VIDEO : ಪುಟ್ಟಣ್ಣ ಕಣಗಾಲ್ ರವರ ಮನೆ ಈಗ ಹೀಗಿದೆ ನೋಡಿ
ಪುಟ್ಟಣ್ಣ ಕಣಗಾಲ್, ಇದು ಹೆಸರಲ್ಲ, ಕನ್ನಡ ಚಿತ್ರರಂಗದ ಒಂದು ಶಕ್ತಿ. ಹತ್ತಾರು ನಟರನ್ನು ಬೆಳಳಿ ಪರದೆಗೆ ಪರಿಚಯಿಸಿದ ಮೂರ್ತಿ. ಕನ್ನಡದ ಅತ್ಯಂತ ಸೃಜನಶೀಲ ನಿರ್ದೇಶಕ ಎಂದೇ ಹೆಸರಾದ ಪುಟ್ಟಣ್ಣನವರು ನಿರ್ಮಾಪಕ, ಕಾದಂಬರಿಕಾರ ಕೌಡ ಹೌದು. ಇವರ ಚಿತ್ರಗಳ ಪ್ರಮುಖ ವಿಶೇಷತೆಯೇನೆಂದರೆ, ಇವರ ಎಲ್ಲ ಸಿನೆಮಾಗಳಲ್ಲಿ ಸಮಾಜಕ್ಕೆ ಸಂದೇಶ ಇದ್ದೇ ಇರುತ್ತಿತ್ತು. ಹೀಗಾಗೇ ಇವರನ್ನು ಚಿತ್ರಬ್ರಹ್ಮ ಎಂದು ಕರೆಯಲಾಗುತ್ತದೆ.
ಇಂಥ ದಿಗ್ಗಜರ ಮನೆ ಹೇಗಿದೆ ಎಂಬುದು ಕುತೂಹಲಕಾರಿ ಸಂಗತಿ. ಈಗಿನ ನಟ – ನಿರ್ದೇಶಕರ ಮನೆಗಳನ್ನು ಅಲ್ಲಲ್ಲ ಭಂಗಲೆಗಳನ್ನು ನೀವು ನೋಡಿರಬಹುದು. ಅವನ್ನೆಲ್ಲ ಮನದಲ್ಲಿಟ್ಟುಕೊಂಡು ಕಣಗಾಲ್ ರವರ ಮನೆ ನೋಡಲು ಹೋದರೆ ಶಾಕ್ ಆಗುವುದು ಪಕ್ಕಾ. ಏಕೆಂದರೆ ಅವರ ಮನೆ ಈಗಿನವರ ಹಾಗೆ ಐಷಾರಾಮಿ ಅರಮನೆಯಲ್ಲ, ಅದೊಂದು ಪಕ್ಕಾ ಹಳ್ಳಿಶೈಲಿಯ ಉದ್ದನೆಯ ಅಂಕಣದ ಮನೆ.

ಪಿರಿಯಾಪಟ್ಟಣದ ಕಣಗಾಲ ಗ್ರಾಮದಲ್ಲಿ ಜನಿಸಿದ ಪುಟ್ಟಣ್ಣನವರು ಬಹುಶ ಚಿತ್ರರಂಗದ ಇತರೆ ಎಲ್ಲ ಖ್ಯಾತನಾಮರಿಗಿಂತ ಹೆಚ್ಚು ಕಷ್ಟದ ಜೀವನ ಸವೆಸಿದ್ದಾರೆ. ಕಡುಬಡತನದ ಮನೆಯಲ್ಲಿ ಜನಿಸಿದ ಪುಟ್ಟಣ್ಣನವರು ಮೊದಮೊದಲು ಕ್ಲೀನರ್, ಸೇಲ್ಸಮನ್, ಶಿಕ್ಷಕ, ಚಾಲಕ ಹೀಗೆ ಹಲವು ವೃತ್ತಿಗಳನ್ನು ಮಾಡಿದರು.
ನಂತರ ಚಿತ್ರಪ್ರಚಾರಕರಾಗಿ ಕೆಲಸ ಮಾಡತೊಡಗಿದ ಪುಟ್ಟಣ್ಣನವರಿಗೆ ಬಿಆರ್ ಪಂತುಲರವರ ಪರಿಚಯವಾಯಿತು. ಆಗ ಅವರ ಕಾರ್ ಡ್ರೈವರ್ ಆಗಿ ಕೆಲಸ ಮಾಡತೊಡಗಿದ ಪುಟ್ಟಣ್ಣ ಕ್ರಮೇಣ ಅವರ ಸಹನಿರ್ದೇಶಕರಾಗಿ ಕೆಲಸ ಮಾಡತೊಡಗಿದರು. ಬಹುಶ ತುಂಬಾ ಜನರಿಗೆ ಗೊತ್ತಿರಲಿಕ್ಕಿಲ್ಲ, ಪುಟ್ಟಣ್ಣನವರು ಸ್ವತಂತ್ರ ನಿರ್ದೇಶಕರಾಗಿ ಮೊದಲು ನಿರ್ದೇಶಿಸಿದ ಚಿತ್ರ ಮಲಯಾಳಂ ನ ಸ್ಕೂಲ್ ಮಾಸ್ಟರ್ ಚಿತ್ರ! ಇದು 1964 ರಲ್ಲಿ ತೆರೆ ಕಂಡಿತು. ಮುಂದೆ 1967 ರಲ್ಲಿ ಪುಟ್ಟಣ್ಣ ಅವರ ಮೊದಲ ಕನ್ನಡ ಚಿತ್ರ ಬೆಳ್ಳಿಮೋಡ ಬಿಡುಗಡೆಯಾಯಿತು. ನಂತರ ಅವರು ತಿರುಗಿ ನೋಡಲೇ ಇಲ್ಲ.

