3000 ವರ್ಷಗಳ ಬಳಿಕ ಕಂಡುಬಂದ ತಾಸ್ಮೆನಿಯ ಡೆವಿಲ್! ಇವುಗಳಲ್ಲಿ ಹೆಣ್ಣಿಗೆ ಪ್ರತಿ ಸಲ ಬೇರೆ ಗಂಡು ಬೇಕು ಮತ್ತು ಗಂಡು ಜೀವನದಲ್ಲಿ ಒಮ್ಮೆ ಮಾತ್ರ ಹೆಣ್ಣನ್ನು ಸೇರುತ್ತದೆ!
ಭೂಮಿಯ ಮೇಲೆ ಸಂಭವಿಸುವ ಚಿತ್ರ ವಿಚಿತ್ರ ಘಟನೆಗಳಿಗೆ ಮತ್ತೊಂದು ಸೇರ್ಪಡೆ, ಅದೇನೆಂದರೆ ಬರೋಬ್ಬರಿ 3000 ವರ್ಷಗಳ ನಂತರ ಆಸ್ಟ್ರೇಲಿಯಾದ ಕಾಡಿನಲ್ಲಿ ತಾಸ್ಮೇನಿಯಾ ಡೆವಿಲ್ ಎಂಬ ಪ್ರಾಣಿ ಕಾಣಿಸಿಕೊಂಡಿದೆ! ಸಣ್ಣ ಗಾತ್ರದ ನಾಯಿಯಂತೆ ಕಾಣುವ ಈ ಪ್ರಾಣಿ ಮಾರ್ಸುಪಿಯಲ್ ಕಾರ್ನಿವೋರ್ ಗಳ ಗುಂಪಿಗೆ ಸೇರುತ್ತದೆ. ಇವುಗಳು ಮಾಂಸಾಹಾರಿ ಪ್ರಾಣಿಗಳಾಗಿವೆ.
ನಿಮಗೆ ಗೊತ್ತಿರುವ ಹಾಗೇ ಒಂದೊಂದೇ ಜೀವಸಂಕುಲ ಅಳಿಯುತ್ತಿವೆ ಅಥವಾ ಅಳಿವಿನಂಚು ತಲುಪಿವೆ. ಅಂಥದ್ರಲ್ಲಿ ಈ ಅಳಿದ ಜೀವಪ್ರಬೇಧ ಮತ್ತೊಮ್ಮೆ ಜನ್ಮ ತಾಳಿದ್ದು ಅವುಗಳ ಸಧ್ಯದ ಸ್ಥಿತಿ ಹೇಗಿದೆ ಹಾಗೂ ಮೂರು ಸಾವಿರ ವರ್ಷಗಳ ನಂತರ ಅವು ಹೇಗೆ ಜನ್ಮ ತಾಳಿದವು ಎಂದು ನೋಡೋಣ ಬನ್ನಿ…
ಈ ಪ್ರಾಣಿಗಳು ಸಸ್ತನಿಗಳ ಜಾತಿಗೆ ಸೇರಿದ ಪ್ರಾಣಿಗಳಾಗಿದ್ದು, ಇವುಗಳು ತಮ್ಮ ಮರಿಗಳಿಗೆ ಜನ್ಮ ನೀಡಿದಾಗ ಪೂರ್ತಿಯಾಗಿ ಬೆಳವಣಿಗೆಯಾಗಿರುವುದಿಲ್ಲ, ಹೀಗಾಗಿ ಹೊಟ್ಟೆಯ ಕೆಳಗೆ ಒಂದು ಪೌಚ್ ಅಕಾರದ ರಚನೆಯಲ್ಲಿ ಇಟ್ಟುಕೊಂಡು ಅಲ್ಲಿಯೇ ಅವುಗಳಿಗೆ ಆಹಾರ ಪೂರೈಸಿ ನಂತರ ಭೂಮಿಗೆ ಬಿಡುತ್ತವೆ.
