VIDEO : ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರ ಇಂದು ಕಾರ್ಪೆಂಟರ್! : ಕಾಲಚಕ್ರದ ಮಹಿಮೆ ಯಾರು ತಾನೇ ಬಲ್ಲರು?

ಕ್ರಿಕೆಟ್ ನ ಕೆರಿಯರ್ ಸಮಾಪ್ತಿ ಆದಮೇಲೆ ಕೆಲವು ಕ್ರಿಕೆಟರ್ ಗಳು ಐಶಾರಾಮೀ ಜೀವನದ ಬದಲಾಗಿ ಬಡತನದಲ್ಲಿ ಜೀವನವನ್ನು ನಡೆಸುವುದು ಈಗಾಗಲೇ ಸುದ್ದಿ ಆಗಿರುವಂತಹ ವಿಷಯ. ಕೆಲವು ಸಮಯದ ಹಿಂದೆ ನ್ಯೂಜಿಲ್ಯಾಂಡ್ ನ ಸ್ಟಾರ್ ಕ್ರಿಕೆಟ್ ಆಟಗಾರ ಆಲ್-ರೌಂಡರ್ ಎನಿಸಿಕೊಂಡಿದ್ದ ಕ್ರಿಸ್ ಕೆನ್ಸ್ರ್ ಅವರು ರಸ್ತೆಯಲ್ಲಿ ಕೆಲಸ ಮಾಡುತ್ತಿರುವ ದೃಶ್ಯಗಳು ಕಂಡು ಬಂದಿತ್ತು‌‌.

ತಮ್ಮ ಕುಟುಂಬದ ನಿರ್ವಹಣೆಗಾಗಿ ಅವರು ಆಕ್ಲೆಂಡಿನಲ್ಲಿ ಬಸ್ ಗಳನ್ನು ತೊಳೆಯುತ್ತಿರುವ ಹಾಗೂ ಬಸ್ ಚಾಲನೆಯನ್ನು ಮಾಡುತ್ತಿರುವ ದೃಶ್ಯಗಳು ವೈರಲ್ ಆಗಿದ್ದವು. ಈಗ ಈ ಪಟ್ಟಿಗೆ ಮತ್ತೊಂದು ಹೊಸ ಹೆಸರು ಸೇರ್ಪಡೆಯಾಗಿದೆ. ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ 2015ರಲ್ಲಿ ವಿಶ್ವಕಪ್ ಕ್ರಿಕೆಟ್ ತಂಡದ ಭಾಗವಾಗಿದ್ದ ಆಟಗಾರನ ಬಗ್ಗೆ ನಾವೀಗ ಮಾತಾಡುತ್ತಿರುವುದು.

ಜೇವಿಯರ್ ಡೊಹೆರ್ಟಿ (Xavier Doherty) ಎಂಬ ಈ ಆಟಗಾರ ಇದೀಗ ತಮ್ಮ ಜೀವನ ನಿರ್ವಹಣೆಗಾಗಿ ಕುಟುಂಬವನ್ನು ಪೋಷಿಸುವುದಕ್ಕಾಗಿ ಕಾರ್ಪೆಂಟರ್ ಕೆಲಸವನ್ನು ಮಾಡುತ್ತಿದ್ದಾರೆ! ಆಸ್ಟ್ರೇಲಿಯಾ ಕ್ರಿಕೆಟ್ ಅಸೋಸಿಯೇಶನ್ ತನ್ನ ಟ್ವಿಟರ್ ಖಾತೆಯಲ್ಲಿ ಒಂದು ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು, ಈ ವಿಡಿಯೋದಲ್ಲಿ ಡೊಹೆರ್ಟಿ ಮರಗೆಲಸ ವನ್ನು ಮಾಡುತ್ತಿರುವುದನ್ನು ನಾವು ಗಮನಿಸಬಹುದು.

ಡೊಹೆರ್ಟಿ ಅವರು 2017ರಲ್ಲಿ ಕ್ರಿಕೆಟ್ ನಿಂದ ನಿವೃತ್ತಿಯನ್ನು ಪಡೆದರು. ಅದಾದ ನಂತರ ಅವರಿಗೆ ಕ್ರಿಕೆಟ್ ಆಡುವ ಅವಕಾಶಗಳು ದೊರೆಯಲಿಲ್ಲ. ಅನಂತರ ಆರ್ಥಿಕವಾಗಿ ಸಮಸ್ಯೆಗಳು ಎದುರಾಗತೊಡಗಿದವು. ಕುಟುಂಬ ನಿರ್ವಹಣೆಗೆ ಒಂದು ಕೆಲಸವನ್ನು ಮಾಡುವುದು ಅತ್ಯವಶ್ಯಕವಾಗಿದ್ದು ಮಾತ್ರವೇ ಅಲ್ಲದೇ ಅದು ಅನಿವಾರ್ಯ ಸಹಾ ಆಗಿತ್ತು.

ಆಗಲೇ ಅವರು ಕಾರ್ಪೆಂಟರ್ ವೃತ್ತಿಯನ್ನು ಮಾಡುವುದನ್ನು ಕಲಿಯಲು ಆರಂಭಿಸಿದರು. ಡೊಹೆರ್ಟಿ ಅವರು ಕ್ರಿಕೆಟ್ ನಿಂದ ನಿವೃತ್ತಿ ಹೇಳುವಾಗ ಮುಂದೆ ಜೀವನ ಹೇಗೆ ಎನ್ನುವ ಆಲೋಚನೆ ತನಗೆ ಇರಲಿಲ್ಲ ಎಂದು ಹೇಳಿದ್ದಾರೆ. ಡೊಹೆರ್ಟಿ ಅವರು ಕ್ರಿಕೆಟ್ ತೊರೆದ ನಂತರ ಆರಂಭದಲ್ಲಿ ತನಗೆ ಯಾವ ಕೆಲಸ ಸಿಕ್ಕಿದರೂ ಅದನ್ನೇ ಮಾಡುತ್ತಿದ್ದೆ ಎಂದು ಹೇಳಿದ್ದಾರೆ.

