ನಾಸಾದ ಅಧ್ಯಯನ: 9 ವರ್ಷಗಳಲ್ಲಿ ಸ್ಥಾನ ಬದಲಿಸುವ ಚಂದ್ರ, ವಿಶ್ವಕ್ಕೆ ಕಾದಿದೆ ಅಪಾಯಕಾರಿ ಪ್ರವಾಹ!
ವಿಶ್ವದಾದ್ಯಂತ ಹವಾಮಾನದಲ್ಲಿ ನಿರಂತರವಾಗಿ ಬದಲಾವಣೆಗಳು ಕಂಡುಬರುತ್ತಿವೆ. ಇದರಿಂದಾಗಿ ಚಂಡಮಾರುತ ಹಾಗೂ ಬಿರುಗಾಳಿ ಗಳ ಸಂಖ್ಯೆ ಮತ್ತು ಅವುಗಳ ತೀವ್ರತೆಯೂ ಹೆಚ್ಚಾಗುತ್ತಿದೆ. ಅಮೆರಿಕ ಇತ್ತೀಚಿನ ದಿನಗಳಲ್ಲಿ ಚಂಡಮಾರುತ ಹಾಗೂ ಭೀಕರವಾದ ಬಿರುಗಾಳಿಗಳ ಹೊಡೆತಕ್ಕೆ ಸಿಲುಕಿ ಅದರಿಂದ ಹೊರ ಬಂದಿದ್ದು, ಚಂಡಮಾರುತದ ಭೀ ಕರ ಪರಿಣಾಮಕ್ಕೆ ಒಂದು ಉದಾಹರಣೆ ಎನಿಸಿದೆ. ಇನ್ನು ಸಮುದ್ರ ಮಟ್ಟದ ಏರಿಕೆ ಹಾಗೂ ಉಬ್ಬರವಿಳಿತಗಳು ಚಂದ್ರನೊಂದಿಗೆ ಸಂಬಂಧವನ್ನು ಹೊಂದಿದ್ದು, ಇದೀಗ ವಿಜ್ಞಾನಿಗಳು ಚಂದ್ರನಲ್ಲಿ ಅಲ್ಪ ಪ್ರಮಾಣದ ಕಂಪನ ಏರ್ಪಟ್ಟರೂ, ಕಕ್ಷೆಯಲ್ಲಿ ಬದಲಾವಣೆಯಾದರೂ ಸಹಾ ಪ್ರಪಂಚದಾದ್ಯಂತ ಇದರಿಂದ ಭೀಕರವಾದ ಪ್ರವಾಹಗಳು ಉಂಟಾಗುತ್ತವೆ ಎನ್ನುವ ಎಚ್ಚರಿಕೆಯನ್ನು ನೀಡಿದ್ದಾರೆ.
ಹೆಚ್ಚಿನ ಉಬ್ಬರವಿಳಿತ ದಿಂದ ಉಂಟಾಗುವ ಪ್ರವಾಹವನ್ನು ನ್ಯೂಸೆನ್ಸ್ ಅಥವಾ ಉಪದ್ರವಕಾರಿ ಪ್ರವಾಹಗಳು ಎಂದು ಕರೆಯಲಾಗುತ್ತದೆ. ಇಂತಹ ಸಂದರ್ಭದಲ್ಲಿ ಸಾಗರ ಅಥವಾ ಸಮುದ್ರದ ಅಲೆಗಳು ಸಾಮಾನ್ಯಕ್ಕಿಂತ 2 ಅಡಿ ಎತ್ತರಕ್ಕೆ ಇರುತ್ತವೆ. ಇದು ಚಂಡಮಾರುತದಲ್ಲಿ ಸೇರಿ, ಅದರ ವೇಗಕ್ಕೆ ಭೂಮಿಯ ಕಡೆ ಬರುತ್ತದೆ. ಇದರಿಂದಾಗಿ ನಗರಗಳ ಒಳಚರಂಡಿ ಗಳ ಮೂಲಕ ಸಾಗರದ ನೀರು ನುಗ್ಗುವುದರಿಂದ, ನಗರಗಳಲ್ಲಿ ನೀರು ತುಂಬಿಕೊಳ್ಳಲು ಪ್ರಾರಂಭಿಸುತ್ತದೆ. ಉದಾಹರಣೆಗೆ ಮುಂಬೈ ನಗರದಲ್ಲಿ ಹದಗೆಡುವ ಪರಿಸ್ಥಿತಿಯನ್ನು ನಾವು ಗಮನಿಸಿದ್ದೇವೆ.