ಆಸ್ಟ್ರೇಲಿಯಾದಲ್ಲಿ ಆರ್ಕ್ ಅಭಯಾರಣ್ಯ ವಿದೆ. ಅದರ ಹತ್ತಿರ ಒಂದು ಸಣ್ಣ ಗುಡ್ಡವಿದೆ. ಈ ಜಾಗಕ್ಕೆ ಬ್ಯಾರಿಂಗ್ಟನ್ ಟಾಪ್ ಎಂದು ಕರೆಯುತ್ತಾರೆ. ಇದೆ ಜಾಗದಲ್ಲಿ ತಾಸ್ಮೇನಿಯಾ ಡೆವಿಲ್ ಗಳು ಮರಿಗಳ ಸಮೇತ ಕಂಡುಬಂದಿವೆಯಂತೆ. ಈ ವಿಷಯ ಅಲ್ಲಿನ ಅರಣ್ಯ ಅಧಿಕಾರಿಗಳ ಕಿವಿಗೆ ಬಿದ್ದ ತಕ್ಷಣ ಎದ್ದು ಬಿದ್ದು ಓಡಿ ಬಂದು ನೋಡಿದರೆ ಅಲ್ಲಿ ಕೆಂಪು ಬಣ್ಣದ ಕೂದಲುಗಳಿಂದ ಕೂಡಿದ ಪುಟ್ಟ ಪುಟ್ಟ ಮರಿಗಳು ಒಂದೇ ಕಡೆ ಮಲಗಿದ್ದವು ಅವುಗಳ ತಾಯಿ ಅಲ್ಲಿಯೇ ಅಕ್ಕ ಪಕ್ಕದಲ್ಲಿ ಇತ್ತು.

ಈ ಪ್ರಾಣಿಗಳನ್ನು ನೋಡಿ ವನ್ಯಜೀವಿ ಪ್ರೇಮಿಗಳು ಹಾಗೂ ಎಕ್ಸ್ಪರ್ಟ್ಸ್ ಬಹಳ ಸಂತಸ ವ್ಯಕ್ತಪಡಿಸಿದ್ದಾರೆ, ಏಕೆಂದರೆ ಇವುಗಳ ಸಂತತಿ ಇಡೀ ಆಸ್ಟ್ರೇಲಿಯಾದಲ್ಲಿ ಪೂರ್ತಿ ನಶಿಸಿ ಹೋಗಿತ್ತು. ಏಕೆಂದರೆ ಇವುಗಳನ್ನು ಅಲ್ಲಿನ ನಿವಾಸಿಗಳು ಬಹುವಾಗಿ ಬೇಟೆಯಾಡುತ್ತಿದ್ದರು ಹಾಗೂ ಇವುಗಳನ್ನು ಇದೆ ಕಾಡಿನಲ್ಲಿ ವಾಸವಿದ್ದ ಕಾಡುನಾಯಿಗಳ ಉಪಜಾತಿಯಾದಂಥ ಡಿಂಗೋಸ್ ಬೇಟೆಯಾಡಿ ತಿನ್ನುತ್ತಿದ್ದವು. ಇದರಿಂದಾಗಿ ಇವುಗಳ ಸಂತತಿ ಪೂರ್ಣ ನಾಶವಾಗಿದೆಯಂದೇ ತಿಳಿದುಕೊಂಡಿದ್ದರು.
ತಾಸ್ಮೇನಿಯಾ ಡೆವಿಲ್ ಕೇವಲ ಬೇಟೆಯಾಡುವವರಿಗೆ ಮಾತ್ರ ಬಲಿಯಾಗುವುದಲ್ಲ, ಬದಲಾಗಿ ಇವುಗಳಿಗೆ ಕ್ಯಾನ್ಸರ್ ಸಮಸ್ಯೆ ಕೂಡ ಇದೆ. ಇವುಗಳ ಮುಖದ ಮೇಲೆ ಗಡ್ಡೆಗಳಾಗುವ ಸಮಸ್ಯೆ ಕೂಡ ಇದೆ. ತಾಸ್ಮೇನಿಯಾದಲ್ಲಿ ಇರುವುಗಳನ್ನು ಹಿಡಿದು ಇಡೀ ಆಸ್ಟ್ರೇಲಿಯಾದಲ್ಲಿ ಇವುಗಳ ಸಂಖ್ಯೆ 25 ಸಾವಿರ ಮಾತ್ರ ಉಳಿದಿವೆ.
