ಕೊಂಕಣ ರೈಲ್ವೆಯಲ್ಲಿ ಟ್ರೇನ್ ಮೇಲೆ ಸರಕು ತುಂಬಿದ ಲಾರಿಗಳನ್ನು ಯಾಕೆ ಹೊತ್ತೊಯ್ಯುತ್ತಾರೆ? ಇದರ ಹಿಂದಿರುವ ಕಾರಣವೇನು?

ಹೊಸ ಟ್ರಕ್ ಗಳನ್ನು ಟ್ರೇನ್ ನಲ್ಲಿ ಒಯ್ಯುತ್ತಿದ್ದಾರೆಂದರೆ ಓಕೆ, ಆದರೆ ಸರಕು ತುಂಬಿದ ಲಾರಿಗಳನ್ನು ಗೂಡ್ಸ್ ಟ್ರೇನ್ ನಲ್ಲಿ ತಗೆದುಕೊಂಡು ಹೋಗುತ್ತಾರೆಂದರೆ ಎಲ್ಲರಲ್ಲೂ ಅದ್ಯಾಕೆ ಅಂತ ಪ್ರಶ್ನೆ ಎದ್ದೇ ಏಳುತ್ತದೆ. ಅವು ತಾವೇ ಸಾಮಾನು ಹೊತ್ತು ಸಾಗುತ್ತವೆಂದ ಮೇಲೆ ಟ್ರೇನ್ ಮೇಲ್ಯಾಕೆ ತಗೆದುಕೊಂಡು ಹೋಗುತ್ತಾರೆ? ಇಂಥ ಪ್ರಶ್ನೆಗಳಿಗೆ ಉತ್ತರ ಇಲ್ಲಿವೆ.

ಎಲ್ಲದಕ್ಕೂ ಮೊದಲು ನಾವು ಕೊಂಕಣ ರೆಲ್ವೆಯ ಬೌಗೋಳಿಕ ರಚನೆ ಅರ್ಥ ಮಾಡಿಕೊಳ್ಳಬೇಕು. ಅಲ್ಲಿ ರಸ್ತೆ ಮೂಲಕ ಪ್ರಯಾಣ ದೊಡ್ಡ ಸವಾಲಿನದು. ದೊಡ್ಡ ದೊಡ್ಡ ಬಂಡೆಗಳನ್ನು ಕತ್ತರಿಸಿ ಮಾಡಲಾದ ರಸ್ತೆಯಲ್ಲಿ ಸಾಗುವುದು ಸರಳವಲ್ಲ. ಅದರಲ್ಲೂ ತಿರುವುಮುರುವಾದ ಘಾಟ್ ಸೆಕ್ಸನ್ ನಲ್ಲಿ ಸರಕು ಹೊತ್ತು ಸಾಗುವುದಿದೆಯಲ್ಲ ಅದು ನಿಜಕ್ಕೂ ಅಪಾಯಕಾರಿ.

NH 70 ಯ ಆ ರಸ್ತೆಯ ದಿಬ್ಬಗಳನ್ನು ಏರುವುದು – ಇಳಿಸುವುದು ಚಾಲೆಂಜಿಗ್ ಕೆಲಸ. ಇದೆಲ್ಲದರಿಂದ ಪರಿಹಾರ ಕಾಣುವ ಸಲುವಾಗಿ ಕೊಂಕಣ ರೆಲ್ವೆ ಈ ವ್ಯವಸ್ಥೆ ಮಾಡಿತು. ರೈಲ್ವೆಯಲ್ಲಿ ಸರಕು ಸಾಗಣೆ ಲಾರಿ ಒಯ್ಯುವ ಈ ಸೇವೆಗೆ ರೋಲ್ ಆನ್-ರೋಲ್ ಆಫ್ ಅಥವಾ ರೋ-ರೋ ಸೇವೆ ಎಂದು ಕರೆಯಲಾಗುತ್ತದೆ.

ವಾಸ್ತವವಾಗಿ ಮುಂಬೈಯಿಂದ ಗೋವಾಕ್ಕೆ ರಸ್ತೆ ಮೂಲಕ ಪ್ರಯಾಣ ನಿಜವಾಗಿಯೂ ಅಪಾಯಕಾರಿ. ಈ ಮಾರ್ಗದಲ್ಲಿ ಲಾರಿಗಳು ಸಾಮಾನ್ಯ ವಾಹನಗಳೊಂದಿಗೆ ಪ್ರಯಾಣಿಸುವುದು ತುಂಬಾ ಕಷ್ಟ. ಅಂತಹ ಪರಿಸ್ಥಿತಿಯಲ್ಲಿ ಸರಕು ಟ್ರಕ್‌ ಗಳ ಸ್ಥಿತಿ ಕೆಟ್ಟದಾಗಿರುತ್ತದೆ. ಹಾಗೆಯೇ ನಾಲ್ಕರಿಂದ ಆರು ತಿಂಗಳವರೆಗೆ ಮಳೆ ಬೀಳುವ ಮಾನ್ಸೂನ್ ಕೂಡ ಇನ್ನಿಲ್ಲದೇ ಕಾಡುತ್ತದೆ. ಆದ್ದರಿಂದ ಕೊಂಕಣ ರೈಲ್ವೆ ಆಡಳಿತವು ಈ ಸೇವೆ ಸುರು ಮಾಡಿತು, ಮತ್ತು ಈ ಪ್ರಯೋಗದಲ್ಲಿ ಅಪೇಕ್ಷಿತ ಯಶಸ್ಸನ್ನು ಸಹ ಸಾಧಿಸಿದರು.

