ಜಪಾನ್ ನಲ್ಲಿ ಮಾತ್ರ ಕಾಣಸಿಗುವ 11 ಅಚ್ಚರಿಯ ಸಂಗತಿಗಳು ಮತ್ತು ತಂತ್ರಜ್ಞಾನಗಳು…!
ಜಗತ್ತಿನಲ್ಲಿರುವ ಅಷ್ಟು ದೇಶಗಳಲ್ಲಿ ಅದು ಪುಟ್ಟ ದೇಶವಾಗಲಿ ದೊಡ್ಡ ದೇಶವಾಗಲಿ ಒಂದೊಂದು ದೇಶವು ತನ್ನದೇ ಆದ ವಿಶೇಷತೆಗಳನ್ನು ಹೊಂದಿರುತ್ತವೆ. ಅದರದೇ ಆದ ಆಚಾರ – ವಿಚಾರ – ಸಂಪ್ರದಾಯ ಇರುತ್ತವೆ. ಅದೇ ರೀತಿಯಲ್ಲಿ ಜಗತ್ತಿನಲ್ಲೇ ಅತ್ಯಂತ ಶಾಂತಿ ಹಾಗೂ ಟೆಕ್ನಾಲಜಿಯಲ್ಲಿಯೂ ಮುಂದಿರುವ ದೇಶವಾದ ಜಪಾನ್ ನಲ್ಲಿಯೂ ಹಲವು ವಿಶೇಷತೇಗಳಿವೆ ಬನ್ನಿ ಅವೇನೆಂದು ನೋಡೋಣ…
1) ಓಣಿ ಅಥವಾ ಗಲ್ಲಿಗೆ ಹೆಸರಿನ ಬದಲಾಗಿ ಬ್ಲಾಕ್ ನಂಬರ್ ನೀಡಲಾಗಿರುತ್ತದೆ :
ಆ ದೇಶದಲ್ಲಿ ಬೇರೆ ದೇಶಗಳಂತೆ ಓಣಿ ಅಥವಾ ಗಲ್ಲಿಗೆ ಹೆಸರು ಕೊಟ್ಟಿರುವುದಿಲ್ಲ ಬದಲಾಗಿ ಬ್ಲಾಕ್ ನಂಬರ್ ಕೊಟ್ಟಿರುತ್ತಾರೆ. ಅಲ್ಲಿ ಮೊದಲಿಗೆ ನಗರದ ಹೆಸರು, ನಂತರ ಜಿಲ್ಲೆ ಅನಂತರ ಬ್ಲಾಕ್ ನಂಬರ್ ಹೇಳಿದರೆ ನೀವು ಬಹಳಷ್ಟು ಸುಲಭವಾಗಿ ನಿಮಗೆ ಬೇಕಾದ ಅಡ್ರೆಸ್ ತಲುಪಬಹುದು.
2) ಟ್ರೇನ್ ನಿಗದಿತ ಸಮಯಕ್ಕಿಂತ ಸೆಕೆಂಡ್ ಲೆಕ್ಕದಲ್ಲೂ ಲೇಟ್ ಆಗುವುದಿಲ್ಲ!
ನಮ್ಮ ದೇಶದಲ್ಲಿ ಬಸ್, ಟ್ರೇನ್, ಬುಲೆಟ್ ಟ್ರೇನ್ ಹಾಗೂ ವಿಮಾನವಾದರೂ ಕೂಡ ಒಂದಿಲ್ಲೊಂದು ದಿನ ಸೆಕೆಂಡ್ ಅಲ್ಲ ನಿಮಿಷ ಅಲ್ಲ ಘಂಟೆಗಟ್ಟಲೇ ಲೇಟ್ ಆಗಿರುತ್ತವೆ, ಇವುಗಳನ್ನು ನೀವೆಲ್ಲ ನೋಡಿಯೇ ಇರುತ್ತೀರಿ, ಆದರೆ ಜಪಾನ್ ದೇಶದಲ್ಲಿ ಸೆಕೆಂಡ್ ಲೆಕ್ಕದಲ್ಲೂ ಕೂಡ ಇಲ್ಲಿನ ಬುಲೆಟ್ ಟ್ರೇನ್ ಗಳು ಲೇಟ್ ಆಗಲ್ಲ!

