VIDEO : ಕೊರೋನದಿಂದ ಕೆಲಸ ಕಳೆದುಕೊಂಡ ಈ MBA ಪದವಿಧರ ಅಣಬೆ ಬೆಳೆದು ಜೀವನ ಕಟ್ಟಿಕೊಂಡರು – ಅಣಬೆ ಬೆಳೆಯುವ ಮಾಹಿತಿಯ ವಿಡಿಯೊ ಇದೆ ನೋಡಿ
ಕಳೆದ ವರ್ಷ ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿತ್ತು. ಅದಾಗಲೇ ವಿದೇಶಗಳಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಗುತ್ತಿತ್ತು. ಈ ವೇಳೆಯಲ್ಲಿ ದೇಶದ ಬೇರೆ ಬೇರೆ ಕಡೆಗಳಲ್ಲಿ ಕೆಲಸಗಳನ್ನು ಮಾಡುತ್ತಿದ್ದ ಜನರು ಇಲ್ಲೂ ಕೂಡಾ ಲಾಕ್ ಡೌನ್ ಆಗಬಹುದೆಂದು, ಅದಕ್ಕಿಂತ ಮೊದಲೇ ತಮ್ಮ ತಮ್ಮ ಊರುಗಳಿಗೆ ಮರಳಿ ಬಂದರು. ಇಂತಹವರಲ್ಲಿ ಜಾರ್ಖಂಡ್ ನ ಜೆಮ್ ಶೆಡ್ ಪುರದ ನಿವಾಸಿಯಾಗಿರುವ ರಾಜೇಶ್ ಕುಮಾರ್ ಸಹ ಒಬ್ಬರು.
41 ವರ್ಷ ವಯಸ್ಸಿನ ಎಂಬಿಎ ಪದವೀಧರ ರಾಜೇಶ್ ಕುಮಾರ್ ಅವರು ಅಸ್ಸಾಂ ನ ಒಂದು ಕಂಪನಿಯಲ್ಲಿ ಕೆಲಸವನ್ನು ಮಾಡುತ್ತಿದ್ದವರು ಕೊರೊನಾ ಸಮಯದಲ್ಲಿ ತಮ್ಮ ಕುಟುಂಬದ ಜೊತೆಗೆ ಇರುವುದು ಉತ್ತಮವೆಂದು ಭಾವಿಸಿ ತಮ್ಮ ಕೆಲಸವನ್ನು ಬಿಟ್ಟು ಲಾಕ್ ಡೌನ್ ಘೋಷಣೆಗೆ ಮೊದಲೇ ಮನೆಗೆ ಮರಳಿ ಬಂದು ಬಿಟ್ಟರು.
ಇದ್ದ ಕೆಲಸವನ್ನು ಬಿಟ್ಟು ಬಂದ ಅವರಿಗೆ ಸ್ಥಳಿಯವಾಗಿ ಬೇಗ ಮತ್ತೊಂದು ಕೆಲಸ ಸಿಗುವುದು ಅಷ್ಟೇನೂ ಸುಲಭ ಆಗಿರಲಿಲ್ಲ. ಆದರೆ ದಿನ ಕಳೆದಂತೆ ಹಣ ಖಾಲಿಯಾಗುತ್ತಾ ಬಂದಿತು. ಆಗ ಅವರು ಸುಮ್ಮನೆ ಮನೆಯಲ್ಲಿ ಕುಳಿತಿರುವುದು ಬೇಡವೆಂದು ಮನೆಯಲ್ಲೇ ಉದ್ಯೋಗವೊಂದನ್ನು ಮಾಡಲು ಆರಂಭಿಸಿದರು, ಅದುವೇ ಅಣಬೆ ಬೇಸಾಯ.

ಹೌದು, ರಾಜೇಶ್ ಕುಮಾರ್ ಅವರು ತಮ್ಮ ಮನೆಯಲ್ಲಿ ಅಣಬೆ ಅಥವಾ ಮಶ್ರೂಮ್ ಬೆಳೆಯುವುದನ್ನು ಆರಂಭಿಸಿದರು. ರಾಜೇಶ್ ಅವರು ತಮಗೆ ಮಶ್ರೂಮ್ ಕುರಿತಾಗಿ ಮೊದಲೇ ತಿಳಿದಿತ್ತು. ನಾನು ಅದನ್ನು ಸಿಲುಗುಡಿಯಲ್ಲಿ ಮೊದಲು ನೋಡಿದ್ದೆ, ಅದರಿಂದ ತಯಾರಿಸಿದ ತಿನಿಸುಗಳನ್ನು ತಿಂದಿದ್ದೆ, ಅದಕ್ಕೆ ಡಿಮ್ಯಾಂಡ್ ಇದೆಯೆಂದು ಗೊತ್ತಿತ್ತು.
