ಇತ್ತೀಚೆಗೆ ಅತಿ ಹೆಚ್ಚು ಸುದ್ದಿಯಲ್ಲಿರುವ ರೋಹಿಣಿ ಸಿಂಧೂರಿಯವರ ಬಗ್ಗೆ ನಿಮಗೆಷ್ಟು ಗೊತ್ತು? ಸತ್ಯ-ನಿಷ್ಠೆ ಇದ್ದಲ್ಲಿ ಶತ್ರುಗಳೂ ಹೆಚ್ಚು!
ಗೊತ್ತಿರಲಾರದವರು ಇವರ ಫೋಟೊ ನೋಡಿದರೆ ಯಾರೋ ಸಿನೆಮಾದವರಿರಬೇಕು ಎಂದುಕೊಳ್ಳುತ್ತಾರೆ, ಅಷ್ಟು ಲಕ್ಷಣವಾಗಿದ್ದಾರೆ ರೋಹಿಣಿ ಸಿಂಧೂರಿ. ಆದರೆ ನೋಡಲು ಎಷ್ಟು ಸಾಫ್ಟಾಗಿದ್ದಾರೋ, ಕೆಲಸದ ವಿಷಯದಲ್ಲಿ ಅಷ್ಟೇ ಖಡಕ್ ಆಗಿ ಇದ್ದಾರೆ. ಈ ಕಾರಣಕ್ಕೇ ಅವರಿಗೆ ಶತ್ರುಗಳು ಹೆಚ್ಚು. ಇಲ್ಲಿ ಶತ್ರುಗಳು ಅಂದರೆ ಅವರ ನಿಲುವು ಒಪ್ಪದ ವಿರೋಧಿಗಳು ಎಂದಷ್ಟೆ ಅರ್ಥ. ಅವರು ಸರ್ವೀಸಿಗೆ ಸೇರಿದಾಗಿನಿಂದ ಇಲ್ಲಿಯವರೆಗಿನ ಟ್ರ್ಯಾಕ್ ರೆಕಾರ್ಡ್ ನೋಡಿದರೆ, ಯಾರಿಗೆ ಬೇಕಾದರೂ ಅವರು ನಿಷ್ಟಾವಂತ ಅಧಿಕಾರಿ ಎಂಬುದು ಅರಿವಾಗುತ್ತದೆ.
ಯಾವ ಅಧಿಕಾರಿಗೆ ಹೆಚ್ಚು ರಾಜಕಾರಣಿಗಳ (ಯಾವುದೇ ಪಕ್ಷವಾಗಿರಲಿ) ವಿರೋಧವಿರುತ್ತದೋ, ಯಾವ ಅಧಿಕಾರಿಯನ್ನು ಪದೇ ಪದೇ ವರ್ಗಾವಣೆ ಮಾಡಲಾಗುತ್ತದೋ ಖಂಡಿತ ಅವರಲ್ಲೇನೋ ವಿಶೇಷ ಇದೆಯಂತಲೇ ಅರ್ಥ. ರೋಹಿಣಿಯವರ ವಿಷಯದಲ್ಲೂ ಆಗುತ್ತಿರುವುದು ಇದೇ. ಆದರೆ ಯಾವುದಕ್ಕೂ ಸೊಪ್ಪು ಹಾಕದ ಅವರು ತಮ್ಮ ಕೆಲಸಗಳನ್ನು ಹಾಗೂ ಸರ್ಕಾರ ಸೂಚಿಸಿದ ಕಾರ್ಯಗಳನ್ನು ಚಾಚೂತಪ್ಪದೇ ಮಾಡುತ್ತಾ ಸಾಗಿದ್ದಾರೆ.
ರೋಹಿಣಿ ಸಿಂದೂರಿಯವರ ಕನ್ನಡ ಮಾತಾಡುವುದನ್ನು ನೋಡಿ ಅವರು ಕರ್ನಾಟಕದವರೇ ಎಂದು ತುಂಬಾ ಜನ ಅಂದುಕೊಂಡಿದ್ದಾರೆ. ಆದರೆ ಅವರು ಮುಲತಃ ಆಂದ್ರಪ್ರದೇಶದವರು. ಅವರ ಪೂರ್ತಿ ಹೆಸರು ರೋಹಿಣಿ ಸಿಂಧೂರಿ ದಾಸರಿ ಅಂತ. ಮಾತೃಭಾಷೆ ತೆಲುಗುವಾದರೂ, ಅವರು ಕನ್ನಡ, ತಮಿಳು ಮತ್ತು ಇಂಗ್ಲೀಷನ್ನು ನಿರರ್ಗಳವಾಗಿ ಮಾತಾಡಬಲ್ಲರು.
