Video: ಕಾಗೆ ಮಾಡಿತು ಕ್ಯಾಟ್ ವಾಕ್, ಸೂಪರ್ ಮಾಡೆಲ್ ಗಳನ್ನು ನಾಚಿಸುವಂತೆ ಇದೆ ಎಂದು ಕಾಗೆಯನ್ನು ಹೊಗಳಿದ ನೆಟ್ಟಿಗರು!

ಕಾಗೆಗಳು ನಮ್ಮ ಸುತ್ತಮುತ್ತ ಬಹಳ ಸಾಮಾನ್ಯವಾಗಿ ಕಾಣುವ ಪಕ್ಷಿಗಳು. ಕಾಗೆಗಳನ್ನು ನೋಡದ ಜನರು ಅಪರೂಪ. ಕಾಗೆಯು ತನ್ನ ಕಪ್ಪು ಬಣ್ಣದಿಂದಾಗಿ, ಕರ್ಕಶ ಧ್ವನಿಯಿಂದಾಗಿ ಜನಜನಿತ. ಅದರ ಈ ಬಣ್ಣ ಹಾಗೂ ಧ್ವನಿಯೇ ಅನೇಕರಿಗೆ ಅದರ ಮೇಲೆ ಅನಾಸಕ್ತಿ ಮೂಡಲು ಕಾರಣವಾಗಿದೆ ಎಂದರೆ ತಪ್ಪಾಗಲಾರದು. ಇನ್ನು ನಮ್ಮ ಹಿಂದೂ ಧರ್ಮದಲ್ಲಿ ಕಾಗೆಯು ಶನಿ ದೇವನ ವಾಹನ ಕೂಡಾ ಆಗುವ ಮೂಲಕ ಧಾರ್ಮಿಕ ಸ್ಥಾನ ಮಾನವನ್ನು ಪಡೆದುಕೊಂಡಿದೆ. ಆದರೂ ಬೆಳಿಗ್ಗೆ ಎದ್ದು ಮನೆಯಿಂದ ಹೊರಗೆ ಬಂದಾಗ ಕಾಗೆಯ ದರ್ಶನ ಆದರೆ ಬಹಳಷ್ಟು ಜನ ಬೇಸರ ಪಟ್ಟುಕೊಳ್ಳುತ್ತಾರೆ. ಆದರೆ ಕಾಗೆಯು ವಾಸ್ತವವಾಗಿ ಬೇರೆ ಪಕ್ಷಿಗಳಿಗಿಂತ ಬುದ್ದಿವಂತ ಪಕ್ಷಿಗಳು ಎಂಬುದು ಅನೇಕ ಜನರಿಗೆ ತಿಳಿದಿಲ್ಲ. ಕಾಗೆಗಳ ಜೀವನ ವಿಧಾನ ಕೂಡಾ ಬಹಳ ಆಸಕ್ತಿಕರ ಎನ್ನುವ ವಿಚಾರಗಳ ಅರಿವಿಲ್ಲಮ

ಆದರೆ ಇತ್ತೀಚಿನ ದಿನಗಳಲ್ಲಿ ಕಾಗೆಗಳನ್ನು ಕುರಿತಾದ ವಿಶೇಷವಾದ ಅದೆಷ್ಟೋ ವಿಷಯಗಳು ಅಂತರ್ಜಾಲದಲ್ಲಿ ಓದಲು ಸಿಗುತ್ತದೆ. ಆ ವಿಷಯಗಳನ್ನು ಓದಿದಾಗ ನಿಜಕ್ಕೂ ಕೂಡ ಆಶ್ಚರ್ಯವೆನಿಸುತ್ತದೆ. ಕಾಗೆಗಳ ಬುದ್ಧಿವಂತಿಕೆಯನ್ನು ತಿಳಿದಾಗ ಅವುಗಳ ಬಗ್ಗೆ ಮೆಚ್ಚುಗೆಯಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಕಾಗೆಗಳ ಬುದ್ಧಿವಂತಿಕೆಯನ್ನು ತೋರಿಸುವಂತಹ ಬಹಳಷ್ಟು ವಿಡಿಯೋಗಳು ಸೋಶಿಯಲ್ ಮೀಡಿಯಾ ಗಳಲ್ಲಿ ವೈರಲ್ ಆಗಿ ಜನರ ಗಮನವನ್ನು ಸೆಳೆಯುತ್ತಿದೆ. ಕೊಳಾಯಿಯಲ್ಲಿ ನೀರನ್ನು ಕುಡಿಯುವ ಕಾಗೆ, ಮೀನಿನ ಅಂಗಡಿಯ ಮುಂದೆ ಕುಳಿತು ಅಂಗಡಿಯಾತನಿಂದ ಮೀನನ್ನು ಪಡೆಯುವ ಕಾಗೆ, ಇಂತಹ ಅನೇಕ ವಿಡಿಯೋಗಳು ಸಾಕಷ್ಟು ವೈರಲ್ ಆಗಿದೆ.