ಇತ್ತೀಚಿನ ವರ್ಷಗಳಲ್ಲಿ ಮಶ್ರೂಮ್ ಆರೋಗ್ಯಕ್ಕೆ ಉತ್ತಮ ಎನ್ನುವ ಜಾಗೃತಿ ಜನರಲ್ಲಿ ಮೂಡಿರುವುದರಿಂದ ನಾನೂ ಅದರ ಕೃಷಿಯನ್ನು ಮಾಡುವ ಕುರಿತಾಗಿ ಆಲೋಚನೆಯನ್ನು ಮಾಡಿದ್ದಾಗಿ ಹೇಳಿದ್ದಾರೆ. ಆರಂಭದಲ್ಲಿ ಅವರು ಇಂಟರ್ನೆಟ್ ಸಹಾಯದಿಂದ ಅಣಬೆ ಬೆಳೆಯುವ ವಿಚಾರವಾಗಿ ಒಂದಷ್ಟು ಮಾಹಿತಿಯನ್ನು ಸಂಗ್ರಹಿಸಿದರು. ಯೂಟ್ಯೂಬ್ ನಲ್ಲಿ ಈ ವಿಷಯದಲ್ಲಿ ಅನೇಕ ವೀಡಿಯೋಗಳನ್ನು ನೋಡಿದರು.
ಅನಂತರ ಜೆಮ್ಶಡ್ ಪುರದಲ್ಲಿ ಅಣಬೆ ಬೆಳೆಯುವ ವಿಚಾರವಾಗಿ ತರಬೇತಿ ಎಲ್ಲಿ ನೀಡುವರು ಎನ್ನುವ ಮಾಹಿತಿಯನ್ನು ಸಂಗ್ರಹಿಸಿದರು. ಆದರೆ ಅಲ್ಲಿ ಕೆಲವು ಕಾರಣಗಳಿಂದ ತರಬೇತಿ ಬಂದ್ ಆಗಿತ್ತು. ಆದರೆ ರಾಜೇಶ್ ಅವರ ಆಸಕ್ತಿಯನ್ನು ಕಂಡು ಅಲ್ಲಿ ಗಣೇಶ್ ದಾಸ್ ಎನ್ನುವವರು ರಾಜೇಶ್ ಅವರಿಗೆ ತರಬೇತಿ ನೀಡಿದರು.

ಅವರ ಮಾರ್ಗದರ್ಶನದಲ್ಲೇ ರಾಜೇಶ್ ಮಶ್ರೂಮ್ ಬೆಳೆಯುವ ಕಾರ್ಯಕ್ಕೆ ಚಾಲನೆಯನ್ನು ನೀಡಿದರು. ಅವರು ಮೂರು ಕಡೆ ಮನೆಯಲ್ಲೇ ಮಶ್ರೂಮ್ ಬೆಳೆಯಲು ಸಿದ್ಧತೆ ನಡೆಸಿದರು. ಹೆಚ್ಚು ಖರ್ಚು ಮಾಡದೇ ಸ್ಥಳಿಯ ಸಂಪನ್ಮೂಲ ಬಳಸಿ ಶೆಡ್ ನಿರ್ಮಾಣ ಮಾಡಿದರು. ಅನಂತರ ಅವರು ಅಣಬೆ ಬೆಳೆಯಲು ಆರಂಭಿಸಿದರು.
ಶೆಡ್ ನಿರ್ಮಾಣ ಮಾಡಲು ಹಾಗೂ ಅಣಬೆ ಬ್ಯಾಗುಗಳಿಗಾಗಿ ಅವರಿಗೆ 25 ಸಾವಿರ ರೂ.ಖರ್ಚಾಯಿತು. ಆದರೆ ಅದು ಒಂದು ಸಲ ಹಾಕುವ ಬಂಡವಾಳವಾಗಿತ್ತು. ಇನ್ನು ಮೊದಮೊದಲು ಅಣಬೆ ಬೆಳೆದ ಮೇಲೆ ರಾಜೇಶ್ ನಷ್ಟವನ್ನು ಎದುರಿಸಬೇಕಾಯಿತು. ಆದರೆ ಅವರು ಅದರಿಂದ ಧೈರ್ಯ ಕಳೆದುಕೊಳ್ಳಲಿಲ್ಲ. ಎರಡನೇ ಬಾರಿ ಅವರಿಗೆ ಯಶಸ್ಸು ದೊರೆಯಿತು.