ಅಕಸ್ಮಾತ್ ಲೇಟ್ ಆದರೆ ಅದೊಂದು ದೊಡ್ಡ ಸುದ್ದಿಯಾಗುವದರಲ್ಲಿ ಎರಡು ಮಾತಿಲ್ಲ, ಒಮ್ಮೆ ಕೇವಲ 20 ಸೆಕೆಂಡ್ ಲೇಟ್ ಆಗಿದ್ದಕ್ಕೆ ಅದು ದೊಡ್ಡ ಸುದ್ದಿಯಾಗಿತ್ತು, ಮೀಡಿಯಾಗಳಲ್ಲೂ ಕೂಡ ಇದು ಸಾಕಷ್ಟು ಸುದ್ದಿಯಾಗಿತ್ತು! ಇನ್ನೂ ಒಂದು ವಿಶೇಷ ಘಟನೆಯೊಂದು ಈ ದೇಶದಲ್ಲಿ ನಡೆದಿತ್ತು ಅದೇನೆಂದರೆ…
ಆ ದೇಶದಲ್ಲಿ 1932 ರಲ್ಲಿ ಒಂದು ಪ್ರದೇಶಕ್ಕೆ ಟ್ರೇನ್ ವ್ಯವಸ್ಥೆ ಮಾಡಲಾಗಿತ್ತು, ಆದರೆ ಯಾರೂ ಪ್ಯಾಸೆಂಜರ್ ಇರದ ಕಾರಣ ಈ ಟ್ರೇನ್ ಸಂಚಾರ ನಿಲ್ಲಿಸಲಾಗಿತ್ತು, ಆದರೆ ಹಲವು ವರ್ಷಗಳ ನಂತರ ಅಲ್ಲಿನ ಪ್ರಾಂತ್ಯದ ಒಂದು ಹುಡುಗಿ ಶಾಲೆಗೆ ಬರಲು ಟ್ರೇನ್ ವ್ಯವಸ್ಥೆ ಬೇಕೆಂದಾಗ ಕೇವಲ ಆ ಹುಡುಗಿಗೆ ಟ್ರೇನ್ ಬಿಡಲಾಗಿತ್ತು! ಅದು ಕೂಡ 2016 ರಲ್ಲಿ ಪೂರ್ತಿ ಅವಳು ಡಿಗ್ರಿ ಮುಗಿಸುವವರೆಗೂ ಆ ಟ್ರೇನ್ ಶುರು ಇತ್ತು..!
3) ಒಂದನೇ ತರಗತಿಯಿಂದಲೇ ಇಲ್ಲಿನ ಮಕ್ಕಳು ತಮ್ಮ ಕೆಲಸ ತಾವೇ ಮಾಡಿಕೊಳ್ಳಲು ಶುರು ಮಾಡುತ್ತಾರೆ..!
ಇಲ್ಲಿ ಮನೆಯಲ್ಲೂ ಹಾಗೂ ಶಾಲೆಯಲ್ಲೂ ಕೂಡ ಮಕ್ಕಳಿಗೆ ಒಂದನೇ ತರಗತಿಯಿಂದಲೇ ಶುಚಿತ್ವದ ಬಗ್ಗೆ ಕಲಿಸಲಾಗುತ್ತದೆ. ಮಕ್ಕಳು ಒಟ್ಟಿಗೆ ಕುಳಿತು ಊಟ ಮಾಡುತ್ತಾರೆ, ಅಷ್ಟೇ ಅಲ್ಲದೇ ಅಲ್ಲಿ ಎಲ್ಲಾ ಸ್ವಚ್ಛತೆಯನ್ನು ತಾವೇ ಒಟ್ಟಾಗಿ ಮಾಡಿ ಮುಗಿಸುತ್ತಾರೆ. ಶಾಲಾ ಶೌಚಾಲಯಗಳನ್ನೂ ಅವರೇ ಸ್ವಚ್ಚ ಮಾಡುತ್ತಾರೆ!