ಆಸ್ಟ್ರೇಲಿಯಾದ ಆರ್ಕ್ ಅಭಯಾರಣ್ಯಗಳ ಮುಖ್ಯಸ್ಥ ಟೀಮ್ ಫಾಕನರ್ ಅವರು ಹೇಳುವ ಪ್ರಕಾರ ಇವುಗಳ ಮೇಲೆ ಏನೆಲ್ಲಾ ಹಕ್ಕುಗಳನ್ನು ಮಂಡಿಸಬೇಕೋ ಅದೆಲ್ಲ ಮಾಡಿಯಾಗಿದೆ. ಇಷ್ಟೇ ಅಲ್ಲದೇ ಇವುಗಳನ್ನು ಉಳಿಸಿಕೊಳ್ಳುವದಕ್ಕಾಗಿ ಏನೆಲ್ಲಾ ಪ್ರಯತ್ನ ಮಾಡಬೇಕೋ ಅದೆಲ್ಲ ಮಾಡಿರುವೆವು ಎಂದು ಹೇಳುತ್ತಾರೆ.

ಅರಣ್ಯ ಇಲಾಖೆಯ ಸಿಬ್ಬಂದಿಗಳು ನೀಡಿದ ಮಾಹಿತಿ ಮೇರೆಗೆ ಆ 7 ಡೆವಿಲ್ಸ್ ಮರಿಗಳು ಆರೋಗ್ಯ ಹಾಗೂ ಸುರಕ್ಷಿತವಾಗಿವೆಯಂತೆ ಹಾಗೂ ಇವುಗಳ ಮೇಲೆ ಗಮನವಿರಿಸಿದ್ದಾರಂತೆ. ವಿಶೇಷ ಎಂದರೆ ಈ ಜೀವಿಗಳು ಸಂತಾನೋತ್ಪತ್ತಿ ಪ್ರಕ್ರಿಯೆಯಿಂದ ದೂರ ಓಡುತ್ತವೆ! ಅವುಗಳ ಸಂತತಿ ಅಳಿಯಲು ಅವುಗಳ ವಿಚಿತ್ರ ಸಂತಾನೋತ್ಪತ್ತಿ ರೂಲ್ಸ್ ಕೂಡ ಕಾರಣ!
ತಾಸ್ಮೇನಿಯಾ ಡೆವಿಲ್ಸ್ ಗಳ ಖಾಸಗಿ ಜೀವನದ ಬಗ್ಗೆ ಮಾತನಾಡುವುದಾದರೆ ಇವುಗಳಲ್ಲಿ ಹೆಣ್ಣು ಪ್ರಾಣಿಗಳೇ ಬಹಳ ಶಕ್ತಿ ಶಾಲಿ. ಇವುಗಳು ತಮ್ಮ ಜೀವಿತಾವಧಿಯಲ್ಲಿ ಒಟ್ಟು ನಾಲ್ಕು ಬಾರಿ ಗರ್ಭವತಿಯಾಗುತ್ತವೆ, ಆ ನಾಲ್ಕು ಬಾರಿಯು ಬೇರೆ ಬೇರೆ ಗಂಡು ಡೆವಿಲ್ಸ್ ನೊಂದಿಗೆ ಸಂಪರ್ಕ ಬೆಳೆಸುತ್ತವೆ!
ಅಷ್ಟೇ ಅಲ್ಲದೇ ಆ ಎರಡು ಗಂಡು ಡೆವಿಲ್ಸ್ ತಮ್ಮ ಶಕ್ತಿ ಪ್ರದರ್ಶನ ಮಾಡಲೇಬೇಕು, ಅವುಗಳ ಮದ್ಯೆ ಕಾದಾಟ ನಡೆದಾಗ ಅದರಲ್ಲಿ ಗೆದ್ದ ಗಂಡು ಪ್ರಾಣಿಯೊಂದಿಗೆ ಈ ಹೆಣ್ಣು ಪ್ರಾಣಿ ಸೇರುತ್ತದೆ. ಒಮ್ಮೆ ಸೇರಿ ಮರಿ ಹಾಕಿದರೆ ಮುಗಿತು ಮತ್ತೊಮ್ಮೆ ಸೇರಲು ಮತ್ತೊಂದು ಗಂಡು ಪ್ರಾಣಿಯನ್ನು ಆರಿಸಿಕೊಳ್ಳುತ್ತದೆ ಈ ಹೆಣ್ಣು ಡೆವಿಲ್!
