ಪರಿಸರ ಸಂರಕ್ಷಣೆ ಪ್ರಬಂಧ – Parisara Samrakshane Essay In Kannada

ಕೋಟ್ಯಾಂತರ ವರ್ಷಗಳ ಹಿಂದೆ ಉಗಮವಾದ ಸೌರಮಂಡಲದಲ್ಲಿ ಜೀವ ಸಂಕುಲಕ್ಕೆ ವಾಸಯೋಗ್ಯ ಗೃಹ ಎಂದರೆ ಅದು ನಾವೀಗ ವಾಸ ಮಾಡುತ್ತಿರುವ ಭೂಮಿ ಮಾತ್ರ. ಇಂತಹ ಭೂಮಿ ತಾಯಿಯ ಮೇಲೆ ನಾವು ಅಂದರೆ ಮಾನವರು ಜನ್ಮ ತಾಳಲು ಲಕ್ಷಾಂತರ ವರ್ಷಗಳೇ ಬೇಕಾದವು, ಆದರೆ ನಾವೇ ಇಂದು ಭೂಮಿಯನ್ನು ಅಥವಾ ಪರಿಸರವನ್ನು ಮಲೀನಗೊಳಿಸುತ್ತಿದ್ದೇವೆ. ಇವತ್ತು Parisara Samrakshane Essay In Kannada ಅಂದರೆ ಪರಿಸರ ಸಂರಕ್ಷಣೆ ಪ್ರಬಂಧ ಬಗ್ಗೆ ಇಲ್ಲಿ ತಿಳಿಯುತ್ತಾ ಹೋಗೋಣ.

Parisara Samrakshane Essay In Kannada

ಪರಿಸರ ಸಂರಕ್ಷಣೆ ಪ್ರಬಂಧ – Parisara Samrakshane Essay In Kannada

ಪರಿಚಯ

ಪರಿಸರ ಸಂರಕ್ಷಣೆಯ ಬಗ್ಗೆ ನೋಡುವ ಮೊದಲು ಪರಿಸರ ಎಂದರೇನು ಎಂದು ತಿಳಿಯುವುದು ಬಹುಮುಖ್ಯವಾಗುತ್ತದೆ. ಏಕೆಂದರೆ ಒಂದು ವಿಷಯದ ಬಗ್ಗೆ ಮಾತನಾಡುವುದಕ್ಕಿಂತ ಮೊದಲು ಆ ವಿಷಯದ ಕುರಿತು ನಮಗೆ ಸಂಪೂರ್ಣ ಅರ್ಥ ತಿಳಿದಿದ್ದರೆ ಒಳ್ಳೆಯದು. ಪರಿಸರ ಎಂದರೆ ನಮ್ಮ ಸುತ್ತಮುತ್ತಲ ಅರಣ್ಯ ಪ್ರದೇಶದಲ್ಲಿ, ಬೀದಿಗಳಲ್ಲಿ, ನೀರಿನಲ್ಲಿ, ಗಾಳಿಯಲ್ಲಿ ಒಟ್ಟಾರೆಯಾಗಿ ಭೂಮಿಯ ಆಶ್ರಯದಲ್ಲಿ ಬದುಕುವ ಜೀವಿಗಳು, ಅನೇಕ ಜೀವಿಗಳಿಗೆ ಆಶ್ರಯ ಕೊಟ್ಟ ಸಮುದ್ರ, ಅರಣ್ಯ ಇತ್ಯಾದಿ ಇತ್ಯಾದಿಗಳನ್ನು ಒಳಗೊಂಡ ಒಂದು ಸಮೂಹವೇ ಪರಿಸರ. ಅದೃಷ್ಟವೋ ದುರದೃಷ್ಟವೋ ಈ ಪರಿಸರದಲ್ಲಿ ಎಲ್ಲ ಜೀವಿಗಳಿಗಿಂತ ಕೊನೆಗೆ ಹುಟ್ಟಿದ ಮಾನವನದ್ದೇ ಸಂಪೂರ್ಣ ಹಸ್ತಕ್ಷೇಪವಾಗುತ್ತಿರುವುದು ವಿಪರ್ಯಾಸವೇ ಸರಿ. ಒಟ್ಟಿನಲ್ಲಿ ಪರಿಸರವೆಂದರೆ ನಮ್ಮೊಡನೆ ಹೊಂದಿಕೊಂಡಿರುವ ಹಾಗೂ ನಮ್ಮ ತುಳಿತಕ್ಕೆ ಬಲಿಯಾಗಿರುವ ಪ್ರದೇಶವೆಂದರೇ ತಪ್ಪಾಗಲಾರದು.

