ಔಷಧಿ ಸಸ್ಯಗಳು ಹೆಸರು ಮತ್ತು ಉಪಯೋಗ
ಪ್ರಾಚೀನ ಕಾಲದಿಂದಲೂ ಭಾರತದ ಜನತೆ ವಿಶ್ವದ ಅನ್ಯ ದೇಶಗಳ ಜನತೆಗೆ ಹೋಲಿಕೆ ಮಾಡಿದರೆ ಹೆಚ್ಚು ರೋಗನಿರೋಧಕ ಶಕ್ತಿ ಹೊಂದಿರುವ ವಿಷಯ ತಮಗೆಲ್ಲ ಗೊತ್ತೇ ಇದೆ, ಇದಕ್ಕೆಲ್ಲ ಭಾರತದ ಜನತೆಗೆ ಹಿಂದಿನಿಂದಲೂ ಕರಗತವಾಗಿರುವ ಆಯುರ್ವೇದ ಹಾಗೂ ಔಷಧಿಯ ಸಸ್ಯಗಳ ಬಳಕೆಯೇ ಮುಖ್ಯ ಕಾರಣ. ಭಾರತದ ಈ ಪುಣ್ಯಭೂಮಿಯಲ್ಲಿ ಸಿಗುವಷ್ಟು ಔಷಧಿಯ ಸಸ್ಯಗಳು ಜಗತ್ತಿನ ಬೇರೆ ಯಾವುದೇ ಪ್ರದೇಶದಲ್ಲಿಯೂ ಸಿಗಲು ಸಾಧ್ಯವಿಲ್ಲ. ಇಂದಿನ ಲೇಖನದಲ್ಲಿ ನಾವು Names of medicinal plants and their importance ಅಂದರೆ ಔಷಧಿ ಸಸ್ಯಗಳು ಹೆಸರು ಮತ್ತು ಉಪಯೋಗ ಬಗ್ಗೆ ಅರಿಯೋಣ ಬನ್ನಿ.

ಔಷಧಿ ಸಸ್ಯಗಳು ಹೆಸರು ಮತ್ತು ಉಪಯೋಗ
ಪರಿಚಯ
ಔಷಧಿ ಸಸ್ಯಗಳು ಹೆಚ್ಚಾಗಿ ಅರಣ್ಯ ಪ್ರದೇಶಗಳಲ್ಲಿ ಕಂಡುಬರುತ್ತವೆ ಹಾಗೂ ಇತ್ತೀಚಿನ ದಿನಗಳಲ್ಲಿ ಅಂತಹ ಗಿಡಮರಗಳನ್ನು ಜನರು ತಮ್ಮ ಮನೆ ಹತ್ತಿರ ಹಾಗೂ ಜಮೀನುಗಳಲ್ಲಿ ಬೆಳೆಯುತ್ತಿದ್ದು ಅಲೋಪತಿ ಔಷಧಿಗಳ ಅಬ್ಬರದ ನಡುವೆಯೂ ಭಾರತದಲ್ಲಿ ಇಂದಿಗೂ ಆಯುರ್ವೇದ ತನ್ನ ಛಾಪು ಕಳೆದುಕೊಂಡಿಲ್ಲ. ಇಂತಹ ಔಷಧಿಯ ಸಸ್ಯಗಳ ಸಾಲಿಗೆ ತುಳಸಿ, ಬೇವು, ಶುಂಠಿ, ನೆಲ್ಲಿ, ಅಶ್ವಗಂಧ, ಅರಿಶಿಣ, ಲ್ಯಾವೆಂಡರ್, ಬಿಲ್ವ, ಬೆಳ್ಳುಳ್ಳಿ, ಲೋಳೆಸರ, ದಾಲ್ಚಿನ್ನಿ, ಪುದಿನಾ, ಕಾಳು ಮೆಣಸು ಇತ್ಯಾದಿಗಳು ಸೇರುತ್ತಿದ್ದು, ಇವುಗಳನ್ನು ಮಾನವ ಯಾವ ರೀತಿ ಉಪಯೋಗಿಸಿಕೊಳ್ಳುತ್ತಿದ್ದಾನೆ ಹಾಗೂ ಅವುಗಳಿಂದ ಮಾನವನ ದೇಹಕ್ಕೆ ಇರುವ ಉಪಯೋಗಗಳೇನು ಎಂಬುದನ್ನೇ ಇಲ್ಲಿ ವಿವರಿಸಲಾಗಿದೆ.