ಹೀಗೆ ನಗರದಲ್ಲಿ ತುಂಬಿಕೊಂಡ ನೀರು ನಗರ ವಾತಾವರಣವನ್ನು ಅಸ್ತ ವ್ಯಸ್ತಗೊಳಿಸುತ್ತದೆ. ಈ ನೀರು ಎಷ್ಟು ದಿನ ನಿಂತಿರುತ್ತದೆಯೋ ಅಲ್ಲಿಯವರೆಗೂ ಕೂಡಾ ವಿನಾಶಕ್ಕೆ ಕಾರಣವಾಗುತ್ತದೆ. ನ್ಯಾಷನಲ್ ಓಷಿಯಾನಿಕ್ ಮತ್ತು ಅಟ್ಮಾಸ್ಫಿಯರಿಕ್ ಅಡ್ಮಿನಿಸ್ಟ್ರೇಷನ್ (ಎನ್ಒಎಎ) ಪ್ರಕಾರ ಯುಎಸ್ ನಲ್ಲಿ ಹೆಚ್ಚಿನ ಉಬ್ಬರವಿಳಿತದ ಕಾರಣದಿಂದ 2019 ರಲ್ಲಿ ಸುಮಾರು 600 ಪ್ರವಾಹಗಳು ಸಂಭವಿಸಿದೆ. ಆದರೆ ಇದೀಗ ನಾಸಾದ ಹೊಸ ಅಧ್ಯಯನದ ಪ್ರಕಾರ 2030ರ ವೇಳೆಗೆ ಅಮೆರಿಕ ಸಹಿತವಾಗಿ ವಿಶ್ವದ ಅನೇಕ ಕಡೆಗಳಲ್ಲಿ ನ್ಯೂಸೆನ್ಸ್ ಫ್ಲಡ್ ತನ್ನ ಉಪದ್ರವ ಸೃಷ್ಟಿಸಲಿದೆ ಎಂದು ತಿಳಿದುಬಂದಿದೆ.
ಮುಂದಿನ ದಿನಗಳಲ್ಲಿ ಹೆಚ್ಚಿನ ಉಬ್ಬರವಿಳಿತದ ವೇಳೆಯಲ್ಲಿ ಸಾಗರದ ಅಲೆಗಳ ಎತ್ತರ ಮೂರು ನಾಲ್ಕು ಪಟ್ಟು ಹೆಚ್ಚಾಗಲಿದೆ ಎಂದು ನಾಸಾ ತನ್ನ ವರದಿಯಲ್ಲಿ ತಿಳಿಸಿದೆ. ನಾಸಾದ ಈ ವರದಿಯು ಕಳೆದ ತಿಂಗಳು ನೇಚರ್ ಕ್ಲೈಮೇಟ್ ಚೇಂಜ್ ನಲ್ಲಿ ಪ್ರಕಟವಾಗಿದೆ. ಇದೇ ವೇಳೆ ನಾಸಾ ಕೂಡಾ ಒಂದು ಎಚ್ಚರಿಕೆಯ ಸಂದೇಶವನ್ನು ರವಾನೆ ಮಾಡಿದ್ದು, 2030ರ ವೇಳೆಗೆ ನ್ಯೂಸೆನ್ಸ್ ಫ್ಲಡ್ ಪ್ರಮಾಣವು ಹೆಚ್ಚಾಗಲಿದ್ದು, ಅದು ವರ್ಷಕ್ಕೆ ಒಂದೆರಡು ಬಾರಿ ಅಲ್ಲ ಬದಲಾಗಿ ಪ್ರತಿ ತಿಂಗಳು ಬರುವ ಸಾಧ್ಯತೆ ಇದೆ ಎಂದು ಹೇಳಿದೆ. ಏಕೆಂದರೆ ಚಂದ್ರನ ಕಕ್ಷೆಯಲ್ಲಿ ಸ್ವಲ್ಪ ಬದಲಾವಣೆಯಾದರೂ ಈ ಪ್ರವಾಹವೂ ಹೆಚ್ಚು ಹಾನಿಕಾರಕವಾಗುತ್ತದೆ.

