ಕೊರೊನದಿಂದ ಕೆಲಸ ಕಳೆದುಕೊಂಡಾತ ಮನೆಲೇ ನೋಟ್ ಪ್ರಿಂಟ್ ಮಾಡೊ ಮಷಿನ್ ಇಟ್ಟುಕೊಂಡ! ಈಗ ಪರಿವಾರ ಸಮೇತ ಜೈಲಿನಲ್ಲಿದ್ದಾನೆ!
ಮಹಾಮಾರಿ ಕೊರೊನಾದಿಂದಾಗಿ ಅನೇಕರ ಜನರು ನಿರುದ್ಯೋಗಿಗಳಾಗಿದ್ದಾರೆ. ಮುಂದೆ ಏನು ಮಾಡಬೇಕೆಂಬ ದಾರಿ ತೋಚದಾಗಿದೆ. ಹೊರಗೆ ಕೆಲಸಗಳೇ ಇಲ್ಲವೇನೋ ಎನ್ನುವಂತಹ ಸ್ಥಿತಿಯಿದೆ. ಆದರೆ ಹಾಗೆಂದ ಮಾತ್ರಕ್ಕೆ ಮನೆಗೆ ಒಂದು ಪ್ರಿಂಟರ್ ತಂದು ನೋಟುಗಳನ್ನು ಮುದ್ರಣ ಮಾಡಿ ಎಂದು ಅರ್ಥವಲ್ಲ. ಸಾಮಾನ್ಯವಾಗಿ ಜನರು ದುಡ್ಡಿನ ಸಮಸ್ಯೆ ಬಗ್ಗೆ ಮಾತನಾಡುವಾಗ ನೋಟ್ ಪ್ರಿಂಟ್ ಮಾಡೋ ಒಂದು ಮಿಷನ್ ಇಟ್ಕೋ ಎಂದು ಹೇಳುವುದನ್ನು ನಾವು ಕೇಳಿರುತ್ತೇವೆ.
ಆದರೆ ಧರ್ಮೇಂದ್ರ ಸಿಂಗ್ ಎನ್ನುವ ವ್ಯಕ್ತಿಯೊಬ್ಬರು ಮಾತ್ರ ಈ ಮಾತನ್ನು ಸೀರಿಯಸ್ಸಾಗೇ ತೆಗೆದುಕೊಂಡಿದ್ದಾರೆ. ಆತ ಯಾವಾಗ ನಿರುದ್ಯೋಗಿಯಾದನೋ ಆಗ ತಮಾಷೆಗೆ ಹೇಳಿದ್ದ ಮಾತನ್ನು ನಿಜ ಮಾಡುತ್ತಾ, ಮನೆಯಲ್ಲಿ ಒಂದು ನೋಟು ಪ್ರಿಂಟ್ ಮಾಡುವ ಮಿಷಿನ್ ಇಟ್ಟುಕೊಂಡುಬಿಟ್ಟ!
ತಾನು ಮಾಡುವುದಲ್ಲದೇ ಆತ ತನ್ನ ಪರಿವಾರದವರಿಗೂ ಇನ್ನು ತಾವು ನೋಟ್ ಪ್ರಿಂಟ್ ಮಾಡುವ ಕೆಲಸವನ್ನು ಮಾತ್ರವೇ ಮಾಡೋಣ ಎಂದು ಹೇಳಿದ್ದಾನೆ. ಅವರ ತಂದೆ, ಚಿಕ್ಕಪ್ಪ, ಚಿಕ್ಕಪ್ಪನ ಮಗ ಎಲ್ಲರೂ ಕೂಡಾ ಆತನೊಡನೆ ಸೇರಿ ಈ ಕೆಲಸ ಮಾಡಲು ಸಿದ್ಧರಾಗಿಯೇ ಬಿಟ್ಟರು. ನೂರು, ಇನ್ನೂರು, ಐನೂರರ ನೋಟುಗಳನ್ನು ಮುದ್ರಣ ಮಾಡಿದ ಅವರು ಅದನ್ನು ಚಲಾವಣೆ ಮಾಡಲು ಸಹ ಆರಂಭಿಸಿದರು.
ಆದರೆ ಅವರ ನೋಟುಗಳ ಮುದ್ರಣದ ಸುಳಿವು ನೆರೆ ಹೊರೆಯವರಿಗೆ ತಿಳಿದೇ ಹೋಯಿತು. ಧರ್ಮೇಂದ್ರಸಿಂಗ್ ನೋಟುಗಳನ್ನು ಮುದ್ರಿಸಿ ಕೋಟ್ಯಾಧಿಪತಿ ಆಗುವ ಮೊದಲೇ ಆತನ ಮನೆಯ ಮೇಲೆ ಪೋಲಿಸರು ದಾಳಿ ಮಾಡಿದರು. ಆತನ ಕನಸನ್ನು ನುಚ್ಚು ನೂರು ಮಾಡಿದರು.