ಪರಿಸರ ಸಂರಕ್ಷಣೆ

ಇಂತಹ ಪರಿಸರಕ್ಕೆ ಮಾನವನ ಕೊಡುಗೆಯಂತೂ ಶೂನ್ಯ, ಆದರೂ ಕೂಡ ಮಾನವ ಈ ಪರಿಸರದ ಮೇಲೆ ಹಿಡಿತ ಸಾಧಿಸುತ್ತಿದ್ದಾನೆ, ಮಾನವನ ಹಸ್ತಕ್ಷೇಪದಿಂದ ಕೋಟ್ಯಂತರ ಜೀವಸಂಕುಲಕ್ಕೆ ಆಶ್ರಯ ಕೊಟ್ಟಿರುವ ಈ ಪುಣ್ಯ ಭೂಮಿ ನರಕದಂತಾಗುತ್ತಿರುವುದು ವಿಷಾದನೀಯ ಸಂಗತಿ. ಪರಿಸರದ ಮೇಲೆ ಮಾನವ ಇದುವರೆಗೂ ಏನೆಲ್ಲಾ ದಬ್ಬಾಳಿಕೆ ಮಾಡಿದ್ದಾನೆ ಹಾಗೂ ಮಾಡುತ್ತಿದ್ದಾನೆ ಮತ್ತು ಮಾನವನ ಈ ದುಷ್ಕೃತ್ಯದಿಂದ ಭೂಮಿಯ ಪರಿಸ್ಥಿತಿ ಏನಾಗುತ್ತಿದೆ ಹಾಗೂ ನಮ್ಮ ಕೈಲಾದ ಮಟ್ಟಿಗೆ ಪರಿಸರ ಸಂರಕ್ಷಣೆಯನ್ನು ಮಾಡಲು ಏನೆಲ್ಲಾ ಯೋಜನೆ ಹಾಕಿಕೊಳ್ಳಬಹುದು ಎಂಬ ಬಗ್ಗೆ ಈ ಕೆಳಗೆ ವಿವರಿಸಲಾಗಿದೆ.

ಸಧ್ಯ ಜಗತ್ತಿನ ಮೂಲೆ ಮೂಲೆಯಲ್ಲಿಯೂ ಒಂದಲ್ಲ ಒಂದು ಅವಘಡಗಳು ನಡೆಯುತ್ತಲೇ ಇರುತ್ತವೆ, ಆ ಅವಘಡಗಳಿಗೆ ಸಿಲುಕಿ ಲಕ್ಷಾಂತರ ಜನರು ತಮ್ಮ ಪ್ರಾಣ ಕಳೆದುಕೊಳ್ಳುತ್ತಲೇ ಇದ್ದಾರೆ, ಇಷ್ಟಾದರೂ ಮಾನವನ ಅತಿಯಾಸೆಗೆ ಮಿತಿಯೇ ಇಲ್ಲದಾಗಿದ್ದು, ಭೂಕಂಪ, ಪ್ರವಾಹ ಮುಂತಾದ ವಿಕೋಪಗಳು ಆಗುತ್ತಿರುವುದು ಮಾನವ ಪ್ರಕೃತಿ ಮಾತೆಯ ಮೇಲೆ ಎಸಗುತ್ತಿರುವ ದೌರ್ಜನ್ಯದಿಂದಲೇ ಎಂದು ಬೇರೆ ಹೇಳಬೇಕಿಲ್ಲ.

ಪರಿಸರ ಮಾಲಿನ್ಯ ಎಂದರೇನು?