ಸರಕು ತುಂಬಿದ ಟ್ರಕ್‌ ಗಳನ್ನು ಹತ್ತಿರದ ರೈಲ್ವೆ ನಿಲ್ದಾಣಕ್ಕೆ ತಮ್ಮ ಗಮ್ಯಸ್ಥಾನಕ್ಕೆ ಸಾಗಿಸುವ ಕೊಂಕಣ ರೈಲು ರೋ-ರೋ ಸೇವೆಯ ಬಗ್ಗೆ ವಿವರವಾಗಿ ಹೇಳುವುದಾದರೆ… ಮುಂಬೈನಿಂದ ಸುಮಾರು 145 ಕಿ.ಮೀ ದೂರದಲ್ಲಿರುವ ಕೋಲಾಡ್‌ ನಿಂದ ಗೋವಾದ ವೆರ್ನಾ ನಿಲ್ದಾಣ (417 ಕಿ.ಮೀ) ಮತ್ತು ಕೋಲಾಡ್‌ನಿಂದ ಸೂರತ್‌ಕಲ್ ನಿಲ್ದಾಣ (721 ಕಿ.ಮೀ) ನಡುವೆ ರೋ-ರೋ ಸೇವೆಗಳು ಲಭ್ಯವಿದೆ.

ಈ ದೂರವನ್ನು ರಸ್ತೆಯ ಮೂಲಕ ಕ್ರಮಿಸಲು ಟ್ರಕ್‌ ಗಳು ಕ್ರಮವಾಗಿ 24 ಮತ್ತು 40 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಅದೇ ದೂರವನ್ನು ಕೊಂಕಣ ರೈಲ್ವೆಯ ರೋ-ರೋ ಸೇವೆಯ ಮೂಲಕ ಕ್ರಮವಾಗಿ 12 ಮತ್ತು 22 ಗಂಟೆಗಳಲ್ಲಿ ಪೂರ್ಣಗೊಳಿಸಲಾಗುತ್ತದೆ. ಹೀಗಾಗಿ ಕೂಡ ಈ ಸೇವೆ ಕನಪ್ರಿಯ ಮತ್ತು ಲಾಭದಾಯಕ.

ಕೊಂಕಣ ರೈಲ್ವೆಯ ಈ ಅತ್ಯುತ್ತಮ ಪ್ರಯೋಗವು ಯಶಸ್ವಿಯಾಗಿದೆ. ಈ ವ್ಯವಸ್ಥೆಯಲ್ಲಿ, ಟ್ರಕ್‌ ಗಳನ್ನು ಕೊಲಾಡ್ ನಿಲ್ದಾಣದಲ್ಲಿರುವ ಬಿಆರ್‌ಎನ್ ವ್ಯಾಗನ್‌ಗಳಿಗೆ ಲೂಪ್‌ನ ಡೆಡ್-ಎಂಡ್‌ನಲ್ಲಿ ಒದಗಿಸಲಾದ ಇಳಿಜಾರುಗಳ ಮೂಲಕ ಲೋಡ್ ಮಾಡಲಾಗುತ್ತದೆ, ಇದನ್ನು ಟ್ರಕ್‌ ಗಳು ಅವುಗಳ ಮೇಲೆ ಹಾದುಹೋಗುವಂತೆ ಸೂಕ್ತವಾಗಿ ಮಾರ್ಪಡಿಸಲಾಗಿದೆ.

ಬಿಆರ್‌ಎನ್‌ನಲ್ಲಿ ಲೋಡ್ ಮಾಡುವ ಮೊದಲು, ಟ್ರಕ್‌ ಗಳನ್ನು ತೂಕ ಮಾಡಲಾಗುತ್ತದೆ, ಮತ್ತು ಆ ಆಧಾರದ ಮೇಲೆಯೇ ದರ ನಿಗಧಿ ಮಾಡಲಾಗುತ್ತದೆ. ಸುರಕ್ಷಿತ ಸಾರಿಗೆಗಾಗಿ ಟ್ರಕ್ ಗಳು ಹಿಂದೆ ಮುಂದೆ ಸರಿಯದ ಹಾಗೆ ಟ್ರೇನ್ ನಲ್ಲಿ ಅಳವಡಿಸಿರುವ ದೊಡ್ಡ ಕ್ಲಿಪ್ ಮೂಲಕ ಬಂಧಿಸಲಾಗುತ್ತದೆ. ಹೀಗೆ ಲಾಕ್ ಮಾಡಿದ ಮೇಲೆ ಲಾರಿ ಆರಿಂಚು ಕೂಡ ಹಿಂದೆ ಮುಂದೆ ಸರಿಯುವುದಿಲ್ಲ.

