ಸುನಾಮಿಯಿಂದ ತತ್ತರಿಸಿದವರಿಗೆ ಮುತ್ತಯ್ಯ ಮುರಳಿಧರನ್ ಮಾಡಿದ ಸಹಾಯ ಹೇಗಿತ್ತು ಗೊತ್ತಾ? ನಮ್ಮ ಕ್ರಿಕೇಟಿಗರು ಹೀಗೆ ದೇಶದ ಜೊತೆ ನಿಲ್ಲುವುದು ಯವಾಗ?

ನಮ್ಮ ದೇಶದಲ್ಲಿ ಕ್ರಿಕೇಟ್ ಧರ್ಮವಾಗಿ ಬೆಳೆದಿದೆ. ಬಹುಶಃ ನಮ್ಮ ದೇಶದಲ್ಲಿ ಈ ಆಟಕ್ಕೆ ಸಿಕ್ಕಷ್ಟು ಜನಪ್ರಿಯತೆ ಮತ್ತೆಲ್ಲೂ ಸಿಗಲ್ಲ. ಕ್ರಿಕೇಟ್ ಪ್ರೇಮಿಗಳು ಅಥವಾ ಕ್ರಿಕೇಟ್ ನೋಡದವರು ಇಲ್ಲಿ ಸಿಗುವುದು ಅಪರೂಪ. ಕ್ರಿಕೇಟಿಗರನ್ನು ವಿಶ್ವದ ಟಾಪ್ ಶ್ರೀಮಂತರಲ್ಲಿ ಒಬ್ಬರಬ್ಬಾಗಿಸಿದ್ದು ಕೂಡ ನಾವೇ. ಗೌರವ, ಪ್ರೀತಿ, ಸ್ಥಾನ, ದುಡ್ಡು ಎಲ್ಲವನ್ನೂ ಈ ದೇಶ ಕ್ರಿಕೇಟಿಗರಿಗೆ ಕೊಟ್ಟಿದೆ. ಆದರೆ ಅವರು ತನ್ನ ದೇಶ ಸಂಕಷ್ಟದಲ್ಲಿ ಇರುವಾಗ ಯಾಕೆ ಟೊಂಕ ಕಟ್ಟಿ ಸಹಾಯಕ್ಕೆ ನಿಲ್ಲುವುದಿಲ್ಲ?

ನಿಮಗೆ ನೆನಪಿರಬಹುದು 2004 ರಲ್ಲಿ ಸುನಾಮಿ ಹೊಡೆತಕ್ಕೆ ಸಿಲುಕಿ ತನ್ನ ದೇಶ ನಲುಗಿ ಹೋದಾಗ ಶ್ರೀಲಂಕಾದ ಕ್ರಿಕೇಟರ್ ಮುತ್ತಯ್ಯ ಮುರಳಿಧರನ್ ತಮ್ಮ ಶಕ್ತಿ ಮೀರಿ ದೇಶಕ್ಕಾಗಿ ಕೆಲಸ ಮಾಡಿದರು. ತಕ್ಷಣ ಸ್ವಯಂ ಪ್ರೇರಿತರಾಗಿ ಪರಿಹಾರ ಕಾರ್ಯದಲ್ಲಿ ತೊಡಗಿದ ಮುತ್ತಯ್ಯ, ಸರಕಾರದಿಂದ ಸಿಗಬಹುದಾದ ಎಲ್ಲ ಸೌಲಭ್ಯಗಳನ್ನು ಹಳ್ಳಿ ಹಳ್ಳಿಗೂ ತಲುಪಿಸಿದರು.

ತಮ್ಮ ಪೌಂಡೆಶನ್ ಆಫ್ ಗುಡ್ ನೆಸ್ ಎಂಬ ಸಂಸ್ಥೆಯ ಮೂಲಕ ಸರಕಾರಕ್ಕೆ ಬೆನ್ನೆಲುಬಾಗಿ ನಿಂತು ಸಂತ್ರಸ್ಥರಿಗೆ ಸಹಾಯ ಮಾಡಿದ್ದರು. ಸುನಾಮಿಯ ಹೊಡೆತಕ್ಕೆ ಸಿಕ್ಕ ಅನೇಕ ಹಳ್ಳಿಗಳನ್ನು ದತ್ತು ಪಡೆದು ಅವುಗಳನ್ನು ಅಭಿವೃದ್ಧಿಪಡಿಸಿದರು. ಸಂತ್ರಸ್ಥ ಸಹಾಯಕ್ಕಾಗಿ ದೇಶವಿದೇಶಗಳಿಂದ ಅಪಾರ ಪ್ರಮಾಣದ ದೇಣಿಗೆ ಸಂಗ್ರಹಿಸಿ ಸರಕಾರಕ್ಕೆ ಕೊಟ್ಟಿದ್ದರು.

