ಎರಡು ದೊಡ್ಡ ಕನಸುಗಳನ್ನು ಈಡೇರಿಸಿಕೊಂಡ ಭಾರತದ ಏಕೈಕ ವ್ಯಕ್ತಿ ಇವರು, ಅವರ ಸಾಧನೆ ಏನು ನೋಡಿ…

ಮಾಮೂಲಾಗಿ ವಿದ್ಯಾಭ್ಯಾಸದ ಸಮಯದಲ್ಲಿ ಆಟಕ್ಕೆ ಮಹತ್ವ ಕೊಟ್ಟರೆ ಮನೆಯವರು ಬಯ್ಯುತ್ತಾರೆ. ಅಭ್ಯಾಸ ಹಾಳಾಗುತ್ತೆ ಅನ್ನೋದು ಅವರ ಚಿಂತೆ. ಇನ್ನು ಕ್ರೀಡೆಯಲ್ಲಿ ವಿಶೇಷ ಆಸಕ್ತಿ ಹೊಂದಿ ಟ್ಯಾಲೆಂಟ್ ಕೂಡ ಇದ್ದವರು ಅದಕ್ಕೆ ಸಂಬಂಧಪಟ್ಟ ತರಬೇತಿಗೆ ಸೇರುತ್ತಾರೆ, ಅದರಲ್ಲೇ ಮುಂದುವರೆಯುತ್ತಾರೆ. ಅಂಥವರ ವಿದ್ಯಾಭ್ಯಾಸದ ಕಡೆ ಗಮನ ಕೊಡುವುದು ತೀರ ಅಂದ್ರೆ ತೀರ ವಿರಳ. ಆದರೆ ಇಲ್ಲೊಬ್ಬರಿದ್ದಾರೆ ನೋಡಿ. ಇವರು ಕ್ರಿಕೇಟ್ ನಲ್ಲಿ ಅಲ್ಲ ಬದಲಿಗೆ ಜೀವವನದಲ್ಲಿ ಆಲ್ ರೌಂಡರ್! ಇವರ ಕಥೆ ನೋಡುವಾ ಬನ್ನಿ…

ಸಾಕಷ್ಟು ಶಿಕ್ಷಣದೊಂದಿಗೆ ಕ್ರೀಡಾ ಜಗತ್ತಿನಲ್ಲಿ ಬಂದಿರುವ ಅನೇಕ ಆಟಗಾರರಿದ್ದಾರೆ. ಇವರಲ್ಲಿ ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್ ಮುಂತಾದ ಹೆಸರುಗಳು ಸೇರಿವೆ. ಆದರೆ ಇಂದು ನಾವು ಮಾತನಾಡಲಿರುವ ಆಟಗಾರ ಈ ಎಲ್ಲಕ್ಕಿಂತ ಒಂದು ಹೆಜ್ಜೆ ಮುಂದಿದ್ದಾರೆ. ಅವರು ತಮ್ಮ ಪದವಿ ಮಾತ್ರವಲ್ಲದೆ ದೇಶದ ಅತ್ಯಂತ ಉನ್ನತ ಸರ್ಕಾರಿ ನೌಕರಿಯಾದ IAS ಪರೀಕ್ಷೆಯಲ್ಲೂ ಉತ್ತೀರ್ಣರಾದರು.

IAS ಆದ ನಂತರ ಅವರು ಭಾರತೀಯ ಕ್ರಿಕೆಟ್ ತಂಡದಲ್ಲಿಯೂ ಸ್ಥಾನ ಪಡೆದರು! ಈ ಆಟಗಾರನ ಹೆಸರು ಅಮಯ್ ಖುರಾಸಿಯಾ (Amay Khurasiya). ಅವರು 90 ರ ದಶಕದಲ್ಲಿ ಟೀಮ್ ಇಂಡಿಯಾ ಪರ ಕ್ರಿಕೆಟ್ ಆಡಿದ್ದರು. ಹೀಗೆ ಅತ್ಯುನ್ನತ ಪರೀಕ್ಷೆ ಪಾಸಾಗಿ ಕ್ರಿಕೆಟಿನಲ್ಲೂ ಪಳಗಿ ಟೀಮ್ ಇಂಡಿಯಾದಲ್ಲಿಯೂ ಸ್ಥಾನ ಪಡೆದ ಏಕಮಾತ್ರ ವ್ಯಕ್ತಿ ಇವರು.

