VIDEO : ಹಾಡಲ್ಲ ಇದು ಪೂಜೆ, ಸಂಗೀತಾಸಕ್ತರು ಮಾತ್ರ ನೋಡಿ…

ಇದು ಸುಮಾರು 60 ವರ್ಷದ ಹಿಂದೆ ಬಿಡುಗಡೆಯಾದ ತೆಲುಗು ಸಿನೆಮಾ ಜಗದೇಕ ವೀರೂನಿ ಕಥಾ ಎಂಬ ಸಿನೇಮಾದ ಹಾಡು. ಶಿವಶಂಕರಿ… ಶಿವಾನಂದ ಲಹರಿ ಶಿವಶಂಕರಿ ಎಂಬ ಈ ಹಾಡನ್ನು ಮೂಲತಃ ಅದ್ವಿತಿಯ ಗಾಯಕ ಘಂಟಸಾಲರವರು ಹಾಡಿದ್ದಾರೆ. ಅವರಿಗೆ ಮತ್ಯಾರನ್ನೋ ಹೋಲಿಸುವುದು ಸರಿಯಲ್ಲವಾದರೂ, ಆ ಹಾಡನ್ನು ಸುಮಾರು 54 ವರ್ಷಗಳ ಅಂದರೆ 2015 ರಲ್ಲಿ ಹೇಮಚಂದ್ರ ಎಂಬ ಯುವಕ ಹಾಡಿದ್ದು, ಕೇಳಿದವರೆಲ್ಲರೂ ತಲೆದೂಗುವ ಹಾಗಿದೆ.

ಮೂಲ ಹಾಡಿಗೆ ಸೆಡ್ಡು ಹೊಡೆಯುವಷ್ಟು ಅತ್ಯುತ್ತಮವಾಗಿ ಹೇಮಚಂದ್ರ ಇದನ್ನು ಹಾಡಿದ್ದು, ಯುಟ್ಯೂಬ್ ನಲ್ಲಿನ ಈ ಹಾಡನ್ನು ಇದುವರೆಗೆ ಸುಮಾರು ಎಂಟು ಲಕ್ಷ ಜನ ನೋಡಿದ್ದಾರೆ. ಆ ಹಾಡಿನ ವಿಡಿಯೊ ಕೆಳಗಿದೆ, ಅದನ್ನು ನೋಡುವ ಮೊದಲು ಗಾಯಕ ಹೇಮಚಂದ್ರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ…

ಇವರು ನಮಗೆ ಸ್ವಲ್ಪ ಅಪರಿಚಿತರಾದರೂ ತೆಲುಗು ಸಿನೆಮಾ ರಂಗ ಬಲ್ಲವರಿಗೆ ಇವರು ಹಳಬರು, ಅಲ್ಲಿ ಸಾಕಷ್ಟು ಕೆಲಸ ಮಾಡಿರುವುದರಿಂದ ಚಿರಪರಿಚಿತರು ಕೂಡ ಹೌದು. ಈ ಹೇಮಚಂದ್ರ ಅದೆಂಥ ಪ್ರತಿಭಾನ್ವಿತರು ಎಂದರೆ, 2005 ರಲ್ಲಿಯೇ ಸಾರೆಗಮಪ ಸ್ಪರ್ದೆಯಲ್ಲಿ ಭಾಗವಹಿಸಿ ಎರಡನೇ ಸ್ಥಾನ ಪಡೆದವರು. ಅದರ ನಂತರ ಅವರನ್ನು ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬಂದವು.

1988 ಜೂನ್ 2 ರಂದು ಹುಟ್ಟಿದ ಹೇಮಚಂದ್ರ ಅಥವಾ ವೇದಾಲ ಹೇಮಚಂದ್ರರವರ ತಂದೆ ಸ್ವಾಮಿ ವೇದಾಲ ವಕೀಲರು. ಅವರ ತಾಯಿ ಸಸಿಕಲಾ ಸ್ವಾಮಿ ವೇದಾಲ ರವರು ಸ್ವತಃ ಗಾಯಕಿ ಹಾಗೂ ಸಂಗೀತ ಟೀಚರ್ ಕೂಡ ಹೌದು. ಇಲ್ಲಿಯೇ ಹೇಮಚಂದ್ರಗೆ ಭದ್ರ ಬೂನಾದಿ ಬಿದ್ದಿದ್ದು. ಅವರ ಅಕ್ಕ ಹಿಮಾಬಿಂಧು ಕೂಡ ಗಾಯಕಿ ಹಾಗೂ ಸಂಗೀತ ಶಿಕ್ಷಕಿ.

