ಪಾಸಿಟಿವ್ ಸ್ಟೋರಿ : ಕಾನಸ್ಟೇಬಲ್ ನಿಂದ ಎಸಿಪಿ ಆದ ಯುವಕ – ಹತ್ತು ವರ್ಷದ ಕಠಿಣ ಪರಿಶ್ರಮದ ಫಲ ಇದು
ನಿಮ್ಮ ಅಕ್ಕ ಪಕ್ಕದಲ್ಲಿ ಪರಿಶ್ರಮ ಪಟ್ಟು ಬೆಳೆದವರನ್ನು ನೋಡಿಯೇ ಇರುತ್ತೀರಿ ಅಥವಾ ನೀವೇ ಪರಿಶ್ರಮ ಪಟ್ಟು ಏನಾದರೂ ಸಾಧಿಸಿದ್ದರೆ ಅದರ ಖುಷಿ ನಿಮಗೂ ಗೊತ್ತಾಗಿರುತ್ತದೆ. ಅಂದುಕೊಂಡ ಕಾರ್ಯ ನಡೆದು ಹೋದರೆ ಆಕಾಶಕ್ಕೆ ಮೂರೇ ಗೇಣು ಎನ್ನುವ ಮನಸ್ಥಿತಿ ನಿಮ್ಮದಾಗಿರುತ್ತದೆ. ಅಂತಹುದೆ ಒಂದು ಕಥೆ ದೆಹಲಿ ಪೊಲೀಸ್ ಇಲಾಖೆಯ ಒಬ್ಬ ಕಾನ್ಸ್ಟೇಬಲ್ ಜೀವನದಲ್ಲಿ ನಡೆದಿದೆ. ಬನ್ನಿ ಅದೇನೆಂದು ನೋಡೋಣ…
ಸಾಧಿಸುವ ಛಲ ಹಾಗೂ ಕಠಿಣ ಪರಿಶ್ರಮ ಪಟ್ಟರೆ ಏನಾದರೂ ಸಾಧಿಸಬಹುದು ಎಂಬ ಮಾತಿಗೆ ಇಂದಿನ ನಮ್ಮ ಕಥೆಯ ನಾಯಕನೇ ಸಾಕ್ಷಿ. ದೆಹಲಿ ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಟೇಬಲ್ ಆಗಿ ಬರೋಬ್ಬರಿ ಹತ್ತು ವರ್ಷ ಕೆಲಸ ಮಾಡಿದ ಇವರು ಇಂದು ದೇಶದ ಅತ್ಯುನ್ನತ ಪರೀಕ್ಷೆಯಾದ ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಸದ್ಯ ಅದೇ ದೆಹಲಿ ಪೊಲೀಸ್ ಇಲಾಖೆಯಲ್ಲಿ ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್ ಹುದ್ದೆಗೆ ಏರಿದ್ದಾರೆ!
ಹೌದು, ಫಿರೋಜ್ ಆಲಂ ಎಂಬ ಅವರ ಹೆಸರು ಬರೋಬ್ಬರಿ ಹತ್ತು ವರ್ಷಗಳ ಕಾಲ ದೆಹಲಿ ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಟೇಬಲ್ ಎಂಬ ಪದವಿಯೊಂದಿಗೆ ಜೋಡಣೆಯಾಗಿತ್ತು, ಆದರೆ ಛಲ ಬಿಡದ ಅವರು ಅತ್ತ ತಮ್ಮ ನೌಕರಿಗೂ ಮೋಸ ಮಾಡದೇ ತಮ್ಮ ಗುರಿಯನ್ನು ಬೆಂಬಿಡದೆ ಯುಪಿಎಸ್ಸಿ ಪರೀಕ್ಷೆಗೆಂದು ತಯಾರಿ ನಡೆಸಿದ್ದರು.