ಸ್ವಲ್ಪ ಲಾಭ ಬಂದು ಅವರಿಗೆ ಅದು ಪ್ರೋತ್ಸಾಹವನ್ನು ನೀಡಿತು. ಅಣಬೆಯನ್ನು ಬೆಳೆಯಬೇಕಾದರೆ ಕೃಷಿಕರು ತಾಪಮಾನದ ಹಾಗೂ ಋತುವಿನ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸಬೇಕು, ಯಾವ ಕಾಲದಲ್ಲಿ ಯಾವ ಅಣಬೆಗಳನ್ನು ಬೆಳೆಯಬೇಕೆಂಬ ವಿಚಾರವನ್ನು ಅರಿತು ಕೃಷಿ ಮಾಡಿದರೆ ಸೂಕ್ತ ಎಂದು ರಾಜೇಶ್ ಹೇಳುತ್ತಾರೆ.

ಈಗ ಅವರು ಮಾಡುತ್ತಿರುವ ಕೆಲಸದಲ್ಲಿ ಕೇವಲ ಮಶ್ರೂಮ್ ಬ್ಯಾಗ್ ಗೆ ಮಾತ್ರವೇ ಹಣ ಹೂಡಬೇಕಿದೆ. ಒಂದು ಬ್ಯಾಗ್ ನ ಮೇಲೆ ಸುಮಾರು 42 ರೂ.ಖರ್ಚಾಗುತ್ತದೆ ಎನ್ನಲಾಗಿದೆ. ಒಂದು ಬ್ಯಾಗ್ ಅಣಬೆಯಿಂದ ಸುಮಾರು 140 ರಿಂದ 200 ರೂ.ಗಳಿಸಬಹುದಾಗಿದೆ ಎಂದು ರಾಜೇಶ್ ಹೇಳುತ್ತಾರೆ.
ಅಣಬೆ ಕೃಷಿ ಆರಂಭಿಸಿದ ಮೂರ್ನಾಲ್ಕು ತಿಂಗಳುಗಳಲ್ಲೇ ಕೃಷಿಕರು ತಾವು ಹೂಡಿದ ಬಂಡವಾಳವನ್ನು ಮರಳಿ ಪಡೆಯುವ ಅವಕಾಶ ಇಲ್ಲಿದೆ. ಪ್ರಸ್ತುತ ರಾಜೇಶ್ ಅವರು 70 ಮಂದಿಗೆ ಅಣಬೆ ಪೂರೈಕೆಯನ್ನು ಮಾಡುತ್ತಿದ್ದಾರೆ. ಅವರಿಂದ ಅಣಬೆ ಖರೀದಿ ಮಾಡಿದವರು ಬೇರೆಯವರಿಗೂ ಸಂಪರ್ಕ ಕಲ್ಪಿಸಿದರು.
ಈಗ ರಾಜೇಶ್ ಅವರ ಬಳಿ ಬೇಡಿಕೆ ಹೆಚ್ಚಿದೆ ಆದರೆ ಪೂರೈಸಲು ಅಷ್ಟು ಪ್ರಮಾಣದ ಅಣಬೆ ಅವರು ಇನ್ನೂ ಬೆಳೆಯುತ್ತಿಲ್ಲ. ಕೇವಲ 1050 ಸ್ಕ್ವೇರ್ ಫೀಟ್ ಜಾಗದಲ್ಲಿ ಅಣಬೆ ಕೃಷಿ ಮಾಡುವ ರಾಜೇಶ್ ಅವರು ತಿಂಗಳಿಗೆ ಸುಮಾರು 30 ಸಾವಿರ ರೂ. ಸಂಪಾದನೆ ಮಾಡುತ್ತಿದ್ದಾರೆ. ಇದು ದೊಡ್ಡ ಆದಾಯವೇನಲ್ಲವಾದರೂ ಅಷ್ಟು ಚಿಕ್ಕ ಜಾಗದಲ್ಲಿ ಇದು ಅತ್ಯುತ್ತಮ ದುಡಿಮೆ ಅನ್ನಬಹುದು.