ಮಾನವ ಬರುವುದಕ್ಕೂ ಮೊದಲು ಈ ಭೂಮಿಯ ಮೇಲೆ ಎಲ್ಲ ಪ್ರಾಣಿ ಪಕ್ಷಿಗಳು ಸ್ವಚ್ಛಂಧವಾಗಿ ವಿಹಾರಿಸುತ್ತಾ ತಮಗಿಷ್ಟ ಬಂದಂತೆ ಬದುಕು ಸಾಗಿಸುತ್ತಿದ್ದವು, ಮಾನವ ಬಂದಮೇಲೆ ಅವೆಲ್ಲದಕ್ಕೂ ನಾನೇ ಮಾಲೀಕ ಎಂಬಂತೆ ವರ್ತಿಸುತ್ತಾ ಪ್ರಾಣಿ ಪಕ್ಷಿಗಳನ್ನು ತನ್ನ ಸ್ವಂತ ಕೆಲಸಕ್ಕೆ ಉಪಯೋಗಿಸಿಕೊಳ್ಳಲು ಆರಂಭಿಸಿದ್ದು ಅಲ್ಲದೇ ಅವುಗಳನ್ನೇ ಕೊಂದು ತಿನ್ನುವಂತಹ ಹೀನ ಕೃತ್ಯಕ್ಕೂ ಕೈಹಾಕಿದ. ಇದೀಗ ಎಷ್ಟೋ ಪ್ರಜಾತಿಯ ಪ್ರಾಣಿ ಪಕ್ಷಿಗಳು ಹೇಳ ಹೆಸರಿಲ್ಲದಂತೆ ಮರೆಯಾಗಿದ್ದು ಅವುಗಳ ನಶಿಸುವಿಕೆಯಿಂದ ಮಾನವ ಒಂದಿಲ್ಲೊಂದು ರೀತಿಯಲ್ಲಿ ನಷ್ಟ ಅನುಭವಿಸುತ್ತಲೇ ಇದ್ದಾನೆ.

ಪರಿಸರ ನಾಶದಿಂದ ಉಂಟಾಗುವ ಪರಿಣಾಮಗಳು

ಒಜೋನ್ ಪದರಕ್ಕೆ ಧಕ್ಕೆ :

ಸಧ್ಯ ಜಾಗತಿಕ ತಾಪಮಾನ ಕೂಡ ಏರಿಕೆಯಾಗುತ್ತಿದ್ದು ಸೂರ್ಯನ ನೇರ ಕಿರಣಗಳಿಂದ ನಮ್ಮನ್ನು ರಕ್ಷಿಸುತ್ತಿದ್ದ ರಕ್ಷಾ ಕವಚ ಒಜೋನ್ ಪದರ ಕೂಡ ತೂತು ಬಿದ್ದು ದಶಕಗಳೇ ಉರುಳಿದ್ದರೂ ಮಾನವನಿಗೆ ಆ ಬಗ್ಗೆ ಕಿಂಚಿತ್ತೂ ಯೋಚನೆಯೇ ಇಲ್ಲ, ಬದಲಾಗಿ ತನ್ನ ಲಾಭಕ್ಕಾಗಿ ಮತ್ತಷ್ಟು ಮಗದಷ್ಟು ಪರಿಸರ ನಾಶ ಮಾಡುವುದರಲ್ಲಿ ಆತ ಮುಳುಗಿ ಹೋಗಿದ್ದಾನೆ.

ವಾಯುಮಾಲಿನ್ಯ :

ಜನಸಂಖ್ಯೆ ಹೆಚ್ಚಿದಂತೆ ಅಗತ್ಯ ವಸ್ತುಗಳ ಪೂರೈಕೆಗಾಗಿ ಹಲವಾರು ಫ್ಯಾಕ್ಟರಿಗಳನ್ನು ಸಹ ಕಟ್ಟಿ ಅವುಗಳಿಂದ ಸಹ ಸಾಧ್ಯವಾದಷ್ಟು ಪರಿಸರ ನಾಶ ಮಾಡುತ್ತಲೇ ಇದ್ದಾನೆ. ಕಾರ್ಖಾನೆಗಳು ಹೊರಸೂಸುವ ಹೊಗೆಯಿಂದ ವಾಯುಮಾಲಿನ್ಯ ಉಂಟು ಮಾಡಿದರೆ, ವಾಹನಗಳು ಉಗುಳುವ ಹೊಗೆ ವಾಯುಮಾಲಿನ್ಯಕ್ಕೆ ದೊಡ್ಡ ಕಾರಣವಾಗುತ್ತಿವೆ. ಹೀಗಾಗಿ ಸಾರ್ಕಾರಗಳು ಸಾರ್ವಜನಿಕ ಸಾರಿಗೆಗೆ ಒತ್ತು ಕೊಡುತ್ತಿವೆ, ಮತ್ತು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲು ಕ್ರಮ ತಗೆದುಕೊಳ್ಳುತ್ತಿವೆ..