ಇನ್ನು ಒಮ್ಮೆ ಒಂದು ಹೆಣ್ಣಿನೊಂದಿಗೆ ಸೇರಿದ ಆ ಗಂಡು ಪ್ರಾಣಿ ಮತ್ತೆ ಯಾವತ್ತೂ ಮತ್ತೊಂದು ಹೆಣ್ಣಿನ ಸಂಪರ್ಕ ಮಾಡುವುದಿಲ್ಲ ಬದಲಾಗಿ ಏಕಾಂಗಿಯಾಗಿ ಜೀವನ ಕಳೆಯುತ್ತದೆ..!! ಹೀಗಿರುವುದರಿಂದ ಇವುಗಳ ವಂಶ ಸಹಜವಾಗಿ ಬೆಳೆಯದೇ ವಿನಾಶದ ಅಂಚಿಗೆ ಬಂದಿದೆ.

2008 ನೇ ಇಸ್ವಿಯಲ್ಲಿ ಸಂಯುಕ್ತ ರಾಷ್ಟ್ರಗಳ ಒಕ್ಕೂಟವು ಇವುಗಳನ್ನು ಅಳಿವಿನಂಚಿನಲ್ಲಿರುವ ಪ್ರಾಣಿಗಳ ಲಿಸ್ಟ್ ಗೆ ಸೇರಿಸಿತ್ತು. ಇವುಗಳ ತಲೆಯು ಸ್ವಲ್ಪ ದೊಡ್ಡದಾಗಿರುತ್ತದೆ, ಕುತ್ತಿಗೆಯೂ ಬಹಳಷ್ಟು ಬಲವಾಗಿರುತ್ತದೆ, ಈ ಕಾರಣದಿಂದಾಗಿ ಇವುಗಳು ಏನನ್ನಾದರೂ ಹಿಡಿದರೆ ಅದು ಬಹಳಷ್ಟು ಬಲವಾಗಿ ಹಿಡಿದಿರುತ್ತದೆ.
ಇದು ಭೂಮಿಯ ಮೇಲೆ ವೇಗವಾಗಿ ಓಡಬಲ್ಲದು, ಕರಡಿಗಳಂತೆ ಮರವನ್ನು ಬಹಳ ಸರಾಗವಾಗಿ ಹತ್ತಬಲ್ಲದು, ಇಷ್ಟೇ ಅಲ್ಲದೇ ಇದು ನೀರಿನಲ್ಲಿ ಈಜುವುದರಲ್ಲಿಯೂ ಪಂಟರ್ ಆಗಿದೆ. ಹೆಣ್ಣು ಡೆವಿಲ್ಸ್ ಒಮ್ಮೆ ಜನ್ಮ ನೀಡಿದರೆ ಅಂದಾಜು 20 ರಿಂದ 30 ಮರಿಗಳಿಗೆ ಜನ್ಮ ನೀಡುತ್ತವೆ.
ಹುಟ್ಟಿದಾಗ ಆ ಮರಿಗಳ ತೂಕ ಕೇವಲ 20 ಗ್ರಾಂ ಇರುತ್ತದೆ. ಈ ಹೆಣ್ಣು ಡೆವಿಲ್ಸ್ ಗೆ ಹಸುವಿನಂತೆ ಕೇವಲ ನಾಲ್ಕೇ ನಾಲ್ಕು ಮೊಲೆ ತೊಟ್ಟುಗಳಿರುತ್ತವೆ. ಮರಿಗಳ ಸಂಖ್ಯೆ ಜಾಸ್ತಿ ಇರುವುದರಿಂದ ಮರಿಗಳು ಮೊಲೆ ಹಾಲಿಗಾಗಿ ಬಡಿದಾಡುತ್ತವೆ ಹೀಗಾಗಿ ಈ ಅಷ್ಟು ಮರಿಗಳಲ್ಲಿ ಕೆಲವೇ ಕೆಲವು ಮಾತ್ರ ಬದುಕುಳಿಯುತ್ತವೆ.