ಈಗ ಅವರು ಅಣಬೆ ಬೇಸಾಯದ ಬಗ್ಗೆ ಒಬ್ಬ ತರಬೇತುದಾರನಾಗಿಯೂ ಕೆಲಸವನ್ನು ಮಾಡುತ್ತಿದ್ದು, ಅಣಬೆ ಕೃಷಿ ಮಾಡುವ ಆಸಕ್ತಿ ಇರುವವರಿಗೆ ಅವರು ಸೂಕ್ತ ತರಬೇತಿಯನ್ನು ಸಹ ನೀಡುತ್ತಾರೆ. ಅಲ್ಲದೇ ಎರಡನೇ ಬಾರಿ ಲಾಕ್ ಡೌನ್ ಆಗುವ ಮೊದಲು ಅವರು ಸುತ್ತ ಮುತ್ತಲ ಹಳ್ಳಿ ಹಳ್ಳಿಗೂ ಹೋಗಿ ಮಹಿಳೆಯರ ಗುಂಪುಗಳಿಗೆ ತರಬೇತಿಯನ್ನು ನೀಡುತ್ತಿದ್ದರು.
ಅವರು ಈಗಾಗಲೇ ಮೂವತ್ತು ಜನರಿಗೆ ಅಣಬೆ ಕೃಷಿಯ ತರಬೇತಿ ನೀಡಿದ್ದಾರೆ. ರಾಜೇಶ್ ಅವರು ಸಾಧನೆ ಒಂದು ಸ್ಪೂರ್ತಿ ಹಾಗೂ ಪ್ರೇರಣೆಯಾಗಿರುವುದು ಸುಳ್ಳಲ್ಲ. ಕರ್ನಾಟಕದಲ್ಲಿಯೂ ಸಾಕಷ್ಟು ಅಣಬೆ ತರಬೇತಿದಾರರಿದ್ದಾರೆ, ಯಾವ ಕಾರಣಕ್ಕೂ ತರಬೇತಿ ಪಡೆಯದೇ ಅಣಬೆ ಬೆಳೆಯಲು ಮುಂದಾಗಬೇಡಿ.
ಅಣಬೆ ಕೃಷಿ ಹೈನುಗಾರಿಕೆ – ಕೋಳಿ ಸಾಕಾಣಿಕೆಯಯ ಹಾಗಲ್ಲ, ತರಬೇತಿ ಅತ್ಯವಶ್ಯ. ಬೆಳೆಯುವುದು – ಮಾರುವುದರ ಬಗ್ಗೆ ಕೂಡ ತರಬೇತಿಯಲ್ಲಿ ಮಾಹಿತಿ ವಿನಿಮಯವಾಗುತ್ತದೆ. ಆ ಮಾಹಿತಿ ಅತ್ಯಮೂಲ್ಯ ಎಂಬುದು ಗಮನದಲ್ಲಿರಲಿ. ತರಬೇತಿದಾರರ ಬಗ್ಗೆ ನೀವು ಹತ್ತಿರದ ಕೃಷಿ ವಿಜ್ಞಾನ ಕೇಂದ್ರ – ತೋಟಗಾರಿಕಾ ಕೇಂದ್ರದಲ್ಲಿ ವಿಚಾರಿಸಿ, ಗ್ಯಾರಂಟಿ ಸಹಾಯ ಸಿಗುತ್ತದೆ.
ಹಾಗೆಯೇ ಕನ್ನಡದಲ್ಲಿ ಗೂಗಲ್ ಸರ್ಚ್ ಮಾಡುವ ಮೂಲಕ ಕೂಡ ಖಾಸಗಿ ತರಬೇತಿದಾರರನ್ನು ಹುಡುಕಿಕೊಳ್ಳಿ. ಇನ್ನು ಮೇಲೆ ಒಂದು ಕನ್ನಡ ಯುಟ್ಯೂಬ್ ಚಾನೆಲ್ ವಿಡಿಯೊ ಕೂಡ ಇದ್ದು, ಅದರಲ್ಲಿ ಅಣಬೆ ಬೆಳೆಯುವ ಬಗ್ಗೆ ಉತ್ತಮ ಮಾಹಿತಿ ನೀಡಿದ್ದಾರೆ. ತಕ್ಕ ಮಟ್ಟಿಗೆ ಉಪಯೋಗವಾಗಬಹುದು, ಆಸಕ್ತರು ನೋಡಿ…
-Team Infotrend