ಜಲಮಾಲಿನ್ಯ :

ವಾಯುಮಾಲಿನ್ಯದ ಜೊತೆಗೆ ಕಾರ್ಖಾನೆಗಳ ಕೊಳಚೆ ನೀರನ್ನು ಜೀವಜಲದ ಆಗರವಾಗಿರುವ ನದಿಗಳಿಗೆ ಹರಿಬಿಟ್ಟು ಜಲಮಾಲಿನ್ಯ ಮಾಡಲಾಗುತ್ತಿದೆ. ಅಲ್ಲದೇ ಘನ ವಸ್ತುಗಳನ್ನು ಭೂಮಿಯ ಅಂತರಾಳದಲ್ಲಿ ಹೂತು ಹಾಕುವುದರ ಜೊತೆಗೆ ವಾಯು, ಭೂ ಹಾಗೂ ಜಲಮಾಲಿನ್ಯ ಮಾಡುವುದರಲ್ಲಿ ನಿರತನಾಗಿದ್ದಾನೆ.

ಶಬ್ಧ ಮಾಲಿನ್ಯ :

ಇನ್ನು ಪಟಾಕಿ, ವಾಹನಗಳು ಹಾರ್ನ್, ಲೌಡ್ ಸ್ಪೀಕರ್ ಮುಂತಾದವುಗಳಿಂದ ಶಬ್ಧ ಮಾಲಿನ್ಯ ಕೂಡ ಉಂಟಾಗುತ್ತಿದೆ. ಇದನ್ನು ತಡೆಯಲು ಕೂಡ ಸರ್ಕಾರ ನ್ಯಾಯಾಲಯಗಳು ಮುಂದಾಗಿವೆ.

ಹವಾಮಾನ ಬದಲಾವಣೆ :

ಹವಾಮಾನ ಬದಲಾವಣೆಯು ಭಾರತಕ್ಕೆ ಮಹತ್ವದ ಸವಾಲಾಗಿದೆ, ಹಿಮನದಿಗಳು ಕರಗಲು ಮತ್ತು ಸಮುದ್ರ ಮಟ್ಟವು ಏರಲು ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ನೈಸರ್ಗಿಕ ವಿಕೋಪಗಳಿಗೆ ಸನ್ನದ್ಧತೆ ಮತ್ತು ಹವಾಮಾನ ಬದಲಾವಣೆಯಂತಹ ಸ್ಪಂದಿಸುವ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು.

ಪರಿಸರ ಸಂರಕ್ಷಣೆಯ ಅಗತ್ಯವೇನು:

ಬಹುಶ ಈ ಪ್ರಶ್ನೆಯನ್ನು ಕೇಳುವವರು ಯಾರೂ ಇಲ್ಲ, ಅಕಸ್ಮಾತ್ ಪರಿಸರ ಸಂರಕ್ಷಣೆ ಮಾಡಿದರೆ ನಮಗೇನು ಲಾಭ ಎಂದು ಯಾರಾದರೂ ಪ್ರಶ್ನೆ ಮಾಡಿದರೆ ಆತನನ್ನು ಶತಮೂರ್ಖ ಅಥವಾ ಅವಿವೇಕಿ ಎಂದೇ ಕರೆಯಬೇಕು. ಏಕೆಂದರೆ ಪರಿಸರದಿಂದ ಮಾನವನೇ ವಿನಃ ಮಾನವನಿಂದ ಪರಿಸರವಲ್ಲ, ಏಕೆಂದರೆ ಪರಿಸರದ ಸಹಾಯದಿಂದ ಮಾನವ ಬದುಕಿದ್ದಾನೆ, ಅಕಸ್ಮಾತ್ ಪರಿಸರ ಇಲ್ಲವೆಂದಾದರೆ ಮಾನವ ಅದೇ ಕ್ಷಣ ಇಲ್ಲವಾಗುತ್ತಾನೆ!