ಅಂತರರಾಷ್ಟ್ರೀಯ ಮಟ್ಟದಲ್ಲಿ ತಮಗಿರುವ ಇಮೇಜ್ ಬಳಸಿಕೊಂಡು ಸಂತ್ರಸ್ಥರಿಗೆ ಸಕಲ ರೀತಿಯ ನೆರವು ಕೊಡಿಸಿದರು. ಈ ಕಾರ್ಯಕ್ಕಾಗಿ ಅವರಿಗೆ ವಿಶ್ವ ಸಂಸ್ಥೆ ಸಹ ಪ್ರಶಂಸೆ ವ್ಯಕ್ತಪಡಿಸಿತ್ತು. ಅಂತರರಾಷ್ಟ್ರೀಯ ಮಟ್ಟದಿಂದ ವಿಮಾನಗಳ ಮೂಲಕ ಸಹಾಯ ಬಂದಾಗ ಅದನ್ನು ರಸ್ತೆ ಮೂಲಕ ಹಳ್ಳಿ ಹಳ್ಳಿಗೆ ಹತ್ತು ಹತ್ತು ಟ್ರಕ್ ಗಳ ಮೂರು ತಂಡ ರಚಿಸಿ ತಲುಪಿಸಿದರು.

ಹಣಕಾಸಿನಿಂದ ಹಿಡಿದು ಆಹಾರ – ಬಟ್ಟೆಯವರೆಗೆ ಎಲ್ಲ ರೀತಿಯಲ್ಲೂ ತನ್ನ ಜನರಿಗೆ ನೆರವು ಕೊಡಿಸಿದರು. ಸ್ವತಃ ತಾವೇ ಜನರವರೆಗೆ ಹೋಗಿ ತಲುಪಿಸಿದರು. ಸುನಾಮಿ ಹೊಡೆತಕ್ಕೆ ಸಿಲುಕಿದ ಕಟ್ಟಡಗಳ ಪುನರ್ನಿರ್ಮಾಣ ಕಾರ್ಯಕ್ಕೆ ಸಿಮೇಂಟ್ ಕೊರತೆಯಾದಾಗ ಜಾಗತಿಕ ಸಿಮೇಂಟ್ ದೈತ್ಯ ಲಾಫಾರ್ಜ್ ನೊಂದಿಗೆ ಒಪ್ಪಂದ ಮಾಡಿಕೊಂಡು ತನ್ನ ಕೆಲಸಗಳ ಬದಲಿಗೆ ಸಿಮೇಂಟ್ ಒದಗಿಸುವಂತೆ ನೋಡಿಕೊಂಡರು.

ಇದರಿಂದ ಶ್ರೀಲಂಕಾದಾದ್ಯಂತ ಮನೆಗಳು, ಶಾಲೆಗಳು, ಕ್ರೀಡಾ ಸೌಲಭ್ಯಗಳು, ಕಂಪ್ಯೂಟರ್ ಕೇಂದ್ರಗಳು ಮತ್ತೆ ತಲೆ ಎತ್ತಿದವು. ಇದೆಲ್ಲ ಶ್ರೀಲಂಕಾದ ಸ್ಪಿನ್ ಮಾಂತ್ರಿಕ ತನ್ನ ದೇಶ ತತ್ತರಿಸಿದಾಗ ಅದರೊಂದಿಗೆ ನಿಂತ ಪರಿ. ಇನ್ನು ನಮ್ಮ ದೇಶದ ಕ್ರಿಕೇಟಿಗರ ಬಗ್ಗೆ ನಿಮಗೆ ಗೊತ್ತೇ ಇದೆ.

ಇಲ್ಲಿಯವರೆಗೆ ಯಾವೊಬ್ಬ ಭಾರತೀಯ ಕ್ರಿಕೇಟಿಗನೂ ಸಂಕಷ್ಟದ ಸಂದರ್ಭದಲ್ಲಿ ದೇಶದ ಜನರ ಜೊತೆಗೆ ನಿಂತ ಉದಾಹರಣೆಯೇ ಇಲ್ಲ. ತಕ್ಕಮಟ್ಟಿಗೆ ದುಡ್ಡು ಕೊಟ್ಠು ಕೈ ತೊಳೆದುಕೊಳ್ಳುತ್ತಾರೆಯೇ ಹೊರತು, ಮುರಳಿಧರನ್ ಥರ ಟೊಂಕ ಕಟ್ಟಿ ನಿಂತಿದ್ದೇ ಇಲ್ಲ. ಈಗ ಕೋವಿಡ್ ಸಂಕಷ್ಟದಲ್ಲೂ ಯಾವೊಬ್ಬ ಕ್ರಿಕೇಟಿಗನೂ ಒಂದು ರುಪಾಯಿ ಕೂಡ ಸಹಾಯ ಮಾಡಿರಲಿಲ್ಲ‌.