ಕಠಿಣ ಪರಿಶ್ರಮದಿಂದ ಆ ಕಠಿಣ ಪರೀಕ್ಷೆಯನ್ನು ಪಾಸ್ ಮಾಡಿದ್ದಲ್ಲದೆ ಸಧ್ಯ ದೆಹಲಿ ಪೊಲೀಸ್ ಇಲಾಖೆಯಲ್ಲಿಯೇ ಎಸಿಪಿಯಾಗಿ ತರಬೇತಿಗೆ ನಿಯೋಜಿಸಲ್ಪಟ್ಟಿದ್ದಾರೆ. ಬರುವ ವರ್ಷ ಮಾರ್ಚ್ ನಲ್ಲಿ ಇವರು ಎಸಿಪಿಯಾಗಿ ಸ್ಥಳ ನಿಯೋಜನೆಯಾಗುವುದು. ತನ್ನದೇ ಇಲಾಖೆಯ ತನ್ನ ಮೇಲಿನ ಮೂರ್ನಾಲ್ಕು ಜನ ಅಧಿಕಾರಿಗಳಿಗೆ ಒಮ್ಮಿಂದೊಮ್ಮೆಲೆ ತಾನೇ ಮೇಲಾಧಿಕಾರಿಯಾದರು!
ಮೂಲತಃ ದೆಹಲಿಯ ಹಾಪುರ್ ಪಿಲಖುವ ನಿವಾಸಿಯಾದ ಈ ಫಿರೋಜ್ ಆಲಂ, ಫಿಲಖುವಾದ ಅಜಂಪುರ್ ಡೆಹ್ರ ಎಂಬ ಹಳ್ಳಿಯಲ್ಲಿ ಜನಿಸಿದ್ದಾರೆ. ತಂದೆ ಮೊಹಮ್ಮದ್ ಶಹಾದತ್ ತಾಯಿ ಮುನ್ನಿ ಬಾನೋ ಹಾಗ್, 5 ಜನ ಸಹೋದರರು ಹಾಗೂ ಮೂರು ಜನ ಸಹೋದರಿಯರು ಇದ್ದಾರೆ. 2010 ರಲ್ಲಿ ದೆಹಲಿ ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಟೇಬಲ್ ಆಗಿ ಸೇರಿಕೊಂಡಿದ್ದರು.
ಫಿರೋಜ್ ಅವರು ತಾವು 2010 ರಲ್ಲಿ ಕಾನ್ಸ್ಟೇಬಲ್ ಆಗಿ ನೇಮಕಗೊಂಡ ಮೇಲೆ ಅಲ್ಲಿ ತಮ್ಮ ಮೇಲಧಿಕಾರಿಗಳ ಗತ್ತು ಗಾಂಭೀರ್ಯ ಹಾಗೂ ಅವರಿಗೆ ಇರುವ ಸ್ಥಾನ ಮಾನದ ಬಗ್ಗೆ ಕಂಡು ಸಾಕಷ್ಟು ಖುಷಿಯಾಯಿತು, ಅಲ್ಲದೇ ತಮಗೂ ಆಫೀಸರ್ ಆಗಬೇಕೆಂಬ ಆಸೆ ಹುಟ್ಟಿತು. ಅದಕ್ಕಿರುವುದು ಒಂದೇ ಮಾರ್ಗ ಅದು ಯುಪಿಎಸ್ಸಿ ಪರೀಕ್ಷೆ ಪಾಸು ಮಾಡುವುದು ಎಂದು ಇವರಿಗೆ ತಿಳಿದಿತ್ತು.

ಇಷ್ಟೆಲ್ಲ ಅಂದುಕೊಂಡು ತಯಾರಿ ನಡೆಸಿದ್ದ ಫಿರೋಜ್ ಅವರಿಗೆ ಯುಪಿಎಸ್ಸಿ ಪರೀಕ್ಷೆ ಅಷ್ಟೊಂದು ಸುಲಭವಾಗಿ ಪಾಸು ಮಾಡಲು ಆಗಲಿಲ್ಲ, ಒಟ್ಟು 5 ಅವಕಾಶದಲ್ಲಿ ಪ್ರಯತ್ನ ಪಟ್ಟು ಸೋತು ಹೋದರು. ಇದರಿಂದ ಬೇಸತ್ತು ಅದರ ಸಹವಾಸ ಬೇಡ ಎಂದು ಬಿಟ್ಟು ಬಿಟ್ಟಿದ್ದರು. ಆದರೆ ಆ ಸ್ಥಾನ ಇವರನ್ನು ಕೈ ಬಿಡಲಿಲ್ಲ.