ಮೊದಲು ಒಂದಷ್ಟು ಮಾತು, ವಿಚಾರಣೆ ಎಲ್ಲಾ ನಡೆದು ಅನಂತರ ಜೈಲಿಗೆ ಕಳುಹಿಸಲಾಗಿದೆ. ಇಂತಹುದೊಂದು ಘಟನೆ ನಡೆದಿರುವುದು ಬಿಹಾರದ ಬಕ್ಸರ್ ಜಿಲ್ಲೆಯ ರಾಜಪುರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿರುವ ಮನೋಹರ ಪುರ ಎನ್ನುವ ಹಳ್ಳಿಯಲ್ಲಿ ಈ ನಕಲಿ ನೋಟುಗಳನ್ನು ಮುದ್ರಣ ಮಾಡುವ ಕಾರ್ಯ ನಡೆಯುತ್ತಿತ್ತು.

ಮಂಗಳವಾರ ರಾತ್ರಿ ಪೋಲಿಸರಿಗೆ ಸಿಕ್ಕ ರಹಸ್ಯ ಮಾಹಿತಿಯನ್ನು ಅನುಸರಿಸಿ ಪೋಲಿಸರು ಧರ್ಮೇಂದ್ರ ಸಿಂಗ್ ನ ಮನೆಯ ಮೇಲೆ ಧಾಳಿ ನಡೆಸಿದ್ದಾರೆ. ಈ ವೇಳೆ ಅವರು ಅಲ್ಲಿ 3, 77,600 ರೂಪಾಯಿಗಳ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಪೋಲಿಸರು ಜಫ್ತಿ ಮಾಡಿರುವುದರಲ್ಲಿ ನೂರು, ಇನ್ನೂರು, ಐನೂರರ ನೋಟುಗಳಿವೆ ಎನ್ನಲಾಗಿದೆ.
ಪೋಲಿಸರು ಸ್ಥಳದಿಂದ ಕುಟುಂಬದ ಮೂರು ಜನ ಸದಸ್ಯರನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಆ ಮೂವರಲ್ಲಿ ಧರ್ಮೇಂದ್ರ ಸಿಂಗ್, ಆತನ ತಂದೆ ಸುಭಾಷ್ ಸಿಂಗ್ ಮತ್ತು ಚಿಕ್ಕಪ್ಪನ ಮಗ ಅಶೋಕ್ ಸಿಂಗ್ ಮೂವರು ಇದ್ದಾರೆ. ಪೋಲಿಸರು ಪ್ರಿಂಟರ್, ಲ್ಯಾಪ್ ಟಾಪ್, ನೋಟು ಪಂಚಿಂಗ್ ಮೆಷಿನ್, ಮಹಾತ್ಮಾ ಗಾಂಧಿಯವರ ಮೊನೋಗ್ರಾಮ್ ಸಿದ್ದಪಡಿಸುವ ಮೆಷಿನ್ ವಶಪಡಿಸಿಕೊಂಡಿದ್ದಾರೆ. ಅಲ್ಲದೇ ಹಲವು ಎಟಿಎಮ್ ಕಾರ್ಡ್ ಗಳು ಹಾಗೂ ಕಾಗದಗಳನ್ನು ವಶಪಡಿಸಿಕೊಂಡಿದ್ದಾರೆ.
ಮೂವರನ್ನು ಈಗಾಗಲೇ ಜೈಲಿಗೆ ಕಳುಹಿಸಲಾಗಿದ್ದು, ಪ್ರಕರಣದಲ್ಲಿ ಶಾಮೀಲಾಗಿರುವ ಪರಿವಾರದ ಕೆಲವರನ್ನು ಹುಡುಕುವ ಕಾರ್ಯದಲ್ಲಿ ಪೋಲಿಸರು ತೊಡಗಿಸಿಕೊಂಡಿದ್ದಾರೆ. ಎಸ್ ಪಿ ಅವರು ಈ ವಿಷಯವಾಗಿ ಮಾತನಾಡುತ್ತಾ ತಮಗೆ ಈ ವಿಚಾರವಾಗಿ ಲಿಖಿತ ರೂಪದಲ್ಲಿ ದೂರು ಬಂದಿತ್ತು.
ಆರೋಪಿಗಳು ನಕಲಿ ನೋಟು ಮುದ್ರಣ ಮಾಡಿ ಚಲಾವಣೆ ಮಾಡುತ್ತಿದ್ದರು. ಧರ್ಮೇಂದ್ರ ಸಿಂಗ್ ತನ್ನನ್ನು ತಾನು ಒಬ್ಬ ಯೋಧ ಎಂದು ಹೇಳಿಕೊಳ್ಳುತ್ತಿದ್ದ. ಆದರೆ ಆತ ಯಾವ ಸೈನ್ಯದಲ್ಲೂ ಇರಲಿಲ್ಲ ಎಂದಿದ್ದಾರೆ. ಆತ ಹೈದ್ರಾಬಾದ್ ನಲ್ಲಿ ಸೆಕ್ಯುರಿಟಿ ಏಜನ್ಸಿಯಲ್ಲಿ ಕೆಲಸ ಮಾಡುತ್ತಿದ್ದ, ಅಲ್ಲಿರುವಾಗಲೇ ನಕಲಿ ನೋಟು ಮುದ್ರಿಸುವುದು ಕಲಿತಿದ್ದಾನೆ ಎಂದಿದ್ದಾರೆ.