು ಚಿತ್ರದಲ್ಲಿ ಮುಖ್ಯ ಪಾತ್ರವನ್ನೇ ನಿರ್ವಹಿಸಿದ ಅನುಭವ ಮಂಗ್ಲಿಯವರಿಗಿದೆ.

ಡಾ.ಶಿವರಾಜ್ ಕುಮಾರ್ ನಾಯಕನಾಗಿ ನಟಿಸುತ್ತಿರುವ ಚಿತ್ರವನ್ನು ತೆಲುಗಿನವರೇ ಆದಂತ ರಾಮ್ ದುಲಿಪುಡಿ ಎಂಬ ನಿರ್ದೇಶಕರೇ ನಿರ್ದೇಶನ ಮಾಡಲಿರುವುದು ಇನ್ನೊಂದು ವಿಶೇಷ. ಅದಷ್ಟೇ ಅಲ್ಲದೇ ಇದು ಶಿವಣ್ಣನಿಗೆ 124 ನೇ ಚಿತ್ರವಾಗಿದೆ. ಇನ್ನೂ ಈ ಚಿತ್ರದ ಶೂಟಿಂಗ್ ಬೆಂಗಳೂರು ಮಂಗಳೂರು ಕಾಶ್ಮೀರ ಹಾಗೂ ಇನ್ನಿತರೇ ಸ್ಥಳಗಳಲ್ಲಿ ಜೂನ್ ಮೊದಲ ವಾರದಿಂದ ಶುರುವಾಗಲಿದ್ದು, ಅಂದಾಜು 70 ದಿನಗಳಲ್ಲಿ ಚಿತ್ರವನ್ನು ಮುಗಿಸುವ ಗುರಿ ಇದೆ.

ಈ ಚಿತ್ರದಲ್ಲಿ ಮಂಗ್ಲಿ ಸಹ ಮುಖ್ಯ ಪಾತ್ರದಲ್ಲಿ ನಟಿಸುವ ಸಾಧ್ಯತೆ ಇದೆ, ಇವರೊಂದಿಗೆ ಸಾಧು ಕೋಕಿಲ, ನಾಸರ್ ಹಾಗೂ ಇನ್ನಿತರೇ ನಟರು ನಟಿಸಲಿದ್ದಾರೆ. ಸಂಗೀತವನ್ನು ಟಗರು ಚಿತ್ರದ ಮೂಲಕ ಖ್ಯಾತಿ ಪಡೆದಿರುವ ಚರಣ್ ರಾಜ್ ನೀಡಲಿದ್ದಾರೆ. ರವಿವರ್ಮರವರ ಸಾಹಸವಿದೆ. ಕೋವಿಡ್ ನಿಂದಾಗಿ ಹೇರಿರುವ ಲಾಕ್ ಡೌನ್ ಸಡಿಲಗೊಂಡು ಚಿತ್ರೀಕರಣಕ್ಕೆ ಅವಕಾಶ ಸಿಕ್ಕರೆ ಮಂಗ್ಲಿ ಕನ್ನಡದ ಚಿತ್ರದಲ್ಲಿ ನಟಿಸುವುದು ಪಕ್ಕಾ ಎನ್ನುತ್ತವೇ ಮೂಲಗಳು.
-ಮಂಜುನಾಥ್