ಕರಾವಳಿ ಪ್ರದೇಶಗಳಲ್ಲಿ ಈ ಉಪದ್ರವಕಾರಿ ಪ್ರವಾಹವು ತಿಂಗಳಲ್ಲಿ ಎರಡು ಮೂರು ಸಾರಿ ಬರಲಿದೆ ಎಂದು ಕೂಡ ಹೇಳಲಾಗಿದೆ. ಚಂದ್ರನ ಸ್ಥಾನ ಬದಲಾದಂತೆ ಕರಾವಳಿ ಪ್ರದೇಶದಲ್ಲಿ ಬರುವ ಪ್ರವಾಹಗಳು ಅಲ್ಲಿನ ಜನರ ಜೀವನಕ್ಕೆ ಬಹಳಷ್ಟು ಅಪಾಯವನ್ನು ತಂದೊಡ್ಡಲಿದೆ. ಇದನ್ನು ತಪ್ಪಿಸಬೇಕಾದರೆ ವಿಶ್ವ ರಾಷ್ಟ್ರಗಳು ಯೋಜನೆಗಳನ್ನು ಸಿದ್ಧಪಡಿಸಬೇಕಾಗುತ್ತದೆ. ಹವಾಯಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಫಿಲ್ ಥಾಂಪ್ಸನ್ ಇದು ದೀರ್ಘಕಾಲದ ಹವಾಮಾನ ಬದಲಾವಣೆಯಿಂದಾಗಿ ಸಂಭವಿಸುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೆ ಇದು ಭೂಮಿಯ ಮೇಲೆ ಹೆಚ್ಚಿನ ತೊಂದರೆ ಉಂಟು ಮಾಡುತ್ತದೆ ಎಂದು ಹೇಳಿದ್ದಾರೆ.
ಫಿಲ್ ಥಾಂಪ್ಸನ್ ಅವರು ಭವಿಷ್ಯದಲ್ಲಿ ಇಂತಹ ಪ್ರವಾಹಗಳು ತಿಂಗಳಲ್ಲಿ ಹತ್ತು, ಹದಿನೈದು ಬಾರಿ ಸಂಭವಿಸಿದರೆ ಇದರಿಂದ ಜನರ ಕೆಲಸ ಕಾರ್ಯಗಳು ನಿಂತುಹೋಗುತ್ತವೆ, ಅವರು ಯಾವುದೇ ರೀತಿಯ ಚಟುವಟಿಕೆಗಳನ್ನು ಮಾಡಲಾಗುವುದಿಲ್ಲ, ಅನೇಕ ಜನರು ಉದ್ಯೋಗಗಳನ್ನು ಕಳೆದುಕೊಳ್ಳುತ್ತಾರೆ, ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ರೋಗಗಳು ಹರಡುತ್ತವೆ, ಚಂದ್ರನ ಕಾರಣದಿಂದಾಗಿ ಕರಾವಳಿ ಪ್ರದೇಶಗಳಲ್ಲಿನ ಪ್ರವಾಹದ ಸಂಖ್ಯೆ ಹಾಗೂ ಸಮಯ ಕೂಡ ಹೆಚ್ಚಾಗುತ್ತದೆ ಎಂದಿದ್ದು, ಇದೇ ವೇಳೆ ಜಾಗತಿಕ ತಾಪಮಾನ ಏರಿಕೆಯಿಂದ ಧ್ರುವ ಪ್ರದೇಶಗಳ ಹಿಮ ಕರಗಿ ಸಮುದ್ರಮಟ್ಟದಲ್ಲಿಯೂ ಏರಿಕೆಯಾಗುತ್ತದೆ ಎನ್ನುವ ಎಚ್ಚರಿಕೆ ನೀಡಿದ್ದಾರೆ.

ಎನ್ಒಎಎ ಪ್ರಕಾರ 1889 ರಿಂದ ಸಮುದ್ರದ ಮಟ್ಟವು ಎಂಟರಿಂದ ಒಂಬತ್ತು ಇಂಚುಗಳಷ್ಟು ಏರಿಕೆಯಾಗಿದೆ. ಕಳೆದ 25 ವರ್ಷಗಳಲ್ಲಿ ಇದರ ಮೂರನೇ ಬಂದು ಭಾಗದಷ್ಟು ಹೆಚ್ಚಾಗಿದೆ. 2100ರ ವೇಳೆಗೆ ಸಮುದ್ರದ ಮಟ್ಟವೂ 12 ಇಂಚು ಗಳಿಂದ 8.2 ಅಡಿಗಳಷ್ಟು ಏರಿಕೆಯಾಗಬಹುದು. ಇದನ್ನು ತಡೆಯಬೇಕಾದರೆ ಹಸಿರುಮನೆ ಅನಿಲ ( ಗ್ರೀನ್ ಹೌಸ್ ಗ್ಯಾಸ್ ) ಬಿಡುಗಡೆಯ ಪ್ರಮಾಣವನ್ನು ಕಡಿಮೆ ಮಾಡಬೇಕು ಎಂದು ಹೇಳಲಾಗಿದೆ. ಆದರೆ ಇದಕ್ಕೆ ದಶಕಗಳ ಕಾಲ ಹಿಡಿಯುತ್ತದೆ ಮತ್ತು ಇದು ಬಹಳ ಸುಲಭವಾದ ಕಾರ್ಯವೂ ಆಗಿಲ್ಲ.