ಈಗ ಇವೆಲ್ಲವುಗಳಿಗಿಂತ ಭಿನ್ನವಾದ ಹೊಸ ವಿಡಿಯೋವೊಂದು ವೈರಲ್ ಆಗಿದೆ. ಇದರಲ್ಲಿ ಕಾಗೆಯ ಫ್ಯಾಶನ್ ವಾಕನ್ನು ನೋಡಲು ಸಿಗುತ್ತದೆ. ಪ್ರಾಣಿ-ಪಕ್ಷಿಗಳ ವಿಶೇಷ ವಿಡಿಯೋಗಳನ್ನು ಶೇರ್ ಮಾಡುವ ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಈ ಹೊಸ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋ ಶೇರ್ ಮಾಡಿಕೊಂಡ ಅವರು ಶೀರ್ಷಿಕೆಯಲ್ಲಿ, ಆಟಿಟ್ಯೂಡ್ ಹೊಂದಿರುವ ನಾನು ಲಿಮಿಟೆಡ್ ಎಡಿಶನ್ ಎಂದು ಒಂದು ಸಾಲನ್ನು ಹಾಕಿದ್ದಾರೆ. ಅವರ ಶೀರ್ಷಿಕೆ ಅಕ್ಷರಶಃ ವಿಡಿಯೋ ಗೆ ಸೂಟ್ ಆಗುವಂತೆ ಇದೆ. ಇನ್ನು ಈ ವಿಡಿಯೋದಲ್ಲಿ ಗಮನಿಸಿದಾಗ ಕಾಂಪೌಂಡ್ ಒಂದರ ಗೋಡೆಯ ಮೇಲೆ ಕುಳಿತಿರುವ ಕಾಗೆಯು ಮಹಿಳಾ ರೂಪದರ್ಶಿಯರು ಫ್ಯಾಶನ್ ಶೋಗಳಲ್ಲಿ ಬಹಳ ಆಕರ್ಷಕವಾಗಿ ಹೆಜ್ಜೆ ಹಾಕಿ ನಡೆದು ಬರುವ ರೀತಿಯಲ್ಲಿ ಹೆಜ್ಜೆ ಹಾಕುತ್ತಾ ಬರುತ್ತದೆ.

ಕಾಗೆಯ ಈ ವಿಶೇಷ ನಡಿಗೆಯನ್ನು ನೋಡಿದ ತಕ್ಷಣ ಆಶ್ಚರ್ಯ ಎನಿಸುವುದು ಮಾತ್ರವೇ ಅಲ್ಲದೆ, ಕಾಗೆಯ ನಡಿಗೆ ನೋಡಿದಾಗ ಮಂದಹಾಸ ತಾನಾಗಿಯೇ ಮೂಡುತ್ತದೆ ಮತ್ತು ಕಾಗೆಯ ನಡಿಗೆ ನಮಗೆ ಇಷ್ಟವಾಗುತ್ತದೆ. ಕ್ಯಾಟ್ ವಾಕ್ ಮಾಡಿದೆ ಕಾಗೆಯ ವಿಡಿಯೋವನ್ನು ಈಗಾಗಲೇ ಒಂದು ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಣೆಯನ್ನು ಮಾಡಿದ್ದಾರೆ. ಸುಮಾರು ಎರಡು ಸಾವಿರ ಜನ ವಿಡಿಯೋಗೆ ಮೆಚ್ಚುಗೆ ನೀಡಿದ್ದಾರೆ. 9 ಸಾವಿರಕ್ಕಿಂತ ಅಧಿಕ ಜನರು ವಿಡಿಯೋವನ್ನು ರಿಟ್ವೀಟ್ ಮಾಡಿಕೊಂಡಿದ್ದಾರೆ. ನೂರಾರು ಜನರು ವೈವಿದ್ಯಮಯ ಪ್ರತಿಕ್ರಿಯೆಗಳನ್ನು ನೀಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಡಿಯೋ ನೋಡಿ

ವಿಡಿಯೋ ನೋಡಿದ ಟ್ವಿಟರ್ ಬಳಕೆದಾರರೊಬ್ಬರು ಹೃತಿಕ್ ರೋಷನ್ ನಟನೆಯ ಜಾಹೀರಾತೊಂದರ ವಿಡಿಯೋ ಶೇರ್ ಮಾಡಿಕೊಂಡು ಕಾಗೆಯ ನಡಿಗೆಯನ್ನು ನೋಡಿ ನನಗೆ ಹೃತಿಕ್ ರೋಷನ್ ಜಾಹೀರಾತು ನೆನಪಾಯಿತು ಎಂದಿದ್ದಾರೆ. ಇನ್ನೊಬ್ಬ ಟ್ವಿಟ್ಟರ್ ಬಳಕೆದಾರರು ಇನ್ನು ಮುಂದೆ ಇದನ್ನು ‘ಕ್ರೌ ವಾಕ್’ ಅಥವಾ ಕಾಗೆಯ ನಡಿಗೆ ಎಂದೇ ಕರೆಯಬೇಕು ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ಕಾಗೆಯ ಹಂಸದ ನಡಿಗೆ, ಇದು ಸೂಪರ್ ಮಾಡೆಲ್ ಗಳ ಕೈಯಲ್ಲಿ ಕೂಡಾ ಸಾಧ್ಯವಾಗಿಲ್ಲ ಎಂದು ಕಾಗೆಯನ್ನು ಹೊಗಳಿದ್ದಾರೆ. ಮತ್ತೊಬ್ಬರು ಬಹುಶಃ ಕಾಗೆ ಹಿಂದಿನ ಜನ್ಮದಲ್ಲಿ ಒಬ್ಬ ಮಾಡೆಲ್ ಆಗಿರಬೇಕು. ಅದಕ್ಕೆ ಆ ನೆನಪುಗಳು ಇನ್ನೂ ಹಾಗೇ ಉಳಿದಿದೆ ಕೆಲವೊಂದು ಬದಲಾಗುವುದಿಲ್ಲ ಎಂದು ಮಾಡಿದ್ದಾರೆ.