ನಂತರ ಟ್ರಕ್ ಚಾಲಕರು ಮತ್ತು ಕ್ಲೀನರ್‌ಗಳು ತಮ್ಮ ಟ್ರಕ್‌ ನ ಕ್ಯಾಬಿನ್‌ ನಲ್ಲಿ ಮಲಗಿಬಿಡುತ್ತಾರೆ. ಮುಂದೆ ಒಂದು ನಿರ್ಧಿಷ್ಟ ಸ್ಥಳದಲ್ಲಿ ಅವುಗಳನ್ನು ಇಳಿಸಲಾಗುತ್ತದೆ. ಅಲ್ಲಿಂದ ಅವು ತಮ್ಮ ತಮ್ಮ ಗುರಿಯೆಡೆಗೆ ಸಾಗುತ್ತವೆ. ಅಲ್ಲಿನ ರಸ್ತೆ ಚೆನ್ನಾಗಿರುವುದರಿಂದ ಲಾರಿಗಳು ತೊಂದರೆಯಿಲ್ಲದೇ ಸಾಗುತ್ತವೆ.

ರೋ-ರೋ ಸೇವೆಯ ಪ್ರಯೋಜನಗಳು :

*ರೋ-ರೋ ಸೇವೆಗಳು ದೇಶಕ್ಕೆ ಅಮೂಲ್ಯವಾದ ಇಂಧನವನ್ನು ಉಳಿಸುತ್ತವೆ.

*ರೋ-ರೋ ರೈಲಿನ ವೇಗವು ರಸ್ತೆಯ ವೇಗಕ್ಕಿಂತ ಹೆಚ್ಚು ವೇಗವಾಗಿರುತ್ತದೆ, ಆದ್ದರಿಂದ ಸಮಯದ ಅಮೂಲ್ಯವಾದ ಉಳಿತಾಯ ಆಗುತ್ತದೆ.

*ಟ್ರಕ್ ಮೂಲಕ ಸಾಗುವಾಗ ಸಂಭವಿಸಬಹುದಾದ ರಸ್ತೆ ಅಪಘಾತದ ಅಪಾಯ ಇಲ್ಲಿ ಇರುವುದಿಲ್ಲ.

*ಲಾರಿಗಳ ನಿರ್ವಹಣೆ ಸರಿಯಾಗಿ ಇಲ್ಲದಿರುವುದರಿಂದ ಅವು ಮಾಲಿನ್ಯವನ್ನು ಹರಡುತ್ತವೆ, ಅದು ಕಡಿಮೆಯಾಗಿದೆ. ಇದರಿಂದ ಪರಿಸರವನ್ನು ರಕ್ಷಿಸಿದ ಹಾಗಾಗುತ್ತಿದೆ.

*ಟ್ರಕ್‌ ಗಳು ರಸ್ತೆಗಳಲ್ಲಿ ಓಡದ ಕಾರಣ ಟೈರ್‌ ಗಳ ನಿರ್ವಹಣೆ ವೆಚ್ಚ, ಎಂಜಿನ್ ಮೆಂಟೆನೆನ್ಸ್ ಇತ್ಯಾದಿಗಳನ್ನು ಸಹ ಉಳಿಸಲಾಗುತ್ತದೆ.

*ಸರಕುಗಳನ್ನು ಕಳುಹಿಸುವವರಿಗೆ ಆಕ್ಟ್ರೊಯ್, ಟೋಲ್ ಫೀಸ್ ಇತ್ಯಾದಿಗಳಿಂದ ಪರಿಹಾರ ಸಿಗುತ್ತದೆ.

*ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಸಾಕಷ್ಟು ಕಡಿಮೆಯಾಗಿದೆ.

*ರಸ್ತೆಗಳ ನಿರ್ವಹಣಾ ವೆಚ್ಚವೂ ಕಡಿಮೆಯಾಗಿದೆ.

ಈ ರೋ ರೋ ಸೇವೆಯ ಇನ್ನು ಸ್ವಲ್ಪ ಮಾಹಿತಿ ಹಾಗೂ ದೃಶ್ಯಾವಳಿ ಮೇಲಿನ ವಿಡಿಯೊದಲ್ಲಿ ಇವೆ, ಅಸಕ್ತರು ನೋಡಿ.

-Team Infotrend