ಪರಿಸರ ನಮ್ಮ ಪಾಲಿಗೆ ದೇವರ ಸಮಾನ, ದೇವರನ್ನು ನಾವು ನೀವೆಲ್ಲ ನೋಡಿದ್ದೀವೋ ಇಲ್ಲವೋ ಗೊತ್ತಿಲ್ಲ ಆದರೆ ಪರಿಸರವನ್ನೇ ದೇವರ ಸ್ವರೂಪದಲ್ಲಿ ನೋಡುವುದೇ ನಮ್ಮ ಭಾರತೀಯ ಸಂಸ್ಕೃತಿಯಾಗಿದ್ದು, ನಮ್ಮ ಪೂರ್ವಜರ ಕಾಲದಿಂದಲೂ ನಾವು ನೀವು ಪರಿಸರಕ್ಕೆ ಪೂಜೆ ಸಲ್ಲಿಸುತ್ತಾ ಬಂದಿದ್ದೇವೆ. ನದಿ, ಬೆಟ್ಟಗಳನ್ನು ದೇವತೆಗಳೆಂದು ವಾಹು, ಅಗ್ನಿಗಳನ್ನು ದೇವರೆಂದು ಹಾಗೂ ಭೂಮಿಯನ್ನು ನಮ್ಮ ತಾಯಿಯೆಂದು ನಾವೆಲ್ಲ ಪೂಜಿಸಿಕೊಂಡೇ ಬೆಳೆದವರು. ಆದರೆ ಇತ್ತೀಚಿನ ದಿನಗಳು ಬದಲಾಗುತ್ತಿರುವ ಮನುಷ್ಯನ ಮನಸ್ಥಿತಿಯಿಂದ ಆ ಪೂಜ್ಯ ಭಾವನೆ ಕಡಿಮೆಯಾಗುತ್ತಾ ಸಾಗುತ್ತಿದ್ದು, ಮಾನವ ತನ್ನ ಲಾಭಕ್ಕಾಗಿ ಪರಿಸರದ ಮೇಲೆ ಆಕ್ರಮಣ ಮಾಡುತ್ತಿದ್ದಾನೆ.

ಪರಿಸರ ನಮಗೆ ಎಲ್ಲವನ್ನೂ ಕೊಟ್ಟಿದೆ ನಾವು ಪರಿಸರಕ್ಕೆ ಹಾನಿ ಮಾಡಿದಾಗ ಅದರಿಂದ ಸಾಕಷ್ಟು ಅನುಭವಿಸಿದ್ದೇವೆ ಕೂಡ, ಹಾಗಾಗಿ ಪರಿಸರವನ್ನು ನಾವು ರಕ್ಷಣೆ ಮಾಡಿಕೊಳ್ಳದೇ ಹೋದರೆ ಮುಂದಿನ ನಮ್ಮ ಪೀಳಿಗೆಗೆ ನಾವುಗಳೇ ಶಾಪವಾಗಿ ಪರಿಣಮಿಸುವುದರಲ್ಲಿ ಸಂದೇಹವೇ ಇಲ್ಲ, ಎಲ್ಲದರಲ್ಲಿಯೂ ಲಾಭ ನೋಡುವ ಮನುಷ್ಯ ಕೊನೆಪಕ್ಷ ತನ್ನ ಜೀವಕ್ಕೆ ಬರುತ್ತಿರುವ ಆಪತ್ತು ನೋಡಿಯಾದರೂ ಪರಿಸರ ಸಂರಕ್ಷಣೆಗೆ ಇಳಿದರೆ ಒಳ್ಳೆಯದು.

