ಒಟ್ಟಿಗೆ ಜನ್ಮ ತಾಳಿದ ತ್ರಿವಳಿ ಸಹೋದರಿಯರು ಈಗ ಒಟ್ಟಿಗೆ ಆಗಿದ್ದಾರೆ ಗರ್ಭಿಣಿಯರು: ಹೀಗಿತ್ತು ನೋಡಿ ಅವರ ಪ್ಲಾನ್!
ಅವಳಿ ಮಕ್ಕಳ ವಿಚಾರದಲ್ಲಿ ಬಹಳಷ್ಟು ವಿಷಯಗಳಲ್ಲಿ ನಾವು ಸಾಮ್ಯತೆಯನ್ನು ಕಾಣಬಹುದಾಗಿದೆ. ಆದರೆ ಕ್ಯಾಲಿಫೋರ್ನಿಯಾದಲ್ಲಿನ ಒಂದೇ ಸಲ ಜನ್ಮಿಸಿದ ತ್ರಿವಳಿ ಸಹೋದರಿಯರ ಜೀವನದಲ್ಲಿ ನಡೆದಿರುವ ಒಂದು ವಿಚಿತ್ರ ಘಟನೆಯು ರೋಮಾಂಚಕ ಎನಿಸಿದೆ. ಹುಟ್ಟಿನಿಂದಲೂ ಸಹಾ ಒಟ್ಟಾಗಿ ಬೆಳೆದ ಈ ಸಹೋದರಿಯರು ತಮ್ಮ ಮದುವೆಯ ನಂತರ ಏಕಕಾಲದಲ್ಲಿ ಗರ್ಭ ಧರಿಸುವ ಮೂಲಕ ಸುದ್ದಿಯಾಗಿದ್ದಾರೆ. ಈ ಮೂವರು ಸಹೋದರಿಯರು ಇದೀಗ ಕೆಲವೇ ತಿಂಗಳುಗಳ ಅಂತರದಲ್ಲಿ ತಮ್ಮ ಮಕ್ಕಳಿಗೆ ಜನ್ಮವನ್ನು ನೀಡಲಿದ್ದಾರೆ. ಈ ಮೂವರು ಸಹೋದರಿಯರು ತಮ್ಮ ಗರ್ಭಧಾರಣೆಯ ಮಧುರ ಅನುಭವವನ್ನು ಹಂಚಿಕೊಂಡಿದ್ದಾರೆ.

ಅಮೆರಿಕಾದ ಕ್ಯಾಲಿಫೋರ್ನಿಯಾದ ಈ ತ್ರಿವಳಿ ಸಹೋದರಿಯರ ಹೆಸರು ಗಿನಾ, ನೀನಾ ಹಾಗೂ ವಿಕ್ಟೋರಿಯ. 35 ವರ್ಷ ವಯಸ್ಸಿನ ಈ ಸಹೋದರಿಯರು ಏಕ ಕಾಲದಲ್ಲಿ ಗರ್ಭ ಧರಿಸಿದ್ದು ಇದೀಗ ಮೂವರು ಸಹಾ ಮಕ್ಕಳ ಆಗಮನದ ನಿರೀಕ್ಷೆಯಲ್ಲಿ ಇದ್ದಾರೆ. ಮೂರು ಜನ ಸಹೋದರಿಯರು ತಮ್ಮ ಮಕ್ಕಳ ಆಗಮನದ ಕುರಿತಾಗಿ ಉತ್ಸುಕರಾಗಿದ್ದಾರೆ ಮಾತ್ರವೇ ಅಲ್ಲದೇ ಅವರು ತಮ್ಮ ಮಕ್ಕಳು ಸಹಾ ತಮ್ಮಂತೆಯೇ ಬಹಳ ಸ್ನೇಹ ಮತ್ತು ಆಪ್ಯಾಯತೆಯಿಂದ ಇರುತ್ತಾರೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ.

ಈ ಮೂವರು ಸಹೋದರಿಯರಲ್ಲಿ ಕಿರಿಯವಳಾದ ವಿಕ್ಟೋರಿಯಾ ಅಲ್ಲಿನ ಮಾದ್ಯಮವೊಂದರ ಜೊತೆ ಮಾತನಾಡುತ್ತಾ, ತಮ್ಮ ಗರ್ಭದಾರಣೆಯು ಒಂದು ಕನಸು, ಆ ಕನಸು ಈಗ ನನಸಾಗಿದೆ ಎಂದಿದ್ದಾರೆ. ಗರ್ಭಧಾರಣೆಯ ಈ ಸಮಯದಲ್ಲಿ ನಮಗೆ ಏನು ತಿನ್ನಬೇಕೆಂದು ಅನಿಸುತ್ತದೆ, ನಾವು ಯಾವಾಗ ಹೇಗೆ ಫೀಲ್ ಆಗುತ್ತಿದ್ದೇವೆ ಹಾಗೂ ಎಷ್ಟು ದಣಿದಿದ್ದೇವೆ ಎನ್ನುವ ವಿಚಾರಗಳನ್ನು ನಾವು ಪರಸ್ಪರ ಹಂಚಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ವಿಕ್ಟೋರಿಯಾ ಗೆ ಈಗಾಗಲೇ ಎರಡು ವರ್ಷದ ಒಬ್ಬ ಮಗಳಿದ್ದಾಳೆ.