ಬೇವು
ಈ ಸಸ್ಯ ಭಾರತದಲ್ಲಿ ಹಾಗೂ ಪಕ್ಕದ ಪಾಕಿಸ್ತಾನದಲ್ಲಿಯೂ ಕಂಡುಬರುತ್ತದೆ, ಈ ಸಸ್ಯದ ವೈಜ್ಞಾನಿಕ ಹೆಸರು Azadirachta Indica ಎಂದಾಗಿದ್ದು ಈ ಸಸ್ಯದ ಕಾಂಡ, ಎಲೆ, ಹೂ ಹಾಗೂ ಬೀಜ ಎಲ್ಲವೂ ಔಷಧಿಯ ಗುಣಗಳನ್ನು ಹೊಂದಿದೆ. ಸಾಂಕ್ರಾಮಿಕ ರೋಗಗಳ ನಾಶಕ್ಕೆ, ಜೀರ್ಣಕ್ರಿಯೆ ಹೆಚ್ಚಿಸುವಲ್ಲಿ ಹಾಗೂ ಕಫದ ಸಮಸ್ಯೆ ಇರುವವರಿಗೆ ರಾಮಬಾಣವಾಗಿ ಬೇವು ಕೆಲಸ ಮಾಡುತ್ತದೆ. ಹಾಗೇನೇ ಈ ಮರದ ಎಲೆಗಳು ಅನೇಕ ಚರ್ಮರೋಗಗಳನ್ನು ಹೋಗಲಾಡಿಸುವ ಶಕ್ತಿ ಹೊಂದಿವೆ.
ಅಷ್ಟೇ ಅಲ್ಲದೇ ಈ ಗಿಡ ಮನೆಯ ಆಸುಪಾಸಿನಲ್ಲಿ ಇದ್ದರೆ ಆ ಮನೆಯ ವಾತಾವರಣ ಅತ್ಯುತ್ತಮವಾಗಿರುವುದರಲ್ಲಿ ಸಂದೇಹವೇ ಇಲ್ಲ. ಕ್ಯಾನ್ಸರ್ ನಂತಹ ಮಹಾಮಾರಿಗಳನ್ನು ಸಹ ತಡೆಯುವ ಶಕ್ತಿ ಈ ಗಿಡಕ್ಕಿದ್ದು ಅನಾದಿ ಕಾಲದಿಂದಲೂ ಭಾರತದ ಜನತೆ ಹಲ್ಲುಜ್ಜಲು ಇದೆ ಸಸ್ಯದ ಕಡ್ಡಿಗಳನ್ನು ಬಳಸುತ್ತಾ ಬಂದಿದ್ದಾರೆ, ಅಲ್ಲದೇ ಈ ಗಿಡದ ಎಲೆಗಳನ್ನು ಅಗಿದು ತಿನ್ನುವದರಿಂದ ರಕ್ತ ಶುದ್ಧವಾಗುವುದಲ್ಲದೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
ತುಳಸಿ
ತುಳಸಿ ಗಿಡಗಳಿಗೆ ಭಾರತದಲ್ಲಿ ಅತ್ಯಂತ ಮಹತ್ವ ನೀಡಲಾಗುತ್ತದೆ, ಈ ಸಸ್ಯಗಳನ್ನು ಕೇವಲ ಔಷಧಿ ಸಸ್ಯಗಳಾಗಿ ನೋಡದೇ ಅನಾದಿ ಕಾಲದಿಂದಲೂ ತುಳಸಿ ಗಿಡಗಳಿಗೆ ಪೂಜಿಸಲಾಗುತ್ತದೆ. ಈ ತುಳಸಿ ಗಿಡಗಳನ್ನು ಭಾರತದ ಸನಾತನಿಗಳು ಮನೆಯ ಮುಂದೆ ನೆಟ್ಟು ಪೋಶಿಸಿ ಅವುಗಳಿಗೆ ಪೂಜೆ ಸಲ್ಲಿಸುತ್ತಾರೆ ಹಾಗೂ ಅವುಗಳ ಎಲೆಗಳನ್ನು ಪ್ರತಿದಿನ ಸೇವನೆ ಮಾಡುವದರಿಂದ ಹಲವಾರು ಮಾರಾಣಾಂತಿಕ ಕಾಯಿಲೆಗಳ ಭಯದಿಂದ ಕೂಡ ದೂರವಿರಬಹುದು. ಈ ಸಸ್ಯದ ವೈಜ್ಞಾನಿಕ ಹೆಸರು Ocimum Sactum ಆಗಿದ್ದು ಶ್ವಾಶ ಸಂಬಂಧಿತ ಕಾಯಿಲೆಗಳು, ಮಲೇರಿಯಾ, ಹಲ್ಲುಗಳಿಗೆ ಸಂಬಂಧಿಸಿದ ಕಾಯಿಲೆ ಹಾಗೂ ಲಿವರ್ ಗೆ ಸಂಬಂಧಿಸಿದ ಕಾಯಿಲೆಗಳಿಗೆ ಇದು ರಾಮಬಾಣವಾಗಿದೆ.
