ಈ ರೈತ ದುಬಾರಿ ಮಾವಿನ ತೋಟದ ಕಾವಲಿಗಾಗಿ 9 ಬೇಟೆ ನಾಯಿಗಳು ಹಾಗೂ 3 ಭದ್ರತಾ ಸಿಬ್ಬಂದಿ ನೇಮಿಸಿದ್ದಾನೆ..!

ಸಾಮಾನ್ಯವಾಗಿ ನೀವೆಲ್ಲ ದೊಡ್ಡ ದೊಡ್ಡ ಬಂಗಲೆಗಳ ಕಾವಲಿಗೆ ಸಾಕಷ್ಟು ಸೆಕ್ಯೂರಿಟಿ ಗಾರ್ಡ್ಸ್ ಹಾಗೂ ಸಾಕು ನಾಯಿಗಳ ಕಾವಲು ಇಟ್ಟಿರುವುದನ್ನು ನೋಡಿರುತ್ತೀರಾ, ಆದರೆ ಆಶ್ಚರ್ಯವಾದರೂ ಸತ್ಯ, ಮಧ್ಯ ಪ್ರದೇಶದ ಆ ಒಂದು ಮಾವಿನ ತೋಟಕ್ಕೆ 3 ಜನ ಗಾರ್ಡ್ ಅಷ್ಟೇ ಅಲ್ಲದೇ ಬರೋಬ್ಬರಿ 9 ಸಾಕು ನಾಯಿಗಳನ್ನು ತೋಟದ ಭದ್ರತೆಗಾಗಿ ಇಡಲಾಗಿದೆ. ಆ ತೋಟಕ್ಕೆ ಇಷ್ಟೊಂದು ಭದ್ರತೆ ಏಕೆ ಅದರಲ್ಲಿ ಅಂತಹ ಯಾವ ಮಾವು ಇದೆ ಎಂಬೆಲ್ಲ ವಿವರ ಇಲ್ಲಿದೆ…

ಮಧ್ಯಪ್ರದೇಶದ ಜಬಲ್ಪುರದಲ್ಲಿರುವ ಈ ತೋಟದ ಮಾವಿನ ಹಣ್ಣಿನ ಬೆಲೆ ನೂರು – ಸಾವಿರ ರೂಪಾಯಿಗಳಲ್ಲಿ ಇರುವುದಿಲ್ಲ, ಬದಲಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 2 ಲಕ್ಷ 70 ಸಾವಿರ ರೂಪಾಯಿಗಳಷ್ಟು ಇದೆ..! ಹೌದು ಜಪಾನ್ ಮೂಲದ ಈ ಮಾವಿನ ಹಣ್ಣು ವಿಶ್ವ ಪ್ರಸಿದ್ಧ, ಹೀಗಾಗಿ ಇದಕ್ಕೆ ಇಷ್ಟೊಂದು ಬೆಲೆ. ಹೀಗಾಗಿ ಹಣ್ಣಿನ ತೋಟಕ್ಕೆ ಇಂತಹ ಭದ್ರತೆ ಅನಿವಾರ್ಯ. ಅದಕ್ಕಾಗಿ 9 ನಾಯಿ ಮತ್ತು ಮೂರು ಜನ ಕಾವಲುಗಾರರನ್ನು 24 ಘಂಟೆ ಕಾವಲಿಗೆ ನೇಮಿಸಿದ್ದಾರೆ.

ಈ ತೋಟದ ಮಾಲೀಕ ಸಂಕಲ್ಪ್ ಅವರು ಹೇಳುವ ಪ್ರಕಾರ, ಕೆಲವು ದಿನಗಳ ಹಿಂದೆ ಈ ಜಪಾನ್ ಮೂಲದ ಟಾಯಿಯೋ ನೊ ಟೊಮಂಗೋ ಎಂದರೆ ಜಪನಿ ಭಾಷೆಯಲ್ಲಿ ಸೂರ್ಯನ ಮೊಟ್ಟೆ ಎಂಬ ಮಾವಿನ ಹಣ್ಣಿನ ಬಗ್ಗೆ ವಿಶ್ವದೆಲ್ಲೆಡೆ ಚರ್ಚೆಯಾದಾಗ ಅಂದರೆ 2016 ರಲ್ಲಿ ಕೇವಲ ಒಂದು ಜೋಡಿ ಮಾವಿನ ಹಣ್ಣು ಬರೋಬ್ಬರಿ 5 ಲಕ್ಷ ರೂಪಾಯಿಗೆ ಹರಾಜಾದಾಗಿನಿಂದ ಇವರ ತೋಟದ ಮಾವು ಕಳ್ಳತನವಾಗಲು ಆರಂಭಿಸಿದವಂತೆ.