ಕೇವಲ 25 ನೇ ವಯಸ್ಸಿನಲ್ಲಿಯೇ ಯುಪಿಎಸ್ಸಿ ಪಾಸ್ ಮಾಡಿದ ರೋಹಿಣಿ ಅತಿ ಚಿಕ್ಕ ವಯಸ್ಸಿಗೇ ಅದ್ಭುತ ಸಾಧನೆ ಮಾಡಿದವರು. ತಮ್ಮ ಕೆಲಸದಿಂದ ಅಭಿಮಾನಿಗಳನ್ನು ಸಂಪಾದಿಸಿಕೊಂಡ ಕೆಲವೇ ಕೆಲವು ಅಧಿಕಾರಿಗಳಲ್ಲಿ ರೋಹಿಣಿ ಸಿಂಧೂರಿ ಕೂಡ ಒಬ್ಬರು. ಕೆಮಿಕಲ್ ಇಂಜನೀಯರಿಂಗ್ ನಲ್ಲಿ ಬಿ.ಟೆಕ್ ಮಾಡಿರುವ ರೋಹಿಣಿ ಸಿಂಧೂರಿ, ಬಾಲ್ಯದಿಂದಲೇ ಸಾಕಷ್ಟು ಪ್ರತಿಭಾನ್ವಿತೆಯಾಗಿದ್ದರು.

2009 ರಲ್ಲಿ ಮೊದಲ ಪ್ರಯತ್ನದಲ್ಲೇ ಐಎಎಸ್ ಪಾಸ್ ಮಾಡಿದ ಬುದ್ದಿವಂತೆ ಹಾಗೂ ಅದೃಷ್ಟವಂತೆ ರೋಹಿಣಿಯವರು. ನಂತರ ತರಬೇತಿ ಮುಗಿಸಿಕೊಂಡು 2011 ರಲ್ಲಿ ತುಮಕೂರಿನಲ್ಲಿ ಸಹಾಯಕ ಆಯುಕ್ತರಾಗಿ ನೇಮಕವಾದರು. ಇಲ್ಲಿಂದ ಸುರುವಾದ ಅವರ ಕರ್ನಾಟಕ ಸೇವೆ, ನಿರಂತರ ಅಡೆತಡೆಗಳ ನಡುವೆಯೂ ನಡೆಯುತ್ತಲೇ ಇದೆ.
ತುಮಕೂರಿನ ಜನ ಇಂದಿಗೂ ನೆನಪಿಸಿಕೊಳ್ಳುವ ಹಾಗೆ ಅಲ್ಲಿ ಕೆಲಸ ಮಾಡಿದ ರೋಹಿಣಿ ನಂತರ ಮಂಡ್ಯ ಜಿಲ್ಲಾಧಿಕಾರಿಯಾಗಿ ನೇಮಕವಾದರು. ಅಲ್ಲಿ ಪ್ರಧಾನಮಂತ್ರಿಗಳ ಸ್ವಚ್ಚತಾ ಅಭಿಯಾನದಡಿ ಸಾಕಷ್ಟು ಕೆಲಸ ಮಾಡಿದರು. ಹಳ್ಳಿ ಹಳ್ಳಿಗೂ ತೆರಳಿ ನೈರ್ಮಲ್ಯದ ಜಾಗೃತಿ ಮೂಡಿಸಿದ ಅವರು ಶೌಚಾಲಯ ನಿರ್ಮಾಣದ ವಿಷಯದಲ್ಲಿ ಕ್ರಾಂತಿಯನ್ನೇ ಮಾಡಿದರು.
ಇವರ ಕೆಲಸ ನೋಡಿ ಕೇಂದ್ರ ಸರ್ಕಾರ ಮತ್ತೊಂದಿಷ್ಟು ಹಣ ಮಂಜೂರು ಮಾಡಿ ಕೆಲಸ ಮಾಡಿಸಿತ್ತು. ತುಮಕೂರಾಗಲಿ, ಮಂಡ್ಯ ಆಗಲಿ ಎಲ್ಲಿಯೂ ಅವರು ಯಾವ ರಾಜಕಾರಣಿಗೂ ಯಾವ ಶ್ರೀಮಂತನಿಗೂ, ಸೊಪ್ಪು ಹಾಕದೇ ನಿಷ್ಟೆಯಿಂದ ಕೆಲಸ ಮಾಡಿದರು. ನಂತರ ಕಾರ್ಮಿಕರ ಕಲ್ಯಾಣ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿದ್ದಾಗ ಕೂಡ ಕಾರ್ಮಿಕರ ದುಡ್ಡು ದುರ್ಬಳಕೆಯಾಗುತ್ತಿದ್ದುದನ್ನು ತಡೆದರು.