ಯಾವಾಗ ಆಸ್ಟ್ರೇಲಿಯಾದ ಆಟಗಾರ ಪ್ಯಾಟ್ ಕಮಿನ್ಸ್ 50 ಸಾವಿರ ಡಾಲರ್ ಕೊಟ್ಟರೋ ಆಗ ಇನ್ನೂ ಸುಮ್ಮನಿದ್ದರೆ ಮರ್ಯಾದೆ ಇರಲ್ಲ ಎಂದು ಒಬ್ಬೊಬ್ಬರೇ ಕೊಡತೊಡಗಿದರು. ಅವರು ಕೈ ಬಿಚ್ಚದೇ ಹೋಗಿದ್ದರೆ ಇವರಿನ್ನೂ ಸಹಾಯ ಮಾಡುತ್ತಿರಲಿಲ್ಲವೇನೋ.

ಸಿನೆಮಾ ತಾರೆಯರಾಯ್ತು, ಕ್ರಿಕೇಟಿಗರಾಯ್ತು ಜನರಿಂದಲೇ ಎಲ್ಲ ಗಳಿಸಿ ಕೊನೆಗೆ ಜನರನ್ನೇ ಮರೆಯುತ್ತಾರೆ, ಒಬ್ಬ ಸೋನು ಸೂದ್ ಮಾತ್ರ ಅವತ್ತಿನಿಂದ ಇವತ್ತಿನವರೆಗೂ ಬಡವರ ಜೊತೆ ನಿಂತಿದ್ದಾರೆ. ಈಗ ನಮ್ಮ ದೇಶದ ಪ್ರಮುಖ ಮಹಾನ್ ಕ್ರಿಕೇಟಿಗರ ಆಸ್ತಿ ವಿವರ ಸ್ವಲ್ಪ ನೋಡುವಾ ಬನ್ನಿ…

ಕ್ರಿಕೇಟ್ ದೇವರು ಎಂದೇ ಕರೆಯಲಾಗುವ ಭಾರತ ರತ್ನ ಸಚಿನ್ ತೆಂಡೂಲ್ಕರ್ ರವರ ಆಸ್ತಿ ಮೌಲ್ಯ : 120 ಮಿಲಿಯನ್ ಡಾಲರ್! ಅಂದರೆ ಅಂದಾಜು 890 ಕೋಟಿ ರೂ.!
ಹಾಗೆಯೆ ಅತ್ಯಂತ ಹೋಲ್ಡ್ ನಲ್ಲಿ ಇರುವ ತಂಡದ ನಾಯಕ ವಿರಾಟ್ ಕೊಹ್ಲಿ ಆಸ್ತಿ : ಸುಮಾರು 119 ಮಿಲಿಯನ್ ಡಾಲರ್! ಅಂದರೆ ಅಂದಾಜು 889 ಕೋಟಿ ರೂ!
ಇನ್ನು ನಮ್ಮ ಭಾರತ ತಂಡದ ಸಾರ್ವಕಾಲಿಕ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿಯವರ ಆಸ್ತಿ : ಸುಮಾರು 111 ಮಿಲಿಯನ್ ಡಾಲರ್! ಅಂದರೆ ಅಂದಾಜು 830 ಕೋಟಿ ರುಪಾಯಿ!

ಅದೇ ರೀತಿ ಸೌರವ್ ಸೌರವ್ ಗಂಗೂಲಿ – 55.5 ಮಿಲಿಯನ್ ಡಾಲರ್, ವೀರೇಂದ್ರ ಸೆಹ್ವಾಗ್ – 40 ಮಿಲಿಯನ್ ಡಾಲರ್, ಯುವರಾಜ್ ಸಿಂಗ್- 35.5 ಮಿಲಿಯನ್ ಡಾಲರ್, ಸುರೇಶ್ ರೈನಾ – 25 ಮಿಲಿಯನ್ ಡಾಲರ್, ರಾಹುಲ್ ದ್ರಾವಿಡ್ – 23 ಮಿಲಿಯನ್ ಡಾಲರ್, ರೋಹಿತ್ ಶರ್ಮಾ – 16.6 ಮಿಲಿಯನ್ ಡಾಲರ್, ಗೌತಮ್ ಗಂಭೀರ್- 15 ಮಿಲಿಯನ್ ಡಾಲರ್ ಆಸ್ತಿ ಹೊಂದಿದ್ದಾರೆ. ನೆನಪಿರಲಿ, ಇದೆಲ್ಲ ಘೋಷಿತ ಆಸ್ತಿ ಮಾತ್ರ!
-Team Infotrend