ಈಗ ಜುಲೈನಲ್ಲಿ ಎರಡನೇ ಮಗುವಿಗೆ ಜನ್ಮ ನೀಡಲಿದ್ದಾರೆ ವಿಕ್ಟೋರಿಯಾ ಇನ್ನು ಮೂವರಲ್ಲಿ ಎರಡನೆಯ ಸಹೋದರಿ ನೀನಾ ಗೆ ಇದು ಮೊದಲನೆಯ ಮಗುವಾಗಿದೆ. ನೀನಾ ಆಗಸ್ಟ್ 28 ಕ್ಕೆ ತನ್ನ ಮೊದಲ ಮಗುವಿಗೆ ಜನ್ಮ ವನ್ನು ನೀಡಲಿದ್ದಾರೆ ಎಂದು ಹೇಳಿದ್ದಾರೆ. ನೀನಾ ಅವರು ತಮ್ಮ ಮೊದಲ ಮಗು ಗಂಡು ಮಗು ಆದರೆ ಚೆನ್ನ ಎನ್ನುವ ನಿರೀಕ್ಷೆಯಲ್ಲಿ ಇದ್ದಾರೆ ಎನ್ನಲಾಗಿದೆ.
ಹಿರಿಯ ಸಹೋದರಿ ಗಿನಾ ಅವರು ನವೆಂಬರ್ ನಲ್ಲಿ ಮೂರನೇ ಮಗುವಿಗೆ ಜನ್ಮ ನೀಡಲಿದ್ದಾರೆ. ಅವರಿಗೆ ಈಗಾಗಲೇ ಎಂಟು ವರ್ಷದ ಒಬ್ಬ ಮಗ ಮತ್ತು ಐದು ವರ್ಷದ ಮಗಳನ್ನು ಹೊಂದಿದ್ದಾರೆ.

ಈಗ ಮೂವರು ಸಹೋದರಿಯರು ಸಹಾ ಒಂದೇ ಸಲ ಗರ್ಭಿಣಿಯಾಗಿರುವ ವಿಷಯಕ್ಕೆ ಬಹಳ ಸಂತೋಷವಾಗಿದ್ದು, ನಾವು ಈ ವಿಷಯವಾಗಿ ಯಾವುದೇ ರೀತಿಯ ಪ್ಲಾನ್ ಮಾಡಿರಲಿಲ್ಲ ಎಂದು ಗೀನಾ ಅವರು ಹೇಳಿದ್ದಾರೆ. ನೀನಾ ಒಂದು ವರ್ಷದಿಂದ ಮಗುವಿಗಾಗಿ ಪ್ಲಾನ್ ಮಾಡಿದ್ದಾಗಿ ಹೇಳಿದ್ದಾರೆ. ವಿಕ್ಟೋರಿಯಾ ಈ ವಿಚಾರವಾಗಿ ಮಾತನಾಡುತ್ತಾ, ನನಗೂ ಆ ಅನುಭವ ಆಗಿತ್ತು, ನೀನಾ ಶರಾಬು ಸೇವನೆಯನ್ನು ನಿಲ್ಲಿಸಿದ್ದಳು.
ಅಲ್ಲದೇ ಆಕೆ ಗರ್ಭವತಿ ಎಂದು ತಿಳಿದು ಬಂದಾಗ, ನನಗೆ ಈ ವಿಚಾರ ಮೊದಲೇ ತಿಳಿದಿತ್ತು ಎನ್ನುವ ಭಾವನೆ ಮೂಡಿತ್ತು ಎಂದಿದ್ದಾರೆ.

ನೀನಾ ಳಿಗೆ ಇದು ಮೊದಲ ಮಗುವಾಗಿದೆ. ಆದ್ದರಿಂದಲೇ ಆಕೆ ಗರ್ಭವತಿಯಾಗಿರುವ ಹಿನ್ನೆಲೆಯಲ್ಲಿ ತನ್ನ ಇಬ್ಬರೂ ಸಹೋದರಿಯರಿಂದ ಸಾಕಷ್ಟು ಮಾಹಿತಿಗಳನ್ನು ಪಡೆದುಕೊಳ್ಳುತ್ತಾ ಇರುತ್ತಾರೆ. ಸಹೋದರಿಯರಿಂದ ಅವರ ಕಥೆಗಳನ್ನು ತಿಳಿಯುತ್ತಾ, ಅವರಿಗೆ ಹತ್ತಿರವಾಗಿರಲು ಇದು ಸಹಾಯಕವಾಗಿದೆ ಎನ್ನುತ್ತಾರೆ. ಈ ಮೂವರು ಸಹೋದರಿಯರು ಲಗುನಾ ಹಿಲ್ಸ್ನ ಮೆಮೊರಿಯಲ್ ಕೇರ್ ಸ್ಯಾಡಲ್ಬ್ಯಾಕ್ ವೈದ್ಯಕೀಯ ಕೇಂದ್ರದಲ್ಲಿ ತಮ್ಮ ಮಕ್ಕಳಿಗೆ ಜನ್ಮ ನೀಡಲಿದ್ದಾರೆ. ಕೆಲವು ವಾರಗಳ ಹಿಂದೆ ಮೂವರೂ ಒಂದೇ ಸಮಯದಲ್ಲಿ ಗರ್ಭಿಣಿಯಾಗಿದ್ದಾರೆಂದು ತಿಳಿದು ಬಂದಿದೆ ಎಂದು ಡಾ. ಡೇನಿಯಲ್ ಅವರು ಮಾದ್ಯಮಕ್ಕೆ ತಿಳಿಸಿದ್ದಾರೆ. ಆದಾಗ್ಯೂ ಮೂವರು ಸಹೋದರಿಯರ ಮಕ್ಕಳ ಜನನದ ಸಮಯವು ವಿಭಿನ್ನವಾಗಿರುತ್ತದೆ ಎಂದಿದ್ದಾರೆ.