ಈ ಕಾರಣಕ್ಕಾಗಿ ಎತ್ತಂಗಡಿ ಕೂಡ ಆದರು. ಮಾಡಿದ ತಪ್ಪಿಗೆ ಎಷ್ಟೊ ದಿನ ಅವರಿಗೆ ಯಾವುದೇ ಪೋಸ್ಟ್ ಕೂಡ ಕೊಟ್ಟಿರಲಿಲ್ಲ! ಇನ್ನು 2017 ರಲ್ಲಿ ಹಾಸನದ ಜಿಲ್ಲಾಧಿಕಾರಿಯಾದಾಗ ಅವರು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಆಸಕ್ತಿ ತೋರಿಸಿದರು. ಅವರ ಪರಿಶ್ರಮದ ಫಲವಾಗಿ SSLC ಪರೀಕ್ಷೆಯಲ್ಲಿ 2017 ರಲ್ಲಿ 31 ನೇ ಸ್ಥಾನದಲ್ಲಿದ್ದ ಹಾಸನ 2019 ರಲ್ಲಿ ಮೊದಲ ಸ್ಥಾನ ಪಡೆಯಿತು.
ಶಿಕ್ಷಣ ಇಲಾಖೆ ಅಧಿಕಾರಿಗಳಷ್ಟೇ ಅಲ್ಲದೇ ನಿರಂತರ ಪೋಷಕರ ಸಭೆ ಕೂಡ ನಡೆಸಿ ಈ ಪಲಿತಾಂಶ ಬರಲು ಕಾರಣರಾಗಿದ್ದರು. ನಂತರ ಈ ಸಾಧನೆಯನ್ನು ಕೆಲವರು ತಮ್ಮ ಪಟ್ಟಿಗೆ ಸೇರಿಸಿಕೊಂಡರಾದರೂ ಅದನ್ನು ಕೇಳಿ ಜನ ನಕ್ಕರಷ್ಟೇ.
ಕೊರೋನ ಅವಧಿಯಲ್ಲಿಯೂ ಕೂಡ ಅವರು ಮೈಸೂರು ಜಿಲ್ಲಾಧಿಕಾರಿಯಾಗಿ ಒಳ್ಳೆ ಕೆಲಸ ಮಾಡಿದ್ದಾರೆ. ಚಾಮರಾಜನಗರ ದುರಂತವನ್ನು ಅವರ ತಲೆಗೆ ಕಟ್ಟಲು ನೋಡಿದರಾದರೂ ಅದು ಸಾಧ್ಯವಾಗಲಿಲ್ಲ. ಮೈಸೂರಿನಲ್ಲಿಯಂತೂ ಅವರಿಗೆ ನಿರಂತರ ಕಿರಿ ಕಿರಿ ಇದ್ದೇ ಇದೆ. ನಿನ್ನೆ ಕೂಡ ಅವರನ್ನು ಸಭೆಯಲ್ಲಿ ಹಿಗ್ಗಾ ಮುಗ್ಗಾ ಟೀಕಿಸಲಾಯಿತು.
ಆದರೂ ಜಗ್ಗದ ರೋಹಿಣಿ ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಲೇ ಇದ್ದಾರೆ. ಇಂಥ ಧಿಟ್ಟ ಅಧಿಕಾರಿಣಿಯನ್ನು ಗೌರವಯುತವಾಗಿ ನಡೆಸಿಕೊಳ್ಳುವುದನ್ನು ನಮ್ಮ ರಾಜಕಾರಣಿಗಳು ಅದ್ಯಾವಾಗ ಕಲಿತಾರೊ. ಇಂಥ ಅಧಿಕಾರಿ ಎಲ್ಲ ರಂಗದಲ್ಲೂ ಇದ್ದರೆ ಸಾಕಷ್ಟು ಪ್ರಗತಿ ಸಾಧಿಸಬಹುದು, ಇದನ್ನು ರಾಜ್ಯ ಸರಕಾರಗಳು ಅರ್ಥ ಮಾಡಿಕೊಳ್ಳಬೇಕು.
ಸುಧೀರ್ ರೆಡ್ಡಿ ಎಂಬ ಸಾಫ್ಟವೇರ್ ಇಂಜನೀಯರ್ ಒಬ್ಬರನ್ನು ವಿವಾಹವಾಗಿರುವ ರೋಹಿಣಿ ಸಿಂಧೂರಿಯವರಿಗೆ ಒಂದು ಗಂಡು – ಒಂದು ಹೆಣ್ಣು ಮಗುವಿದೆ. ಇವರ ತಂಗಿ ಪ್ರಿಯಾಂಕ ರೆಡ್ಡಿಯವರು ಬೆಂಗಳೂರಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರೋಹಿಣಿಯವರ ಬಗ್ಗೆ ಕಂಪ್ಲೀಟ್ ಡಿಟೈಲ್ಸ್ ಕೊಡುವ ವಿಡಿಯೊ ಮೇಲಿದೆ, ಆಸಕ್ತರು ನೋಡಿ.
-Team Infotrend