ಬಿಲ್ವ
ವಿಶ್ವವ್ಯಾಪಿ ಸಿಗುವ ಈ ಬಿಲ್ವ ಪತ್ರೆಯ ಮರ ಕೂಡ ಔಷಧಿಯ ಗುಣಗಳನ್ನು ಹೊಂದಿದ್ದು, ಈ ಮರದ ಎಲೆ, ಹಣ್ಣು ಹಾಗೂ ಬೇರುಗಳನ್ನು ಔಷಧಿಯಾಗಿ ಬಳಕೆ ಮಾಡಲಾಗುತ್ತದೆ. ಅಲ್ಲದೇ ಈ ಗಿಡದ ಭಾಗಗಳನ್ನು ಬಳಸಿ ಟಾನಿಕ್ ಕೂಡ ತಯಾರಿಸಲಾಗುತ್ತದೆ, ಈ ಸಸ್ಯದ ಭಾಗಗಳು ಮಲಬದ್ಧತೆ, ಅತಿಸಾರ ಹಾಗೂ ಕರುಳಿನ ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತವೆ, ಅಷ್ಟೇ ಅಲ್ಲದೇ ಈ ಮರವನ್ನು ಭಾರತದಲ್ಲಿ ಪೂಜ್ಯನಿಯವಾಗಿ ಕಾಣಲಾಗುತ್ತದೆ.

ನೆಲ್ಲಿ
ಭಾರತದಲ್ಲಿ ಸಿಗುವ ನೆಲ್ಲಿಕಾಯಿಗೆ Emblica Officinalis ಎಂಬ ವೈಜ್ಞಾನಿಕ ಹೆಸರಿದ್ದು, ಮಲಬದ್ಧತೆ, ಬೇಧಿ, ಕೆಮ್ಮು, ಉಸಿರಾಟ ಸಂಬಂಧಿ, ಹೃದಯ ಸಂಬಂಧಿ ಕಾಯಿಲೆ, ಅಸ್ತಮಾ, ಕ್ಷಯ, ಹಸಿವಾಗದಿರುವಿಕೆ, ಮೂತ್ರನಾಳ ಸಂಬಂಧಿತ ಕಾಯಿಲೆಗಳನ್ನು ಹೋಗಲಾಡಿಸುವ ಶಕ್ತಿಯನ್ನು ಇದು ಹೊಂದಿದೆ. ನೆಲ್ಲಿಕಾಯಿ ಸೇವನೆಯಿಂದ ಪುರುಷರಲ್ಲಿ ವೀರ್ಯದ ಗುಣಮಟ್ಟ ಹೆಚ್ಚಿಸುವುದಲ್ಲದೇ ಪುರುಷತ್ವವನ್ನು ಸಹ ಉತ್ತಮಗೊಳಿಸುತ್ತದೆ, ಇದಲ್ಲದೇ ಕಣ್ಣಿನ ದೃಷ್ಟಿ ಹೆಚ್ಚಿಸಿ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವ ಶಕ್ತಿಯನ್ನು ಸಹ ಹೊಂದಿದೆ. ಸಾಕಷ್ಟು ಆಯುರ್ವೇದ ಔಷಧಿಗಳಲ್ಲಿ ನೆಲ್ಲಿಕಾಯಿಯನ್ನು ಅದರಲ್ಲೂ ಬೆಟ್ಟದ ನೆಲ್ಲಿಯನ್ನು ಹೇರಳವಾಗಿ ಬಳಸಲಾಗುತ್ತದೆ.