ಅದೇ ದೆಹಲಿ ಪೊಲೀಸ್ ಇಲಾಖೆಯಲ್ಲಿಯೇ ಕಾನ್ಸ್ಟೇಬಲ್ ಆಗಿದ್ದು, ರಾಜಸ್ತಾನದ ಜಂಜುನು ಜಿಲ್ಲೆಯ ನವಲಗಢ ತಾಲೂಕಿನ ದೇವಿಪುರ ಗ್ರಾಮದ ವಿಜಯ್ ಸಿಂಹ ಗುರ್ಜರ್ ಅವರು ಇದೆ ಯುಪಿಎಸ್ಸಿ ಪರೀಕ್ಷೆ ಪಾಸು ಮಾಡಿದ್ದರು. ಇವರನ್ನು ಕಂಡು ತಮ್ಮಷ್ಟಕ್ಕೆ ತಮಗೆ ಸಾಧಿಸುವ ಛಲ ಬಂದು 2019 ರಲ್ಲಿ ಮತ್ತೊಮ್ಮೆ ಅಂದರೆ ಆರನೇ ಪ್ರಯತ್ನದಲ್ಲಿ 645 ನೇ ರ್ಯಾಂಕ್ ನೊಂದಿಗೆ ಪಾಸ್ ಆಗಿಯೇ ಬಿಟ್ಟರು.
ಇಂದು ನಾವಯ ಪೊಲೀಸ್ ಇಲಾಖೆಯಲ್ಲಿ ನೋಡುವ ಬಹುತೇಕರು ಪದವಿಧರರಾಗಿರುತ್ತಾರೆ. ಆದರೆ ಜೀವನಕ್ಕಾಗಿ ಕಾನಸ್ಟೆಬಲ್ ಆದವರು ಅಲ್ಲಿಯೇ ಉಳಿದುಬಿಡುತ್ತಾರೆ. ಮುಂದೆ ಓದುವ ಅಥವಾ ಪ್ರಮೋಷನ್ ಗಿಟ್ಟಿಸುವ ಪ್ರಯತ್ನ ಮಾಡುವುದೇ ಇಲ್ಲ. ಸಿಕ್ಕಿರುವ ಪೊಲೀಸ್ ಪೇದೆ ಹುದ್ದೆಯಲ್ಲಿಯೇ ಉಳಿದು, ನಂತರ ಹೆಡ್ ಕಾನಸ್ಟೆಬಲ್ ಆಗಿ ಸಮಾದಾನ ಮಾಡಿಕೊಳ್ಳುತ್ತಾರೆ. ಪೊಲೀಸ್ ಇಲಾಖೆ ಮಾತ್ರವಲ್ಲ, ಎಲ್ಲದರಲ್ಲೂ ಹೀಗೆಯೇ, ಒಂದು ಕೆಲಸ ಸಿಕ್ಕ ತಕ್ಷಣ ಹೆಚ್ಚಿನದಕ್ಕೆ ಪ್ರಯತ್ನಿಸದೇ ಅಲ್ಲೇ ಉಳಿದುಬಿಡುತ್ತಾರೆ.

ಸಾಕಷ್ಟು ಪ್ರತಿಭಾವಂತರಿದ್ದರೂ ಹಲವಾರು ಕಾರಣಗಳಿಗಾಗಿ ಸ್ಪರ್ದಾತ್ಮಕ ಪರೀಕ್ಷೆಯಿಂದ ದೂರ ಉಳಿಯುತ್ತಾರೆ. ಸಮಸ್ಯೆ ಎಲ್ಲರಿಗೂ ಇದ್ದಿದ್ದೇ, ಅದರಲ್ಲೇ ಹೊಂದಾಣಿಕೆ ಮಾಡಿಕೊಂಡು ಓದಿದರೆ ಬೇಕಾದ್ದು ಸಾಧಿಸಬಹುದು. ಅಂಥವರಿಗೆಲ್ಲ ಫಿರೋಜ್ ಮಾದರಿಯಾಗಿದ್ದಾರೆ. ಇವರನ್ನು ನೋಡಿ ಮತ್ತಷ್ಟು ಜನ UPSC ಪರೀಕ್ಷೆಗೆ ಸಜ್ಜಾಗಲಿ ಎಂಬುದು ನಮ್ಮ ಆಶಯ
-ಮಂಜುನಾಥ್