ಗಿಡದಲ್ಲಿದ್ದಾಗಲೇ ಬುಕ್ ಆಗುವ ಈ ಮಾವಿನ ಹಣ್ಣಿನ ಬೆಲೆ ಕೇಳಿದರೆ ಅಚ್ಚರಿಯಾಗ್ತಿರಿ! ಯಾವುದು ಈ ಹಣ್ಣು, ಏನದರ ವಿಶೇಷ ನೋಡೋಣ ಬನ್ನಿ

ಬೇಸಿಗೆ ಕಾಲ ಬಂತೆಂದರೆ ಸಾಕು ಮಾವಿನ ಹಣ್ಣಿನದೇ ದರ್ಬಾರು ಸದ್ಯ ದೇಶದಲ್ಲಿ ಕರೋನ ಎಂಬ ಹೆಮ್ಮಾರಿ ವಕ್ಕರಿಸಿ ಎಷ್ಟೋ ಮಾವಿನ ಹಣ್ಣು ಬೆಳೆಗಾರರಿಗೆ ಹಾಗೂ ಈ ಹಣ್ಣಿನ ಸ್ವಾದ ಸವಿಯಲು ಕಾಯುತ್ತ ಕುಳಿತ ಜನರಿಗೆ ಬಹಳಷ್ಟು ಬೇಸರವಾಗಿರುವುದಂತೂ ಸುಳ್ಳಲ್ಲ. ಆದರೂ ಈ ಹಣ್ಣು ಬೆಳೆದವರಿಗೆ ಯಾವ ತೊಂದರೆಯೂ ಇಲ್ಲ, ಅಷ್ಟೊಂದು ಡಿಮ್ಯಾಂಡ್ ಇದೆ ಈ ಹಣ್ಣಿಗೆ, ಆ ಬಗ್ಗೆ ಸ್ವಲ್ಪ ವಿವರ ಇಲ್ಲಿದೆ…

ಹಣ್ಣುಗಳ ರಾಜನೆಂದೇ ಕರೆಯಲ್ಪಡುವ ಈ ಮಾವಿನ ಹಣ್ಣಿನಲ್ಲಿಯೂ ಸಾಕಷ್ಟು ವಿಧಗಳಿವೆ ಎಂಬ ವಿಷಯ ನಿಮಗೆಲ್ಲ ಗೊತ್ತೇ ಇದೆ. ಆದರೆ ಇಲ್ಲೊಂದು ಹಣ್ಣಿನ ರುಚಿ ಎಷ್ಟಿದೆ ಎಂದರೆ, ಇದು ಗಿಡದಲ್ಲಿರುವಾಗಲೇ ಬುಕ್ ಆಗಿರುತ್ತದಂತೆ..! ಬನ್ನಿ ಆ ಹಣ್ಣು ಯಾವುದು ಏನದರ ವಿಶೇಷ ಎಂದು ನೋಡೋಣ..

ಮಧ್ಯಪ್ರದೇಶದ ಅಲಿರಾಜಾಪುರ ಜಿಲ್ಲೆಯ ಕಟ್ಟಿವಾಡಾ ಎಂಬ ಪ್ರದೇಶದಲ್ಲಿ ಬೆಳೆದಿರುವ, ಬಾಂಗ್ಲಾ ದೇಶೀ ಮೂಲದ ಈ ಹಣ್ಣಿನ ತಳಿಯ ಹೆಸರು ನೂರ್ ಜಹಾನ್ ಎಂದು. ಈ ಹಣ್ಣಿನ ರುಚಿಯ ಕಾರಣದಿಂದಾಗಿ ಇದು ಎಷ್ಟೊಂದು ಫೇಮಸ್ ಆಗಿದೆಯೆಂದರೆ, ಇನ್ನೂ ಗಿಡದಲ್ಲಿರುವಾಗಲೇ ಬುಕ್ ಆಗಿರುತ್ತದೆ..!

ಇಂತಹ ಈ ಹಣ್ಣು ಕಳೆದ ವರ್ಷ ಅಷ್ಟೊಂದು ಫಸಲು ಬಂದಿರಲಿಲ್ಲ, ಆದರೆ ಈ ವರ್ಷ ಒಳ್ಳೆಯ ಬೆಳೆ ಬಂದಿದ್ದು ಇದರ ಬೆಳೆಗಾರರು ಸಾಕಷ್ಟು ಲಾಭದ ನಿರೀಕ್ಷೆಯಲ್ಲಿದ್ದಾರೆ. ಈ ಒಂದು ಮಾವಿನ ಹಣ್ಣು ಕೇವಲ ರುಚಿಗಷ್ಟೇ ಹೆಸರುವಾಸಿಯಾಗಿಲ್ಲ ಬದಲಾಗಿ ಈ ಹಣ್ಣು ತೂಕದಲ್ಲೂ ಎಲ್ಲಾ ಹಣ್ಣುಗಳಿಗಂತ ಹೆಚ್ಚು ಭಾರವಿರುತ್ತದೆ.