ಭಾರತದಲ್ಲಿ ಹಾಗೆ ಮಾಡಿಸಿದರೆ ಎಲ್ಲ ನ್ಯೂಸ್ ಚಾನೆಲ್ ಆಕಾಶ ತಲೆ ಮೇಲೆ ಬಿದ್ದ ಹಾಗೆ ಆಡುತ್ತವೆ, ಶಿಕ್ಷಣ ಇಲಾಖೆ ಎದ್ದು ಬಿದ್ದು ಆ ಶಾಲಾ ಶಿಕ್ಷಕರನ್ನು ಸಸ್ಪೆಂಡ್ ಮಾಡುತ್ತದೆ. ನಮ್ಮ ಕೆಲಸ ನಾವು ಮಾಡಿಕೊಳ್ಳುವುದನ್ನೂ ಅಪರಾಧವೆಂಬಂತೆ ಬಿಂಬಿಸುವ ನಮ್ಮ ವ್ಯವಸ್ಥೆಗೆ ನಾಚಿಕೆಯಾಗಬೇಕು.
4) ಯಂತ್ರಗಳ ಮೂಲಕ ಸ್ನಾಕ್ಸ್ ಖರೀದಿಸಲಾಗುತ್ತದೆ :
ಎಲ್ಲಾ ದೇಶಗಳಲ್ಲಿ ಮಾರಾಟ ಯಂತ್ರಗಳು ಇರುತ್ತವೆ ಆದರೆ, ಈ ದೇಶದಲ್ಲಿ ಸ್ನಾಕ್ಸ್ ಹಾಗೂ ಕೂಲ್ ಡ್ರಿಂಕ್ಸ್ ಗಳನ್ನು ಕೂಡ ಈ ಮಷೀನ್ ಗಳಿಂದಲೇ ಖರೀದಿ ಮಾಡುತ್ತಾರೆ. ಇಲ್ಲಿ ಜನಸಂಖ್ಯೆ ಜಾಸ್ತಿ ಇರುವುದು ಇದಕ್ಕೆ ಕಾರಣ, ಅಷ್ಟೇ ಅಲ್ಲದೇ ಇಲ್ಲಿ ಕಿರಾಣಿ ಅಂಗಡಿ ಹಾಕಲು ಜಾಗ ಬಹಳಷ್ಟು ಕಡಿಮೆ ಇರುವದರಿಂದ ಹೀಗೆ ಮಾಡುತ್ತಾರೆ. ಪ್ರತಿ 23 ಜನರಿಗೆ ಒಂದು ಮಾರಾಟದ ಯಂತ್ರಗಳು ಸಿಗುತ್ತವೆ.
5) ಲಿಫ್ಟ್ ಮ್ಯಾನ್ ಹಾಗೂ ಲಿಫ್ಟ್ ಗರ್ಲ್ಸ್ ಈಗಲೂ ಇದ್ದಾರೆ!
ನಮ್ಮ ದೇಶಗಲ್ಲಿ ನೀವೆಲ್ಲ ನೋಡಿರಬಹುದು ಮೊದಲಿಗೆ ಒಂದೊಂದು ಲಿಫ್ಟ್ ಗೂ ಒಬ್ಬೊಬ್ಬರು ಇರುತ್ತಿದ್ದರು, ಆದರೆ ಇತ್ತೀಚೆಗೆ ಲಿಫ್ಟ್ ಗಳ ನಿರ್ವಹಣೆಗೆ ಜನ ಇರುವುದು ಅತೀ ವಿರಳ, ಆದರೆ ಜಪಾನ್ ದೇಶದಲ್ಲಿ ಈಗಲೂ ಸಹ ಲಿಫ್ಟ್ ಮ್ಯಾನ್ ಹಾಗೂ ಲಿಫ್ಟ್ ಗರ್ಲ್ ಇದ್ದೆ ಇರುತ್ತಾರೆ.

