Video: ಆತ ಕಳ್ಳತನ ಮಾಡಿದ, ಆದರೆ ದುಡ್ಡಲ್ಲ! ಮನಕಲಕುವ ದೃಶ್ಯ CCTV ಯಲ್ಲಿ ಸೆರೆ!
ಕಳೆದ 7-8 ತಿಂಗಳಿಂದ ಮಾನವನ ಜೀವನವನ್ನು ಅಸ್ತವ್ಯಸ್ತ ಮಾಡಿದ ಈ ಕೊರೋನಾಗೆ ಎಷ್ಟು ಶಾಪ ಹಾಕಿದರು ಸಾಲದು. ಚೀನಾದಲ್ಲಿ ಉತ್ಪತ್ತಿಯಾದ ಅಥವಾ ಉತ್ಪತ್ತಿ ಮಾಡಿದ ಈ ವೈರಸ್ ಇಡೀ ಜಗತ್ತನ್ನೇ ತಲ್ಲಣಗೊಳಿಸುತ್ತಿದೆ. ಇದರಿಂದ ಜಗತ್ತಿನ ಆರ್ಥಿಕ ಸ್ಥಿತಿಯು ಸಹಿತ ಮುಗ್ಗರಿಸಿದೆ. ಇದು ಎಲ್ಲಕ್ಕೂ ಹೆಚ್ಚು ಬಡವರ್ಗದವರಿಗೆ ತುಂಬಾ ಕಠಿಣ ಪ್ರಸಂಗಗಳನ್ನು ತಂದೊಡ್ಡಿದೆ. ದಿನಗೂಲಿಯ ಮೇಲೆ ಕೆಲಸ ಮಾಡುವವರು ಕೆಲಸವಿಲ್ಲದೆ ಹಾಗೆಯೇ ಕೂಡಬೇಕಾಯಿತು. ಎಷ್ಟೋ ಕುಟುಂಬಗಳು ಅನ್ನವಿಲ್ಲದೆ ಪರದಾಡುವಂತಹ ಪರಿಸ್ಥಿತಿಯು ಕೊರೊನಾದಿಂದ ನಿರ್ಮಾಣವಾಗಿದೆ.
ಇದಕ್ಕೆ ಸಂಬಂಧಪಟ್ಟಂತೆ ಮಹಾರಾಷ್ಟ್ರದ ನಾಗಪೂರ್ ಮತ್ತು ಚಂದ್ರಪೂರ್ ಹೆದ್ದಾರಿಯಲ್ಲಿ ನಡೆದ ಒಂದು ಘಟನೆಯು ಮನುಷ್ಯನ ಮನವನ್ನು ಕಲಕುವಂತಾಗಿದೆ.
ಈ ಹೆದ್ದಾರಿಯಲ್ಲಿ ಸಚಿನ್ ಹೆಸರಿನ ಒಂದು ಹೋಟೆಲ್ ಇದೆ. ಚಂದ್ರಪುರದಲ್ಲಿ ಕೊರೋನಾ ಕಾರಣದಿಂದ ಕಳೆದ 10 ನೆಯ ತಾರೀಖಿಗೆ ಜನತಾ ಕರ್ಫ್ಯೂ ಮಾಡಿದ್ದರು. ಕರ್ಫ್ಯೂ ಕಾರಣದಿಂದ ಎಲ್ಲಾ ಅಂಗಡಿ ಮುಗ್ಗಟ್ಟುಗಳು ಹೊಟೇಲುಗಳು ಹಾಗೂ ಕೆಲಸಗಳು ನಿಲ್ಲಿಸಿರುವುದರಿಂದ ಕೆಲವರಿಗೆ ಮತ್ತೆ ಸಂಕಷ್ಟ ಎದುರಾಗಿತ್ತು. ಹೀಗಾಗಿ ಕೆಲಸವಿಲ್ಲದ ಯುವಕನೊಬ್ಬ ತನ್ನ ಹೊಟ್ಟೆಯ ಹಸಿವನ್ನು ನೀಗಿಸಿಕೊಳ್ಳಲು ಜನವಸತಿಯಿಂದ ಸ್ವಲ್ಪ ದೂರವಿದ್ದ ಈ ಸಚಿನ್ ಹೆಸರಿನ ಹೊಟೇಲಿನಲ್ಲಿ ಒಬ್ಬನೆ ನುಗ್ಗಿದ್ದಾನೆ.
ಒಳಗೆ ಹೋದಾಗ ಕೌಂಟರ್ ನ ಡ್ರಾವರ್ ನಲ್ಲಿದ್ದ ಹಣದ ಬಂಡಲ್ ಅನ್ನು ನೋಡಿ ಮತ್ತೆ ವಾಪಸ್ ಅಲ್ಲಿಯೇ ಇಟ್ಟು, ತನಗೆ ಬೇಕಾದ ತಿಂಡಿಯನ್ನು ತೆಗೆದುಕೊಂಡು ತಿನ್ನುತ್ತಾನೆ. ಸ್ವಲ್ಪ ತಿಂಡಿಯನ್ನು ತನ್ನ ಜೇಬಿನಲ್ಲಿ ಇಟ್ಟುಕೊಳ್ಳುತ್ತಾನೆ. ಫ್ರಿಡ್ಜ್ ನಿಂದ ನೀರನ್ನು ತೆಗೆದು ನಿಧಾನವಾಗಿ ಮನ ತಣಿಯುವವರೆಗೆ ಕುಡಿಯುತ್ತಾನೆ. ಕುಡಿದು ಮತ್ತೆ ಬಾಟಲ್ ಅದೇ ಫ್ರಿಜ್ಜಿನಲ್ಲಿ ಇಡುತ್ತಾನೆ. ಇದೆಲ್ಲ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈತ ಬಡವನ ಹಸಿವೆಗೆ ಪ್ರಾಮಾಣಿಕತನದ ಪ್ರತ್ಯಯ, ಉದಾಹರಣೆ ಕೊಟ್ಟಿದ್ದಾನೆ. ಹತ್ತಿರ ಕೆಲಸವಿಲ್ಲ, ಹಣವಿಲ್ಲ ಎಂದಾಗ ಹೊಟ್ಟೆಗಾಗಿ ಏನು ಮಾಡುವುದು ಎಂಬ ಪ್ರಶ್ನೆ ಸತಾಯಿಸಿದಾಗ ಆತ ಮಾಡಿದ್ದು ಈ ಕೆಲಸ.
ವಿಡಿಯೋ ನೋಡಿ…
ಹೋಟೆಲ್ ಮಾಲೀಕ ಮರುದಿನ ಈ ಫುಟೇಜ್ ಗಳನ್ನು ನೋಡಿದಾಗ ಆತ ಬೆರಗಾಗಿ ಡ್ರಾವರ್ ಚೆಕ್ ಮಾಡುತ್ತಾನೆ. ಅಲ್ಲಿ ಒಂದು ರೂಪಾಯಿಯೂ ಸಹಿತ ಕಳುವಾಗಿರಲಿಲ್ಲ. ವ್ಯಕ್ತಿ ಬರೀ ತನ್ನ ಹಸಿವನ್ನು ನೀಗಿಸಿಕೊಳ್ಳಲು ಈ ಕೆಲಸ ಮಾಡಿದ್ದಾನೆ ಎಂದು ಗೊತ್ತಾಗಿ ಹೋಟೆಲ್ ಮಾಲೀಕ ಪೊಲೀಸರಲ್ಲಿ ತಕರಾರರು ದಾಖಲಿಸುವ ಗೋಜಿಗೆ ಹೋಗಿಲ್ಲ.