ಹೀಗೆ ಕಂಪ್ಲೀಟ್ ಸಂಗೀತದ ವಾತಾವರಣದಲ್ಲಿಯೇ ಬೆಳೆದ ಹೇಮಚಂದ್ರರ ನಾಲಿಗೆಯಲ್ಲಿ ಗಾನಸರಸ್ವತಿ ನೆಲೆಸಿದ್ದಳು. ಸಿಕ್ಕ ಅವಕಾಶಗಳನ್ನೆಲ್ಲ ಬಳಸಿಕೊಂಡು ಬೆಳೆದ ಹೇಮಚಂದ್ರ, 2006 ರಿಂದಲೇ ಸಿನೆಮಾ ಹಾಡಿಗೆ ಧ್ವನಿಯಾಗತೊಡಗಿದರು. ಬರೀ ತೆಲುಗು ಮಾತ್ರವಲ್ಲದೇ ಹಿಂದಿ ಹಾಡಿಗೂ ಜೀವ ತುಂಬಿದರು.

ಕನ್ನಡದಲ್ಲಿಯೂ “ಹೆಣ್ಣು ಅಂದ್ರೆ ಅಬಲೆಯಲ್ಲ” ಹಾಡನ್ನು ಹಾಡಿದ್ದಾರೆ. ಸಾಕಷ್ಟು ಸಂಗೀತ ನಿರ್ದೇಶಕರ ಕೈ ಕೆಳಗೆ ಕೆಲಸ ಮಾಡಿದ ಹೇಮಚಂದ್ರ ಸ್ವತಃ ಕೆಲವು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. 2013 ರಲ್ಲಿ ಗಾಯಕಿ ಹಾಗೂ ಸಂಗೀತ ಶಿಕ್ಷಕಿ ಶ್ರವಣ ಭಾರ್ಗವಿಯವರನ್ನು ಮದುವೆಯಾಗುವ ಮೂಲಕ ಇವರ ಕುಟುಂಬ ಪೂರ್ತಿ ಸಂಗೀತಮಯವಾಯಿತು.

ಹಾಡು ಮಾತ್ರವಲ್ಲ, ಹೇಮಚಂದ್ರ ಡಬ್ಬಿಂಗ್ ಆರ್ಟಿಸ್ಟ್ ಕೂಡ ಹೌದು. 2008 ರಿಂದ 2020 ರವರೆಗೆ ಸಾಕಷ್ಟು ಜನರಿಗೆ ಇವರು ಧ್ವನಿ ಕೊಟ್ಟಿದ್ದಾರೆ. ಹೀಗಿರುವ ಹೇಮಚಂದ್ರರವರು 2015 ರಲ್ಲಿ ಈ ಟಿ.ವಿ ತೆಲುಗು ರವರ ‘ಸ್ವರಾಭಿಷೇಕಂ’ ಕಾರ್ಯಕ್ರಮದಲ್ಲಿ ಈ ಅದ್ಭುತ ಹಾಡನ್ನು ಹಾಡಿದರು.

ಮೂಲಚಿತ್ರದ ಹಾಡಿಗೆ ಪೆಂಡ್ಯಾಲ ನಾಗೇಶ್ವರ ರಾವ್ ರವರು ಸಂಗೀತ ನಿರ್ದೇಶನ ಮಾಡಿದ್ದು, ಪ್ರಖ್ಯಾತ ಗಾಯಕ ಘಂಟಸಾಲರವರು ಹಾಡಿದ್ದರು. ಅದನ್ನೇ ಇಲ್ಲಿ ಹೇಮಚಂದ್ರ ಅದ್ಭುತವಾಗಿ ಹಾಡಿದ್ದು, ಅದರ ವಿಡಿಯೊ ಮೇಲೆ ಇದೆ, ನೋಡಿ – ಕೇಳಿ, ನಿಮ್ಮ ಅನಿಸಿಕೆ ಹೇಳಿ.
-Team Infotrend