100 ದಿನಗಳ ಅಂತರದಲ್ಲಿ ಇವುಗಳ ತೂಕ ಅಂದಾಜು 200 ಗ್ರಾಂ ಗಳಷ್ಟಾಗುತ್ತದೆ. ಒಂಬತ್ತು ತಿಂಗಳು ಇವುಗಳು ತಮ್ಮ ರಕ್ಷಣೆ ಹಾಗೂ ಊಟದ ಸಲುವಾಗಿ ತಾಯಿಯ ಆಶ್ರಯ ಪಡೆಯುತ್ತವೆ. 9 ತಿಂಗಳ ನಂತರ ಸ್ವಾವಲಂಬಿಯಾಗಿ ತಾವೇ ಬೇಟೆಯಾಡಲು ಶುರು ಮಾಡುತ್ತವೆ.
ಇನ್ನು ಸದ್ಯ ಇರುವ ಈ ಡೆವಿಲ್ಸ್ ನ ಪೂರ್ವಜರು ಮರ್ಸುಪಿಯಲ್ಸ್ ಆಗಿದ್ದವು, ಅವುಗಳು ಗೊಂಡ್ವಾನ ಪ್ರದೇಶದಿಂದ ಆಸ್ಟ್ರೇಲಿಯಾ ಕಡೆಗೆ ವಲಸೆ ಹೋಗಿ ಅಲ್ಲಿಯೇ ವಿಕಸಿತಗೊಂಡು ಪೂರ್ತಿಯಾಗಿ ಮರಿಗಳಿಗೆ ಜನ್ಮ ನೀಡಲು ಶುರು ಮಾಡಿದವು. ಇವುಗಳ ಪೂರ್ವಜರ ಅವಶೇಷಗಳು ಕೂಡ ಅಲ್ಲಲ್ಲಿ ಪತ್ತೆಯಾಗಿವೆ.
1941 ರಲ್ಲಿ ಮೊದಲ ಬಾರಿಗೆ ಇವುಗಳ ಸಂರಕ್ಷಣೆ ಮಾಡಲು ಯೋಜನೆ ರೂಪಿಸಿದರು, ಬೇಟೆಯಾಡುವದರಿಂದ ರಕ್ಷಿಸಲಾಯಿತು ಆದರೆ ಇವುಗಳು ಫೇಸ್ ಕ್ಯಾನ್ಸರ್ ಅಂದರೆ ಫೇಷಿಯಲ್ ಟ್ಯೂಮರ್ ಡಿಸಿಸ್ ಎಂಬ ರೋಗಕ್ಕೆ ಬಲಿಯಾಗತೊಡಗಿದವು. ಹೀಗಾಗಿ ಇವುಗಳ ಸಂಖ್ಯೆ 1990 ರ ಹೊತ್ತಿಗೆ ಬಹಳಷ್ಟು ಕಡಿಮೆಯಾಗತೊಡಗಿತು.
ಇದರ ನಂತರ ಈ ಕಾರಣದಿಂದಾಗಿ ಟಾಸ್ಮೇನಿಯಾ ಸರ್ಕಾರ ಇವುಗಳ ಸಂಖ್ಯೆ ಹೆಚ್ಚಿಸುವ ಉದ್ದೇಶದಿಂದ ಬ್ರೀಡಿಂಗ್ ಸೆಂಟರ್ ಗಳನ್ನು ಶುರು ಮಾಡಿದರು. ಇವುಗಳೊಂದಿಗೆ ಇನ್ನೂ ಕೆಲವು ಪ್ರಾಣಿಗಳು ಸಹ ಇದ್ದವು. ಇವುಗಳ ಸಂಖ್ಯೆಯನ್ನು ಹೆಚ್ಚಿಸಲು ಆಸ್ಟ್ರೇಲಿಯಾದ ಸರ್ಕಾರ ಈ ಜೀವಿಗಳನ್ನು ತಮ್ಮ ದೇಶದ ಪ್ರಾಣಿ ಸಂಗ್ರಹಲಯದಲ್ಲಷ್ಟೇ ಅಲ್ಲದೇ ಬೇರೆ ಬೇರೆ ದೇಶಗಳ ಪ್ರಾಣಿ ಸಂಗ್ರಹಾಲಯಕ್ಕೂ ಇವುಗಳನ್ನು ಕಳುಹಿಸಿಕೊಡುತ್ತಿದ್ದಾರೆ.