ಆಮೇಲೆ ಶರಪಂಜರ, ಗೆಜ್ಜೆಪೂಜೆ, ನಾಗರಹಾವು ಮುಂತಾದ ಸೂಪರ್ ಡೂಪರ್ ಹಿಟ್ ಚಿತ್ರಗಳು ಪುಟ್ಟಣ್ಣನವರ ಬತ್ತಳಿಕೆಯಿಂದ ಬಂದವು. ವಿಷ್ಣುವರ್ಧನ್, ಅಂಬರೀಶ್, ಆರತಿ, ಲೀಲಾವತಿ, ಕಲ್ಪನಾ, ಜಯಂತಿ, ಪದ್ಮಾ ವಾಸಂತಿ, ಶ್ರೀನಾಥ್, ರಜನಿಕಾಂತ್, ಜೈ ಜಗದೀಶ್, ರಾಮಕೃಷ್ಣ ಮುಂತಾದ ಘಟಾನುಗಟಿಗಳನ್ನು ಚಿತ್ರಜೀವನಕ್ಕೆ ಪರಿಚಯ ಮಾಡಿಸಿದ ಖ್ಯಾತಿ ಇವರದು.
ಬಹುಶಃ ಇವರಷ್ಟು ಹೆಚ್ಚು ಸೂಪರ್ ಸ್ಟಾರ್ ಗಳನ್ನು ಚಿತ್ರರಂಗಕ್ಕೆ ಮತ್ಯಾವ ಭಾಷೆಯ ಮತ್ಯಾವ ನಿರ್ದೇಶಕನೂ ಪರಿಚಯಿಸಿರಲಿಕ್ಕಿಲ್ಲ. ಪುಟ್ಟಣ್ಣ ಕನ್ನಡ ಮಾತ್ರವಲ್ಲದೇ, ತಮಿಳು, ಮಲಯಾಳಂ, ತೆಲುಗು, ಮತ್ತು ಹಿಂದಿ ಭಾಷೆಯಲ್ಲಿಯೂ ಹಲವು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಕನ್ನಡ ಮತ್ತು ತಮಿಳಿನ ಕೆಲ ಖ್ಯಾತ ನಿರ್ದೇಶಕರು ಪುಟ್ಟಣ್ಣನವರ ಗರಡಿಯಲ್ಲಿ ಪಳಗಿದವರು.

ಅವರ ವೈಯಕ್ತಿಕ ಜೀವನದ ಬಗ್ಗೆ ಮಾತಾಡುವುದು ತರವಲ್ಲವಾದರೂ, ಪರಿಚಯ ಮಾಡಿಸಲು ಹೇಳಬೇಕೆಂದರೆ, ಪುಟ್ಟಣ್ಣನವರು ಬಾಲ್ಯದಲ್ಲಿಯೇ ನಾಗಲಕ್ಷ್ಮೀ ಎಂಬುವವರನ್ನು ಮದುವೆಯಾಗಿದ್ದರು. ಪುಟ್ಟಣ್ಣ ಮತ್ತು ನಾಗಲಕ್ಷ್ಮೀ ದಂಪತಿಗೆ ಐದು ಜನ ಮಕ್ಕಳಿದ್ದರು. ನಂತರ 1975 ರ ಮೇಲೆ ನಟಿ ಆರತಿಯವರನ್ನು ಪ್ರೇಮಿಸತೊಡಗಿದರು.
ಪುಟ್ಟಣ್ಣನವರು ಐದಾರು ವರ್ಷಗಳ ಕಾಲ ಅವರೊಂದಿಗೆ ವೈವಾಹಿಕ ಜೀವನ ನಡೆಸಿದರು. ಪುಟ್ಟಣ್ಣ – ಆರತಿ ದಂಪತಿಗೆ ಯಶಸ್ವಿನಿ ಎಂಬ ಮಗು ಆಯಿತು. ಯಾವಾಗ ಆರತಿಯವರ ಜೊತೆ ಮನಸ್ತಾಪ ಉಂಟಾಗಿ ಸುಮಾರು 1981 ರಲ್ಲಿ ದೂರವಾದರೋ, ಆಗಿನಿಂದ ಪುಟ್ಟಣ್ಣ ಕೊರಗುತ್ತಲೇ ಬಂದರು. ಅದಾದ ಮೇಲೆ ಮಾನಸ ಸರೋವರ ಸಿನೆಮಾ ನಿರ್ದೇಶಿಸಿದರು.
ಆಮೇಲೆ ಮಸಣದ ಹೂವು ಚಿತ್ರದ ಕೆಲಸ ಇರುವಾಗಲೇ ವಿಧಿವಶರಾದರು. ಇಂಥ ಪುಟ್ಟಣ್ಣನವರ ಮನೆ ಈಗ ಹೇಗಿದೆ ಅಂತ ವಿಡಿಯೊ ನೋಡಿ, ಈ ಬಗ್ಗೆ ನಿಮಗೆ ಅನಿಸಿದ್ದನ್ನು ಕಾಮೆಂಟ್ ಮಾಡಿ.
-Team Infotrend