ಲೋಳೆ ಸರ
ಕಡಿಮೆ ನೀರಿರುವ ಪ್ರದೇಶದಲ್ಲಿ ಹೇರಳವಾಗಿ ಬೆಳೆಯುವ ಚಿಕ್ಕ ಸಸ್ಯವಾಗಿರುವ ಲೋಳೆ ಸರವನ್ನು ಹೆಚ್ಚಾಗಿ ಸೌಂದರ್ಯವರ್ಧಕ ಕ್ರೀಮ್ ಗಳಲ್ಲಿ ಬಳಸಲಾಗುತ್ತದೆ, ಸೂರ್ಯನ ಕಿರಣಗಳಿಂದ ಹಾಳಾದ ಚರ್ಮದ ಕಾಂತಿ ಹೆಚ್ಚಿಸಲು, ತಲೆ ಹೊಟ್ಟು ಸಮಸ್ಯೆ, ಸೋರಿಯಾಸಿಸ್ ಟ್ರೀಟ್ಮೆಂಟ್ ಗೆ ಈ ಸಸ್ಯದ ಜೆಲ್ ರಾಮಬಾಣವಾಗಿದೆ, ಇತ್ತೀಚೆಗಂತೂ ಇದರ ಬಳಕೆ ವ್ಯಾಪಕವಾಗಿದೆ.
ಶುಂಠಿ
ವಿಶ್ವಾದ್ಯಂತ, ಅದರಲ್ಲಿಯೂ ಭಾರತದ ಅಡುಗೆ ಮನೆಗಳಲ್ಲಿ ಸಾಮಾನ್ಯವಾಗಿ ಬಳಸಲಾಗುವ ಶುಂಠಿಯನ್ನು ಹಸಿಯಾಗಿ ಅಥವಾ ಒಣಗಿಸಿ ಬಳಸಲಾಗುತ್ತದೆ, ಚಳಿಗಾಲದಲ್ಲಿಯಂತೂ ಶುಂಠಿಯ ಬಳಕೆ ಸರ್ವೇಸಾಮಾನ್ಯವಾಗಿದ್ದು ಇದರಿಂದ ತಯಾರಿಸಿದ ಪೇಯಗಳನ್ನು ಸೇವಿಸುವುದರಿಂದ ಹೃದಯ ಸಂಬಂಧಿ ಕಾಯಿಲೆ, ಶ್ವಾಸಕೋಶ ಸಂಬಂಧಿ ಕಾಯಿಲೆಗಳು, ಕಫ ನೆಗಡಿಯಂತಹ ಸಮಸ್ಯೆಗಳನ್ನು ಹೋಗಲಾಡಿಸಬಹುದು.