ಹೀಗಾಗಿ ಇಷ್ಟೊಂದು ಭಾರಿ ಭದ್ರತೆ ನೀಡಿ ತೋಟವನ್ನು ಕಾವಲು ಕಾಯಿಸುತ್ತಿದ್ದಾರಂತೆ..! ಈ ಹಣ್ಣು ಪೂರ್ತಿಯಾಗಿ ಪಕ್ವಗೊಂಡಾಗ ಕಡುಗೆಂಪು ಬಣ್ಣಕ್ಕೆ ತಿರುಗುತ್ತದೆ, ಇದರಲ್ಲಿ ನಾರು ಇರುವುದೇ ಇಲ್ಲ, ಸಾಕಷ್ಟು ಸಿಹಿ ಹೊಂದಿರುವ ಈ ಹಣ್ಣು 900 ಗ್ರಾಂ ವರೆಗೂ ತೂಕ ಬರುತ್ತದೆ, ಜಪಾನ್ ನಲ್ಲಿ ಈ ಹಣ್ಣನ್ನು ನಿಯಂತ್ರಿತ ವಾತಾವರಣದಲ್ಲಿ ಬೆಳೆಯಲಾಗುತ್ತದೆ, ಆದರೆ ಸಂಕಲ್ಪ್ ಅವರು ಉತ್ತರಪ್ರದೇಶದ ಜಬಲ್ಪುರದಲ್ಲಿ ಖಾಲೀ ಬಿದ್ದಿದ್ದ ಪಾಳು ಭೂಮಿಯನ್ನು ಹದಗೊಳಿಸಿ ಈ ಹಣ್ಣಿನ ತೋಟ ಮಾಡಿದ್ದಾರೆ.

2016-2017 ರಲ್ಲಿ ಈ ಹಣ್ಣು ಜಪಾನ್ ನಲ್ಲಿ ಬರೋಬ್ಬರಿ 3600 ಡಾಲರ್ ಗೆ ಹರಾಜಾಗಿತ್ತು..!. ಸಂಕಲ್ಪ್ ಅವರು ತಮ್ಮ 4 ಎಕರೆಯ ತೋಟದಲ್ಲಿ ಈ ವಿಶೇಷ ಮಾವಿನ ಹಣ್ಣಿನ ಗಿಡಗಳನ್ನು ನೆಟ್ಟಿದ್ದರು, ಆದರೆ ಇಂದು ಭಾರತೀಯ 14 ಹೈಬ್ರಿಡ್ ಮಾವುಗಳಿಗೆ ಹಾಗೂ 6 ವಿದೇಶಿ ತಳಿಯ ಹಣ್ಣುಗಳನ್ನು ಬೆಳೆದಿದ್ದಾರೆ. ಭಾರತದಲ್ಲಿ ಈ ಹಣ್ಣಿಗೆ ತಾಮಾಗೋ ಎಂಬ ಹೆಸರಿನಿಂದ ಕರೆಯುತ್ತಾರೆ ಅಲ್ಲದೇ ಇದನ್ನು ಭಾರತದ ಈ ಒಂದು ಜಾಗದಲ್ಲಿ ಬಿಟ್ಟರೆ ಬೇರೆಲ್ಲೂ ಬೆಳೆದಿಲ್ಲ..!

ಈ ತಾಮಾಗೋ ಹಣ್ಣಿನ 52 ಗಿಡಗಳ ಜೊತೆಗೆ ಇನ್ನುಳಿದ ಸಾಕಷ್ಟು ತಳಿಯ ಗಿಡ ಬೆಳೆದಿರುವ ಸಂಕಲ್ಪ್ ಪರಿಹಾರ್ ಅವರು ಜಪಾನ್ ನಲ್ಲಿ ಇಂತಹ ಮಾವನ್ನು ಪಾಲಿ ಹೌಸ್ ನಲ್ಲಿ ಬೆಳೆಯಲಾಗುತ್ತದೆ ಆದರೆ ನಮ್ಮಲ್ಲಿ ಸುಲಭವಾಗಿ ಬೆಳೆದಿದೆ ಎಂದು ಹೇಳಿದ್ದಾರೆ. ಇವರು ಈ ಹಣ್ಣಿನ ಗಿಡಗಳನ್ನು ಪ್ರಾಯೋಗಿಕವಾಗಿ ನೆಟ್ಟಿದ್ದರಂತೆ ಆದರೆ, ಅವುಗಳು ಜಬಲ್ಪುರದ ವಾತಾವರಣಕ್ಕೆ ಹೊಂದಿಕೊಂಡು ಬೆಳೆದಿವೆ.