ಅಮಯ್ ಖುರಾಸಿಯಾ ಜನಿಸಿದ್ದು ಮಧ್ಯಪ್ರದೇಶದ ಜಬಲ್ಪುರದಲ್ಲಿ. ಅವರು ಎಡಗೈ ಬ್ಯಾಟ್ಸ್‌ಮನ್ ಆಗಿದ್ದರು. ವೇಗವಾಗಿ ರನ್ ಗಳಿಸುವ ಕಲೆ ಅವರಲ್ಲಿತ್ತು. ಆಟದ ಜೊತೆ ಪಾಠದಲ್ಲೂ ಆದರೆ ಭಾರತೀಯ ತಂಡಕ್ಕೆ ಸೇರುವ ಮೊದಲು ಅವರು ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಭಾರತೀಯ ಕಸ್ಟಮ್ಸ್ ಮತ್ತು ಕೇಂದ್ರ ಅಬಕಾರಿ ಇಲಾಖೆಯಲ್ಲಿ ಇನ್ಸ್‌ಪೆಕ್ಟರ್ ಆಗಿ ನೇಮಕಗೊಂಡರು.

ಅವರು 1989-90ರ ಋತುವಿನಿಂದ ಪ್ರಥಮ ದರ್ಜೆ ಕ್ರಿಕೆಟ್‌ ಗೆ ಪಾದಾರ್ಪಣೆ ಮಾಡಿದರು. ಇದರ ನಂತರ ಅವರು 2005-06ರ ಕ್ರೀಡಾ ಋತುವಿನವರೆಗೂ ಇಲ್ಲಿ ಆಡುತ್ತಿದ್ದರು. ದೇಶೀಯ ಕ್ರಿಕೆಟ್‌ನಲ್ಲಿ ಮಧ್ಯಪ್ರದೇಶದ ಪರವಾಗಿ 119 ಪ್ರಥಮ ದರ್ಜೆ ಪಂದ್ಯಗಳಲ್ಲಿ 40.80 ಸರಾಸರಿಯಲ್ಲಿ 7304 ರನ್ ಗಳಿಸಿದ್ದಾರೆ.

ಅವರ ಅತ್ಯುತ್ತಮ ಸ್ಕೋರ್ 238 ರನ್. ಪ್ರಥಮ ದರ್ಜೆಯಲ್ಲಿ 21 ಶತಕಗಳು ಮತ್ತು 31 ಅರ್ಧಶತಕಗಳನ್ನು ಗಳಿಸಿದರು. ಅವರು 1990-91, 1991-92 ಮತ್ತು 2000-01 ಋತುಗಳಲ್ಲಿ ಪ್ರಥಮ ದರ್ಜೆಯಲ್ಲಿ 500 ಕ್ಕೂ ಹೆಚ್ಚು ರನ್ ಗಳಿಸಿದರು. ಹಾಗೆಯೇ ಅಂತರರಾಷ್ಟ್ರೀಯ ಕ್ರಿಕೆಟ್‌ ಗೆ ಎಂಟ್ರಿಯಾದರು.

ಮೊದಲ ಪಂದ್ಯದಲ್ಲಿಯೇ ಫಿಫ್ಟಿ!
1999 ರಲ್ಲಿ ಶ್ರೀಲಂಕಾ ವಿರುದ್ಧ ಪೆಪ್ಸಿ ಕಪ್‌ ನಲ್ಲಿ ಖುರೇಶಿಯಾ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು. ಈ ಸಮಯದಲ್ಲಿ ಅವರು ಎರಡನೇ ಎಸೆತದಲ್ಲಿಯೇ ಒಂದು ಬೌಂಡರಿ ಹೊಡೆದರು. ನಂತರ 45 ಎಸೆತಗಳಲ್ಲಿ 57 ರನ್‌ ಗಳ ಇನ್ನಿಂಗ್ಸ್ ಆಡಿದರು. ಮೊದಲ ಏಕದಿನ ಪಂದ್ಯಗಳಲ್ಲಿಯೇ ಐವತ್ತು ರನ್ ಗಳಿಸಿದ ಎಂಟನೇ ಭಾರತೀಯ ಕ್ರಿಕೆಟಿಗ ಇವರು.

