VIDEO : ಇಂಗ್ಲೀಷ್ ಮಾತಾಡು, ಮರಾಠಿ ಮಾತಾಡು ಎಂದ ಬ್ಯಾಂಕ್ ಸಿಬ್ಬಂದಿಗೆ ಚಳಿ ಬಿಡಿಸಿದ ರೈತನ ವಿಡಿಯೊ ನೋಡಿ

ಇದು ನಡೆದಿರುವುದು ಮಂಡ್ಯ ಜಿಲ್ಲೆಯ ಕೆರಗೋಡು ಎಂಬ ಗ್ರಾಮದಲ್ಲಿ. ಅಲ್ಲಿನ ಬ್ಯಾಂಕ್ ಆಫ್ ಬರೋಡದ ಸಿಬ್ಬಂದಿ ರೈತ ಗ್ರಾಹಕರಿಗೆ ಇಂಗ್ಲೀಷ್ ಮಾತಾಡು ಅಥವಾ ಮರಾಠಿ ಮಾತಾಡು ಎಂದು ಒತ್ತಾಯಿಸಿದ ವಿಡಿಯೊ ಇದು. ಇಂಥ ಕಥೆ ಎಲ್ಲೊ ಒಂದು ಊರಿನಲ್ಲಿ ನಡೆಯುತ್ತಿರುವುದಲ್ಲ, ಬಹುತೇಕ ಎಲ್ಲ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಇದೇ ಕಥೆ. ಯಾವುದೊ ರಾಜ್ಯದವರನ್ನು ತಂದು ಕೂರಿಸುತ್ತಾರೆ, ಅವರಿಗೆ ಕನ್ನಡ, ನಮಗೆ ಬೇರೆ ಭಾಷೆ ಬರಲ್ಲ, ಪೇಚಾಟ ಇದ್ದಿದ್ದೇ.

ಕಲಿತವರಾದರೆ ಹೇಗೊ ಅಡ್ಜಸ್ಟ್ ಅಲ್ಪಸ್ವಲ್ಪ ಹಿಂದಿ ಮಾತಾಡಬಹುದು, ಆದರೆ ಪಾಪ ರೈತರು ಏನು ಮಾಡಬೇಕು? ಬ್ಯಾಂಕ್ ನವರಾದರೂ ಇಂಥವರನ್ನು ಬೇರೆ ಯಾವುದೋ ಕೆಲಸಕ್ಕೆ ಹಚ್ಚಿ ಕನ್ನಡ ಬರುವವರನ್ನು ಕೂಡಿಸುವುದಿಲ್ಲ. ಎಲ್ಲ ಬ್ಯಾಂಕ್ ಗಳಲ್ಲಿ ಹೆಚ್ಚು ಜನರ ಜೊತೆ ಬೆರೆಯಬೇಕಾದ ವ್ಯಕ್ತಿಯೇ ಹೀಗೆ ಭಾಷೆ ಬರದವನಾಗಿರುತ್ತಾನೆ. ಹೀಗಾದಾಗ ಅವನಿಗೇನೂ ತೊಂದರೆ ಇಲ್ಲ, ಆದರೆ ಗ್ರಾಹಕರಿಗೆ ಕಷ್ಟ.

ವಿಡಿಯೊದಲ್ಲಿ ನೋಡಿ, ಅವನು ಕಡೆಪಕ್ಷ ಪಕ್ಕದಲ್ಲಿದ್ದವರಿಗೆ ರೈತ ಏನು ಹೇಳುತ್ತಿದ್ದಾನೆ ಎಂದು ಕೇಳಿ ಉತ್ತರಿಸುವ ಬದಲು, ಆ ರೈತನಿಗೇ ನೀನು ಇಂಗ್ಲೀಷ್ ಮಾತಾಡು, ಮರಾಠಿ ಮಾತಾಡು ಅನ್ನುತ್ತಿದ್ದಾನೆಂದರೆ ಅವನ ಸೊಕ್ಕು ಎಷ್ಟು ಇರಬಹುದು. ಬದುಕ್ಕುತ್ತಿರೊದು – ತಿನ್ನುತ್ತಿರೋದು ಕನ್ನಡದ ಅನ್ನ, ಆದರೆ ಭಾಷೆ ಮಾತ್ರ ಮರಾಠಿ ಮಾತಾಡಬೇಕಂತೆ.

ಇವನು ಮಾಮೂಲಿ ಸಿಬ್ಬಂದಿ ಅಲ್ಲ, ಆ ಬ್ಯಾಂಕಿನ ಅಸಿಸ್ಟೆಂಟ್ ಮ್ಯಾನೆಜರ್ ಕೂಡ ಹೌದು. ಪಿಎಂ ಕಿಸಾನ್ ಯೋಜನೆಯ ಹಣ ಪಡೆಯಲು ಹೋದ ರೈತ ಸೋಮಶೇಖರ್ ಅವರೊಂದಿಗೆ ಆತ ಹೀಗೆ ಮಾತಾಡಿರುವುದು. ಇವರು ರೈತ ಸಂಘದ ಮುಖಂಡ ಕೂಡ ಆಗಿರುವುದರಿಂದ ಜೋರು ದ್ವನಿ ಮಾಡಿ ಕೇಳುತ್ತಿದ್ದಾರೆ, ಅವರಿಗೇ ಹೀಗೆ ಮಾತಾಡುವ ಇವನು ಇತರೆ ಬಡಪಾಯಿ ರೈತರಿಗೆ ಹೇಗೆ ಮಾತಾಡಬಹುದು‌?

ಅವನ ವರ್ತನೆಯನ್ನು ಸೋಮಶೇಖರ್ ರೆಕಾರ್ಡ್ ಮಾಡಿಕೊಂಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಕನ್ನಡಪರ ಸಂಘಟನೆಗಳು ಅವನನ್ನು ಅಲ್ಲಿಂದ ತಗೆಯಲು ಒತ್ತಾಯಿಸಿವೆ. ಇಲ್ಲದಿದ್ದರೆ ಹೋರಾಟ ಮಾಡುವುದಾಗಿ ಹೇಳಿವೆ. ಜಗಳ ಜೋರಾಗುತ್ತಿದ್ದಂತೆ ಇತರೆ ಸಿಬ್ಬಂದಿ ಮಧ್ಯಪ್ರವೇಶಿಸಿ ತಣ್ಣಗಾಗಿಸಿ ಗ್ರಾಹರಕರನ್ನು ಹೊರಕಳಿಸಿದ್ದಾರೆ. ಎಲ್ಲ ಕಡೆಯೂ ಜನ ಹೀಗೆ ಜಾಗೃತರಾಗಬೇಕು, ಅಂದರೆ ಮಾತ್ರ ಈ ಪರಭಾಷಿಕರ ದಬ್ಬಾಳಿಕೆ ನಿಲ್ಲುವುದು.
-Team Infotrend