ಈ ಕಾರಣದಿಂದಾಗಿ ಇವುಗಳ ರಕ್ಷಣೆ ಅಷ್ಟೇ ಅಲ್ಲದೇ ಇವುಗಳ ಸಂತಾನೋತ್ಪತ್ತಿ ಕೂಡ ಹೆಚ್ಚಾಗುತ್ತದೆ, ಇವುಗಳ ಒಟ್ಟು ಸಂಖ್ಯೆ ಕೂಡ ಹೆಚ್ಚಿಸುವ ಉದ್ದೇಶ ಆಸ್ಟ್ರೇಲಿಯಾ ಸರ್ಕಾರದ್ದಾಗಿದೆ. ಇವುಗಳು ಒಮ್ಮೆಲೇ ಘಂಟೆಗೆ 25 ಕಿಲೋಮೀಟರ್ ವೇಗದಲ್ಲಿ ಅಂದಾಜು 1.5 ಕಿಲೋಮೀಟರ್ ವರೆಗೂ ಓಡಬಲ್ಲವು.
ಸಾಮಾನ್ಯವಾಗಿ ಇವುಗಳು ಕಪ್ಪುಗಂದು ಬಣ್ಣದಿಂದ ಕೂಡಿರುತ್ತವೆ, ಕೆಲವುಗಳ ಬೆನ್ನ ಮೇಲೆ ಅಲ್ಲಲ್ಲಿ ಬಿಳಿ ಬಣ್ಣದ ಪಟ್ಟೆಗಳು ಸಹ ಕಾಣಸಿಗುತ್ತವೆ. ಇವುಗಳು ಬೆಳಗಿನ ಜಾವ ಹಾಗೂ ಸಾಯಂಕಾಲದ ಸಮಯದಲ್ಲಿ ಬಹಳ ಚುರುಕಾಗಿರುತ್ತವೆ. ವಯಸ್ಕ ಗಂಡು ಡೆವಿಲ್ಸ್ ಗಳು ಹೆಣ್ಣು ಡೆವಿಲ್ಸ್ ಗಳಿಗಿಂತ ಹೆಚ್ಚು ಉದ್ದವಾಗಿರುತ್ತವೆ.
ಗಂಡು ಸರಾಸರಿ 25.7 ಇಂಚು ಎತ್ತರವಿರುತ್ತವೆ ಇನ್ನೂ ಇವುಗಳ ಬಾಲವೇ ಬರೋಬ್ಬರಿ 10.2 ಇಂಚು ಉದ್ದ ಇರುತ್ತವೆ, ವಯಸ್ಕ ಡೆವಿಲ್ಸ್ 8 ಕೆಜಿ ತೂಗುತ್ತವೆ. ಹೆಣ್ಣು ಡೆವಿಲ್ಸ್ ಗಳ ಉದ್ದ 22 ಇಂಚು ಹಾಗೂ ಭಾರ 6 ಕೆಜಿ ಇರುತ್ತದೆ. ಸ್ವತಂತ್ರವಾಗಿ ಕಾಡಿನಲ್ಲಿ ತಿರುಗಾಡುವ ಡೆವಿಲ್ಸ್ ಗಳ ಜೀವಿತಾವಧಿ 5 ವರ್ಷವಾಗಿದ್ದು ಕೆಲವು ಬಾರಿ ಇದಕ್ಕಿಂತಲೂ ಹೆಚ್ಚು ವರ್ಷ ಬದುಕಬಲ್ಲವು.