6) ಕೆಲಸದ ವೇಳೆ ಕಛೇರಿಯಲ್ಲಿ ಮಲಗುವುದು ಅಪರಾಧ ಇದ್ದಂತೆ..!
ಅಕಸ್ಮಾತ್ ಜಪಾನ್ ದೇಶದಲ್ಲಿ ಕೆಲಸದ ವೇಳೆ ಮಲಗಿದರೆ ಅದು ಮಹಾಪರಾಧವಿದ್ದಂತೆ, ಕೆಲಸದ ವೇಳೆ ನಿದ್ರೆ ಅವರ ಕೆಲಸ ಕೂಡ ಕಸಿದುಕೊಳ್ಳಬಹುದು..!
7) ಕ್ಯಾಪ್ಸುಲ್ ಹೋಟೆಲ್ :
ಈ ದೇಶದಲ್ಲಿ 1979 ರಲ್ಲಿ ಕೇವಲ ಒಬ್ಬರೆ ಮಲಗಲು ಅನುಕೂಲವಾಗುವಂತೆ ಕ್ಯಾಪ್ಸುಲ್ ಹೋಟೆಲ್ ಎಂದು ಪುಟ್ಟ ಪುಟ್ಟ ರೂಮ್ ಮಾಡಲಾಗಿರುತ್ತದೆ, ಅವುಗಳಲ್ಲಿ ದೊಡ್ಡ ದೊಡ್ಡ ಶ್ರೀಮಂತರಿಂದ ಹಿಡಿದು ಬಡವರವರೆಗೂ ಇಲ್ಲಿಗೆ ಹೋಗುತ್ತಾರೆ.
8) ರೈಲು ನಿಲ್ದಾಣಗಳಲ್ಲಿ ಗುಂಪು ನೂಕಲು ಪುಷರ್ ಇರುತ್ತಾರೆ!
ಇಲ್ಲಿನ ಜನರು ಒಂದೆಡೆಯಿಂದ ಮತ್ತೊಂದೆಡೆ ಸಂಚರಿಸಲು ಜನರು ಸಾಕಷ್ಟು ಸಂಖ್ಯೆಯಲ್ಲಿ ಬುಲೆಟ್ ಟ್ರೇನ್ ವ್ಯವಸ್ಥೆಯನ್ನೇ ಬಳಸುತ್ತಾರೆ, ಅದರಲ್ಲೂ ಸಮಯದ ಅಭಾವ ಇರುವದರಿಂದ ಇವರೆಲ್ಲರನ್ನು ಬೇಗ ಬೇಗ ಒಳಗೆ ನೂಕಲು ಪುಷರ್ಸ್ ಎಂಬ ನೌಕರಸ್ಥರು ಇರುತ್ತಾರೆ.