ಪೆಪ್ಸಿ ಕಪ್‌ ನಲ್ಲಿನ ಸಾಧನೆಯಿಂದಾಗಿ ಅವರನ್ನು 1999 ರ ವಿಶ್ವಕಪ್‌ ಗಾಗಿ ಟೀಮ್ ಇಂಡಿಯಾದಲ್ಲಿ ಆಯ್ಕೆ ಮಾಡಲಾಯಿತು. ಆದರೆ ಆಡಲು ಅವಕಾಶ ಸಿಗಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಭಾರತಕ್ಕೆ ವೇಗವಾಗಿ ರನ್-ಸ್ಕೋರರ್ ಅಗತ್ಯವಿದ್ದರಿಂದ ಖುರಾಸಿಯಾ ಅವರನ್ನು 1999 ರ ಐಸಿಸಿ ವಿಶ್ವಕಪ್ ತಂಡದಲ್ಲಿ ಸೇರಿಸಲಾಯಿತು. ಆದರೆ ಭಾರತದ ಇತರೆ ಬ್ಯಾಟ್ಸ್‌ಮನ್‌ಗಳು ಉತ್ತಮ ಇನ್ನಿಂಗ್ಸ್‌ಗಳನ್ನು ಆಡಿದರು. ರಾಹುಲ್ ದ್ರಾವಿಡ್, ಅಜಯ್ ಜಡೇಜಾ ಮತ್ತು ರಾಬಿನ್ ಸಿಂಗ್ ಇದ್ದ ತಂಡದಲ್ಲಿ ಅವರ ಸ್ಥಾನವನ್ನು ಪಡೆಯಲು ಇವರಿಗೆ ಸಾಧ್ಯವಾಗಲಿಲ್ಲ.

ನಂತರ ಅವರು ತಂಡದಿಂದ ಹೊರಗುಳಿದಿದ್ದರು. ಆದಾಗ್ಯೂ 2001 ರಲ್ಲಿ ಅಮಯ್ ಖುರೇಶಿಯಾ ಮತ್ತೆ ಭಾರತೀಯ ತಂಡಕ್ಕೆ ಸ್ಥಾನ ಪಡೆದರು. ಈ ಬಾರಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಆಡಿದರಾದರೂ ಬ್ಯಾಟ್ ಕೆಲಸ ಮಾಡಲಿಲ್ಲ, ಅವರು ಮತ್ತೇ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲಿಲ್ಲ.

12 ಏಕದಿನ ಪಂದ್ಯಗಳ ನಂತರ ಟೀಮ್ ಇಂಡಿಯಾದ ವೃತ್ತಿಜೀವನ ನಿಂತುಹೋಯಿತು :
ಅಮಯ್ ಖುರೇಶಿಯಾ ಭಾರತ ಪರ 12 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅವರು 1999 ರಲ್ಲಿ ಈ 10 ಪಂದ್ಯಗಳನ್ನು ಆಡಿದ್ದಾರೆ. 13.54 ಸರಾಸರಿಯಲ್ಲಿ ಅವರು 149 ರನ್ ಗಳಿಸಿದ್ದಾರೆ. ಖುರಾಸಿಯಾ ಅವರು ಫಾರ್ಮ್ ನಲ್ಲಿದ್ದಾಗ ಅವರಿಗೆ ನಿರಂತರ ಅವಕಾಶಗಳು ಸಿಗಲಿಲ್ಲವಾದ್ದರಿಂದ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಯಶಸ್ವಿಯಾಗಲಿಲ್ಲ.

ಅವರು 2007 ರಲ್ಲಿ ಅವರು ಕ್ರಿಕೆಟ್‌ ಗೆ ವಿದಾಯ ಹೇಳಿದರು. ಇದರ ನಂತರ ಅವರು ಕೋಚಿಂಗ್ ಮತ್ತು ಕಾಮೆಂಟ್ರಿ ಕ್ಷೇತ್ರಕ್ಕೆ ಬಂದರು. ಭಾರತೀಯ ಕ್ರಿಕೆಟ್ ಇತಿಹಾಸ ಕಂಡ ಅತ್ಯಂತ ವಿದ್ಯಾವಂತ ಆಟಗಾರ ಇವರು. ಟೀಮ್ ಇಂಡಿಯಾದ ನೀಲಿ ಜರ್ಸಿ ಪಡೆಯುವುದು ಯಾವುದೇ ಕ್ರಿಕೆಟಿಗನ ಒಂದು ಪ್ರಮುಖ ಕನಸಾಗಿರುತ್ತದೆ, ಇವರು ಅದನ್ನೂ ಈಡೇರಿಸಿಕೊಂಡರು