ಆದರೆ ಅದು ಪ್ರಾಣಿ ಸಂಗ್ರಹಲಯದಲ್ಲಿ ಮಾತ್ರ ಸಾಧ್ಯ, ಏಕೆಂದರೆ ಭೇಟೆಯಾಡುವ ಭಯ ಅಲ್ಲಿ ಅವುಗಳಗೆ ಇರುವುದಿಲ್ಲ, ಸಿನ್ಸಿನಾಟಿ ಪ್ರಾಣಿ ಸಂಗ್ರಹಾಲದಲ್ಲಿ ಒಂದು ಗಂಡು ಡೆವಿಲ್ 7 ವರ್ಷ ಬದುಕಿದ್ದು ಇಲ್ಲಿಯವರೆಗಿನ ದಾಖಲೆಯಾಗಿದೆ. ಟಾಸ್ಮೇನಿಯಾ ಡೆವಿಲ್ಸ್ ಕತ್ತಲಿನಲ್ಲಿ ಭೇಟೆಯಾಡಿ ಹಗಲು ಹೊತ್ತಿನಲ್ಲಿ ಎತ್ತರದ ಮರಗಳು ಅಥವಾ ದಪ್ಪ ಪೊದೆಗಳಲ್ಲಿ ಅಡಗಿ ನಿದ್ರೆ ಮಾಡುತ್ತವೆ.

ಇವುಗಳಲ್ಲಿ ವಯಸ್ಕ ಡೆವಿಲ್ಸ್ ಆರಾಮಾಗಿ 23 ಫೀಟ್ ಎತ್ತರದವರೆಗೆ ಮರಗಳನ್ನು ಏರುತ್ತವೆ, ಆದರೆ ಸ್ವಲ್ಪ ದಪ್ಪ ಗಾತ್ರದ ಡೆವಿಲ್ಸ್ ಅಲ್ಲಿಯೇ ಪೊದೆಗಳಲ್ಲಿ ವಿರಮಿಸುತ್ತವೆ. ವಿಶೇಷ ಎಂದರೆ ಇವುಗಳು ಯಾವತ್ತೂ ಗುಂಪಿನಲ್ಲಿ ಇರುವುದಿಲ್ಲ, ಬದಲಾಗಿ ಸೆಪೆರೇಟ್ ಆಗಿಯೇ ಇರುತ್ತವೆ. ಸಂತಾನೋತ್ಪತ್ತಿಯ ಸಮಯದಲ್ಲಿ ಮಾತ್ರ ಒಂದೊಂದು ಜೋಡಿಗಳಾಗಿ ಇರುತ್ತವೆ.
ಆಹಾರದ ವಿಷಯಕ್ಕೆ ಬಂದಾಗ ಇವುಗಳು ಸಣ್ಣ ಸಣ್ಣ ಕಾಂಗರೂಗಳು, ಕುರಿ, ಇಲಿ, ಹಲ್ಲಿ ಹಾಗೂ ಇನ್ನಿತರೇ ಸಣ್ಣ ಪುಟ್ಟ ಪ್ರಾಣಿಗಳನ್ನು ಭೇಟೆಯಾಡಿ ತಿನ್ನುತ್ತವೆ. ಇವುಗಳಿಗೆ ಭೇಟೆಯಾಡುವದರಲ್ಲಿ ಬಹಳಷ್ಟು ಆನಂದ ಸಿಗುತ್ತದೆ. ಯಾವುದಾದರೂ ಸಣ್ಣ ಪ್ರಾಣಿಗಳು ಕಣ್ಣ ಮುಂದೆ ಬಂದರೆ ಬೇಟೆಯಾಡದೆ ಬಿಡುವುದಿಲ್ಲ.
ಇಷ್ಟೇ ಅಲ್ಲದೇ ಇವುಗಳು ಕಾಡಿನಲ್ಲಿ ಸಿಗುವ ಸತ್ತ ಪ್ರಾಣಿಗಳ ಶವಗಳನ್ನು ಸಹ ತಿನ್ನುತ್ತವೆ. ಪ್ರತಿ ದಿನ ಇವುಗಳು ತನ್ನ ಶರೀರ ತೂಕದ 15% ಮಾಂಸವನ್ನು ತಿನ್ನುತ್ತವೆ. ಕೆಲವು ಬಾರಿ ಅವಕಾಶ ಸಿಕ್ಕರೆ ಅರ್ಧ ಘಂಟೆಯಲ್ಲಿ ತನ್ನ ಶರೀರದ ತೂಕದ 40% ಮಾಂಸವನ್ನು ತಿಂದು ಮುಗಿಸುತ್ತವೆ!
-ಮಂಜುನಾಥ್