VIDEO : ಸಿಗಂಧೂರು ಚೌಡೆಶ್ವರಿ ಶ್ರೀಕ್ಷೇತ್ರದ ರಮಣೀಯ ದೃಶ್ಯ ಡ್ರೋಣ್ ಕ್ಯಾಮೆರಾದಲ್ಲಿ
ಈಗ ಈ ಶ್ರೀಕ್ಷೇತ್ರ ಸಾಕಷ್ಟು ಬದಲಾವಣೆ ಆಗಿದೆಯಾದರೂ, 2018 ರಲ್ಲಿ ಈ ಕ್ಷೇತ್ರ ಹೇಗಿತ್ತು ಎಂಬುದರ ದೃಶ್ಯಾವಳಿ ಇಲ್ಲಿವೆ. ಅಂಜಲಿ ಸ್ಟುಡಿಯೊದವರು ಚಿತ್ರೀಕರಿಸಿರುವ ವಿಡಿಯೊವನ್ನು ಮೊದಲ ಬಾರಿಗೆ ವಿಶ್ವನಾಥ್ ಬಿ.ಆರ್ ರವರು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ 2018 ರಲ್ಲಿ ಅಪ್ ಲೋಡ್ ಮಾಡಿದರು. ನಂತರ ಇದು ಸಾಕಷ್ಟು ಕಡೆ ಭರ್ಜರಿ ವೈರಲ್ ಆಯಿತು. ಈ ಚಾನೆಲ್ ನಲ್ಲಿಯೇ ನಾಲ್ಕೂವರೆ ಲಕ್ಷಕ್ಕೂ ಹೆಚ್ಚು ಜನ ಈ ವಿಡಿಯೊವನ್ನು ವೀಕ್ಷಿಸಿದ್ದಾರೆ. ವಿಡಿಯೊ ಕೆಳಗಿದ್ದು, ತಾವೂ ಕೂಡ ನೋಡಿ, ಅನಿಸಿಕೆಯನ್ನು ಕಾಮೆಂಟಿಸಿ.
ಈ ಶ್ರೀಕ್ಷೇತ್ರ ಮೊದಲೇ ದಟ್ಟಾರಣ್ಯದಲ್ಲಿದೆ. ಸುತ್ತಲೂ ಕಣ್ಮನ ಸೆಳೆಯುವ ಪರಿಸರ ರಾಶಿಯಿದ್ದು, ಪಕ್ಕದಲ್ಲೇ ಹರಿಯುವ ಶರಾವತಿ ನದಿ ನೋಡುಗರನ್ನು ಆಕರ್ಷಿಸುತ್ತದೆ. ಅದರಲ್ಲೂ ಉತ್ತರ ಕರ್ನಾಟಕ ಹಾಗೂ ಇತರ ಭಾಗಗಳಿಂದ ಹೋದ ಭಕ್ತಾದಿಗಳಿಗೆ ಇದು ರುದ್ರರಮಣೀಯ ದೃಶ್ಯ. ಈಗ ಕ್ಷೇತ್ರ ಸಾಕಷ್ಟು ಅಭಿವೃದ್ಧಿಯಾಗಿದ್ದು, 2018 ರಲ್ಲಿ ಈಗಿರುವುದಕ್ಕಿಂತ ಸಾಕಷ್ಟು ಭಿನ್ನವಾಗಿತ್ತು. ಹೀಗಾಗಿ ಈ ವಿಡಿಯೊ ನಿಮಗೆ ಹಳೆಯ ದೃಶ್ಯ ಹಾಗೂ ಹಳೆಯ ನೆನಪು ಕಟ್ಟಿಕೊಡಲಿದೆ.

ಇನ್ನೂ ದೇವಸ್ಥಾನದ ಬಗ್ಗೆ ಹೇಳಬೇಕೆಂದರೆ, ದೇವರನ್ನು ನಂಬದಿರುವ ಇಂದಿನ ಕಾಲದಲ್ಲಿ ತನ್ನ ಶಲ್ತಿ ಹಾಗೂ ಮಹಿಮೆಗಳಿಂದ ಜನರಲ್ಲಿ ಭಯ – ಭಕ್ತಿ ಹುಟ್ಟಿಸಿದ್ದಾರೆ ತಾಯಿ ಚೌಡೇಶ್ವರಿ. ದೇಶದ ಹಲವು ಕಡೆ ಹಲವು ರೂಪಗಳಲ್ಲಿ ನೆಲೆಸಿರುವ ತಾಯಿಯ ರೂಪಗಳಲ್ಲಿ ಚೌಡೇಶ್ವರಿ ಅಮ್ಮ ಕೂಡ ಒಂದು. ಇಲ್ಲಿನ ವಿಶೇಷತೆ ಏನೆಂದರೆ, ತಮ್ಮ ಬೆಲೆ ಬಾಳುವ ವಸ್ತು ಕಳೆದುಕೊಂಡವರು, ಆಸ್ತಿ ವಿಚಾರದಲ್ಲಿ ನೊಂದವರು, ದೌರ್ಜನ್ಯಕ್ಕೆ ಒಳಗಾದವರು ಇಲ್ಲಿಗೆ ಬರುತ್ತಾರೆ, ಮತ್ತು ತಾಯಿಯ ಸನ್ನಿಧಿಯಲ್ಲಿ ನ್ಯಾಯ ಪಡೆಯುತ್ತಾರೆ.