ಪರಿಸರ ಮಾಲಿನ್ಯ ನಿಯಂತ್ರಣ ಕ್ರಮಗಳು

ಹೆಚ್ಚುತ್ತಿರುವ ಮಾಲಿನ್ಯದ ಕಾರಣದಿಂದ ವಿಶ್ವವ್ಯಾಪಿ ಹಲವಾರು ದೇಶಗಳು ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ, ಆದರೆ ಅವುಗಳು ಎಷ್ಟರ ಮಟ್ಟಿಗೆ ಜಾರಿಗೆ ಬರುತ್ತಿವೆ ಅವುಗಳನ್ನು ಜನರು ಎಷ್ಟರ ಮಟ್ಟಿಗೆ ಗಂಭೀರವಾಗಿ ಪರಿಗಣಿಸಿದ್ದಾರೆ ಎಂಬುದು ಮಾತ್ರ ನಿರಾಸೆದಾಯಕ. ಇಂತಹ ಸಮ್ಮೇಳನ ಸಭೆಗಳಲ್ಲಿ ಮುಖ್ಯವಾದದ್ದು ಬ್ರೇಜಿಲ್ ನಲ್ಲಿ ನಡೆದ 1992 ರಲ್ಲಿ ಒಟ್ಟು 174 ದೇಶಗಳ ಪ್ರತಿನಿಧಿಗಳನ್ನು ಒಳಗೊಂಡ ಪೃಥ್ವಿ ಸಮ್ಮೇಳನ ಮುಖ್ಯವಾದದ್ದು, ಹಾಗೇನೇ 2002 ರಲ್ಲಿ ಮತ್ತೊಮ್ಮೆ ಇಂತಹುದೇ ಸಮ್ಮೇಳನ ಜೋಹಾನ್ಸ್ ಬರ್ಗ್ ನಲ್ಲಿ ನಡೆದಿತ್ತು.

ಭಾರತದ ಬಗ್ಗೆ ನೋಡುವುದಾದರೆ, 1986 ರಲ್ಲಿ ಮಧ್ಯಪ್ರದೇಶ ಭೋಪಾಲ್ ಪ್ರದೇಶದಲ್ಲಿ ವಿಷಾನಿಲ ಸೋರಿಕೆಯ ಕಾರಣದಿಂದ 2,259 ಜನರ ಸಾವು ಹಾಗೂ 5,00,000 ಕ್ಕಿಂತಲೂ ಅಧಿಕ ಜನರು ಈ ಗ್ಯಾಸ್ ಲೀಕ್ ನಿಂದ ಅನುಭವಿಸಿದ ಕಷ್ಟದ ನಂತರ ಭಾರತ ಸರ್ಕಾರ ಪರಿಸರ ರಕ್ಷಣಾ ಅಧಿನಿಯಮವನ್ನು ಜಾರಿ ಮಾಡಿದೆ.

ಪರಿಸರ ರಕ್ಷಣೆಯಲ್ಲಿ ನಮ್ಮ ಪಾತ್ರವೇನು?

ಎಲ್ಲ ಕೆಲಸಗಳನ್ನು ಸರಕಾರವೇ ಮಾಡಲಿ ಎಂದು ಕುಳಿತರೆ ನಾವು ದೇಶಕ್ಕೆ ಹಾಗೂ ಭೂಮಿಗೆ ಭಾರವಾಗಿ ಬಿಡುತ್ತೇವೆ. ಪರಿಸರ ಕೇವಲ ಸರಕಾರದ ಸ್ವತ್ತಲ್ಲ, ಬದಲಾಗಿ ನಮ್ಮ ಸ್ವತ್ತು. ಅದನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಆಧ್ಯ ಕರ್ತವ್ಯ, ಹಾಗಾಗಿ ನಾವು ಕೊನೆಪಕ್ಷ ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್, ರಬ್ಬರ್, ಗಾಜು ಇತ್ಯಾದಿ ಇತ್ಯಾದಿ ವಸ್ತುಗಳ ಬಳಕೆ ಕಡಿಮೆ ಮಾಡುವುದರ ಜೊತೆಗೆ ಬಳಸಿದ ವಸ್ತುಗಳನ್ನು ಮರುಬಳಕೆಗೆ ಬರುವಂತೆ ಬಳಸುವುದು ಹಾಗೂ ಅಂತಹ ವಸ್ತುಗಳನ್ನು ಭೂಮಿ ಮತ್ತು ನೀರಿಗೆ ಸೇರದಂತೆ ನೋಡಿಕೊಳ್ಳುವುದು, ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನಮ್ಮ ಕೈಲಾದಷ್ಟು ಗಿಡ ಮರ ನೆಡುವುದು, ಬೀಜದುಂಡೆ ಮಾಡಿ ಬಿಸಾಡುವುದರ ಮೂಲಕ ಗಿಡಮರಗಳ ಸಂಖ್ಯೆ ಹೆಚ್ಚಿಸುವುದು… ಇತ್ಯಾದಿ ಇತ್ಯಾದಿ ಕೆಲಸಗಳನ್ನು ಕೈಗೊಳ್ಳುವುದು ನಮ್ಮ ಕರ್ತವ್ಯವಾಗಿದೆ.