ನಾಸಾದ ಹೊಸ ವರದಿಯ ಪ್ರಕಾರ ಚಂದ್ರನು ಸಾಗರದ ಅಲೆಗಳ ಮೇಲೆ ಸದಾ ತನ್ನ ಪರಿಣಾಮವನ್ನು ಬೀರುತ್ತಾನೆ. ಚಂದ್ರನ ಆಕರ್ಷಣೆ ಮತ್ತು ಒತ್ತಡ ವರ್ಷ ಪೂರ್ತಿ ಸಮತೋಲನವಾಗಿರುತ್ತದೆ. ಆದರೆ ಚಂದ್ರನ ಕಕ್ಷೆಯಲ್ಲಿ ಸ್ವಲ್ಪ ಬದಲಾವಣೆ ಸಂಭವಿಸಿದರೂ ಅದು ಸಾಗರದ ಮೇಲೆ ನೇರ ಪರಿಣಾಮ ಬೀರುತ್ತದೆ. ಕರಾವಳಿ ಪ್ರದೇಶಗಳಿಗೆ ಅದು ಹಾನಿಯನ್ನು ಉಂಟುಮಾಡುವ ಸಾಧ್ಯತೆ ಇರುತ್ತದೆ. ಚಂದ್ರನು ಪ್ರತಿ 18.6 ವರ್ಷಗಳಿಗೊಮ್ಮೆ ತನ್ನ ಕಕ್ಷೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳುತ್ತಾನೆ, ಆ ವೇಳೆಯಲ್ಲಿ ಚಂದ್ರನ ಒತ್ತಡ ಸಾಗರದ ಅಲೆಗಳ ಮೇಲೆ ಹೆಚ್ಚಾಗಿರುತ್ತದೆ. ಆಗ ಸಾಗರದ ಅಲೆಗಳ ತೀವ್ರತೆ ಹೆಚ್ಚಾಗುತ್ತದೆ ಅದು ಬಹಳಷ್ಟು ಅಪಾಯಕಾರಿ ಆಗಿರುತ್ತದೆ ಎನ್ನಲಾಗಿದೆ.
ನಾಸಾ ಹೇಳಿರುವ 18.6 ವರ್ಷಗಳ ಪೂರ್ಣ ಚಕ್ರದ ಅರ್ಧ ಅವಧಿ 2030 ರಲ್ಲಿ ಸಂಭವಿಸಿದೆ. ಆವೇಳೆಗೆ ಸಾಗರದ ಮಟ್ಟವು ಜಾಗತಿಕವಾಗಿ ಏರಿಕೆಯಾಗುತ್ತಿದ್ದು, ಚಂದ್ರನ ಪರಿಣಾಮದಿಂದ ಸಾಗರದ ಅಲೆಗಳ ವೇಗವು ಹೆಚ್ಚಲಿದೆ. ಇದರಿಂದಾಗಿ ಪ್ರವಾಹಗಳು ಉಂಟಾಗಲಿದ್ದು ವಿಶ್ವದ ಅನೇಕ ರಾಷ್ಟ್ರಗಳು ಇದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಅದರಲ್ಲೂ ಹೆಚ್ಚಿನ ಕರಾವಳಿ ಪ್ರದೇಶಗಳನ್ನುಳ್ಳ ಅಮೆರಿಕ ಕೂಡಾ ಇದರ ಭೀಕರತೆಯನ್ನು ಎದುರಿಸುವ ಸಾಧ್ಯತೆಗಳು ದಟ್ಟವಾಗಿದೆ.
ಹವಾಮಾನ ಚಕ್ರದಲ್ಲಿ ಎಲ್ ನೀನೋ ಉಷ್ಣೋದಕ ಸಾಗರ ಪ್ರವಾಹಗಳು ಕೂಡ ಪ್ರವಾಹಗಳಿಗೆ ಕಾರಣ ಉಂಟಾಗುತ್ತದೆ. ಈ ಎಲ್ಲಾ ಘಟನೆಗಳು ಪ್ರತಿ ತಿಂಗಳು ನಡೆಯುತ್ತವೆ ಎಂದು ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯ ವಿಜ್ಞಾನಿ ಬೆನ್ ಹ್ಯಾಮ್ಲಿಂಗ್ಟನ್ ಹೇಳಿದ್ದಾರೆ. ಆದರೆ ವರ್ಷದ ಒಂದು ಭಾಗದಲ್ಲಿ ತುಂಬಾ ಪ್ರವಾಹ ಉಂಟಾಗುತ್ತದೆ ಮತ್ತು ಇದರ ಪರಿಣಾಮದಿಂದಾಗಿ ವರ್ಷದುದ್ದಕ್ಕೂ ನಿಮಗೆ ಸಮಸ್ಯೆಗಳಿರುತ್ತವೆ ಎಂದು ಅವರು ಪರಿಸ್ಥಿತಿಯ ವಿವರಣೆ ನೀಡಿದ್ದಾರೆ.