9) ಗರ್ಲ್ಫ್ರೆಂಡ್ ಹಾಗೂ ಬಾಯ್ ಫ್ರೆಂಡ್ ತಕ್ಕೆಗಳು (ದೊಡ್ಡ ದಿಂಬುಗಳು) :
ಆಧುನಿಕತೆ ಹೆಚ್ಚಾದಂತೆ ಅವಿವಾಹಿತ ಪುರುಷ ಮತ್ತು ಮಹಿಳೆಯರು ಒಂದೊಂದು ರೂಂ ಗಳಲ್ಲಿ ಒಬ್ಬೊಬ್ಬರೇ ಮಲಗುವುದು ಅನಿವಾರ್ಯ, ಆದರೆ ಜಪಾನ್ ನಲ್ಲಿ ಮಹಿಳೆಯರು ಹಾಗೂ ಪುರುಷರ ದೇಹದ ಒಂದು ಭಾಗದ ರೀತಿಯಲ್ಲಿ ತಕ್ಕೆಗಳನ್ನು ಮಾಡಲಾಗಿರುತ್ತದೆ. ಇವುಗಳು ಪಕ್ಕದಲ್ಲಿ ಇನ್ನೊಬ್ಬರು ಇರುವರು ಎಂಬ ಅನುಭವ ನೀಡುವುದಲ್ಲದೆ ನಿದ್ರೆ ಮಾಡಲು ಸುಲಭ ಮಾಡುತ್ತವೆ, ಅಷ್ಟೇ ಅಲ್ಲದೇ ಬೆಳಿಗ್ಗೆ ಅಲಾರಾಂ ಕೂಡ ಇದರಲ್ಲಿ ಸೆಟ್ ಮಾಡಬಹುದು.

10) ಬೇಬಿ ಮಾಪ್ ಎಂಬ ವಿಶೇಷ ಮಕ್ಕಳ ಉಡುಗೆ :
ಈ ದೇಶದಲ್ಲಿ ಅಂಬೆಗಾಲಿನಿಂದ ತಿರುಗಾಡುವ ಮಕ್ಕಳಿಗೆ ಒಂದು ವಿಶೇಷ ಬಟ್ಟೆ ತೋಡಿಸಲಾಗುತ್ತದೆ, ಅದರ ಹೆಸರು ಬೇಬಿ ಮಾಪ್ ಎಂದು. ಅದನ್ನು ತೊಡಿಸಿದಾಗ ಮಗು ಹಾಲ್ ನಲ್ಲಿ ತಿರುಗುವುದರಿಂದ ಅದರಲ್ಲಿನ ಕುಂಚಗಳು ನೆಲ ಸ್ವಚ್ಛ ಗೊಳಿಸಿ ಮಕ್ಕಳಿಗೆ ಜೇರ್ಮ್ಸ್ ಕಾಟ ಇಲ್ಲದಂತೆ ನೋಡಿಕೊಳ್ಳುತ್ತದೆ!
11) ಮನೆಯಲ್ಲಿ ಪ್ರತಿ ಸ್ಥಳಕ್ಕೂ ಬೇರೆ ಬೇರೆ ಚಪ್ಪಲಿಗಳು :
ಇಲ್ಲಿನ ಜನರು ಪ್ರತಿಯೊಂದು ವಿಷಯದಲ್ಲೂ ಪರ್ಫೆಕ್ಟ್ ಎನ್ನುವುದಕ್ಕೆ ಇದು ಕೂಡ ಒಂದು ಉದಾಹರಣೆ. ಇಲ್ಲಿನ ಜನರು ತಮ್ಮ ಮನೆಯಲ್ಲಿಯೇ ವಿವಿಧ ಭಾಗಗಳಲ್ಲಿ ತಿರುಗಾಡಲು ಒಂದೊಂದು ಜೋಡಿ ಸೆಪರೇಟ್ ಚಪ್ಪಲಿ ಬಳಸುತ್ತಾರೆ, ಉದಾಹರಣೆಗೆ ಲಿವಿಂಗ್ ರೂಮ್, ವಾಶ್ ರೂಮ್, ಬೆಡ್ ರೂಮ್ ಕಿಚನ್ ಹಾಗೂ ಮನೆಯಿಂದ ಹೊರಗೆ ಹೋಗುವುದಕ್ಕೂ ಒಂದೊಂದು ಬೇರೆ ಬೇರೆ ಜೋಡಿ ಚಪ್ಪಲಿ ಬಳಸುತ್ತಾರೆ!
-ಮಂಜುನಾಥ್