ಹೀಗೆ ಸುಮಾರು 12 ತಿಂಗಳ ಕಾಲ ಬೇರೆ ಬೇರೆ ಕೆಲಸಗಳನ್ನು ಅವರು ಮಾಡಿದ್ದರು. ಆಫೀಸಿನಲ್ಲಿ ಕೆಲಸಗಳು, ಕ್ರಿಕೆಟ್ ಆಟಕ್ಮೆ ಸಂಬಂಧಿಸಿದಂತಹ ಕೆಲಸಗಳು, ಹೀಗೆ ವೈವಿಧ್ಯಮಯ ಕೆಲಸಗಳನ್ನು ಮಾಡಿದ ನಂತರ ಅವರು ಕಾರ್ಪೆಂಟರ್ ಆಗುವ ನಿರ್ಧಾರವನ್ನು ಮಾಡಿದರು. ಇದೇ ವೇಳೆಯಲ್ಲಿ ಡೊಹೆರ್ಟಿ ಅವರು ಆಸ್ಟ್ರೇಲಿಯಾ ಕ್ರಿಕೆಟ್ ಅಸೋಸಿಯೇಷನ್ ಅನ್ನು ಹಾಡಿ ಹೊಗಳುತ್ತಾರೆ.

ಆಸ್ಟ್ರೇಲಿಯಾ ಕ್ರಿಕೆಟ್ ಅಸೋಸಿಯೇಷನ್ ನಲ್ಲಿ ಆಟಗಾರರ ಅಭಿವೃದ್ಧಿ ವ್ಯವಸ್ಥಾಪಕರು ಇರುವುದು ನಮಗೆ ಬಹಳ ಸಹಾಯಕವಾಗಿದೆ ಎನ್ನುತ್ತಾರೆ. ಅಂತಹ ವ್ಯವಸ್ಥಾಪಕರು ಇರುವುದರಿಂದಾಗಿ ನಾನು ಕೂಡ ನಿರಾಳವಾಗಿದ್ದೇನೆ. ಮುಂದಿನ ಜೀವನಕ್ಕೆ ಸಲಹೆಗಳನ್ನು ಪಡೆಯುವ ಜೊತೆಗೆ ಆರ್ಥಿಕ ಸಹಾಯವೂ ದೊರಕಿದೆ ಎಂದು ಹೇಳಿದ್ದಾರೆ.

ಡೊಹಾರ್ಟಿ ಅವರ ವೃತ್ತಿಜೀವನದ ಬಗ್ಗೆ ಮಾತನಾಡುವುದಾದರೆ, ಅವರು ನಾಲ್ಕು ಟೆಸ್ಟ್, 60 ಏಕದಿನ ಪಂದ್ಯಗಳು, 11 ಟೀ ಟ್ವೆಂಟಿ ಪಂದ್ಯಾವಳಿಗಳಲ್ಲಿ ಆಸ್ಟ್ರೇಲಿಯಾವನ್ನು ಪ್ರತಿನಿಧಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 7 ವಿಕೆಟ್‌ಗಳು, ಏಕದಿನ ಪಂದ್ಯಗಳಲ್ಲಿ 55 ಮತ್ತು ಟಿ 20 ಯಲ್ಲಿ 10 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಅವರು ತನ್ನದಾಗಿಸಿಕೊಂಡಿದ್ದಾರೆ.

ಇನ್ನು 2010 ರಲ್ಲಿ ಮೆಲ್ಬೋರ್ನ್ ಮೈದಾನದಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಡೊಹೆರ್ಟಿ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆಯನ್ನು ಮಾಡಿದ್ದರು. ನಂತರ 2010 ರಲ್ಲಿ ಬ್ರಿಸ್ಬೇನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯಾವಳಿಗೆ ಪಾದಾರ್ಪಣೆ ಮಾಡಿದರು. ನಂತರ ಅವರು 2012 ರಲ್ಲಿ ಭಾರತ ವಿರುದ್ಧ ಮೊದಲ ಟಿ 20 ಆಡಿದರು.

ಅವರು 2013 ರಲ್ಲಿ ಭಾರತದ ವಿರುದ್ಧ ತಮ್ಮ ಕೊನೆಯ ಟೆಸ್ಟ್, 2015 ರಲ್ಲಿ ಶ್ರೀಲಂಕಾ ವಿರುದ್ಧ ಕೊನೆಯ ಏಕದಿನ ಮತ್ತು 2013 ರಲ್ಲಿ ಭಾರತದ ವಿರುದ್ಧ ಕೊನೆಯ ಟಿ 20 ಆಡಿದ್ದರು. ಅನಂತರ ಕ್ರಿಕೆಟ್ ನಿಂದ ನಿವೃತ್ತಿ ಪಡೆದಿದ್ದರು. ಅವರ ಕಾರ್ಪೆಂಟರ್ ಕೆಲಸದ ವಿಡಿಯೊ ಮೇಲಿದೆ ನೋಡಿ…
-Team Infotrend