ಕಳ್ಳಕಾಕರಿಗೆ ಅಮ್ಮನ ಭಯ ಸಾಕಷ್ಟಿದೆ, ಆ ಭಾಗದ ತುಂಬಾ ಕಡೆ ‘ಸಿಗಂದೂರು ಚೌಡೇಶ್ವರಿಯ ಕಾವಲಿದೆ ಎಚ್ಚರಿಕೆ’ ಎಂಬ ಬೋರ್ಡ್ ಕೂಡ ಹಾಕಲಾಗಿರುತ್ತದೆ. ಅಂದರೆ ಕಳ್ಳರು ಅಲ್ಲಿ ಕಳ್ಳತನ ಮಾಡಲು ಕೂಡ ಹೆದರುತ್ತಾರೆ. ಶಿವಮೊಗ್ಗ ಜಿಲ್ಲೆಯ ಸಾಗರದಿಂದ 35 ಕಿ.ಮೀ ದೂರದಲ್ಲಿರುವ ಸಿಗಂಧೂರಿಗೆ ಸಾಗರದಿಂದ ಪ್ರತಿ ಗಂಟೆಗೊಂದು ಬಸ್ ಇರುತ್ತವೆ. ಈಗಂತೂ ದೇವಸ್ಥಾನ ತಲುಪುವುದು ಸಾಕಷ್ಟು ಸುಲಭವಾಗಿದೆ. ದಟ್ಟ ಕಾಡಿನ ನಡುವೆ ಇದ್ದರೂ ಈಗ ಹಾಗನ್ನಿಸುವುದೇ ಇಲ್ಲ, ಕಣ್ಮನ ತಣಿಸುವ ತೋಟ, ನೀರು, ಗಿಡ ಮರಗಳ ಮಧ್ಯೆ ಶ್ರೀಕ್ಷೇತ್ರ ಮನಸ್ಸಿಗೆ ಮುದ ನೀಡುತ್ತದೆ.
ದೇವಸ್ಥಾನದ ನಿರ್ಮಾಣದ ಬಗ್ಗೆ ಐತಿಹಾಸಿಕ ಕಥೆ ಇದ್ದು, ಈ ದೇವಸ್ಥಾನ ಸುಮಾರು 500 ವರ್ಷದ ಹಿಂದೆ ನಿರ್ಮಾಣವಾಗಿದೆ. ಆಗ ಶೇಷಪ್ಪ ಎಂಬುವವರು ಈ ಸಿಗಂಧೂರು ಕಾಡಿನಲ್ಲಿ ಭೇಟೆಯಾಡಲು ಹೋಗಿದ್ದರಂತೆ, ಆಗ ದಾರಿ ತಪ್ಪಿ ರಾತ್ರಿ ಅಲ್ಲಿಯೇ ಉಳಿಯಬೇಕಾಯಿತು. ಅಲ್ಲೇ ಗಿಡದ ಕೆಳಗೆ ಮಲಗಿ ನಿದ್ರೆಗೆ ಜಾರಿದರು. ರಾತ್ರಿ ಕನಸಿನಲ್ಲಿ ಬರುವ ತಾಯಿ, ತಾನು ಇಲ್ಲಿ ನೆಲೆಸಿದ್ದು, ತನಗೆ ಇಲ್ಲಿಯೇ ಗುಡಿ ಕಟ್ಟಿಸಬೇಕೆಂದು ಆಜ್ಞೆ ಮಾಡುತ್ತಾಳೆ. ಮರುದಿನ ದಾರಿ ಹುಡುಕಿಕೊಂಡು ಊರಿಗೆ ಬರುವ ಶೇಷಪ್ಪನವರು ಊರ ಹಿರಿಯರಿಗೆ ವಿಷಯ ತಿಳಿಸುತ್ತಾನೆ, ಬ್ರಾಹ್ಮಣ ದುಗ್ಗಜ್ಜ ಬಳಿ ಕೂಡ ಹೇಳಿಕೊಂಡು ಅಲ್ಲಿಯೇ ಗುಡಿ ಕಟ್ಟಿಸುತ್ತಾನೆ.
ಹಾಗೆ ನಿರ್ಮಾಣವಾದ ಚಿಕ್ಕ ಗುಡಿ ಈಗ ಹತ್ತಾರು ಎಕರೆಗಳಲ್ಲಿ ವ್ಯಾಪಿಸಿದ್ದು, ದೇಶಾದ್ಯಂತ ಭಕ್ತರನ್ನು ಹೊಂದಿದೆ. ಸದಾ ಭಕ್ತರಿಂದ ಗಿಜಿಗುಡುವ ಇಲ್ಲಿ ಸದ್ಯಕ್ಕೆ ಕೊರೋನ ಕಾರಣಕ್ಕೆ ಭಕ್ತರು ಆಗಮಿಸುತ್ತಿಲ್ಲ. ತಾಯಿಯ ಮೇಲೆ ಭಕ್ತಿ ಇರುವವರು ಮೇಲಿರುವ ವಿಡಿಯೊ ಮೂಲಕ ತಾಯಿಯ ದರ್ಶನ ಪಡೆಯಬಹುದು.
-Team Infotrend