ಪರಿಸರ ಸಂರಕ್ಷಣೆ ಘೋಷಣೆಗಳು

  • ಹಸಿರೇ ಉಸಿರು,
  • ಕಾಡುಬೆಳೆಸಿ ನಾಡು ಉಳಿಸಿ.
  • ಅರಣ್ಯ ವಿಲ್ಲದೆ ಮಳೆ ಇಲ್ಲ, ಮಳೆ ಇಲ್ಲದೆ ಬೆಳೆ ಇಲ್ಲ.
  • ಅರಣ್ಯ ನಾಶ, ನಾಡು ವಿನಾಶ.
  • ನೀರಿಗೆ ನೈದಿಲೆ ಶೃಂಗಾರ, ನಾಡಿಗೆ ಕಾಡೇ ಶೃಂಗಾರ.
  • ಮನೆಗೊಂದು ಮರ ಊರಿಗೊಂದು ವನ.
  • ಅರಣ್ಯ ನಾಶ, ಅದುವೆ ನಮಗೆ ಯಮಪಾಶ.
  • ಕಡಿದರೆ ಮರ, ಬರುವುದು ಬರ.
  • ಪರಿಸರ ನಾಶ, ಮನುಕುಲ ಸರ್ವನಾಶ.
  • ಕಾಡಿನ ಹಸಿರು, ನಮ್ಮೆಲ್ಲರ ಉಸಿರು.
  • ಕಾಡು ಬೆಳಸಿ, ಭೂ ತಾಪಮಾನ ಇಳಿಸಿ.
  • ಅಳಿದರೆ ಕಾಡು, ಅಳುವುದು ನಾಡು
  • ಪ್ರಕೃತಿ ಮಾತೆ, ನಿಜವಾದ ಅನ್ನಧಾತೆ.
  • ಕಾಡಿದ್ದರೆ ನಾಡು, ನಾಡಿದ್ದರೆ ನಾವು

ತೀರ್ಮಾನ

ಪರಿಸರ ರಕಷಣೆ ಮಾಡುವ ವಿಷಯದಲ್ಲಿ ನಮಗೆಲ್ಲ ಬಹುತೇಕ ನಮಗೆಲ್ಲ ನಿರಾಸಕ್ತಿ ಇರುವುದು ಒಪ್ಪಲೇಬೇಕಾದ ಸಂಗತಿ, ಆದರೆ ಮುಂದಿನ ಕೆಲವೇ ವರ್ಷಗಳಲ್ಲಿ ಈ ನಮ್ಮ ಬೇಜವಾಬ್ಧಾರಿ ಸಾಕಷ್ಟು ಸಮಸ್ಯೆಗಳಿಗೆ ಅನುವು ಮಾಡಿಕೊಡುತ್ತದೆ. ಆದ್ದರಿಂದ ನಮಗೆ ತಿಳಿದ ಮಟ್ಟಿಗೆ ನಮ್ಮ ವಾತಾವರಣವನ್ನು ರಕ್ಷಿಸೋಣ, ಪ್ಲಾಸ್ಟಿಕ್ ಬಳಸದಿರುವು, ಸಾರ್ವಜನಿಕ ಸಾರಿಗೆ ಹೆಚ್ಚು ಬಳಸುವುದು, ಮನೆ ಹತ್ತಿರ ಗಿಡ ನೆಡುವುದೂ ಸೇರಿದಂತೆ ನಮ್ಮ ಕೈಲಾದಷ್ಟು ನಿರ್ಮಲ ಪರಿಸರಕ್ಕೆ ಕಾಣಿಕೆ ನೀಡೋಣ.

ಗೆಳೆಯರೆ ಇಂದು ನಾವು Parisara Samrakshane Essay In Kannada ಅಥವಾ ಪರಿಸರ ಸಂರಕ್ಷಣೆ ಪ್ರಬಂಧ ಬಗ್ಗೆ ಸಂಪೂರ್ಣ ವಿಸ್ತಾರವಾಗಿ ತಿಳಿದುಕೊಂಡಿದ್ದೇವೆ. ಈ ಪ್ರಬಂಧ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

ಇದನ್ನೂ ಓದಿ: ರಾಷ್ಟ್ರೀಯ ಹಬ್ಬಗಳ ಮಹತ್ವ