ಬೆಳ್ಳುಳ್ಳಿ
ಅಡುಗೆ ಮನೆಯಲ್ಲಿ ಸಿಗುವ ಆಹಾರ ಪದಾರ್ಥಗಳಲ್ಲಿಯೇ ಅತ್ಯಂತ ಹೆಚ್ಚು ಪಿಹೆಚ್ ವ್ಯಾಲ್ಯೂ ಹೊಂದಿರುವ ಈರುಳ್ಳಿಯ ಜಾತಿಗೆ ಸೇರುವ ಬೆಳ್ಳುಳ್ಳಿ ಇರಾನ್ ಹಾಗೂ ಮಧ್ಯ ಏಷ್ಯ ದೇಶದ ಮೂಲದಿಂದ ಬಂದಿದೆ. ಇದರಲ್ಲಿ ಸಲ್ಫರ್ ಹೆಚ್ಚಾಗಿ ಕಂಡುಬರುತ್ತಿದ್ದು, ಬೆಳ್ಳುಳ್ಳಿಯಲ್ಲಿ ಆಂಟಿ ಆಕ್ಸಿಡಂಟ್ ತತ್ವಗಳು ಹೇರಳವಾಗಿವೆ. ಬೆಳ್ಳುಳ್ಳಿ ಆಂಟಿ ಬಯೋಟಿಕ್ ಆಗಿ ಕೆಲಸ ನಿರ್ವಹಿಸುತ್ತದೆ, ಬೆಳ್ಳುಳ್ಳಿ ಬಳಕೆಯಿಂದ ಶ್ವಾಸಕೋಶ ಸಂಬಂಧಿತ ಕಾಯಿಲೆ ಹಾಗೂ ಕೆಮ್ಮು ನೆಗಡಿ ಕಫದಂತಹ ಸಮಸ್ಯೆಗಳನ್ನು ದೂರವಿಡಬಹುದು.
ಪುದಿನಾ
ಮಸಾಲಾ ಪದಾರ್ಥವಾಗಿ ಬಳಸುವ ಪುದಿನಾವನ್ನು ಸೌಂದರ್ಯ ವರ್ಧಕಗಳಲ್ಲಿ, ಔಷಧಿಗಳಲ್ಲಿ, ಪಾನ್ ಮಸಾಲಾದಲ್ಲಿ ಹಾಗೂ ಪಾನಿಯಗಳಲ್ಲಿ ಬಳಸಲಾಗುತ್ತದೆ, ಪುದಿನಾ ಗ್ಯಾಸ್ಟ್ರಿಕ್ ಸಮಸ್ಯೆ, ಸಂಧಿವಾತ ಪರಿಹಾರ ಮತ್ತು ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ಪುದಿನಾ ಹಸಿ ಎಲೆಗಳನ್ನು ಜಗಿದು ತಿನ್ನುವುದರಿಂದ ಬಾಯಿಯ ದುರ್ವಾಸನೆ ಕೂಡ ದೂರವಾಗುತ್ತದೆ.

ಇದರಂತೆಯೇ ಲವಂಗ, ದಾಲ್ಚಿನ್ನಿ ಗಳನ್ನು ಸಹ ಅಡುಗೆಯಲ್ಲಿ ಬಳಕೆ ಮಾಡುವುದರಿಂದ ಅವುಗಳಲ್ಲಿನ ಆಂಟಿ ಆಕ್ಸಿಡಂಟ್ ಹಾಗೂ ಔಷಧಿಯ ಗುಣಗಳು ಮಾನವನ ದೇಹದ ಹಲವಾರು ರೋಗಗಳನ್ನು ತಡೆಯುವಲ್ಲಿ ಕೆಲಸ ಮಾಡುತ್ತವೆ. ನಾವು ಕೊಟ್ಟ ಔಷಧಿ ಸಸ್ಯಗಳು ಹೆಸರು ಮತ್ತು ಉಪಯೋಗ ಮಾಹಿತಿ ಹೇಗೆ ಅನಿಸಿತು ಕಾಮೆಂಟ್ ಮಾಡಿ ತಿಳಿಸಿ
ಇದನ್ನೂ ಓದಿ: ಅಂತರ್ಜಾಲ ಉಪಯೋಗ ಮತ್ತು ದುರುಪಯೋಗ