ತಮ್ಮ ತೋಟದಲ್ಲಿ ಕೇವಲ ಮೂರು ಗಿಡಗಳನ್ನು ಹೊಂದಿರುವ ಶಿವರಾಜ್ ಸಿಂಗ್ ಜಾಧವ್ ಎಂಬ ರೈತನ ಪ್ರಕಾರ, ಅವರ ಮೂರು ಗಿಡದಲ್ಲಿ ಸಧ್ಯ 250 ಕ್ಕೂ ಅಧಿಕ ಮಾವಿನ ಹಣ್ಣುಗಳು ಬಿಟ್ಟಿವೆಯಂತೆ, ವಿಶೇಷ ಎಂದರೆ ಈಗಾಗಲೇ ಈ ಹಣ್ಣುಗಳನ್ನು ಮಧ್ಯಪ್ರದೇಶ ಹಾಗೂ ರಾಜಸ್ತಾನದ ಜನರು ಅಡ್ವಾನ್ಸ್ ಬುಕಿಂಗ್ ಮಾಡಿದ್ದಾರಂತೆ.

ಈ ಗಿಡಗಳ ಒಂದು ಹಣ್ಣಿನ ತೂಕ 2 ರಿಂದ ಮೂರುವರೆ ಕೆಜಿ ತೂಗುತ್ತವಂತೆ! ಪ್ರತಿಯೊಂದು ಮಾವಿಗೂ ಅದರ ಗಾತ್ರದ ಆಧಾರದ ಮೇಲೆ ಕನಿಷ್ಠ 500 ರಿಂದ 1000 ದವರೆಗೆ ದರ ಇದೆಯಂತೆ..! ಇಷ್ಟೆಲ್ಲ ವಿಶೇಷತೆ ಇರುವ ಈ ಹಣ್ಣು ಕಳೆದ ವರ್ಷ ಗಾಳಿ ಹಾಗೂ ಮಳೆಯ ಪರಿಣಾಮ ಹಾಗೂ ವಾತಾವರಣದಲ್ಲಿನ ಬದಲಾವಣೆಯಿಂದಾಗಿ ಫಸಲು ಧಕ್ಕಿರಲೇ ಇಲ್ಲ.

ಕಳೆದ ವರ್ಷ ಬಂದಷ್ಟು ಫಸಲು ಕೂಡ ಅದರ ಮೂಲ ರುಚಿಯನ್ನು ಪಡೆದೇ ಇರಲಿಲ್ಲವಂತೆ. ಆದರೆ ಈ ವರ್ಷ ಸರಿಯಾದ ಪ್ರಮಾಣದಲ್ಲಿ ಹಾಗೂ ಒಳ್ಳೆಯ ಫಲ ಸಿಕ್ಕಿದೆ, ಆದರೆ ಕರೋನ ಕಾರಣದಿಂದಾಗಿ ಗ್ರಾಹಕರು ಹೆಚ್ಚು ಆಸಕ್ತಿ ತೋರಿಸದ ಕಾರಣ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆಯಂತೆ.

ಈ ಮಾವಿನ ಮತ್ತೊಬ್ಬ ಬೆಳೆಗಾರ ಮನ್ಸೂರಿ ಎಂಬುವರ ಪ್ರಕಾರಮ 2019 ರಲ್ಲಿ ಈ ಹಣ್ಣಿನ ಸರಾಸರಿ ತೂಕ 2.75 ಕೆಜಿ ಆಗಿತ್ತಂತೆಮ ಅವಾಗ ಇದರ ಬೆಲೆ 1200 ರವರೆಗೂ ಹೋಗಿತ್ತಂತೆ..! ಇನ್ನೂ ಈ ಹಣ್ಣು ಜನೆವರಿ ಫೆಬ್ರವರಿಯಲ್ಲಿ ಹೂ ಬಿಡಲು ಪ್ರಾರಂಭಿಸಿ ಜೂನ್ ತಿಂಗಳಿನಲ್ಲಿ ಪೂರ್ತಿ ಮಾಗಿ ಮಾರಾಟ ಮಾಡಲು ರೆಡಿಯಾಗುತ್ತವಂತೆ.

ಇವುಗಳ ಉದ್ದ ಹತ್ತಿರ ಹತ್ತಿರ ಒಂದು ಅಡಿಯಷ್ಟು ಬೆಳೆದಿರುತ್ತವಂತೆ! ಇದರ ಮಧ್ಯದ ಗಟ್ಟಿ ಭಾಗ ಮಾವಿನ ಗೊಟ್ಟದ ತೂಕವೇ ಬರೋಬ್ಬರಿ 150 ರಿಂದ 200 ಗ್ರಾಂ ವರೆಗೂ ಇರುತ್ತದಂತೆ. ಈ ವಿಶೇಷ ತಳಿಯನ್ನು ನಮ್ಮ ಕೃಷಿ ವಿಜ್ಞಾನಿಗಳು ಅಭಿವೃದ್ಧಿಪಡಿಸಿ ನಮ್ಮ ಇತರೆ ರಾಜ್ಯಗಳಲ್ಲೂ ಬೆಳೆಯುವ ಹಾಗಾಗಬೇಕು.
-ಮಂಜುನಾಥ್