ಟೈಟ್ ಪ್ಯಾಂಟ್ ಧರಿಸಿ ಬಂದ ಸಂಸದೆಯನ್ನು ಸಂಸತ್ ನಿಂದಲೇ ಹೊರಹಾಕಲಾಯಿತು!
ಒಬ್ಬರು ಹೇಗೆ ಉಡುಗೆ ತೊಡಬೇಕು ಎಂಬುದು ಅವರ ವೈಯಕ್ತಿಕ ವಿಷಯ. ಅದು ಅವರ ಹಕ್ಕು ಕೂಡ. ಆದರೆ ಇಲ್ಲಿ ಹಾಗಾಗಲಿಲ್ಲ. ಅದೂ ಅಲ್ಲದೇ ತಮಗಿಷ್ಟ ಬಂದ ಬಟ್ಟೆ ಹಾಕಿದವರು ಯಾರೋ ಜನಸಾಮಾನ್ಯರಲ್ಲ, ಅಲ್ಲಿನ ಸಂಸದರು. ಆದರೂ ಯಾವುದೇ ವಿನಾಯಿತಿ ನೀಡಲಿಲ್ಲ. ನೇರವಾಗಿ ಅವರನ್ನು ಸಂಸತ್ ನಿಂದ ಆಚೆ ಹಾಕಲಾಯಿತು. ಈ ಘಟನೆ ಭಾರತದಲ್ಲಿ ನಡೆದಿದ್ದಲ್ಲ, ಇದು ನಡೆದಿರುವುದು ತಾಂಜೇನಿಯಾದಲ್ಲಿ!
ಎಲ್ಲರಿಗೂ ಅತಿ ಅನಿಸುವಷ್ಟು ಸ್ವಾತಂತ್ರ್ಯ ಕೊಟ್ಟರೂ ನಮ್ಮಲ್ಲಿ ಮಾನವ ಹಕ್ಕು – ಮಹಿಳಾ ಹಕ್ಕುಗಳ ಬಗ್ಗೆ ಆಗಾಗ ತಗಾದೆ ಏಳುವುದುಂಟು. ಆದರೆ ತಾಂಜೇನಿಯಾದಲ್ಲಿ ಇವೆಲ್ಲ ಹಕ್ಕು ಪಕ್ಕು ನಡೆಯಲ್ಲ, ಅಲ್ಲಿ ಯಾರೂ ಕೇಳುವುದೂ ಇಲ್ಲ. ಆ ಮಹಿಳೆ ಉನ್ನತ ಸ್ಥಾನದಲ್ಲಿದ್ದರೂ ಸಹ ಆಕೆಗೆ ತನಗೆ ಬೇಕಾದಂಥ ಬಟ್ಟೆಗಳನ್ನು ತೊಡುವ ಸ್ವಾತಂತ್ರ್ಯ ಅಲ್ಲಿಲ್ಲ.

ತಾಂಜೇನಿಯಾದಲ್ಲಿ ಅಲ್ಲಿನ ಮಹಿಳಾ ಸಂಸದರು ಬಿಗಿಯಾದ ಫಿಟ್ಟಿಂಗ್ ಪ್ಯಾಂಟ್ ಹಾಕಿಕೊಂಡು ಬಂದಿದ್ದರಿಂದ ಸಂಸತ್ತಿನಿಂದ ಹೊರಹಾಕಲಾಯಿತು. ತಾಂಜೇನಿಯಾದ ಈ ಮಹಿಳಾ ಸಂಸದೆ ಕಂಡೆಸ್ಟರ್ ಸಿಚ್ವಾಲೆ (Condester Sichwale) ಅವರನ್ನು ಸಂಸತ್ತಿನ ಸ್ಪೀಕರ್ ಹೊರಹಾಕಿದರು. ಸ್ಪೀಕರ್ ಜಾಬ್ ದುಗೈ ಮಹಿಳಾ ಸಂಸದರಿಗೆ, ‘ಮೊದಲು ಸರಿಯಾದ ಬಟ್ಟೆಗಳನ್ನು ಧರಿಸಿ ನಂತರ ಸಂಸತ್ತಿಗೆ ಬನ್ನಿ’ ಎಂದು ಎಚ್ಚರಿಸಿದರು.
ಪುರುಷ ಸಂಸದ ಹುಸೇನ್ ಅಮರ್, ಕಂಡೆಸ್ಟರ್ ನ ಬಟ್ಟೆಗಳನ್ನು ನೋಡುತ್ತಾ, ‘ನಮ್ಮ ಕೆಲವು ಸಹೋದರಿಯರು ವಿಚಿತ್ರವಾದ ಬಟ್ಟೆಗಳನ್ನು ಧರಿಸುತ್ತಿದ್ದಾರೆ ಎಂದು ಹೇಳಿದಾಗ ಈ ಪ್ರಕರಣ ಪ್ರಾರಂಭವಾಯಿತು. ಅವರು ಸಮಾಜಕ್ಕೆ ಏನು ತೋರಿಸುತ್ತಿದ್ದಾರೆ?’ ಎಂದು ಅವರು ಪ್ರಶ್ನಿಸಿದರು.

ಸಮಾಜದ ಚಿಂತನೆ ಮತ್ತು ಪ್ರತಿಬಿಂಬವು ಸಂಸತ್ತಿನಲ್ಲಿ ಗೋಚರಿಸುತ್ತದೆ ಎಂದು ಹುಸೇನ್ ಅಮರ್ ವಾದಿಸಿದರು. ಸಂಸತ್ತಿನ ನಿಯಮಗಳನ್ನು ಉಲ್ಲೇಖಿಸಿದ ಅವರು, ಬಿಗಿಯಾದ ಜೀನ್ಸ್ ಧರಿಸಿ ಮಹಿಳೆಯರು ಸಂಸತ್ತಿಗೆ ಏಕೆ ಬರಬಾರದು ಎಂದು ವಿವರಿಸಿದರು. ಕಂಡೆಸ್ಟಾರ್ ಅವರನ್ನು ಸಂಸತ್ತಿನಿಂದ ಹೊರಹಾಕಿದ ಬಗ್ಗೆ ಇತರ ಮಹಿಳಾ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಿಳಾ ಸಂಸದರು ಕಾಂಡೆಸ್ಟರ್ ಅವರನ್ನು ಈ ರೀತಿ ಸಂಸತ್ತಿನಿಂದ ಉಚ್ಛಾಟಿಸುವಂತೆ ಕೇಳಿಕೊಂಡರು. ಮಹಿಳಾ ಸಂಸದರನ್ನು ಹೊರಹಾಕಿದ ನಂತರ, ಸ್ಪೀಕರ್ ಅವರು ಮಹಿಳಾ ಸದಸ್ಯರ ಬಟ್ಟೆಗಳ ಬಗ್ಗೆ ದೂರು ಸ್ವೀಕರಿಸುತ್ತಿರುವುದು ಇದೇ ಮೊದಲಲ್ಲ ಎಂದು ಹೇಳಿದರು. ಯಾರಾದರೂ ಇಂಥ ಬಟ್ಟೆಯಲ್ಲಿ ಕಾಣಿಸಿಕೊಂಡರೆ ಅವರನ್ನು ಸದನಕ್ಕೆ ಪ್ರವೇಶಿಸಲು ಅನುಮತಿಸಬಾರದು ಎಂದು ಅವರು ಸಂಸತ್ತಿನ ಭದ್ರತಾ ಸಿಬ್ಬಂದಿಗೆ ನಿರ್ದೇಶನ ನೀಡಿದರು.
-Team Infotrend